ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಸಂಪಾದಕೀಯ

------
-------

ಪ್ರಿಯ ಓದುಗರೇ,

ಡಿಸೆಂಬರ್ ೪ ಕೃಷಿನಿರತ ಮಹಿಳಾ ದಿನ. ಒಂದು ಕಾಲಕ್ಕೆ ಕೃಷಿ ಕೆಲಸವೆಂದರೆ ಕೇವಲ ಪುರುಷನೆಂಬ ಪರಿಕಲ್ಪನೆಯ ಮನಸ್ಥಿತಿ ಸಹಜವಾಗಿತ್ತು. ಆದರೆ ಕಾಲಕ್ರಮೇಣ ಕೃಷಿಯ ನಿರ್ವಹಣೆಯ ಸ್ವರೂಪ ಬದಲಾಗುತ್ತಾ ಬಂದಿದೆ. ಇಂದು ಮಹಿಳೆಯರು ಕೃಷಿಯಲ್ಲಿ ನಿರತರಾಗಿ ಭೂಮಿ ಸಿದ್ಧಪಡಿಸುವುದರಿಂದ ಹಿಡಿದು, ಸಸಿಗಳನ್ನು ಕೀಳುವುದು, ಕಳೆ ತೆಗೆಯುವುದು, ಸಸಿಮಡಿ ತಯಾರಿಕೆ, ಕಟಾವು ಮಾಡುವುದು, ಒಕ್ಕಣೆ ಮಾಡುವುದು, ಬೀಜ ಹಸನು ಮಾಡುವುದು ಇತ್ಯಾದಿ ಎಲ್ಲಾ ಕೃಷಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗೆ ಕೃಷಿ ಸಂಬಂಧಿತ ಎಲ್ಲಾ ಚಟುವಟಿಕೆಗಳಲ್ಲಿ ಅಗಾಧ ಪ್ರಮಾಣದಲ್ಲಿ ತೊಡಗಿಸಿಕೊಂಡ ಮಹಿಳೆಯನ್ನು ಗುರುತಿಸುವ, ಗೌರವಿಸುವ ಕಾರ್ಯ ಮಾಡಿದರೆ, ನಿಜಕ್ಕೂ ಕೃಷಿ ನಿರತ ಮಹಿಳಾ ದಿನಕ್ಕೆ ಒಂದು ಅರ್ಥ ಬರುತ್ತದೆ.

ಡಿಸೆಂಬರ್ ೦೫ ವಿಶ್ವ ಮಣ್ಣಿನ ದಿನ. "ಮಣ್ಣಿನ ಸವಕಳಿಯನ್ನು ತಡೆಯಿರಿ, ನಮ್ಮ ಭವಿಷ್ಯವನ್ನು ಉಳಿಸಿ" (Stop Soil Erosion Save our Future) ಎಂಬುದು ಈ ದಿನಾಚರಣೆಯ ಈ ವರ್ಷದ ಘೋಷವಾಕ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಏರುತ್ತಿರುವ ಜನಸಂಖ್ಯೆಯಿಂದ ಮತ್ತು ಅತಿಯಾದ ಪರಿಸರ ವಿರುದ್ದ ಚಟುವಟಿಕೆಯಿಂದ ಮಣ್ಣು, ನೀರು ಮತ್ತು ಗಾಳಿ ಕಲುಷಿತವಾಗುತ್ತಿದೆ. ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾಗಿ ಮಣ್ಣಿನ ಸುಸ್ಥಿರ ಉತ್ಪಾದಕತೆ ಕಡಿಮೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂತಹ ಜ್ವಲಂತ ಸಮಸ್ಯೆಯನ್ನು ನಿವಾರಿಸಲು ಹೆಚ್ಚು ಸಾವಯವ ಗೊಬ್ಬರಗಳ ಬಳಕೆಯಿಂದ ಮಣ್ಣನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕಾಗಿದೆ.

ಡಿಸೆಂಬರ್ ೨೩, ರೈತ ದಿನಾಚರಣೆ. ತಾನು ಹಸಿದರೂ ಇತರರಿಗೆ ಉಣಬಡಿಸುವವನು ರೈತ. ಇಂದು ನಾವೆಲ್ಲರೂ ಹೊಟ್ಟೆ ತುಂಬ ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿಂತೆಯಿಂದ ಇದ್ದೇವೆ ಎಂದರೆ, ಇದರ ಹಿಂದೆ ಇರುವ ರೈತರ ಪರಿಶ್ರಮ ಮತ್ತು ಬೆವರೇ ಮುಖ್ಯ ಕಾರಣ. ಹಾಗಾಗಿ ಅನ್ನ ಕೊಡುವ ರೈತರನ್ನು ಗೌರವಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಅವರು ಬೆಳೆದ ಉತ್ಪನ್ನಗಳಿಗೆ ವ್ಯವಸ್ಥಿತ ಮಾರುಕಟ್ಟೆಗಳನ್ನು ಒದಗಿಸಿ, ಸ್ಥಿರವಾದ ಬೆಲೆಯನ್ನು ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ಉನ್ನತ ಮಟ್ಟದ ಆಡಳಿತ ವರ್ಗದಿಂದ ಆಗಬೇಕಾಗಿದೆ.

ಈ ತಿಂಗಳ ಸಂಚಿಕೆಯಲ್ಲಿ ರೈತರ ಬೇಡಿಕೆ ಮೇರೆಗೆ ಪುಷ್ಪ ಕೃಷಿಗೆ ಹೆಚ್ಚು ಒತ್ತು ಕೊಟ್ಟು ಪುಷ್ಪ ಕೃಷಿ ವಿಶೇಷ ಸಂಚಿಕೆ ತರಲಾಗಿದೆ. ರೈತರು ಪುಷ್ಪ ಕೃಷಿ ಕುರಿತು ಮಾಹಿತಿ ಪಡೆದು, ಪುಷ್ಪ ಕೃಷಿಯನ್ನು ತಮ್ಮ ಕೃಷಿಯ ಅವಿಭಾಜ್ಯ ಅಂಗವಾಗಿ ಅಳವಡಿಸಿ ಕೃಷಿಯನ್ನು ಇನ್ನಷ್ಟು ಲಾಭದಾಯಕವಾಗಿ ಮಾಡಿಕೊಳ್ಳಲಿ ಅನ್ನುವುದು ನಮ್ಮ ಆಶಯ.