ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಚಿಂತನೆ- ನೆರೆ, ಬರ ಸಂಕಷ್ಟಗಳ ಸರಮಾಲೆಗಳಿಂದ ಪಾಠ ಕಲಿಯಬೇಕಾಗಿದೆ

ಎ. ಎಸ್. ಕುಮಾರ ಸ್ವಾಮಿ,
೯೪೪೮೯೪೩೯೯೦

ಬರ ಮತ್ತು ನೆರೆ ಸಂಕಷ್ಟಗಳ ಸರಮಾಲೆ: ಇತ್ತೀಚಿನ ವರ್ಷಗಳಲ್ಲಿ ಒಂದೇ ವರ್ಷದಲ್ಲಿ ತೀವ್ರ ಬರ ಸಂಕಷ್ಟವನ್ನೂ, ಜೊತೆಯಲ್ಲಿಯೇ ನೆರೆ ಹಾವಳಿಯನ್ನೂ ಅನುಭವಿಸುವುದು ನಮ್ಮ ರಾಜ್ಯದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಈ ವರ್ಷ (೨೦೧೯ರಲ್ಲಿ) ರಾಜ್ಯದ ಶೇ. ೭೦ ಭಾಗ ಪ್ರದೇಶದಲ್ಲಿ ಬಿತ್ತನೆಗೆ ಅವಕಾಶ ಮಾಡಿಕೊಡುವ ರೋಹಿಣಿ, ಮೃಗಶಿರಾ, ಆರಿದ್ರಾ, ಪುನರ್ವಸು ಮತ್ತು ಪುಷ್ಯ ನಕ್ಷತ್ರದ ಮಳೆಗಳು ಸಾಕಷ್ಟು ಪ್ರಮಾಣದಲ್ಲಿ ಬೀಳದೇ ಇದ್ದುದರಿಂದ ಭೀಕರ ಬರಗಾಲಕ್ಕೆ ಮುನ್ನುಡಿ ಹಾಡಿದಂತಾಗಿತ್ತು. ಆದರೆ, ಕೆಲವು ದಿನಗಳಲ್ಲಿಯೇ ನೆರೆ ರಾಜ್ಯಗಳಲ್ಲಿ ಮತ್ತು ಘಟ್ಟ ಪ್ರದೇಶಗಳಲ್ಲಿ ಅತಿಯಾದ ಮಳೆಯು ಎಡೆ ಬಿಡದೇ ಸುರಿದಾಗ ನದಿಗಳು ತಮ್ಮ ಸಾಮರ್ಥ್ಯ ಮೀರಿ ತುಂಬಿ ಉಕ್ಕಿ ಹರಿದು ಬರದಿಂದ ತತ್ತರಿಸಿದ್ದ ವಿಶಾಲವಾದ ಪ್ರದೇಶಗಳಲ್ಲಿ ಇದ್ದಕ್ಕಿದ್ದಂತೆ ತೀವ್ರತರ ನೆರೆ ಹಾವಳಿಯನ್ನುಂಟು ಮಾಡಿತು. ಈ ವರ್ಷದ ನೆರೆ ಹಾವಳಿಯ ವಿಶೇಷತೆಯೆಂದರೆ, ನದಿಗಳಲ್ಲಿ ಬಂದ ನೆರೆಯ ಜೊತೆಗೆ ಸ್ಥಳೀಯವಾಗಿಯೂ ದೀರ್ಘಕಾಲ ಅಧಿಕ ಮಳೆಯು ಸುರಿದಿದ್ದರಿಂದ, ಜನರು ಮನೆ ಮಠಗಳನ್ನು ಕಳೆದುಕೊಂಡು, ನೆಲೆ ಇಲ್ಲದ ಪರಿಸ್ಥಿತಿಯಲ್ಲಿ ಅನೇಕ ವಾರಗಳ ಕಾಲ ತೊಂದರೆಯನ್ನು ಅನುಭವಿಸಬೇಕಾಯಿತು. ಜುಲೈ ಕೊನೆಯ ಹೊತ್ತಿಗೆ ಸುಮಾರು ಅರ್ಧ ರಾಜ್ಯವನ್ನು ಬರಪೀಡಿತ ಎಂದು ಘೋಷಿಸುವ ಹಂತಕ್ಕೆ ತಲುಪಿದರೆ, ಕೇವಲ ಒಂದೆರಡು ವಾರಗಳಲ್ಲಿ ಬರಪೀಡಿತ ಪ್ರದೇಶಗಳನ್ನೂ ಒಳಗೊಂಡಂತೆ ಸುಮಾರು ಅರ್ಧ ರಾಜ್ಯವನ್ನು ನೆರೆಪೀಡಿತ ಎಂದು ಘೋಷಿಸುವ ಸನ್ನಿವೇಶವು ಎದುರಾಗಿದೆ. ನೆರೆ ಆರಂಭವಾಗಿ ಸುಮಾರು ಮೂರು ತಿಂಗಳಾದರೂ ಇನ್ನೂ ಅನೇಕ ಭಾಗಗಳಲ್ಲಿ ಮತ್ತೆ ಮತ್ತೆ ನೆರೆಯು ಮರುಕಳಿಸುತ್ತಿದೆ. ಈಗಲೂ ಒಂದೇ ಬಾರಿಗೆ ಅನೇಕ ತಾಲೂಕುಗಳು ನೆರೆಪೀಡಿತವೂ, ಮತ್ತೆ ಹಲವು ತಾಲೂಕುಗಳು ಬರಪೀಡಿತವೂ ಆಗಿರುವುದು ವಿಪರ್ಯಾಸ.

ಬರದ ಬರೆ ನಿಧಾನ ಆದರೆ ನೆರೆಯ ಆವೇಗ ಕ್ಷಿಪ್ರ: ಬರದ ಪರಿಸ್ಥಿತಿಯು ಹಂತ ಹಂತವಾಗಿ ಬರುತ್ತದೆ. ಪರಿಸ್ಥಿತಿಯು ಬಿಗಡಾಯಿಸುವ ಸನ್ನಿವೇಶವು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಾ ಹೋಗುತ್ತದೆ. ತೀವ್ರತರ ಬರಗಾಲದ ಸನ್ನಿವೇಶದಲ್ಲಿಯೂ ಸಹ ಪೂರ್ವ ಸಿದ್ಧತೆಗೆ ಅವಕಾಶವಿರುತ್ತದೆ. ಬರದಿಂದ ಕೃಷಿಯ ಮತ್ತು ರೈತರ ಆರ್ಥಿಕತೆ ಕುಸಿಯುವುದರಿಂದ ಇತರೆ ಮಾರ್ಗಗಳಿಂದ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಲಾಗುತ್ತದೆ. ಆದರೆ, ನೆರೆಯ ಸಮಸ್ಯೆಯು ಯಾವುದೇ ಮುನ್ಸೂಚನೆ ನೀಡದೇ ಅನಿರೀಕ್ಷಿತವಾಗಿ ಬರುತ್ತದೆ. ನೆರೆ ಬಂದಾಗ ಕೇವಲ ಆರ್ಥಿಕತೆ ಕುಸಿಯುವುದಲ್ಲ, ಜೊತೆಗೆ ಜನ ಜಾನುವಾರುಗಳ ಜೀವಗಳನ್ನೂ, ಮನೆ ಮಠಗಳನ್ನೂ, ಬದುಕಿನ ನೆಲೆಯನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಬರದ ಬರೆಯಿಂದ ಬಳಲಿದ ಕೃಷಿ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ದೀರ್ಘಕಾಲೀನ ಯೋಜನೆಗಳನ್ನು ಹಾಕಿಕೊಳ್ಳಬಹುದಾದರೆ, ನೆರೆಯಿಂದ ಬಳಲಿ ಬದುಕು ಕಳೆದುಕೊಂಡವರ ಪುನರುಜ್ಜೀವನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕಿರುತ್ತದೆ.

ಎಲ್ಲದಕ್ಕೂ ಕಾರಣ ಮಾನವನ ಆಧುನಿಕ ಜೀವನ ಶೈಲಿ: ಮಾನವನ ಮಿತಿಮೀರಿದ ಇಂಧನ ಬಳಕೆಯ ಜೀವನ ಶೈಲಿಯ ದುಷ್ಪರಿಣಾಮವಾದ ಜಾಗತಿಕ ತಾಪಮಾನ ಏರಿಕೆಯ ಹಿನ್ನೆಲೆಯಲ್ಲಿ ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಮೇಲಿಂದ ಮೇಲೆ ಚಂಡಮಾರುತಗಳ ರಚನೆಯಾಗುತ್ತಿದ್ದು ಇದರ ಪರಿಣಾಮವಾಗಿ ಒಂದೊಂದು ಸಾರಿಯೂ ಮೂರ‍್ನಾಲ್ಕು ದಿನಗಳ ಕಾಲ ಭಾರಿ ಮಳೆಯು ಸುರಿಯುತ್ತಿದೆ. ಈ ರೀತಿ ಹೆಚ್ಚುತ್ತಿರುವ ಚಂಡಮಾರುತಗಳ ಹಾವಳಿಯು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ಇದೊಂದು ಜಾಗತಿಕ ವಿದ್ಯಮಾನವಾಗಿ ಸಮುದ್ರ ತೀರದಲ್ಲಿರುವ ಅನೇಕ ಭಾಗಗಳು ತೀವ್ರ ತೊಂದರೆಯನ್ನನುಭವಿಸುತ್ತಿವೆ. ಇದು ಇನ್ನೂ ಯಾವ ಸ್ವರೂಪವನ್ನು ತಳೆಯುವುದೋ ಊಹಿಸಲಸಾಧ್ಯ. ಇದೇ ಕಾರಣದಿಂದ ಮಳೆಯ ಹಂಗಾಮುಗಳು ಪಲ್ಲಟಗೊಳ್ಳುತ್ತಿರುವ ಅನುಮಾನವಿದೆ. ಇದರಿಂದಲೇ ದೀರ್ಘ ಬರಗಾಲ ಮತ್ತು ತೀವ್ರ ನೆರೆ ಎರಡನ್ನೂ ಒಂದೇ ಪ್ರದೇಶದಲ್ಲಿ ಒಂದೇ ವರ್ಷದಲ್ಲಿ ಎದುರಿಸುವಂತಾಗಿರುವುದು. ಈಗ ನಡೆಯುತ್ತಿರುವುದು ಜಾಗತಿಕ ತಾಪಮಾನ ಏರಿಕೆಯ ಇನ್ನೂ ಮುಂದೆ ಆಗಬಹುದಾದ ಅನೇಕ ಆಘಾತಗಳ ಒಂದು ಸಣ್ಣ ಉದಾಹರಣೆಯಷ್ಟೇ ಎನ್ನಬಹುದು. ಆದ್ದರಿಂದ ಜಗತ್ತಿನಾದ್ಯಂತ ಮನುಕುಲವು ಈಗ ಪರಿಸರದ ಮೇಲೆ ಮಾಡಿರುವ ಆಕ್ರಮಣವನ್ನು ಕಡಿಮೆ ಮಾಡಿ, ಅತಿಯಾದ ಇಂಧನ ಬಳಕೆಯ ಜೀವನ ಶೈಲಿಗೆ ಕಡಿವಾಣ ಹಾಕಿ, ಪರಿಸರ ಸ್ನೇಹೀ ಜೀವನ ಶೈಲಿಯನ್ನು ಅನುಸರಿಸಲು ದೃಢ ಮನಸ್ಸಿನಿಂದ ಅತ್ಯಂತ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕಿದೆ.

ಬರ, ನೆರೆ ನಿರ್ವಹಣೆಗೆ ಸ್ಥಳೀಯವಾಗಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು: ಕುತೂಹಲಕಾರೀ ವಿಷಯವೆಂದರೆ, ಬರ ಮತ್ತು ನೆರೆ ಎರಡನ್ನೂ ನಿರ್ವಹಿಸಲು ಬೇಕಾದ ಮುನ್ನಚ್ಚರಿಕೆ ಕ್ರಮಗಳು ಎರಡಕ್ಕೂ ಸಾಮಾನ್ಯವಾಗಿರುವುದು. ಎರಡೂ ಸಮಸ್ಯೆಗಳಿಗೆ ಸಮಗ್ರ ಜಲಾನಯನ ಪ್ರದೇಶದ ಆಧಾರದ ಮೇಲೆ ಉತ್ತಮ ಮಳೆ ನೀರು ನಿರ್ವಹಣೆಯೇ ಉತ್ತರ. ಕರ್ನಾಟಕದಲ್ಲಿ ಪದೇ ಪದೇ ನೆರೆಯ ಹಾವಳಿ ಮಾಡುತ್ತಿರುವ ಕೃಷ್ಣಾ ಮತ್ತು ಅದರ ಉಪನದಿಗಳ ಜಲಾನಯನ ಪ್ರದೇಶವು ಅಧಿಕ ಮಳೆ ಬೀಳುವ ಸಹ್ಯಾದ್ರಿ ಘಟ್ಟ ಪ್ರದೇಶಗಳ ಎತ್ತರದ ತುದಿಗಳಲ್ಲಿ ಆರಂಭವಾಗುತ್ತದೆ.

ಭತ್ತದ ಪ್ರದೇಶದಲ್ಲಿ ಕಡಿತ: ಈ ಪ್ರದೇಶದಲ್ಲಿ ಕೇವಲ ಮೂರು-ನಾಲ್ಕು ತಿಂಗಳುಗಳಲ್ಲಿ ಯಥೇಚ್ಛವಾಗಿ ಸುರಿಯುವ ಮಳೆಯ ಕಾರಣದಿಂದ, ಇಲ್ಲಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಭತ್ತವೇ ಪ್ರಮುಖ ಬೆಳೆಯಾಗಿದ್ದಿತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಅಭಾವ, ಬೆಲೆ ಕುಸಿತ, ಪ್ರಾಕೃತಿಕ ವಿಕೋಪಗಳು ಮೊದಲಾದ ಕಾರಣಗಳಿಂದ ಭತ್ತದ ಬೆಳೆಯ ಪ್ರದೇಶವು ಇನ್ನಿಲ್ಲದಂತೆ ಕಡಿಮೆಯಾಗಿದೆ. ಮಳೆಗಾಲದಲ್ಲಿ ಸದಾ ನಾಲ್ಕು-ಆರು ಇಂಚು ನೀರು ನಿಲ್ಲಿಸಿಕೊಳ್ಳುತ್ತಿದ್ದ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಭತ್ತವು ಮಾಯವಾಗಿ, ನೀರು ಬಸಿದು ಹೊರತೆಗೆಯಲೇಬೇಕಾದ ತೋಟಗಾರಿಕೆ ಬೆಳೆಗಳು (ಅಡಿಕೆ) ಆವರಿಸಿರುವುದರಿಂದ ಮಳೆಗಾಲದಲ್ಲಿ ಬಿದ್ದ ನೀರು ಎಲ್ಲಿಯೂ ನಿಲ್ಲದೇ ನೇರವಾಗಿ ಹಳ್ಳ, ತೋಡು, ನದಿಗಳನ್ನು ಸೇರಿ ಒಮ್ಮೆಲೇ ನೆರೆ (ಫ್ಲಾಶ್ ಫ್ಲಡ್ಸ್) ಬರುವ ಸನ್ನಿವೇಶಗಳು ಹೆಚ್ಚಾಗುತ್ತಿವೆ.

ಕೆರೆ ಕಟ್ಟೆಗಳ ಅವಸಾನ ನೆರೆಗೆ ಕಾರಣ: ಹಿಂದಿನವರು ಅತಿ ಎಚ್ಚರಿಕೆಯಿಂದ ನಿರ್ಮಿಸಿದ್ದ ಸಾರ್ವಜನಿಕ ಒಡೆತನದಲ್ಲಿದ್ದ ಲಕ್ಷಾಂತರ ಗೋಕಟ್ಟೆಗಳು, ಸಣ್ಣ ಮತ್ತು ದೊಡ್ಡ ಕೆರೆಗಳು ಈಗ ಅಧಿಕ ಜಮೀನಿನ ಮೌಲ್ಯದಿಂದಾಗಿ ಖಾಸಗಿಯವರಿಂದ ಒತ್ತುವರಿಯಾಗಿ, ಒತ್ತುವರಿಯು ಅಧಿಕೃತ ಗೊಂಡಿರುವುದರಿಂದ ಮಳೆಗಾಲದಲ್ಲಿ ಎಲ್ಲಿಯೂ ಮಳೆ ನೀರನ್ನು ಹಿಡಿದಿಡುವ ಸಾಧ್ಯತೆಗಳಿಲ್ಲದೇ ನದಿಗಳಿಗೆ ನುಗ್ಗಿ ಫ್ಲಾಶ್ ಫ್ಲಡ್ಸ್ ಬರುತ್ತಿವೆ. ಕೆರೆ ಕಟ್ಟೆಗಳಿಲ್ಲದಿರುವುದರಿಂದ ಆಗಿರುವ ಇನ್ನೊಂದು ಅನಾಹುತವೆಂದರೆ, ಅಲ್ಲಲ್ಲಿ ನಿಲ್ಲುತ್ತಿದ್ದ ಹೂಳು ಮಣ್ಣು ಈಗ ಯಾವ ತಡೆಯೂ ಇಲ್ಲದೇ, ನೇರವಾಗಿ ನದಿಗಳಿಗೆ ಹರಿದು ಬರುತ್ತಿರುವುದರಿಂದ ನದಿಗಳ ತಿರುವುಗಳಲ್ಲಿ ಶೇಖರಗೊಂಡು ನೀರಿನ ಸರಾಗ ಹರಿವಿಗೆ ಅಡಚಣೆಯನ್ನುಂಟು ಮಾಡುತ್ತದೆ. ಇದರಿಂದಲೂ ಸಹ ನೆರೆಯ ಹಾವಳಿ ತೀವ್ರವಾಗುತ್ತಿದೆ ಹಾಗೂ ನದಿ ಪಾತ್ರಗಳು ಪಲ್ಲಟಗೊಂಡು ಹೊಸ ಪ್ರದೇಶಗಳಲ್ಲಿ ನೆರೆ ಕಾಣಿಸಿಕೊಳ್ಳುತ್ತಿದೆ. ಇದರ ಜೊತೆಯಲ್ಲಿ ಗಣನೀಯ ಪ್ರದೇಶದಲ್ಲಿನ ಅರಣ್ಯ ಪ್ರದೇಶವು ಒತ್ತುವರಿಯಾಗಿ, ನಾಶವಾಗಿ ಮಣ್ಣಿನ ಕೊಚ್ಚಣೆಯು ಅಧಿಕವಾಗಿರುವುದೂ ಸಹ ನದಿಗಳಲ್ಲಿ ಹೂಳು ತುಂಬಿಕೊಳ್ಳಲು ಮತ್ತೊಂದು ಕಾರಣ.

ಮಳೆ ನೀರನ್ನು ನಿಲ್ಲಿಸಿ ಹರಿಸುವ ಏರ್ಪಾಡು ಬೇಕು: ನೆರೆಯ ಹಾವಳಿ ಬರದಂತೆ ತಡೆಯುವ ಪ್ರಯತ್ನಗಳಲ್ಲಿ ಮಳೆಯ ನೀರನ್ನು ಎತ್ತರದ ಸ್ಥಳಗಳಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡುವುದರಿಂದ, ಈ ರೀತಿ ಎತ್ತರದ ಪ್ರದೇಶಗಳಲ್ಲಿರುವ ನೀರು ನಿಧಾನವಾಗಿ, ನೆಲದೊಳಗೆ ಬಸಿದು ಕೆಳಗಿನ ಪ್ರದೇಶಗಳಲ್ಲಿ ನಿಧಾನವಾಗಿ ತಿಂಗಳುಗಟ್ಟಲೇ ಹಳ್ಳ ತೋಡುಗಳ ರೂಪದಲ್ಲಿ ಹರಿಯುವುದರಿಂದ ಮಳೆಗಾಲ ನಿಂತ ಮೇಲೆಯೂ ಕೆಲವು ತಿಂಗಳುಗಳ ಕಾಲ ಸ್ವಲ್ಪ ಪ್ರದೇಶಕ್ಕೆ ನೀರಿನ ಆಸರೆ ದೊರೆಯುತ್ತದೆ. ನೆರೆಯನ್ನು ನಿಯಂತ್ರಿಸಲು ನೀರನ್ನು ಸಂಗ್ರಹಿಸುವ ಸಣ್ಣ, ದೊಡ್ಡ ಜಲಾಶಯಗಳೂ ಸಹ ಮಳೆಗಾಲದಲ್ಲಿ ಸಾಕಷ್ಟು ನೀರನ್ನು ಹಿಡಿದಿಡುವುದರಿಂದ ಬರಗಾಲ ನಿರ್ವಹಣೆಗೂ ಸಹ ಸಹಕಾರಿಯಾಗುತ್ತವೆ. ಈ ರೀತಿ ನೆರೆ ಮತ್ತು ಬರಗಳ ಸಂಕಷ್ಟವನ್ನು ಪರಿಹರಿಸುವ ಕೆಲವು ದೂರಗಾಮೀ ಪ್ರಯತ್ನಗಳು ಬೇಕು.

ನೆರೆ, ಬರ ತಡೆಗೆ ದೂರಗಾಮೀ ಪ್ರಯತ್ನಗಳು

೧. ಮಲೆನಾಡಿನ ಕೃಷಿ ಸಂಸ್ಕೃತಿಯ ದ್ಯೋತಕವಾದ ಭತ್ತದ ಬೆಳೆಯನ್ನು ಮತ್ತೆ ಅದರ ಗತ ವೈಭವಕ್ಕೆ ಮರಳುವಂತೆ ಈ ಪ್ರದೇಶಗಳಿಗೆ ವಿಶೇಷವಾದ, ರೈತರಿಗೆ ಭತ್ತದ ಬೆಳೆಯು ಲಾಭದಾಯಕವಾಗುವಂತೆ ಮಾಡುವ ಯೋಜನೆಗಳನ್ನು ಜಾರಿಗೆ ತರಬೇಕು. ಈ ದಿಶೆಯಲ್ಲಿ, ಕೃಷಿಯಂತ್ರಗಳ ಬಳಕೆಗೆ ಉತ್ತೇಜನ, ಮಣ್ಣು ಸುಧಾರಣೆಗೆ ಆದ್ಯತೆ, ಸೂಕ್ಷ್ಮ ಪೋಷಕಾಂಶಗಳ ಪೂರೈಕೆ, ಸುಧಾರಿತ ತಳಿಗಳ ಬಿತ್ತನೆ ಬೀಜದ ಪೂರೈಕೆ, ಸ್ಥಳೀಯ ಮಾರುಕಟ್ಟೆಯ ವ್ಯವಸ್ಥೆ, ಭತ್ತದ ಉಪ ಉತ್ಪನ್ನಗಳನ್ನೂ ಸಂಸ್ಕರಿಸುವ ನವೀನ ಮಾದರಿಯ ದೊಡ್ಡ ಪ್ರಮಾಣದ ಭತ್ತದ ಗಿರಣಿಗಳ ಸ್ಥಾಪನೆ, ಉತ್ಪಾದನಾ ಆಧಾರಿತ ಉತ್ತೇಜನ ಮುಂತಾದ ಯೋಜನೆಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವುದು ದೂರದೃಷ್ಟಿಯಲ್ಲಿ ದೇಶಕ್ಕೆ ಹಿತವಾಗುವುದು.

೨. ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಹೊಣೆಯನ್ನೂ ಹೊತ್ತಿರುವ ಸರ್ಕಾರಗಳು ಅರಣ್ಯದ ಒತ್ತುವರಿ ಮಾಡುವುದನ್ನು ಸಂಪೂರ್ಣ ತಪ್ಪಿಸಬೇಕು. ಅರಣ್ಯ ಪ್ರದೇಶಗಳ ಮಧ್ಯೆ ಇರುವ ಸಾಗುವಳಿ ಜಮೀನಿನಲ್ಲಿ ಕಡ್ಡಾಯವಾಗಿ ಮಣ್ಣು ಮತ್ತು ನೀರು ಸಂರಕ್ಷಣೆಯಾಗುವಂತೆ ನೋಡಿಕೊಳ್ಳಬೇಕು.

೩. ಒತ್ತುವರಿ ಮಾಡಿಕೊಂಡ ಅರಣ್ಯ ಪ್ರದೇಶವನ್ನು ಅಧಿಕೃತಗೊಳಿಸಿಕೊಂಡಿರುವ ರೈತರ ಸಂಖ್ಯೆಯೂ ಅಧಿಕವಾಗಿದೆ. ಈ ರೀತಿಯ ರೈತರು ತಮ್ಮ ಒತ್ತುವರಿಯಾದ ಅರಣ್ಯದ ಜಮೀನಿನಲ್ಲಿ ಕೊನೆಯ ಪಕ್ಷ ಅರ್ಧ ಭಾಗದಲ್ಲಿಯಾದರೂ ಕೃಷಿ ಅರಣ್ಯ ಬೆಳೆಸುವುದನ್ನು ಕಡ್ಡಾಯ ಮಾಡಬೇಕು.

೪. ಪದೇ ಪದೇ ನೆರೆಹಾವಳಿಗೆ ತುತ್ತಾಗುವ ಗ್ರಾಮಗಳನ್ನೂ, ವಸತಿ ಪ್ರದೇಶಗಳನ್ನೂ ಗುರುತಿಸಿ ಸೂಕ್ತವಾದ ಎತ್ತರದ ಸ್ಥಳದಲ್ಲಿ ಮರುವಸತಿ ಕಲ್ಪಿಸಿಕೊಡಬೇಕು.

೫. ಒತ್ತುವರಿಯಾಗಿರುವ ಹಾಗೂ ಅವಸಾನ ಹೊಂದಿರುವ ಕೆರೆಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡು ಮೊದಲು ಇದ್ದ ಕೆರೆ, ಕಟ್ಟೆ, ಗೋಕಟ್ಟೆಗಳನ್ನು ಪುನರ್‌ನಿರ್ಮಿಸುವ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡಬೇಕು.

೬. ಹರಿಯುವ ನದಿ ನೀರಿಗೆ ಅಡಚಣೆಯಾಗದಂತೆ, ನದಿಪಾತ್ರಗಳಲ್ಲಿ ಅಧಿಕೃತವಾಗಿ ಅಥವಾ ಅನಧಿಕೃತವಾಗಿ ಆಗಿರುವ ಒತ್ತುವರಿಗಳನ್ನು ತೆರವುಗೊಳಿಸಬೇಕು.

೭. ನದಿಪಾತ್ರಗಳಲ್ಲಿ ಒಂದು ಮಟ್ಟಕ್ಕೆ ಮರಳು ಇರುವಾಗ ಅದರ ಮೂಲಕ ನೆಲಕ್ಕೆ ಹಿಂಗುವ ನೀರು ಅಂತರ್ಜಲವನ್ನು ಮರುಪೂರಣ ಮಾಡುವುದರಿಂದ ಅತಿಯಾಗಿ, ಅನಧಿಕೃತವಾಗಿ ನದಿಪಾತ್ರಗಳಲ್ಲಿ ಈಗ ಆಗುತ್ತಿರುವ ಮರಳು ಗಣಿಗಾರಿಕೆಯ ಮೇಲೆ ಹೇರಿರುವ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

ನಗರ ಪ್ರದೇಶಗಳಲ್ಲಿ ಬರುವ ನೆರೆ: ದೊಡ್ಡ ದೊಡ್ಡ ನಗರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಧಿಕ ನೆರೆಯ ಸಮಸ್ಯೆಯಾಗುತ್ತಿರುವುದಕ್ಕೆ ಪ್ರಕೃತಿ ವಿಕೋಪದ ಜೊತೆಯಲ್ಲಿ ನಗರಾಭಿವೃದ್ಧಿಯಲ್ಲಿ ಮಾಡಿರುವ ಗಂಭೀರ ತಪ್ಪುಗಳೂ ಕಾರಣವಾಗಿವೆ. ಈ ಸಮಸ್ಯೆಯನ್ನು ಇನ್ನು ಮುಂದಾದರೂ ಕಡಿಮೆ ಮಾಡಲು ಎಷ್ಟೇ ಕಷ್ಟವಾದರೂ ಕೆಲವು ಅನಿವಾರ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.

೧. ಕೆರೆಯ ಅಂಗಳಗಳಲ್ಲಿ ನಿರ್ಮಿಸಿರುವ ವಸತಿ ಬಡಾವಣೆಗಳನ್ನು ತೆರವುಗೊಳಿಸುವುದು;
೨. ಹೆಚ್ಚಾದ ಮಳೆ ನೀರು ಹರಿದು ಹೋಗಲು ಮಾಡಿರುವ ರಾಜಾಕಾಲುವೆಗಳ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವುದು;
೩. ಪ್ರತಿಯೊಂದು ಕಟ್ಟಡದಲ್ಲಿಯೂ ಮಳೆ ನೀರು ಕೊಯ್ಲು, ಸಂಗ್ರಹ ಮತ್ತು ಮರುಬಳಕೆಯನ್ನು ಕಡ್ಡಾಯಗೊಳಿಸಬೇಕು.

೪. ಪ್ರತಿಯೊಂದು ಜನವಸತಿಯ ಬಡಾವಣೆಯಲ್ಲಿಯೂ ಈಗಾಗಲೇ ಇರುವ ಸಾರ್ವಜನಿಕ ಉದ್ಯಾನವನಗಳಲ್ಲಿ ಒಂದು ಭಾಗದಲ್ಲಿ ಕೊಳ/ತೊಟ್ಟಿಗಳನ್ನು ನಿರ್ಮಿಸಿ ಅದರಲ್ಲಿ ಆ ಬಡಾವಣೆಯಲ್ಲಿ ಸಂಗ್ರಹವಾಗುವ ಮಳೆ ನೀರನ್ನು ಶೇಖರಿಸಿಡುವ ವ್ಯವಸ್ಥೆ ಆಗಬೇಕು. ಈ ನೀರನ್ನು ಬೇಸಿಗೆಯಲ್ಲಿ ಶುದ್ಧೀಕರಣಗೊಳಿಸಿ ಮನೆಗಳಿಗೆ ಬಳಸುವುದರಿಂದ ಬೇಸಿಗೆಯಲ್ಲಿ ನೀರು ಪೂರೈಕೆಯ ಸಮಸ್ಯೆಯೂ ಬಗೆಹರಿಯುತ್ತದೆ. ಸ್ಥಳದ ಅಭಾವವಿದ್ದರೆ, ನೆಲದೊಳಗಿನ ತೊಟ್ಟಿಗಳ ರಚನೆಯನ್ನೂ ಪರಿಗಣಿಸಬಹುದು. ನೂತನ ಬಡಾವಣೆಗಳನ್ನು ನಿರ್ಮಿಸುವಾಗ ಈ ರೀತಿಯ ಮಳೆ ನೀರು ಕೊಯ್ಲು ಮತ್ತು ಮರುಬಳಕೆಯನ್ನು ಕಡ್ಡಾಯಗೊಳಿಸಬೇಕು.

೫. ಕೃಷಿಯೇತರೆ ಉದ್ದೇಶಗಳಿಗೆ ಕೃಷಿ ಜಮೀನನ್ನು ಪರಿವರ್ತನೆ ಮಾಡಿದಾಗ ಆ ನೆಲದಲ್ಲಿ ಮಣ್ಣಿನೊಳಕ್ಕೆ ಹಿಂಗುವ ನೀರಿನ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತದೆ. ಆದ್ದರಿಂದ ಪರಿವರ್ತನೆಯಾದ ಜಮೀನಿನಲ್ಲಿ ಮತ್ತು ಕೈಗಾರಿಕೆಗಳಿಗೆ, ಸಂಘ ಸಂಸ್ಥೆಗಳಿಗೆ ಬಳಸಿದ ಜಮೀನಿನಲ್ಲಿ ಈ ರೀತಿ ರಸ್ತೆ ಮತ್ತಿತರೆ ತೆರೆದ ಪ್ರದೇಶಗಳ ಮೇಲೆ ಬೀಳುವ ಮಳೆ ನೀರಿನ ಕೊಯ್ಲು ಮತ್ತು ಮರುಬಳಕೆ ಕಡ್ಡಾಯವಾಗಿರಬೇಕು.

ಈ ಮೇಲೆ ಹೇಳಿರುವ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವುದು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಾಸ್ತವಿಕ ಮತ್ತು ಬಹಳ ಕಠಿಣ ಎನ್ನಿಸಬಹುದು. ಆದರೆ, ಇದನ್ನು ಮಾಡದಿದ್ದರೆ ಮುಂದೆ ಅನುಭವಿಸಬೇಕಾದ ತೊಂದರೆಗಳನ್ನು ಪರಿಗಣಿಸಿ, ಎಷ್ಟೇ ಕಷ್ಟವಾಗಲಿ ಅಸಾಧ್ಯವಾದುದೇನಲ್ಲ ಎನ್ನುವ ನಿಲುವನ್ನು ತಾಳಿ, ದಿಟ್ಟ ನಿರ್ಧಾರಗಳನ್ನು ಕೈಗೊಂಡು, ನಿಧಾನದಲ್ಲಿಯಾದರೂ ಸರಿಯಾದ ದಿಕ್ಕಿನಲ್ಲಿ ಯೋಜನೆಗಳನ್ನು ರೂಪಿಸಿ ವಾಸ್ತವಿಕವಾಗಿ ಆಗುವಷ್ಟು ಕೆಲಸಗಳನ್ನು ಕಾಲಮಿತಿಯೊಳಗೆ ಕಾರ್ಯಗತಗೊಳಿಸುವುದು ಜಾಣತನ. ಇದು ಹೀಗೆಯೇ ಮುಂದುವರೆದರೆ, ಆಗ ನಿಜವಾದ ಪ್ರಕೃತಿಯ ವಿಕೋಪವನ್ನು ನೋಡಬೇಕಾದೀತು ಅಥವಾ ನೋಡಲು ನಾವ್ಯಾರೂ ಇರುವುದಿಲ್ಲ; ಈಗ ಆಗುತ್ತಿರುವುದು ನಿಜವಾದ ಪ್ರಕೃತಿಯ ವಿಕೋಪಗಳಲ್ಲ. ಮಾನವನ ಮಂಗಾಟಕ್ಕೆ ಪ್ರಕೃತಿ ಮಾತೆಯು ಕೇವಲ ಮೈ ಝಲಿಸುತ್ತಿದ್ದಾಳೆ ಅಷ್ಟೆ. ಪ್ರಕೃತಿ ಮಾತೆಯು ನೀಡಬಹುದಾದ ನಿಜವಾದ ಶಿಕ್ಷೆಯು ಮುಂದೆ ಕಾದಿದೆ, ಅಷ್ಟರಲ್ಲಿ ಎಚ್ಚರಗೊಳ್ಳೋಣ.