ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಹಸಿರು ಮನೆಯಲ್ಲಿ ಕಾರ್ನೇಶನ್ ಹೂ ಬೆಳೆಯ ಬೇಸಾಯ ಕ್ರಮಗಳು

ರಾಜೇಶ್ ಎ.ಎಂ., ಮಂಜುನಾಥ್ ರೆಡ್ಡಿ ಟಿ. ಬಿ., ಅಶ್ವಥ್ಥನಾರಾಯಣ ರೆಡ್ಡಿ ಎನ್.,
೯೦೩೫೫೮೮೧೭೬
1

ಕಾರ್ನೇಶನ್ ಬೆಳೆಗೆ ಸಾಮಾನ್ಯವಾಗಿ ವರ್ಷಪೂರ್ತಿ ಬೇಡಿಕೆ ಇದ್ದು, ಈ ಬೆಳೆಯನ್ನು ಬೆಳೆಯಲು ಹಸಿರು ಮನೆಯು ಅತ್ಯವಶ್ಯಕವಾಗಿದೆ. ಈ ಹೂವುಗಳನ್ನು ಹೂಗುಚ್ಚಗಳ ತಯಾರಿ, ಹೂದಾನಿಗಳ ಅಲಂಕಾರ ಹಾಗೂ ಶುಭಸಮಾರಂಭಗಳಲ್ಲಿ ಒಳಾಂಗಣ ಅಲಂಕಾರಕ್ಕಾಗಿ ಅತ್ಯಧಿಕವಾಗಿ ಉಪಯೋಗಿಸುತ್ತಾರೆ. ಕರ್ನಾಟಕದಲ್ಲಿ ಈ ಬೆಳೆಯನ್ನು ಬೆಂಗಳೂರಿಗೆ ಹತ್ತಿರವಿರುವಂತಹ ದೇವನಹಳ್ಳಿ, ಕೋಲಾರ, ಮುಳಬಾಗಿಲು, ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ ಇತ್ಯಾದಿ ಭಾಗಗಳಲ್ಲಿ ಅಧಿಕವಾಗಿ ಬೆಳೆಯುತ್ತಾರೆ.

ಹವಾಗುಣ ಮತ್ತು ಮಣ್ಣಿನ ನಿರ್ವಹಣೆ

ಲಾಭದಾಯಕ ದೃಷ್ಟಿಯಿಂದ ಕಡಿಮೆ ಎಂದರು ಸುಮಾರು ೧೦೦೦ ಚ.ಮೀ. ವಿಸ್ತೀರ್ಣದ ಕಡಿಮೆ ವೆಚ್ಚದ ಹಸಿರು ಮನೆಯ ನಿರ್ಮಾಣವು ಅವಶ್ಯಕವಾಗಿದೆ. ಈ ಬೆಳೆಯನ್ನು ಬೆಳೆಯಲು ಸುಮಾರು ೨೦-೨೫೦ ಸೆಂ. ದಿನದ ಉಷ್ಣಾಂಶ, ೧೫-೨೦೦ ಸೆಂ. ರಾತ್ರಿಯ ಉಷ್ಣಾಂಶ ಹಾಗೂ ಶೇ. ೬೦-೮೦ ರಷ್ಟು ವಾತಾವರಣದ ತೇವಾಂಶಗಳು ಅಗತ್ಯವಾಗಿವೆ. ಹಸಿರು ಮನೆಯಲ್ಲಿ ಬೆಳೆಯುವುದರಿಂದಾಗಿ ಹೊರಗಿನ ವಾತಾವರಣದಲ್ಲಿ ವೈಪರೀತ್ಯಗಳಿದ್ದರೂ, ನಾವು ವಾತಾವರಣದ ಘಟಕಗಳನ್ನು ಬೆಳೆಗೆ ತಕ್ಕವಾಗಿ ಮಾರ್ಪಾಡು ಮಾಡಬಹುದು.

ಮಣ್ಣಿನ ನಿರ್ಜಲೀಕರಣ

ಸ್ವಾಭಾವಿಕವಾಗಿ ಮಣ್ಣಿನಲ್ಲಿ ಕಂಡುಬರುವಂತಹ ಕೀಟಗಳ ಮೊಟ್ಟೆ, ಹುಳ ಹಾಗೂ ಕಳೆಗಳ ಬೀಜಗಳನ್ನು ನಾಶ ಮಾಡಲು ಮಣ್ಣಿನ ನಿರ್ಜಲೀಕರಣ ಅತ್ಯವಶ್ಯಕವಾಗಿದೆ. ಇದಕ್ಕೋಸ್ಕರ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಡಿಮೆ ಖಾರವಿರುವ ಹೈಡ್ರೋಜನ್ ಪೆರಾಕ್ಸೈಡ್ ಅನ್ನುವ ರಾಸಾಯನಿಕವನ್ನು ಬಳಸಬೇಕು. ೫ ಮಿ.ಲೀ. ದ್ರಾವಣವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಚೆನ್ನಾಗಿ ಉಳುಮೆ ಮಾಡಿದಂತಹ ಮಣ್ಣಿನ ಮೇಲೆ ಚೆಲ್ಲಬೇಕು. ಹಸಿರು ಮನೆಯೊಳಗಡೆ ಇರುವ ಎಲ್ಲಾ ಭಾಗವನ್ನು ಸಂಪೂರ್ಣವಾಗಿ ಹೈಡ್ರೊಜನ್ ಪೆರಾಕ್ಸೈಡ್ ದ್ರಾವಣದಿಂದ ತೇವಗೊಳಿಸಬೇಕು ಬಳಿಕ ಲಭ್ಯವಿರುವಂತಹ ಟಾರ್ಪಾಲ್ ಪ್ಲಾಸ್ಟಿಕ್‌ನಿಂದ ಎಲ್ಲಾ ಭಾಗವನ್ನು ಸುಮಾರು ೩-೪ ದಿನಗಳವರೆಗೆ ಮುಚ್ಚಿ ಇಡಬೇಕು. ಬಳಿಕ ಪ್ಲಾಸ್ಟಿಕ್ ಅಥವಾ ಟಾರ್ಪಾಲಿನ್ ಹೊದಿಕೆಯನ್ನು ತೆಗೆದು ಚೆನ್ನಾಗಿ ನೀರನ್ನು ಹಾಯಿಸಬೇಕು. ಮಣ್ಣಿನಲ್ಲಿರುವಂತಹ ಹೈಡ್ರೊಜನ್ ಪೆರಾಕ್ಸೈಡ್ ರಾಸಾಯನಿಕ ಬಸಿದು ಹೋಗುವ ಹಾಗೆ ಪೈಪ್ ಮುಖಾಂತರ ಚೆನ್ನಾಗಿ ನೀರನ್ನು ಒದಗಿಸಬೇಕು. ಬಳಿಕ ೧೦-೧೫ ದಿನಗಳ ನಂತರವಷ್ಟೇ ನಾಟಿಯನ್ನು ಮಾಡಬೇಕು. ಈ ಪ್ರಕ್ರಿಯೆಯಿಂದಾಗಿ ಮುಂದಿನ ದಿನಗಳಲ್ಲಿ ಬರಬಹುದಾದಂತಹ ಕೀಟಗಳ ಸಮಸ್ಯೆಯನ್ನು ತಕ್ಕಮಟ್ಟಿಗೆ ತಡೆಯಬಹುದಾಗಿದೆ.

ಮಡಿಗಳ ತಯಾರಿಕೆ

ಮಣ್ಣಿನ ನಿರ್ಜಲೀಕರಣವಾದ ಮೇಲೆ ಏರುಮಡಿಗಳನ್ನು ಮಾಡಬೇಕು. ಸುಮಾರು ೩ ಅಡಿ ಅಗಲ, ೨ ಅಡಿ ಎತ್ತರವಿರುವಂತಹ ಏರುಮಡಿಗಳನ್ನು ಮಾಡಬೇಕು. ಬಳಿಕ ಈ ಕೆಳಗೆ ವಿವರಿಸಿದಂತೆ ಗೊಬ್ಬರ ಹಾಗೂ ಗಿಡಗಳ ಬೆಳವಣಿಗೆಗೆ ಪೂರಕವಾಗುವಂತಹ ಇತರ ಮಾಧಮಗಳನ್ನು ಒದಗಿಸಬೇಕು. ಈ ಎಲ್ಲ ಗೊಬ್ಬರ ಮತ್ತು ಮಾಧ್ಯಮಗಳನ್ನು ಗಿಡಗಳನ್ನು ನಾಟಿ ಮಾಡುವ ಮೊದಲು ನೀಡಬೇಕು.

ನಾಟಿ ಮಾಡುವುದು

ಗಿಡಗಳ ತುದಿಭಾಗದ ಮುಖಾಂತರ ಸಸ್ಯಾಭಿವೃದ್ದಿಯನ್ನು ಮಾಡಬಹುದು. ಆದರೆ ಇತ್ತೀಚೆಗೆ ಎಲ್ಲಾ ರೈತರೂ ಕೂಡಾ ಅಂಗಾಂಶ ಕೃಷಿಯಲ್ಲಿ ಅಭಿವೃದ್ಧಿಪಡಿಸಿದಂತಹ ಗಿಡಗಳನ್ನು ಕೊಂಡುಕೊಳ್ಳುತ್ತಾರೆ. ಈ ಗಿಡಗಳು ಸುಮಾರು ೮-೧೦ ರೂ. ಗಳಿಗೆ ಅಂಗಾಂಶ ಕೃಷಿ ಪ್ರಯೋಗಾಲಯದಲ್ಲಿ (ಮುಖ್ಯವಾಗಿ ಪುಣೆ)ಲಭ್ಯವಿರುತ್ತವೆ. ಈ ಗಿಡಗಳನ್ನು ತುಂಬಾ ಹತ್ತಿರ ಅಂದರೆ ೧೫ ಸೆಂ.ಮೀ. ೧೫ ಸೆಂ.ಮೀ. ಅಥವಾ ೨೦ ಸೆಂ.ಮೀ. ೨೦ ಸೆಂ.ಮೀ. ಅಂತರದಲ್ಲಿ ಮೊದಲೇ ಸಿದ್ಧಪಡಿಸಿದ, ಗೊಬ್ಬರಗಳನ್ನು ನೀಡಿದ ಏರುಮಡಿಗಳಲ್ಲಿ ನಾಟಿ ಮಾಡಬೇಕು. ಅಂದಾಜು ೩೦ ಗಿಡಗಳು ಪ್ರತಿ ಚ.ಮೀ.ಗೆ ಅಗತ್ಯವಿರುತ್ತವೆ. ಅಂದರೆ ೧೦೦೦ ಚ.ಮೀ. ಹಸಿರು ಮನೆಗೆ ಸುಮಾರು ೩೦೦೦೦ ೩೫೦೦೦ದಷ್ಟು ಗಿಡಗಳ ಅಗತ್ಯವಿರುತ್ತವೆ. ಪ್ರತೀ ಏರುಮಡಿಗೂ ೬ ಸಾಲುಗಳಲ್ಲಿ ಕಾರ್ನೇಶನ್ ಗಿಡಗಳನ್ನು ಕಾಣಬಹುದು.

ನಾಟಿ ಬಳಿಕ ಪೋಷಕಾಂಶಗಳ ನಿರ್ವಹಣೆ

ಪೋಷಕಾಂಶಗಳು ಪ್ರಮಾಣ (ಗ್ರಾಂ/ಪ್ರತಿ ಚ.ಮೀ./ವಾರಕ್ಕೊಮ್ಮೆ)

ಮೊಗ್ಗುಗಳು ಆರಂಭವಾಗುವವರೆಗೆ ಟ್ಯಾಂಕ್ ಎ (ಸೋಮವಾರ ಮತ್ತು ಗುರುವಾರ) ಎ. ಅಮೋನಿಯಂ ನೈಟ್ರೇಟ್ ೩.೦೦ ಬಿ. ಪೊಟ್ಯಾಶಿಯಂ ನೈಟ್ರೇಟ್ ೫.೦೦ ಸಿ. ಮೋನೋ ಅಮೋನಿಯಂ ಫಾಸ್ಫೇಟ್ ೨.೦೦ ಡಿ. ಮೆಗ್ನೇಶಿಯಂ ನೈಟ್ರೇಟ್ ೨.೫೦ ಇ. ಬೋರಾನ್ ೧.೦೦ ಟ್ಯಾಂಕ್ ಬಿ (ಮಂಗಳವಾರ ಮತ್ತು ಶುಕ್ರವಾರ) ಎ. ಪೊಟ್ಯಾಶಿಯಂ ನೈಟ್ರೇಟ್ ೫.೦೦ ಬಿ. ಕ್ಯಾಲ್ಸಿಯಂ ನೈಟ್ರೇಟ್ ೮.೦೦ ಮೊಗ್ಗು ಆರಂಭವಾಗಿ ಹೂವಿನ ಕಟಾವು ಹಂತದವರೆಗೆ

ಟ್ಯಾಂಕ್ ಎ (ಸೋಮವಾರ ಮತ್ತು ಗುರುವಾರ) ಎ. ೧೯:೧೯:೧೯ ೨.೦೦ ಬಿ. ಪೊಟ್ಯಾಶಿಯಂ ನೈಟ್ರೇಟ್ ೭.೫೦ ಸಿ. ಮೋನೋ ಅಮೋನಿಯಂ ಫಾಸ್ಫೇಟ್ ೨.೦೦ ಡಿ. ಮೆಗ್ನೇಶಿಯಂ ನೈಟ್ರೇಟ್ ೨.೫೦ ಇ. ಬೋರಾನ್ ೦.೫೦ ಎಫ್. ಲಘು ಪೋಷಕಾಂಶಗಳು ೧.೦೦ ಟ್ಯಾಂಕ್ ಬಿ (ಮಂಗಳವಾರ ಮತ್ತು ಶುಕ್ರವಾರ) ಎ. ಪೊಟ್ಯಾಶಿಯಂ ನೈಟ್ರೇಟ್ ೫.೦೦ ಬಿ. ಕ್ಯಾಲ್ಸಿಯಂ ನೈಟ್ರೇಟ್ ೯.೦೦

ಈ ಮೇಲೆ ಸೂಚಿಸಿದಂತೆ ಗೊಬ್ಬರಗಳನ್ನು ೧೦೦೦ ಲೀಟರ್ ನೀರಿನಲ್ಲಿ ಕರಗಿಸಿ ನೀಡಬೇಕು. ವಾರದಲ್ಲಿ ಮೂರು ದಿನ ಗೊಬ್ಬರವಿಲ್ಲದೆ ನೀರನ್ನಷ್ಟೇ ಒದಗಿಸಬೇಕು. ಈ ರೀತಿಯ ರಸಾವರಿ ಪದ್ಧತಿಯಿಂದಾಗಿ, ಅಧಿಕ ಇಳುವರಿ ಮತ್ತು ಗುಣಮಟ್ಟವನ್ನು ಅಪೇಕ್ಷಿಸಬಹುದು.

ವಿಶೇಷವಾದ ಬೇಸಾಯ ಕ್ರಮಗಳು

ಎ. ಗಿಡಗಳನ್ನು ಚಿವುಟುವುದು: ಗಿಡಗಳನ್ನು ನಾಟಿ ಮಾಡಿದ ೧-೨ ತಿಂಗಳ ಬಳಿಕ ಗಿಡಗಳ ತುದಿಭಾಗವನ್ನು ಚಿವುಟಬೇಕು. ಇದರಿಂದಾಗಿ ಗಿಡಗಳು ಅಧಿಕ ಗೆಲ್ಲುಗಳನ್ನು ಹೊಂದಿ ಇಳುವರಿಯು ಅಧಿಕವಾಗುತ್ತದೆ.
ಬಿ. ನೆಟ್ಟಿಂಗ್ (ಆಧಾರವನ್ನು ನೀಡುವುದು): ಗಿಡಗಳು ಹುಲ್ಲಿನ ಜಾತಿಗೆ ಸೇರಿದ್ದಾಗಿದ್ದು, ಬೇಗನೆ ಬಾಗುವುದನ್ನು ಕಾಣಬಹುದು. ಇದನ್ನು ನಿಯಂತ್ರಿಸಲು ಸುಮಾರು ೪-೫ ಸ್ತರಗಳಲ್ಲಿ ನೈಲಾನ್ ಹಗ್ಗ ಅಥವಾ ತಂತಿಗಳನ್ನು ಬಳಸಿ, ಗಿಡಗಳ ಬುಡಭಾಗದಿಂದ ಮೇಲ್ಭಾಗದವರೆಗೆ ಆಧಾರವನ್ನು ಒದಗಿಸಬೇಕು. ತಂತಿಗಳನ್ನು ಏರುಮಡಿಯ ಮೇಲೆ ಉತ್ತರದಿಂದ ದಕ್ಷಿಣ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ೪-೫ ಸ್ತರಗಳಲ್ಲಿ ಕಟ್ಟುವುದರಿಂದಾಗಿ ಪ್ರತಿ ಗಿಡಕ್ಕೂ ಆಧಾರವು ಲಭಿಸುತ್ತದೆ. ಈ ಬೆಳೆಯಲ್ಲಿ ಅಧಿಕ ಆಳುಗಳು ಇಂತಹ ಪ್ರಕ್ರಿಯೆಗೆ ಬೇಕಾಗುತ್ತವೆ.
ಸಿ. ಮೊಗ್ಗುಗಳ ಹೊದಿಕೆ(ಬಡ್ ಕ್ಯಾಪಿಂಗ್): ಕಾರ್ನೇಶನ್ ಮೊಗ್ಗುಗಳು ತುಂಬಾ ಆಕರ್ಷಕವಾಗಿ ಅಂದರೆ ಸಮಾನವಾದ ಉದ್ದ ಹಾಗೂ ಗಾತ್ರವನ್ನು ಹೊಂದಲು, ಅವುಗಳನ್ನು ಕಡಲೆ ಗಾತ್ರದ ಮೊಗ್ಗು ಇರುವ ಸಂದರ್ಭದಲ್ಲಿ ನೈಲಾನ್ ಬಲೆಯಿಂದ ಹೊದಿಸಬೇಕು.

ತಳಿಗಳು

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಇವರು ಅಭಿವೃದ್ಧಿಪಡಿಸಿದ ’ಅರ್ಕಾ ತೇಜಸ್’ ಅಥವಾ ’ಅರ್ಕಾ ಫ್ಲೇಮ್’ ತಳಿಗಳನ್ನು ಬಳಸಬಹುದು. ಇದಲ್ಲದೆ ಖಾಸಗಿ ಕಂಪೆನಿಗಳು ಅಭಿವೃದ್ಧಿಪಡಿಸಿದಂತಹ ಹಲವಾರು ತಳಿಗಳು ರೈತರ ಜಮೀನಿನಲ್ಲಿ ಈಗಾಗಲೇ ಕಾಣಬಹುದು.

ಕೊಯ್ಲು ಮತ್ತು ಕೊಯ್ಲೋತ್ತರ ತಂತ್ರಜ್ಞಾನ

ಗಿಡಗಳನ್ನು ನಾಟಿ ಮಾಡಿದ ೪-೬ ತಿಂಗಳಿನಲ್ಲಿ ಹೂವುಗಳು ಕಟಾವಿನ ಹಂತಕ್ಕೆ ಬಂದಿರುತ್ತವೆ. ಕೊಯ್ಲೋತ್ತರ ತಂತ್ರಜ್ಞಾನವನ್ನು ಈ ಕೆಳಗಿನಂತೆ ನಿರ್ವಹಿಸಬಹುದು.

ಕೊಯ್ಲಿನ ಹಂತ

ಪೈಂಟ್ ಬ್ರಶ್: ಅಂದರೆ ಮೊಗ್ಗುಗಳು ಚೆನ್ನಾಗಿ ಬಲಿತಿರುತ್ತವೆ. ಆದರೆ ಅರಳಿರುವುದಿಲ್ಲ ಹಾಗೂ ದಳಗಳ ಬಣ್ಣವು ಸ್ಪಷ್ಟವಾಗಿ ಗೋಚರಿಸುತ್ತಿರುತ್ತದೆ. ಈ ಹಂತದಲ್ಲಿ ಹೂವುಗಳನ್ನು ಅವುಗಳ ದಂಟಿನ ಜೊತೆಗೆ ಕಟಾವು ಮಾಡಿ ಬಳಿಕ ದಂಟಿನ ಕೆಳಭಾಗವನ್ನು ನೀರಿನಲ್ಲಿ ಮುಳುಗಿಸಿಡಬೇಕು.

ಕಟಾವು ಮಾಡಿದ ಎಲ್ಲಾ ಹೂವುಗಳನ್ನು ಆದಷ್ಟು ಬೇಗ ಶೀತಲೀಕರಣವಿರುವಂತಹ ಘಟಕದಲ್ಲಿ ಸುಮಾರು ೪-೭೦ ಸೆಂ. ಉಷ್ಣಾಂಶದಲ್ಲಿ ೨-೩ ಗಂಟೆಗಳವರೆಗೆ ಇರಿಸಬೇಕು. ಹೀಗೆ ಮಾಡುವುದರಿಂದಾಗಿ ಹೂವುಗಳ ತಾಜಾತನವನ್ನು ಕಾಪಾಡಬಹುದು.

ಹೂವುಗಳ ಗಾತ್ರ, ದಂಟಿನ ಉದ್ದದ ಆಧಾರದಲ್ಲಿ ಇವುಗಳನ್ನು ಫ್ಯಾನ್ಸಿ, ಸ್ಟೇಂಡರ್ಡ್ ಹಾಗೂ ಶೋರ್ಟ್‌ಗಳೆಂಬ ೩ ಶ್ರೇಣಿಗಳನ್ನಾಗಿ ವಿಂಗಡಿಸಬೇಕು. ಇವುಗಳಲ್ಲಿ ಫ್ಯಾನ್ಸಿ ಎಂಬ ಶ್ರೇಣಿಯು ಉತ್ಕೃಷ್ಟವಾಗಿದ್ದು, ಇಲ್ಲಿ ಹೂವಿನ ಗಾತ್ರವು ೫ ಸೆಂ.ಮೀ. ಹಾಗೂ ದಂಟಿನ ಉದ್ದವು ಸುಮಾರು ೨ ಅಡಿಗಳಷ್ಟು ಇರುತ್ತದೆ.

ಹೂವುಗಳ ಜೋಡಣೆ ಮತ್ತು ಪ್ಯಾಕಿಂಗ್

ಶ್ರೇಣಿಗಳನ್ನಾಗಿ ವಿಂಗಡಿಸಿದ ಹೂಗಳನ್ನು ಮೊದಲಿಗೆ ಕಟ್ಟುಗಳನ್ನಾಗಿ ಮಾಡಬೇಕು. ೨೦ ಹೂಗಳನ್ನು ಸೇರಿಸಿ ಒಂದು ಕಟ್ಟುಗಳಾಗಿ ಮಾಡಲಾಗುತ್ತದೆ. ಬಳಿಕ ಈ ಹೂವುಗಳನ್ನು ರಂಧ್ರವಿರುವ ರಟ್ಟಿನ ಪೆಟ್ಟಿಗೆಯಲ್ಲಿ (ಸುಮಾರು ೨೦ ಕಟ್ಟುಗಳು ಪ್ರತೀ ಪೆಟ್ಟಿಗೆಗೆ) ತುಂಬಿಸಿ ಶೀತಲಗೃಹದ ವ್ಯವಸ್ಥೆಯಿರುವ ವಾಹನದಲ್ಲಿ ತುಂಬಿಸಿ ಮಾರುಕಟ್ಟೆಗೆ ಸಾಗಿಸಬೇಕು.

ಇಳುವರಿ ಹಾಗೂ ಲಾಭ

ಈ ಬೆಳೆಯಲ್ಲಿ ೧೦೦೦ ಚ.ಮೀ. ಹಸಿರು ಮನೆಗೆ ಅಂದಾಜು ೩ ಲಕ್ಷದ ೫೦ ಸಾವಿರ ತಾಜಾ ಹೂವುಗಳನ್ನು ಪ್ರತಿ ವರ್ಷಕ್ಕೆ ಕಟಾವು ಮಾಡಬಹುದು. ಒಂದು ಬಾರಿ ನಾಟಿ ಮಾಡಿದ ಬಳಿಕ ೩ ವರ್ಷಗಳವರೆಗೆ ಹೂವುಗಳನ್ನು ಕಟಾವು ಮಾಡಬಹುದು. ಬಳಿಕ ಹೊಸದಾಗಿ ನಾಟಿ ಮಾಡಬೇಕು. ಎಲ್ಲಾ ಖರ್ಚುಗಳನ್ನು ತೆಗೆದು ೧೦೦೦ ಚ.ಮೀ. ಹಸಿರು ಮನೆಯಲ್ಲಿ ಪ್ರತಿ ವರ್ಷಕ್ಕೆ ಅಂದಾಜು ೩ ೩.೫೦ ಲಕ್ಷದಷ್ಟು ನಿವ್ವಳ ಆದಾಯವನ್ನು ನಿರೀಕ್ಷಿಸಬಹುದು.

ಕೀಟಗಳ ನಿರ್ವಹಣೆ

ಕಾರ್ನೇಶನ್ ಬೆಳೆಯಲ್ಲಿ ಪ್ರಮುಖವಾಗಿ ಬಾಧಿಸುವ ಕೀಟಗಳೆಂದರೆ ಥ್ರಿಪ್ಸ್ ನುಶಿ ಮತ್ತು ಕೆಂಪು ಜೇಡ ನುಶಿ ಇತ್ಯಾದಿ.

೧. ಥ್ರಿಪ್ಸ್: ಈ ಕೀಟದ ಅಪ್ಸರೆ ಮತ್ತು ಪ್ರೌಢ ಕೀಟಗಳು ಎಲೆಗಳಿಂದ ಮತ್ತು ಹೂ ಮೊಗ್ಗು ಹಾಗೂ ಹೂಗಳಿಂದ ರಸ ಹೀರುವುದರಿಂದ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಹೂಗಳು ಅದರ ಸ್ವಾಭಾವಿಕ ಬಣ್ಣ ಕಳೆದುಕೊಳ್ಳುವುದರಿಂದ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಮಾರಾಟವಾಗುವುದರಿಂದ ರೈತರಿಗೆ ಹೆಚ್ಚಿನ ನಷ್ಟ ಉಂಟಾಗುತ್ತದೆ.

ನಿರ್ವಹಣೆ: ಈ ಕೀಟದ ಹಾನಿಯು ಕಂಡುಬಂದಾಗ ಅಸಿಫೆಟ್ ೭೫ ಮೀ. @ ೧ ಗ್ರಾಂ ಅಥವಾ ಪಿಫ್ರೋನಿಲ್ @ ೦.೫ ಮಿ.ಲೀ. ಅಥವಾ ಡೈಫೆನ್ ಥಿಯೋರಾನ್ @ ೦.೫ ಗ್ರಾಂನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

೨. ಜೇಡ ನುಶಿ: ಈ ಕೀಟದ ಮರಿಹುಳು ಮತ್ತು ಪ್ರೌಢ ಕೀಟಗಳು ಎಲೆಗಳ ತಳಭಾಗದಲ್ಲಿ ಗುಂಪಿನಲ್ಲಿದ್ದು, ಎಲೆಗಳಲ್ಲಿ ಹಾಗೂ ರೆಂಬೆಗಳಲ್ಲಿ ಕಂಡುಬರುತ್ತವೆ. ಇದರಿಂದ ಎಲೆ ಮತ್ತು ರೆಂಬೆಗಳ ಮೇಲೆ ಬಿಳಿ ಮಚ್ಚೆಗಳಾಗುತ್ತವೆ. ಇವುಗಳ ಹೂಗಳ/ಮೊಗ್ಗುಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ ಮತ್ತು ಬಾಧೆಗೊಳಪಟ್ಟ ಮೊಗ್ಗುಗಳು ಒಣಗುತ್ತವೆ.

ನಿರ್ವಹಣೆ: ಜೇಡ ನುಶಿ ಹತೋಟಿಗಾಗಿ ೧ ಮಿ.ಲೀ. ಕ್ಲೋರ್‌ಫೇನ್‌ಪೈರ್ ೧೦ ಇ.ಸಿ ಅಥವಾ ಡೈಫೆನ್‌ಥಿಯುರಾನ್ ೫೦ ಎಸ್ ಸಿ ಅಥವಾ ಫೆನಾಜಿಕ್ವಿನ್ ೧೦ ಇ.ಸಿ @ ೧ ಮಿ.ಲೀ. ಅಥವಾ ಪ್ರಾಪರ್‌ಗೈಟ್ ೫೭ ಇ.ಸಿ @ ೨ ಮಿ.ಲೀ.ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ರೋಗ ನಿರ್ವಹಣೆ

೧. ಸೊರಗು ರೋಗ: ರೋಗಕ್ಕೆ ತುತ್ತಾದ ಗಿಡಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಕಾಂಡವು ಕಂದು ಬಣ್ಣಕ್ಕೆ ಬರುತ್ತದೆ. ರೋಗಕ್ಕೆ ತುತ್ತಾದ ಗಿಡಗಳು ಒಣಗಿ ಸಾಯುತ್ತವೆ.

ನಿರ್ವಹಣೆ: ಸೊರಗು ರೋಗಕ್ಕೆ ತುತ್ತಾದ ಗಿಡಗಳಿಗೆ ೧ ಗ್ರಾಂ ಕಾರ್ಬೆನ್‌ಡೈಜಿಮ್ ಶೇ. ೫೦ ಡಬ್ಲ್ಯೂ.ಪಿ. ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣದಿಂದ ಮಡಿಯನ್ನು ನೆನೆಸಬೇಕು.

394041

--ರಾಜೇಶ್ ಎ.ಎಂ., ೯೦೩೫೫೮೮೧೭೬, ಮಂಜುನಾಥ್ ರೆಡ್ಡಿ ಟಿ. ಬಿ. ಮತ್ತು ಅಶ್ವಥ್ಥನಾರಾಯಣ ರೆಡ್ಡಿ ಎನ್., ತೋಟಗಾರಿಕೆ ಮಹಾವಿದ್ಯಾಲಯ, ಟಮಕ, ಕೋಲಾರ