ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಸಂರಕ್ಷಿತ ಬೇಸಾಯದಲ್ಲಿ ಜರ್ಬೆರಾ ಹೂ ಬೆಳೆ

ಅಶ್ವಿನಿ ಎಂ.ಎನ್., ಹೇಮಂತ್ ಕುಮಾರ್ ಪಿ.ಎಂ., ಬಾಲಾಜಿ ಕುಲಕರ್ಣಿ
೯೪೮೧೩೫೯೯೪೩
1

ವೈಜ್ಞಾನಿಕವಾಗಿ ಜರ್ಬೆರಾ ಜೇಮ್ಸೋನಿ ಎಂದು ಕರೆಯಲ್ಪಡುವ ಜರ್ಬೆರಾವು ಆಸ್ಪೇರೇಸಿ ಕುಟುಂಬಕ್ಕೆ ಸೇರಿದೆ. ಉದ್ದವಾದ ದಂಟನ್ನು ಹೊಂದಿದ್ದು, ತನ್ನ ಆಕರ್ಷಕವಾದ ಬಣ್ಣಗಳಿಂದ ನೋಡುವವರ ಕಣ್ಮನ ಸೆಳೆಯುವುದಲ್ಲದೇ, ಮೊದಲ ಹತ್ತು ಉನ್ನತ ಕತ್ತರಿಸಿದ ಹೂಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಕೆಂಪು, ಹಳದಿ, ಬಿಳಿ, ಗುಲಾಬಿ, ಕೇಸರಿ ಹೀಗೆ ವಿವಿಧ ಬಣ್ಣಗಳಲ್ಲಿ ಕಾಣಸಿಗುವ ಈ ಹೂವು ಇತರೆ ಕತ್ತರಿಸಿದ ಹೂಗಳಾದ ಗುಲಾಬಿ, ಕಾರ್ನೇಶನ್ ಮತ್ತು ಸೇವಂತಿಗೆಗಳಿಗೆ ಹೋಲಿಸಿದರೆ ಕಡಿಮೆ ನಿರ್ವಹಣೆಯಲ್ಲಿ ಹೆಚ್ಚಿನ ಇಳುವರಿ ನೀಡಿ ರೈತರ ಗಮನ ಸೆಳೆಯುತ್ತಿದೆ. ತಾಜಾತನ ಹಾಗೂ ದೀರ್ಘಾವಧಿ ಗುಣಲಕ್ಷಣಗಳಿಂದ ಉತ್ತಮ ಬೆಲೆ ಹಾಗೂ ಮಾರುಕಟ್ಟೆಯನ್ನು ಪಡೆದುಕೊಂಡು ಜನಪ್ರಿಯವಾಗುತ್ತಿದೆ.

ಹವಾಗುಣ ಮತ್ತು ಮಣ್ಣಿನ ನಿರ್ವಹಣೆ

ದಿನದ ಉಷ್ಣಾಂಶ ೨೫-೩೦೦ ಸೆ. ಹಾಗೂ ರಾತ್ರಿಯ ಉಷ್ಣಾಂಶ ೧೨-೧೬೦ ಸೆ. ಜರ್ಬೆರಾ ಬೆಳೆಗೆ ಸೂಕ್ತ. ಶೇಕಡಾ ೬೦-೭೫ ರಷ್ಟು ತೇವಾಂಶ ಹಾಗೂ ೪೫೦-೬೦೦ ಫೂಟ್ ಕ್ಯಾಂಡಲ್ ಬೆಳಕು ಉತ್ತಮ. ಜರ್ಬೆರಾವನ್ನು ಹಸಿರು ಮನೆಯಲ್ಲಿ ಬೆಳೆಯುವುದರಿಂದ ಹೊರಗಿನ ಹವಾಮಾನ ವೈಪರೀತ್ಯಗಳಿಂದ ರಕ್ಷಿಸಿಕೊಳ್ಳಬಹುದು. ನೀರು ಬಸಿದು ಹೋಗುವ, ೫.೫ ೬.೫ ರಸಸಾರ ಇರುವ ೧ ೧.೨ ಇ.ಸಿ. ಇರುವ ಮರಳು ಮಿಶ್ರಿತ ಕೆಂಪು ಮಣ್ಣು ಉತ್ತಮ. ಕೆಂಪು ಮಣ್ಣು(ಶೇ.೫೦)+ತಿಪ್ಪೆಗೊಬ್ಬರ(ಶೇ.೨೫)+ತೆಂಗಿನ ಹುಡಿ(ಶೇ.೨೫) ಮಿಶ್ರ ಮಾಡಿ ಹದಗೊಳಿಸುವುದರಿಂದ ಉತ್ತಮ ಇಳುವರಿ ಪಡೆಯಬಹುದು.

ಮಡಿಗಳ ತಯಾರಿಕೆ

ನೆಲವನ್ನು ಚೆನ್ನಾಗಿ ಅಗೆದು, ಹದ ಮಾಡಬೇಕು. ನಂತರ ೬೦ ಸೆಂ.ಮೀ. ಅಗಲ ೩೦-೪೫ ಸೆಂ.ಮೀ. ಎತ್ತರ ಹಾಗೂ ಅನುಕೂಲಕ್ಕೆ ತಕ್ಕಂತೆ ಉದ್ದವಾದ ಏರುಮಡಿಗಳನ್ನು ಮಾಡಿಕೊಳ್ಳಬೇಕು. ಎರಡು ಮಡಿಗಳ ನಡುವೆ ೩೦ ಸೆಂ.ಮೀ. ಅಂತರ ಬಿಡಬೇಕು. ಪ್ರತಿ ಮಡಿಗೂ ೨ ಪಾರ್ಶ್ವ ಕೊಳವೆಗಳನ್ನು ಹಾಕಿ, ಡ್ರಿಪ್ಪರ್‌ಗಳನ್ನು ೩೦ ಸೆಂ.ಮೀ. ಅಂತರದಲ್ಲಿ ಅಳವಡಿಸಬೇಕು. ಮಡಿಗಳನ್ನು ತಯಾರಿಸುವಾಗ ಪ್ರತಿ ಚ.ಮೀ.ಗೆ ೨.೫ ಕಿ.ಗ್ರಾಂ ಸಿಂಗಲ್ ಸೂಪರ್ ಫಾಸ್ಪೇಟ್, ಅರ್ಧ ಕಿ.ಗ್ರಾಂ ಮ್ಯಾಗ್ನೇಷಿಯಂ ಸಲ್ಫೇಟ್ ಅನ್ನು ಬೆರೆಸಬೇಕು.

ಜರ್ಬೆರಾವನ್ನು ಕುಂಡಗಳಲ್ಲಿ ಸಹಾ ಬೆಳೆಸಬಹುದು. ಕೋಕೊಪೀಟ್ ಮಾಧ್ಯಮ ಬಳಸಿ ಪೋಷಕಾಂಶಗಳನ್ನು ರಸಾವರಿ ಮುಖಾಂತರ ಒದಗಿಸಬಹುದು.

ಮಣ್ಣನ್ನು ರೋಗಾಣು ರಹಿತ ಮಾಡುವುದು

ನೀರಿನಿಂದ ತೇವ ಮಾಡಿದ ಮಡಿಗಳನ್ನು ಶೇ. ೨-೪ರ ’ಫಾರ್ಮಲಿನ್’ ದ್ರಾವಣ (ಪ್ರತಿ ಚ.ಮೀ.ಗೆ ೫ ಲೀ.ನಂತೆ)ದಿಂದ ಉಪಚರಿಸಿ ತಕ್ಷಣವೇ ಪಾಲಿಥೀನ್ ಹಾಳೆಯನ್ನು ಒಂದು ವಾರದವರೆಗೂ ಹೊದಿಸಿರಬೇಕು. ನಂತರ ದ್ರಾವಣ ಬಸಿದು ಹೋಗಲು ಚೆನ್ನಾಗಿ ನೀರು ಹಾಕಬೇಕು. ಇದಾದ ಕನಿಷ್ಠ ಎರಡು ವಾರದ ನಂತರವೇ ಸಸಿ ನಾಟಿ ಮಾಡಬೇಕು.

ನಾಟಿ: ಸಸಿ(ಅಂಗಾಂಶ ಕೃಷಿ/ಕಂದು)ಗಳನ್ನು ೩೦-೪೦ ಸೆಂ.ಮೀ. ಅಂತರದ ಸಾಲುಗಳಲ್ಲಿ ೩೦ ಸೆಂ.ಮೀ.ಗೆ ಒಂದರಂತೆ ನೆಟ್ಟು ನೀರು ಹಾಯಿಸಬೇಕು. ಹೀಗೆ ಮಾಡಿದಲ್ಲಿ ಪ್ರತಿ ೫೬೦ ಚ.ಮೀ. ಪಾಲಿಹೌಸ್‌ಗೆ ೩೦೦೦ ೩೩೦೦ ಸಸಿಗಳು ಬೇಕಾಗುತ್ತವೆ.

ಪೋಷಕಾಂಶಗಳ ನಿರ್ವಹಣೆ

ನಾಟಿ ಮಾಡಿದ ಮೊದಲ ಮೂರು ತಿಂಗಳುಗಳವರೆಗೆ

ಪೋಷಕಾಂಶಗಳು ಪ್ರಮಾಣ(ಗ್ರಾಂ/ಚ.ಮೀ.)
ಸಾರಜನಕ ೪೦
ರಂಜಕ ೪೦
ಪೊಟ್ಯಾಷಿಯಂ ೪೦
ಹೂ ಬಿಡಲು ಪ್ರಾರಂಭವಾದ ಮೇಲೆ
ಸಾರಜನಕ ೩೦ ಗ್ರಾಂ/ಚ.ಮೀ.
ರಂಜಕ ೧೭ ಗ್ರಾಂ/ಚ.ಮೀ.
ಪೊಟ್ಯಾಷಿಯಂ ೭೦ ಗ್ರಾಂ/ಚ.ಮೀ.

ಇದಲ್ಲದೇ ಸೂಕ್ಷ್ಮ ಪೋಷಕಾಂಶಗಳಾದ ಕ್ಯಾಲ್ಸಿಯಂ, ಮ್ಯಾಗ್ನೇಶಿಯಂ, ಬೋರಾನ್‌ಗಳ ಶೇ. ೦.೧೫ ದ್ರಾವಣವನ್ನು ೧೫ ದಿನಗಳಿಗೊಮ್ಮೆ ಸಿಂಪಡಿಸಬೇಕು. ಮಣ್ಣು ಪರೀಕ್ಷೆ ಮಾಡಿಸಿ, ಅದರ ಆಧಾರದ ಮೇಲೆ ಪೋಷಕಾಂಶಗಳನ್ನು ಒದಗಿಸುವುದು ತುಂಬಾ ಸೂಕ್ತ.

15

ನೀರಾವರಿ ಮತ್ತು ಅಂತರ ಬೇಸಾಯ

ಈ ಬೆಳೆಗೆ ಹನಿ ನೀರಾವರಿ ಪದ್ಧತಿಯಲ್ಲಿ ನೀರನ್ನು ಒದಗಿಸಬೇಕು. ಪ್ರತಿ ಎರಡು ಸಾಲುಗಳ ಮಧ್ಯದಲ್ಲಿ, ಒಂದು ಪಾರ್ಶ್ವ ಕೊಳವೆ (ಲ್ಯಾಟರಲ್ಸ್)ಯನ್ನು ಉಪಯೋಗಿಸಬಹುದು. ಈ ಕೊಳವೆಗಳಲ್ಲಿ ೬೦-೭೦ ಸೆಂ.ಮೀ. ಅಂತರದಲ್ಲಿ ಪ್ರತಿ ಗಂಟೆಗೆ ೪ ಲೀಟರ್ ನೀರು ಹೊರಹಾಕುವ ಸಾಮರ್ಥ್ಯವುಳ್ಳ ಡ್ರಿಪ್ಪರ್‌ಗಳನ್ನು ಅಳವಡಿಸಬಹುದು. ಬೆಳೆಯನ್ನು ಕಳೆರಹಿತವಾಗಿ ನೋಡಿಕೊಳ್ಳುವುದು ತುಂಬಾ ಮುಖ್ಯ.

ತಳಿಗಳು: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಇವರು ಅಭಿವೃದ್ಧಿಪಡಿಸಿರುವಂತಹ ’ಅರ್ಕಾ ಅಶ್ವ’, ’ಅರ್ಕಾ ಕೃಷಿಕ’ ಅಥವಾ ’ಅರ್ಕಾ ನೇಸರ’ ತಳಿಗಳನ್ನು ಬಳಸಬಹುದು. ಇದಲ್ಲದೇ ಖಾಸಗಿ ಕಂಪೆನಿಗಳು ಅಭಿವೃದ್ಧಿ ಪಡಿಸಿರುವ ಹಲವಾರು ತಳಿಗಳನ್ನು ರೈತರು ಈಗಾಗಲೇ ಬಳಸುತ್ತಿದ್ದಾರೆ.

ಹಸಿರು ಮನೆಯ ನಿರ್ವಹಣೆ

• ಉತ್ತಮ ಗಾಳಿಯ ಪ್ರಸರಣಕ್ಕಾಗಿ ಹಸಿರು ಮನೆಯ ಎತ್ತರವು, ಸುಮಾರು ೫-೬.೫ ಮೀ. ನಷ್ಟು ಇರಬೇಕಾಗುತ್ತದೆ.
• ಸಾಕಷ್ಟು ಜಾಗ ಹಾಗೂ ಗಾಳಿಯ ಪ್ರಸರಣ ಜರ್ಬೆರಾ ಕೃಷಿಯಲ್ಲಿ ತುಂಬಾ ಮುಖ್ಯ.
• ಬೆಳಕಿನ ಪ್ರಖರತೆಯನ್ನು ತಗ್ಗಿಸಲು ಹಸಿರು ಮನೆಯ ಒಳಗೆ ಶೇಡ್‌ನೆಟ್(ಹಸಿರು ಅಥವಾ ಬಿಳಿಯ ನೆರಳಿನ ಪರದೆ)ಗಳನ್ನು ಬಳಸಬಹುದು.
• ಉಷ್ಣಾಂಶ ಹಾಗೂ ತೇವಾಂಶಗಳ ಸರಿಯಾದ ನಿರ್ವಹಣೆ ಅಗತ್ಯ. ಇಲ್ಲವಾದಲ್ಲಿ ಇಳುವರಿ ಕುಂಠಿತಗೊಳ್ಳುತ್ತದೆ.
• ಆಗಾಗ ಮಣ್ಣಿನ ಹಾಗೂ ನೀರಿನ ರಸಸಾರ ಹಾಗೂ ಇ.ಸಿ.ಯನ್ನು ಪರೀಕ್ಷೆ ಮಾಡುತ್ತಿರಬೇಕು. ಅದನ್ನು ಆಧರಿಸಿ ಸರಿಯಾದ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಬಹುದು.

21

ಕೊಯ್ಲು

ನಾಟಿ ಮಾಡಿದ ೩ ತಿಂಗಳುಗಳ ನಂತರದಲ್ಲಿ ವಾಣಿಜ್ಯ ಮಟ್ಟದಲ್ಲಿ ಹೂ ಇಳುವರಿ ಆರಂಭವಾಗುತ್ತದೆ. ಪೂರ್ತಿ ಅರಳಿದ ಹೂಗಳನ್ನು, ದಂಟು ಸಮೇತ ಕೈಯಿಂದ ವಾಲಿಸಿ ಗಿಡದಿಂದ ಬೇರ್ಪಡಿಸಬಹುದು. ಪ್ರತಿ ಚ.ಮೀ.ನಿಂದ ಸುಮಾರು ೧೭೫ ರಿಂದ ೨೦೦ ಹೂಗಳನ್ನು ಪ್ರತಿ ವರ್ಷ ಪಡೆಯಬಹುದು

ಕೊಯ್ಲೋತ್ತರ ತಂತ್ರಜ್ಞಾನ

• ಫ್ರೀ ಕಂಡಿಶನಿಂಗ್: ಸಿಲ್ವರ್ ನೈಟ್ರೇಟ್(೧೦೦೦ ಪಿಪಿಎಂ) ಅಥವಾ ಸೋಡಿಯಂ ಪೈಪೊಕ್ಲೋರೈಡ್(ಶೇ.೧ರಷ್ಟು) ದ್ರಾವಣದಲ್ಲಿ ಕತ್ತರಿಸಿದ ತಕ್ಷಣವೇ ದಂಟುಗಳನ್ನು ೨-೪ ತಾಸು ಇಡಬೇಕು.
• ಗ್ರೇಡಿಂಗ್: ಹೂಗಳ ಬಣ್ಣ, ವ್ಯಾಸ, ದಂಟಿನ ಉದ್ದ, ಗಟ್ಟಿತನ, ರೋಗ-ಕೀಟಗಳಿಂದ ಮುಕ್ತ, ಇತ್ಯಾದಿ ಗುಣಗಳನ್ನಾಧರಿಸಿ ಗ್ರೇಡಿಂಗ್ ಮಾಡಲಾಗುತ್ತದೆ. ದಂಟಿನ ಉದ್ದ ೪೫-೫೫ ಸೆಂ.ಮೀ., ಹೂವಿನ ವ್ಯಾಸ ೧೦-೧೨ ಸೆಂ.ಮೀ., ಹೂದಾನಿಯಲ್ಲಿಯ ಬಾಳಿಕೆ ೮-೧೦ ದಿವಸವಿದ್ದರೆ ಉತ್ತಮ.
• ಪ್ಯಾಕಿಂಗ್: ಹೂಗಳನ್ನು ಸಣ್ಣ ಪಾಲಿಥೀನ್ ಸ್ಲೀವ್ಸ್‌ಗಳಲ್ಲಿ ಸೇರಿಸಿ ಸಿ.ಎಫ್.ಬಿ. ಪೆಟ್ಟಿಗೆಗಳಲ್ಲಿ ಇರಿಸಿ ಪ್ಯಾಕ್ ಮಾಡುತ್ತಾರೆ. ವರ್ಗೀಕರಣ ಮಾಡಿದ ನಂತರ ದಂಟಿನ ಕೆಳಗಿನಿಂದ ಪ್ಲಾಸ್ಟಿಕ್ ಸ್ಲೀವ್ಸ್ ಸೇರಿಸಿ, ರಬ್ಬರ್ ಬ್ಯಾಂಡಿನಿಂದ ೧೦ ಹೂಗಳ ಕಂತೆ ಮಾಡಿ ಸಿ.ಎಫ್.ಬಿ. ಬಾಕ್ಸ್‌ಗಳಲ್ಲಿ ಜೋಡಿಸುತ್ತಾರೆ.
• ಶೇಖರಣೆ ಹಾಗೂ ಸಾಗಾಣಿಕೆ: ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಾಗ ೨-೪೦ ಸೆ. ಉಷ್ಣಾಂಶದಲ್ಲಿ ಹೂ ಶೇಖರಣೆ ಮಾಡಬಹುದು. ಶೈತ್ಯವಾಹನಗಳಲ್ಲಿ ಹೂಗಳನ್ನು ಸಾಗಿಸುವುದರಿಂದ ಅವು ಬಾಡದಂತೆ ತಡೆಯಬಹುದು.

ಸಸ್ಯ ಸಂರಕ್ಷಣೆ

ಕೀಟ ನಿರ್ವಹಣೆ

೧. ಥ್ರಿಪ್ಸ್ ನುಸಿ: ಈ ನುಸಿಗಳು ಎಲೆಗಳ ಕೆಳಭಾಗದಿಂದ ರಸ ಹೀರುತ್ತವೆ. ಇದರಿಂದಾಗಿ ಎಲೆಗಳು ಮುರುಟಾಗಿ ಒಣಗುತ್ತವೆ. ನಿರ್ವಹಣೆ: ೨ ಮಿ.ಲೀ. ಆಕ್ಸಿಡೆಮೆಟಾನ್ ಮಿಥೈಲ್ ೨೫ ಇ.ಸಿ. ಅಥವಾ ೧.೫ ಮಿ.ಲೀ. ಟ್ರೈಝೋಫಾಸ್ ಅಥವಾ ಅಸಿಫೇಟ್ ೧ ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
೨. ಬಿಳಿ ನೊಣ: ಎಲೆಗಳಿಂದ ರಸ ಹೀರುವುದರಿಂದ ಎಲೆಗಳು ಹಳದಿಯಾಗಿ ಮೇಲೆ ಬೂಷ್ಟ್ ಬೆಳೆಯುತ್ತದೆ. ನಿರ್ವಹಣೆ: ೨ ಮಿ.ಲೀ. ಆಕ್ಸಿಡೆಮೆಟಾನ್ ಮಿಥೈಲ್ ೨೫ ಇ.ಸಿ. ಅಥವಾ ೧.೫ ಮಿ.ಲೀ. ಟ್ರೈಝೋಫಾಸ್ ಅಥವಾ ಅಸಿಫೇಟ್ ೧ ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
೩. ಮೈಟ್ ನುಸಿ: ಎಲೆಯ ಕೆಳಭಾಗದಲ್ಲಿ ಕಂಡುಬರುತ್ತವೆ ಹಾಗೂ ರಸ ಹೀರುತ್ತವೆ. ಇದರಿಂದ ಹಳದಿ ಚುಕ್ಕೆಗಳು ಉಂಟಾಗಿ ನಂತರ ಎಲೆ ಒಣಗುತ್ತವೆ.
ನಿರ್ವಹಣೆ: ೨.೫ ಮಿ.ಲೀ. ಡೈಕೋಫಾಲ್ ೨೦ ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ರೋಗ ನಿರ್ವಹಣೆ

೧. ಬೂದಿ ರೋಗ: ಬೂದು ಬಣ್ಣದ ಚುಕ್ಕೆಗಳು ಎಲೆ ಮೇಲೆ ಕಾಣಿಸಿಕೊಂಡು ನಂತರ ಎಲೆ ಒಣಗುತ್ತದೆ.
ನಿರ್ವಹಣೆ: ೩ ಗ್ರಾಂ ಕರಗುವ ಗಂಧಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
೨. ಎಲೆ ಚುಕ್ಕೆ ರೋಗ: ಉಂಗುರಾಕಾರದ ಅಥವಾ ವಜ್ರಾಕಾರದ ಚುಕ್ಕೆಗಳು ಎಲೆಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ.
ನಿರ್ವಹಣೆ: ೨ ಗ್ರಾಂ ಮ್ಯಾಂಕೋಜೆಬ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
೩. ಬೇರು ಕೊಳೆಯುವ ರೋಗ: ರೋಗಕ್ಕೆ ತುತ್ತಾದ ಗಿಡವು ಹಳದಿ ಬಣ್ಣಕ್ಕೆ, ನಂತರ ಕಪ್ಪು ಕಂದು ಬಣ್ಣಕ್ಕೆ ತಿರುಗಿ ಕೊನೆಗೆ ಸಾಯುತ್ತದೆ.

ನಿರ್ವಹಣೆ: ಪ್ರತಿ ಲೀಟರ್ ನೀರಿನಲ್ಲಿ ೨ ಗ್ರಾಂ ಮೆಟಲಾಕ್ಸಿಲ್ ಎಂ.ಜೆಡ್. ೭೨ + ಮ್ಯಾಂಕೋಜೆಬ್ ಅಥವಾ ಕ್ಯಾಪ್ಟಾನ್ ೮೦ ಡಬ್ಲ್ಯೂ.ಪಿ. ಬೆರೆಸಿದ ದ್ರಾವಣದಿಂದ ಗಿಡದ ಸುತ್ತಲೂ ನೆನೆಸಬೇಕು.

ಖರ್ಚು ಮತ್ತು ಆದಾಯ

ಜರ್ಬೆರಾವನ್ನು ೪೦ ಸೆಂ.ಮೀ. x ೩೦ ಸೆಂ.ಮೀ. ಅಂತರವನ್ನು ಅನುಸರಿಸಿ, ೧೦೦೦ ಚ.ಮೀ. ಹಸಿರು ಮನೆಯಲ್ಲಿ ೬೦೦೦ ಗಿಡಗಳನ್ನು ಬೆಳೆಸಬಹುದು. ನಾಟಿಯ ಮೊದಲನೇ ವರ್ಷ ಪ್ರತಿ ಗಿಡಕ್ಕೆ ೨೦ ಹೂಗಳನ್ನು ಪಡೆಯಬಹುದು ಹಾಗೂ ಉತ್ತಮವಾಗಿ ನಿರ್ವಹಿಸಿದಲ್ಲಿ ಪ್ರತಿ ವರ್ಷ ಪ್ರತಿ ಗಿಡಕ್ಕೆ ೩೫ ರಿಂದ ೪೦ ಹೂಗಳವರೆಗೂ ಇಳುವರಿಯನ್ನು ಪಡೆಯಬಹುದು.

--ಅಶ್ವಿನಿ ಎಂ.ಎನ್.೧, ೯೪೮೧೩೫೯೯೪೩, ಹೇಮಂತ್ ಕುಮಾರ್ ಪಿ.ಎಂ.೨ ಮತ್ತು ಬಾಲಾಜಿ ಕುಲಕರ್ಣಿ ತೋಟಗಾರಿಕಾ ಮಹಾವಿದ್ಯಾಲಯ, ತ್ರಿಶೂರ್೧, ಒಡಿಶಾ ವಿಶ್ವವಿದ್ಯಾಲಯ ಮತ್ತು ಕೃಷಿ ತಂತ್ರಜ್ಞಾನ೨, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ೩