ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಸುಂದರ ಅಲಂಕಾರಿಕ ಔಷಧಿ ಸಸ್ಯ- ದೊಡ್ಡ ಚಿರಾಯುದ

ಶ್ರೀಲತಾ ಯು., ಜೀವನ್ ಯು., ವಿಕ್ರಂ ಹೆಚ್. ಸಿ.
೯೮೪೫೦೧೫೭೬೮
1

ಜನರು ತಮ್ಮ ಮನೆಯ ಸುತ್ತಮುತ್ತಲಿನ ಜಾಗದಲ್ಲಿ ಅನೇಕ ರೀತಿಯ ಹೂ ಗಿಡಗಳನ್ನು, ಅಲಂಕಾರಿಕ ಗಿಡಗಳನ್ನು ಹಾಗೂ ಔಷಧಿ ಮದ್ದಿನ ಗಿಡಗಳನ್ನು ಬೆಳೆಯುವುದು ಸಾಮಾನ್ಯವಾಗಿ ರೂಢಿಯಲ್ಲಿದೆ. ಇದರ ಫಲವಾಗಿ ಬೆಳೆದ ಗಿಡಗಳಿಂದ ಅನೇಕ ಉಪಯೋಗಗಳನ್ನು ಜನರು ಪಡೆದು ಕೊಳ್ಳುವುದು, ನೆಮ್ಮದಿ ಕೊಡುವ ಸಂಗತಿಯಾಗಿದೆ. ಹೀಗೆ ಅನೇಕ ಔಷಧಿ ಮದ್ದಿನ ಸಸ್ಯಗಳಲ್ಲೊಂದಾದ ದೊಡ್ಡ ಚಿರಾಯುದ (ಎಕ್ಸಾಕಂ ಬೈಕಲರ್) ಮುಖ್ಯವಾದ ಒಂದು ಸಾಂಪ್ರದಾಯಕ ಔಷಧಿ ಸಸ್ಯವಾಗಿದೆ. ಈ ಗಿಡದ ಹೂಗಳು ನೋಡಲು ಬಹಳ ಆಕರ್ಷಕವಾಗಿದ್ದು, ವಿವಿಧ ವರ್ಣಗಳಲ್ಲಿ ಕಾಣಸಿಗುತ್ತವೆ. ಸಾಮಾನ್ಯವಾಗಿ ಮಳೆಗಾಲದ ಅಂತ್ಯದ ಆಸುಪಾಸಿನ ತಿಂಗಳುಗಳಾದ ಆಗಸ್ಟ್‌ನಿಂದ ಡಿಸೆಂಬರ್‌ನಲ್ಲಿ ಈ ಗಿಡದ ಸುಂದರ ಹೂವುಗಳು ಅರಳಿ ನಿಲ್ಲುತ್ತವೆ. ಮನೆಯ ಅಂಗಳದಲ್ಲಿ ಅರಳಿನಿಂತ ಹೂಗಳು ಇನ್ನಷ್ಟು ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ, ನೋಡುವ ಕಣ್ಣುಗಳಿಗೆ ಆನಂದವನ್ನುಂಟು ಮಾಡುತ್ತವೆ.

ಸಾಮಾನ್ಯವಾಗಿ ಈ ಸಸ್ಯಗಳನ್ನು ಕರ್ನಾಟಕದ ಮಲೆನಾಡು ಪ್ರದೇಶಗಳಾದ ದಕ್ಷಿಣಕನ್ನಡ, ಉಡುಪಿ, ಹೊನ್ನಾವರ, ತೀರ್ಥಹಳ್ಳಿ, ಶಿವಮೊಗ್ಗ ಹಾಗೂ ಇನ್ನಿತರ ಗುಡ್ಡಗಾಡು ಪ್ರದೇಶಗಳಲ್ಲಿ ಹಾಗೂ ಉತ್ತರ ಕೇರಳಾದ ಮಲೆನಾಡು ಜಿಲ್ಲೆಗಳಾದ ಕಾಸರಗೋಡು, ಕ್ಯಾಲಿಕಟ್ ಹಾಗೂ ಮತ್ತಿತರ ಕಡೆ ಕಾಣಬಹುದು.

ವಿಪರ್ಯಾಸಕರ ಸಂಗತಿ ಎಂದರೆ, ಇತ್ತೀಚಿನ ದಿನಗಳಲ್ಲಿ ಈ ಸಸ್ಯಗಳು ಪ್ರಕೃತಿಯಿಂದ ನಶಿಸಿ ಹೋಗುತ್ತಿರುವುದು ಒಂದು ದುರ್ದೈವವೇ ಸರಿ.

ಈ ಗಿಡದ ಎಲ್ಲಾ ಭಾಗಗಳನ್ನು ಕಷಾಯದ ರೂಪದಲ್ಲಿ ಸೇವಿಸಬಹುದಾಗಿದೆ. ಇದರಲ್ಲಿ ದೇಹಕ್ಕೆ ಬೇಕಾದ ಸಾಕಷ್ಟು ಪ್ರಮಾಣದ ಸ್ಟೀರಾಯ್ಡ್, ಆಲ್ಕೋಲಾಯ್ಡ್ ಹಾಗೂ ಟ್ಯಾನಿನ್ ಅಂಶಗಳಿರುವುದರಿಂದ ಸಾಮಾನ್ಯ ಕಾಯಿಲೆಗಳಾದ ಜ್ವರ, ಸುಡುವ ಸಂವೇದನೆ, ಪಿತ್ತ ಹಾಗೂ ರಕ್ತಸ್ರಾವದಂತಹ ತೊಂದರೆಗಳನ್ನು ಸುಲಭವಾಗಿ ತಡೆಗಟ್ಟಲು ಉತ್ತಮ ಮನೆಮದ್ದಾಗಿದೆ.

ಇಷ್ಟೆಲ್ಲಾ ಬಹು ಉಪಯೋಗ ಅಂಶಗಳಿರುವ ಈ ಸಸ್ಯವನ್ನು ಮನೆಯ ಅಂಗಳಗಳಲ್ಲಿ, ಇರುವ ಕಡಿಮೆ ಜಾಗದಲ್ಲೇ ಕುಂಡಗಳಲ್ಲೂ ಸಹ ಸುಲಭವಾಗಿ ಬೆಳೆಯಬಹುದಾಗಿದೆ. ಈ ಗಿಡಗಳು ಮನೆಯ ಮುಂಭಾಗದಲ್ಲಿರುವುದರಿಂದ ಅಲಂಕಾರಿಕ ಗಿಡವಾಗಿ ನೋಡುವ ಕಣ್ಣುಗಳಿಗೆ ಆಹ್ಲಾದವನ್ನುಂಟು ಮಾಡುವುದರ ಜೊತೆಗೆ, ಸುತ್ತಲಿನ ವಾತಾವರಣಕ್ಕೆ ಆಕರ್ಷಣೆಯ ಮೆರುಗನ್ನು ಮೂಡಿಸುತ್ತವೆ. ಇದಲ್ಲದೆ ಈ ಸಸ್ಯವನ್ನು ಹಿತ್ತಲಿನಲ್ಲಿ ಮನೆ ಮದ್ದಾಗಿಯೂ ಬೆಳೆಯಬಹುದು.

ನಿಧಾನವಾಗಿ ನಶಿಸುತ್ತಿರುವ ಈ ಸಸ್ಯಗಳನ್ನು ಅಳಿದಿರುವ ಮಟ್ಟವನ್ನು ಮರೆತು ಉಳಿದಿರುವಷ್ಟನ್ನು ಸಂರಕ್ಷಿಸಿಕೊಂಡು, ದ್ವಿಗುಣಗೊಳಿಸಿಕೊಂಡು ಹಾಗೂ ಉದ್ದೇಶಪೂರ್ವಕ ಜಾಗ್ರತೆಯಿಂದ ಉಳಿಸಿ ಕೊಳ್ಳಬೇಕಾಗಿರುವುದು ವಾಸ್ತವದಲ್ಲಿ ಅನಿವಾರ್ಯತೆಯಾಗಿದೆ.

--ಶ್ರೀಲತಾ ಯು., ಜೀವನ್ ಯು. ಮತ್ತು ವಿಕ್ರಂ ಹೆಚ್. ಸಿ., ೯೮೪೫೦೧೫೭೬೮, ಕೃಷಿ ವಿಶ್ವವಿದ್ಯಾಲಯ, ತ್ರಿಶೂರ್, ಕೇರಳ