ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಹೂವಿನ ಬೆಳೆಗಳಲ್ಲಿ ಮೌಲ್ಯವರ್ಧನೆ

ನಿಖಿಲ್ ಹೆಚ್. ಎನ್., ನಯನ್ ದೀಪಕ್ ಜಿ.
೭೩೫೩೨೩೯೯೮೭
1

ಕರ್ನಾಟಕ ರಾಜ್ಯವು ಹೂವಿನ ಬೆಳೆಗಳ ಕೃಷಿಯಲ್ಲಿ ಪ್ರತ್ಯೇಕ ಸ್ಥಾನದಲ್ಲಿರುವುದು ವಿಶೇಷ. ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಹವಾಗುಣ ಹಾಗೂ ಮಣ್ಣಿನ ಗುಣ ಹೂವಿನ ಬೇಸಾಯದಲ್ಲಿ, ರೈತರಿಗೆ ಯಶಸ್ಸನ್ನು ದೊರಕಿಸಿ ಕೊಡುವುದರಲ್ಲಿ ಸಫಲವಾಗಿದೆ. ಹೂವಿನ ಬೆಳೆಗಳಲ್ಲಿ ಪ್ರಮುಖವಾಗಿ ಗುಲಾಬಿ, ಮಲ್ಲಿಗೆ, ಚೆಂಡು ಹೂ, ಸೇವಂತಿಗೆ, ಸುಗಂಧರಾಜ, ಜರ್ಬೆರಾ, ಆಂಥೂರಿಯಂ, ಆರ್ಕಿಡ್ ಇತ್ಯಾದಿ. ಮಾರುಕಟ್ಟೆಗೆ ಅನುಗುಣವಾಗಿ ಹೂಗಳಲ್ಲಿ ಸರಿಯಾದ ಗುಣಮಟ್ಟ ಹಾಗೂ ಇಳುವರಿ ಇಲ್ಲದಿದ್ದರೆ ಹೂವಿನ ಕೃಷಿಯಲ್ಲಿ ಲಾಭ ಗಳಿಸುವುದು ತುಂಬಾ ಕಷ್ಟ. ತಾಜಾ ಹೂಗಳು ಪ್ರತ್ಯೇಕ ಸಂದರ್ಭಗಳಲ್ಲಿ ಅಂದರೆ ಪ್ರಮುಖ ಹಬ್ಬ-ಹರಿದಿನಗಳು, ಸಮಾರಂಭಗಳು, ಮದುವೆಯ ಮಾಸಗಳಲ್ಲಿ ಮಾರುಕಟ್ಟೆಗೆ ಬಂದರೆ ಮಾತ್ರ ಹೆಚ್ಚಿನ ಲಾಭ ಸಿಗುತ್ತದೆ. ಉಳಿದ ಸಂದರ್ಭಗಳಲ್ಲಿ ರೈತರು ಹೂಗಳ ಮೌಲ್ಯವರ್ಧನೆ ಮಾಡಿ ಪುಷ್ಪ ಕೃಷಿಯನ್ನು ಲಾಭದಾಯಕ ಮಾಡಬೇಕು. ಆದ್ದರಿಂದ ರೈತರು ಬರಿ ತಾಜಾ ಹೂಗಳಿಗೆ ಮಾತ್ರ ಮಾರುಕಟ್ಟೆ ನೀಡದೆ ಹೂವಿನ ಬೆಳೆಗಳಲ್ಲಿ ಹೆಚ್ಚಿನ ಆದಾಯ ಗಳಿಸಲು ಬರಡಾದ ಹಾಗೂ ತಾಜಾ ಮಾರುಕಟ್ಟೆಗೆ ಯೋಗ್ಯವಾಗದ ಹೂಗಳನ್ನು ಸಂಸ್ಕರಿಸಿ ಅದರ ಮೌಲ್ಯವರ್ಧನೆ ಮಾಡು ವುದರಿಂದ ಹೂವಿನ ಕೃಷಿಯಲ್ಲಿ ಪ್ರಗತಿ ಸಾಧಿಸಬಹುದು. ಹೂ ಗಳಲ್ಲಿ ಪ್ರಮುಖವಾಗಿ ಗುಲಾಬಿ, ಚೆಂಡು ಹೂ, ಸೇವಂತಿಗೆ, ಮಲ್ಲಿಗೆ, ಡೇರಿ ಹೂ ಮೌಲ್ಯವರ್ಧನೆಯಲ್ಲಿ ತೊಡಗಿಕೊಂಡಿವೆ. ಅವುಗಳೆಂದರೆ ಗುಲಾಬಿ ದಳಗಳಿಂದ ಗುಲ್ಕಂದ್ ತಯಾರಿಸುವುದು, ಹೂ ಗುಚ್ಛ ತಯಾರಿಸುವುದು, ಸುಗಂಧ ದ್ರವ್ಯಗಳನ್ನು ತಯಾರಿಸುವುದು ಹಾಗೂ ಸಸ್ಯ ರಾಸಾಯನಿಕಗಳು, ನೈಸರ್ಗಿಕ ಬಣ್ಣಗಳ ತಯಾರಿಕೆಯಲ್ಲಿ ಸಹ ಪ್ರಮುಖ ಪಾತ್ರ ವಹಿಸುತ್ತವೆ.

ಹೂ ಬೆಳೆಗಳ ಮೌಲ್ಯವರ್ಧಿತ ಉತ್ಪನ್ನಗಳು

೧) ಗುಲ್ಕಂದ್ ತಯಾರಿಕೆ

ಗುಲ್ಕಂದ್ ಎಂಬುದು ಗುಲಾಬಿ ಹೂಗಳ ದಳಗಳಿಂದ ತಯಾರಿಸಲ್ಪಡುತ್ತದೆ. ಇದು ಸ್ವಾಭಾವಿಕವಾಗಿ ಕ್ಯಾಲ್ಸಿಯಂನಿಂದ ಸಮೃದ್ಧವಾಗಿದ್ದು ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಹೊಂದಿದೆ. ಇದನ್ನು ಎಲ್ಲಾ ವಯಸ್ಸಿನ ವ್ಯಕ್ತಿಗಳು ವರ್ಷಪೂರ್ತಿ ಬಳಸಬಹುದು.

ತಯಾರಿಸುವ ವಿಧಾನ

• ಗುಲ್ಕಂದ್ ತಯಾರಿಸಲು ತಾಜಾ ಗುಲಾಬಿ ಹೂವಿನ ದಳಗಳನ್ನು ನೀರಿನಿಂದ ನಿಧಾನವಾಗಿ ತೊಳೆದು ಒಣಗಿದ ಬಟ್ಟೆಯ ಮೇಲೆ ಒಣಗಲು ಬಿಡಬೇಕು.
• ನಂತರ ದಳಗಳನ್ನು ತುಂಡು ತುಂಡಾಗಿ ಕತ್ತರಿಸಿ ೧:೧ ಸಮಾನ ಪ್ರಮಾಣದಲ್ಲಿ ದಳಗಳನ್ನು ಹಾಗೂ ಸಕ್ಕರೆಯನ್ನು ಸೇರಿಸಬೇಕು.
• ಒಣಗಿದ ಗಾಜಿನ ಬಾಟಲಿಯಲ್ಲಿ ಗುಲಾಬಿ ದಳಗಳನ್ನು ಪದರಗಳಂತೆ ಹರಡಬೇಕು.
• ಈಗ ಗುಲಾಬಿ ದಳಗಳ ಮೇಲೆ ಸಕ್ಕರೆಯ ಪದರವನ್ನು ಸಮವಾಗಿ ಹರಡಬೇಕು.
• ನಂತರ ಮತ್ತೆ ಸಕ್ಕರೆ ಪದರದ ಮೇಲೆ ದಳಗಳ ಪದರವನ್ನು ಹರಡಿ ಹಾಗೂ ಎಲ್ಲಾ ದಳಗಳು ಮುಗಿಯುವವರೆಗೆ ಪುನರಾವರ್ತಿಸಬೇಕು.
• ಗಾಜಿನ ಬಾಟಲಿಯನ್ನು ಮುಚ್ಚಳದಿಂದ ಮುಚ್ಚಿ ಸೂರ್ಯನ ಬೆಳಕಿನಲ್ಲಿ ೭-೧೦ ದಿನಗಳವರೆಗೆ ಇರಿಸಬೇಕು.
• ಶುದ್ಧ ಚಮಚವನ್ನು ಬಳಸಿ ಪ್ರತಿ ದಿನ ಗುಲ್ಕಂದ್ ಅನ್ನು ಮಿಶ್ರಣ ಮಾಡಬೇಕು.
• ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ ಶೈತ್ಯೀಕರಣಗೊಳಿಸಿಡುವುದು.

ಗುಲ್ಕಂದ್‌ನ ಉಪಯೋಗಗಳು

• ಪ್ರತಿ ದಿನ ಬೆಳಿಗ್ಗೆ ಒಂದು ಕಪ್ ಹಾಲಿನೊಂದಿಗೆ ಸೇವಿಸುವುದರಿಂದ ಸ್ನಾಯು ನೋವುಗಳಿಂದ ಮುಕ್ತಿ ಪಡೆಯಬಹುದು.
• ಗುಲ್ಕಂದ್‌ನಲ್ಲಿರುವ ಆಂಟಿ-ಆಕ್ಸಿಡೆಂಟ್ ಗುಣವು ದೇಹದ ಒತ್ತಡವನ್ನು ಕಾಲಕ್ರಮೇಣವಾಗಿ ಕಡಿಮೆ ಮಾಡುತ್ತದೆ ಹಾಗೂ ಇದರಿಂದ ದೇಹದ ಮುಪ್ಪನ್ನು ಮುಂದೂಡುವುದರಿಂದ ಯೌವನದ ಕಾಲವನ್ನು ವೃದ್ಧಿಸಬಹುದು.

೨) ಹೂಗುಚ್ಛ ತಯಾರಿಕೆ

ಹಲವಾರು ಸಮಾರಂಭ/ ಆಚರಣೆಗಳಲ್ಲಿ ವ್ಯಕ್ತಿಯನ್ನು ಗೌರವಿಸಲು ಹೂಗುಚ್ಛಗಳ ಬಳಕೆ ರೂಢಿಯಲ್ಲಿರುವುದು ವಿಶೇಷ. ಹೂಗುಚ್ಛಗಳಲ್ಲಿ ಹಲವು ವಿಧ. ಇದರಲ್ಲಿ ಚಪ್ಪಟೆಯಿಂದ ದುಂಡಾಕಾರದ ಹೂಗುಚ್ಛಗಳಿವೆ. ಪ್ರತ್ಯೇಕವಾಗಿ ಬುಟ್ಟಿಯಲ್ಲಿ ಇವನ್ನು ಜೋಡಿಸಿದಾಗ ಹೆಚ್ಚಿನ ಆಕರ್ಷಣೆಯಿಂದ ಕಾಣುತ್ತದೆ.

ಚಪ್ಪಟೆ ಹೂಗುಚ್ಛಗಳನ್ನು ತಯಾರಿಸಲು ಗಟ್ಟಿಯಾದ ಪೇಪರ್ ಕಾರ್ಡ್‌ಬೋರ್ಡ್(ಪೋಸ್ಟರ್) ಬೇಕಾಗುತ್ತದೆ. ಇದು ಬಿಳಿ ಅಥವಾ ಇತರೆ ಯಾವುದೇ ಆಹ್ಲಾದಕರ ಬಣ್ಣಗಳಿಂದ ಕೂಡಿರಬಹುದು. ಪ್ರತಿ ಹೂವಿನ ಕಾಂಡ ೪೫-೭೫ ಸೆಂ.ಮೀ. ಇರುವ ಹಾಗೆ ಕತ್ತರಿಸಬೇಕು. ಪೇಪರ್ ಕಾರ್ಡ್‌ಬೋರ್ಡ್ ಮೇಲೆ ಅಲ್ಯೂಮಿನಿಯಂ ಫಾಯಿಲ್ ಬಳಸುವುದರಿಂದ ಹೂಗುಚ್ಛವು ಹೆಚ್ಚು ಆಕರ್ಷಣೀಯವಾಗಿರುತ್ತದೆ. ನಂತರ ಹೂಗಳನ್ನು ಒಂದರ ಪಕ್ಕ ಒಂದು ನೇರವಾಗಿ ಸೆಲ್ಲೊ ಟೇಪ್ ಬಳಸಿ ಕೂರಿಸಬೇಕು.

ಅಲಂಕಾರಿಕ ಎಲೆಗಳಾದ ಜರಿ ಗಿಡಗಳು, ಬೇಬಿ ನೀಲಗಿರಿ, ಥುಜಾ ಮತ್ತು ಶತಾವರಿಯನ್ನು ಸಹಾಯಕವಾಗಿ ಬಳಸಬಹುದು ಹಾಗೂ ವಿಭಿನ್ನ ಬಣ್ಣದ ರಿಬ್ಬನ್ ಅನ್ನು ಹೂಗುಚ್ಛವನ್ನು ಕಟ್ಟಲು ಮತ್ತು ಅಲಂಕರಿಸಲು ಬಳಸಬಹುದು.

ದುಂಡಾಕಾರದ ಹೂಗುಚ್ಛ ತಯಾರಿಸಲು, ಹೂಗಳನ್ನು ವೃತ್ತಾಕಾರದಲ್ಲಿ ಜೋಡಿಸಿ ಹೂವಿನ ಕಾಂಡದ ತುದಿಯು ಕೋನ್ ಆಕಾರದಲ್ಲಿರುವಂತೆ ಮಾಡಬೇಕು, ಹೂಗಳ ಜೊತೆಗೆ ಅಲಂಕಾರಿಕ ಎಲೆಗಳನ್ನು ಸೇರಿಸಬಹುದು. ಇದರಿಂದ ಹೂಗುಚ್ಛದ ಸೌಂದರ್ಯ ಹೆಚ್ಚಾಗುತ್ತದೆ. ಹೂಗುಚ್ಛದ ಬುಡವನ್ನು ಗಟ್ಟಿಯಾಗಿ ರೇಷ್ಮೆ ರಿಬ್ಬನ್ನಿನೊಂದಿಗೆ ಕಟ್ಟಿ ಅಲಂಕರಿಸಬೇಕು.

ಉಪಯೋಗಗಳು

ಮದುವೆ ಹಾಗೂ ಇನ್ನಿತರ ಶುಭ ಕಾರ್ಯಗಳಲ್ಲಿ ಹೂಗುಚ್ಛಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಆದಾಯ ಸುಲಭವಾಗಿ ಗಳಿಸಬಹುದು.

೩) ಸುಗಂಧ ದ್ರವ್ಯಗಳ ತಯಾರಿಕೆ

ಸುಗಂಧ ದ್ರವ್ಯಗಳು ಪರಿಮಳಯುಕ್ತ ಸಾರಭೂತ ತೈಲಗಳ ಮಿಶ್ರಣವಾಗಿವೆ. ಇದನ್ನು ಮಾನವನ ದೇಹ, ಪ್ರಾಣಿಗಳು ಹಾಗೂ ವಸ್ತುಗಳಿಗೆ ಆಹ್ಲಾದಕರ ಪರಿಮಳವನ್ನು ನೀಡಲು ಬಳಸಲಾಗುತ್ತದೆ.

• ಸಾರಭೂತ ತೈಲಗಳು(essential oil): ಇವು ಕೇಂದ್ರೀಕೃತ ಹೈಡ್ರೋಪೋಬಿಕ್ ಆಗಿವೆ. ಇವು ಸಸ್ಯ ಮತ್ತು ಅದರ ಇನ್ನಿತರ ಭಾಗಗಳಲ್ಲಿರುವ ಭಾಷ್ಪಶೀಲ ಸುಗಂಧಭರಿತ ಸಂಯುಕ್ತಗಳನ್ನು ಒಳಗೊಂಡಿವೆ.
• ಪ್ರಮುಖವಾಗಿ ಗುಲಾಬಿ, ಮಲ್ಲಿಗೆ, ಚಮೋಮಿಲ್, ಸುಗಂಧರಾಜ ಹೂಗಳನ್ನು ಬಳಸಲಾಗುತ್ತದೆ.
• ಮಲ್ಲಿಗೆಯಲ್ಲಿ ಜಾಸ್ಮಿನಮ್ ಸಾಂಬಾಕ್ ಹಾಗೂ ಜಾ. ಗ್ರ್ಯಾಂಡಿಪ್ಲೋರಮ್ ಇವು ಶೇ. ೦.೧೫ ಕಾಂಕ್ರೀಟ್ ಹೂ ಶೇ. ೫೫-೬೨ ರಷ್ಟು ತೈಲ ಪ್ರಮಾಣಗಳನ್ನು ಹೊಂದಿವೆ.
• ಗುಲಾಬಿಯಲ್ಲಿ ಪ್ರಮುಖವಾಗಿ ರೋಸಾ ಡಮಾಸಾನಾ, ರೊ. ಬೋರ್‌ಬೋನಿಯಾನಾ, ರೊ. ಸೆಂಟಿಪೋಲಿಯಾ ಜಾತಿಯ ಹೂಗಳನ್ನು ಪ್ರಮುಖವಾಗಿ ಬಳಕೆಯಲ್ಲಿವೆ.
• ಹೂಗಳಲ್ಲಿ ಸಾರಭೂತ ತೈಲ ತೆಗೆಯಲು, ಹೂಗಳು ಸಂಪೂರ್ಣವಾಗಿ ಅರಳಿರುವ ಹಂತದಲ್ಲಿ ಕಟಾವು ಮಾಡಬೇಕಾಗುತ್ತದೆ ಹಾಗೂ ಮುಂಜಾನೆ ಹೊತ್ತಲ್ಲಿ ಕಟಾವು ಮಾಡುವುದು ಉತ್ತಮ. ಇಲ್ಲದಿದ್ದಲ್ಲಿ ತೈಲದ ಇಳುವರಿ ಕಡಿಮೆಯಾಗುತ್ತದೆ.

ಹೂಗಳಿಂದ ಸಾರಭೂತ ತೈಲ ತೆಗೆಯಲು ಹಲವು ವಿಧಾನಗಳಿವೆ ಅವುಗಳಲ್ಲಿ ಪ್ರಮುಖವಾಗಿ

ಎ) ಉಗಿ ಶುದ್ಧೀಕರಣ - ಒತ್ತಡಕ್ಕೊಳಗಾಗಿ ಉಗಿಯನ್ನು ಬಳಸಿ ತೈಲವನ್ನು ಬೇರ್ಪಡಿಸುವುದು.
ಬಿ) ದ್ರಾವಕ ಹೊರತೆಗೆಯುವಿಕೆ - ತೈಲವನ್ನು ಅದರ ನೈಸರ್ಗಿಕ ಸ್ಥಿತಿಯಲ್ಲಿ ಹೊರತೆಗೆಯಲು ಬೆಂಜಿನ್ ಅಥವಾ ಪೆಟ್ರೋಲಿಯಮ್ ಈಥರ್ ಬಳಸುವುದು.
ಸಿ) ಪ್ರಾಣಿಯ ಕೊಬ್ಬಿನಿಂದ ಬೇರ್ಪಡಿಸುವಿಕೆ - ಮಲ್ಲಿಗೆ ಹಾಗೂ ಸುಗಂಧರಾಜ ಹೂಗಳಿಂದ ತೈಲ ತೆಗೆಯುವ ಸಾಂಪ್ರದಾಯಿಕ ವಿಧಾನವಾಗಿದೆ.

ಉಪಯೋಗಗಳು

ಎ) ಗುಲಾಬಿ ಹೂಗಳಿಂದ ತಯಾರಿಸಲ್ಪಡುವ ಸುಗಂಧ ದ್ರವ್ಯವನ್ನು ತಂಬಾಕು ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.
ಬಿ) ಮಲ್ಲಿಗೆ ಮತ್ತು ಸುಗಂಧರಾಜವನ್ನು ಅರೋಮಾಥೆರಪಿ ಹಾಗೂ ಅಗರಬತ್ತಿ ಕೈಗಾರಿಕೆಯಲ್ಲಿ ಬಳಸಲಾಗುತ್ತದೆ.

೪) ಸಸ್ಯ ರಾಸಾಯನಿಕಗಳು

ಕ್ಯಾಂಥೊಪಿಲ್, ಕ್ಯಾರೋಟೀನ್‌ಗ್ಗಳು, ಫ್ಲೇವನಾಯ್ಡ್ಸ್ ಆದರೆ ಆಂಥೊಸಯಾನಿನ್ ಮತ್ತು ಫ್ಲೇವನೋನ್ಸ್ ದ್ವಿತೀಯಕ ಚಯಾಪಚಯ ಕ್ರಿಯೆಗಳಲ್ಲಿ ಬರುವ ಉಪ ಉತ್ಪನ್ನಗಳಾಗಿವೆ. ಇವು ರುಚಿ, ಸುವಾಸನೆ ಮತ್ತು ಬಣ್ಣವನ್ನು ನೀಡುವುದರಿಂದ ಇದನ್ನು ಸಸ್ಯ ರಾಸಾಯನಿಕಗಳೆನ್ನುವರು.

ಲ್ಯೂಟಿನ್ ಮತ್ತು ಕ್ಲಿಯಾಕ್ಸಾಂಟಿನ್ ಇವು ತುಂಬಾ ಉಪಯುಕ್ತವಾದ ಸಸ್ಯ ರಾಸಾಯನಿಕಗಳು, ಇದನ್ನು ಹೊರತೆಗೆಯಲು ಚೆಂಡು ಹೂವನ್ನು ಬಳಸಲಾಗದು. ಇವು ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳ ವಿರುದ್ಧ ಹೋರಾಡುತ್ತವೆ.

ಡೇಲಿಯೊ ಗಡ್ಡೆಗಳಲ್ಲಿ ನೈಸರ್ಗಿಕವಾಗಿ ಇನ್ಸುಲಿನ್ ಮತ್ತು ಪುಕ್ಟೋನ್ ಉತ್ಪತ್ತಿಯಾಗುತ್ತದೆ. ಇದು ಮಧುಮೇಹ ಸಮಸ್ಯೆ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆ.

೫) ನೈಸರ್ಗಿಕ ಬಣ್ಣಗಳು

ಆಹಾರದ ಉದ್ಯಮದಲ್ಲಿ ರಾಸಾಯನಿಕಗಳಿಂದ ಆರೋಗ್ಯಕ್ಕೆ ಹಾನಿಯಾಗದಂತೆ ಹೂಗಳಿಂದ ಹೊರತೆಗೆದ ನೈಸರ್ಗಿಕ ಬಣ್ಣಗಳನ್ನು ಬಳಸಲಾಗುತ್ತದೆ.

• ಸೇವಂತಿಗೆಯಿಂದ ತೆಗೆದ ಹಳದಿ ಬಣ್ಣದ, ಬಣ್ಣಗಳನ್ನು ಸೌಂದರ್ಯವರ್ಧಕ ಮತ್ತು ಆಹಾರದ ಉದ್ಯಮದಲ್ಲಿ ಬಳಸಲಾಗುತ್ತದೆ.
• ಚೆಂಡು ಹೂವಿನಿಂದ ಬರುವ ಹಳದಿ ಮತ್ತು ಕಿತ್ತಳೆ ಬಣ್ಣದ ಬಣ್ಣವನ್ನು ಪ್ರಮುಖವಾಗಿ ಕೋಳಿ ಆಹಾರದಲ್ಲಿ ಬಳಸುವುದರಿಂದ ಮೊಟ್ಟೆಯ ಭಂಡಾರ ಕಿತ್ತಳೆ ಬಣ್ಣದಾಗುತ್ತದೆ.

೬) ಕೀಟನಾಶಕಗಳು

ಸೇವಂತಿಗೆ ಹೂಗಳಿಂದ ಪೈರೆಥ್ರಿನ್ ಎಂಬ ಸಕ್ರಿಯವಾದ ಪದಾರ್ಥವಾಗಿದ್ದು,ಇದು ಕ್ರೈಸಾಂಥಮಮ್ ಸಿನೆರಾರಿಪೋಲಿಯಮ್ ಜಾತಿಯ ಸೇವಂತಿಗೆಯ ಬೀಜಗಳಲ್ಲಿ ಒಳ ಗೊಂಡಿರುತ್ತದೆ.

ಸೇವಂತಿಗೆಯಿಂದ ತಯಾರಿಸಲ್ಪಡುವ ಕೀಟನಾಶಕವನ್ನು ನೀರು ಅಥವಾ ಎಣ್ಣೆಯಲ್ಲಿ ಮಿಶ್ರಣಗೊಳಿಸಿ ಅಥವಾ ಪುಡಿಯಾಗಿ ಬಳಸಬಹುದು.

34

ಇವು ಜೈವಿಕ ವಿಘಟನೀಯ ಮತ್ತು ನಿರಂತರವಲ್ಲದ ಕಾರಣ ಅವುಗಳನ್ನು ಸುರಕ್ಷಿತ ಕೀಟನಾಶಕಗಳಾಗಿ ಬಳಸಲಾಗುತ್ತದೆ.

೭) ಗುಲಾಬಿ ಎಣ್ಣೆ

ಗುಲಾಬಿ ಎಣ್ಣೆಯನ್ನು ಸುಗಂಧ ದ್ರವ್ಯ, ಪಾನೀಯ, ಔಷಧಿ ಹಾಗೂ ಕೇಶ ತೈಲ ತಯಾರಿಕೆಯಲ್ಲಿ ಬಳಸುವುದರ ಜೊತೆಗೆ ಆಹಾರವಾಗಿಯು ಸೇವಿಸುತ್ತಾರೆ.

38

೮) ಗುಲಾಬಿ ಚಹ

ಗುಲಾಬಿ ದಳಗಳನ್ನು ಹಾಗೂ ಹೂ-ಮೊಗ್ಗುಗಳನ್ನು ಚಹದ ಸುವಾಸನೆಯನ್ನು ಹೆಚ್ಚಿಸಲು ಬಳಸುತ್ತಾರೆ. ನೈಸರ್ಗಿಕ ಗಿಡ ಮೂಲಿಕೆಗಳಿಂದ ತಯಾರಿಸುವ ಚಹದಲ್ಲೂ ಬಳಸುತ್ತಾರೆ.

41

೯) ಪಂಕುರಿ

ಒಣಗಿದ ಗುಲಾಬಿ ದಳಗಳನ್ನು ಬೇಸಿಗೆಯಲ್ಲಿ ತಂಪು ಪಾನೀಯಗಳ ತಯಾರಿಕೆಯಲ್ಲಿ ಬಳಸುತ್ತಾರೆ.

44454647

--ನಿಖಿಲ್ ಹೆಚ್. ಎನ್., ೭೩೫೩೨೩೯೯೮೭ ಮತ್ತು ನಯನ್ ದೀಪಕ್ ಜಿ., ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿ