ನೇಗಿಲ ಮಿಡಿತ  ಸಂಪುಟ 6 ಸಂಚಿಕೆ 3

ಅಲಸಂದೆ ಸುಧಾರಿತ ಬೇಸಾಯ ಕ್ರಮಗಳು

ಬಿ. ಎಸ್. ಲಲಿತ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು
೯೬೩೨೮೬೩೧೦೦,
1

ಅಲಸಂದೆಯು ಒಂದು ಮುಖ್ಯವಾದ ದ್ವಿದಳ ಧಾನ್ಯ ಆಹಾರ ಬೆಳೆ. ಇದನ್ನು ಏಷ್ಯಾ, ಆಫ್ರಿಕ, ಮಧ್ಯ ಯುರೋಪ್ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಬೆಳೆಯುತ್ತಾರೆ. ಇದು ಬರ ಮತ್ತು ಶುಷ್ಕ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುವಂತಹ ಬೆಳೆ. ಅಲಸಂದೆಯು ವಾತಾವರಣದಲ್ಲಿರುವ ಸಾರಜನಕವನ್ನು ಬೇರುಗಳ ಗಂಟುಗಳ ಮೂಲಕ ಸ್ಥಿರೀಕರಿಸುವ ಶಕ್ತಿಯನ್ನು ಹೊಂದಿದೆ. ಹಾಗೆಯೇ ಈ ಬೆಳೆಯು ಕಡಿಮೆ ಫಲವತ್ತತೆ ಇರುವ ಮಣ್ಣುಗಳು ಅಂದರೆ ಹೆಚ್ಚು ಮರಳು (> ಶೇ.೮೫) ಮಣ್ಣಿನ ಸಾರಜನಕದ ಅಂಶವು ಶೇಕಡ ೦.೨ ಮತ್ತು ಕಡಿಮೆ ರಂಜಕ ಇರುವ ಮಣ್ಣುಗಳು ಮತ್ತು ನೆರಳಿನಲ್ಲಿ ಸಹ ಬೆಳೆಯುವಂತಹ ಶಕ್ತಿಯನ್ನು ಹೊಂದಿರುವುದರ ಜೊತೆಗೆ ಕಡಿಮೆ ಸಮಯದಲ್ಲಿ ಹೆಚ್ಚು ಹಸಿರು ಮತ್ತು ಕಾಳಿನ ಇಳುವರಿ ಕೊಡುವುದರಿಂದ ಈ ಬೆಳೆಯನ್ನು ಅಂತರ ಬೆಳೆಯಾಗಿ ಬೆಳೆಯಲು ಸಾಧ್ಯವಾಗುತ್ತದೆ. ಕಾಳನ್ನು ತರಕಾರಿ ಮತ್ತು ಒಣ ಕಾಳಾಗಿ ಸಹ ಉಪಯೋಗಿಸಬಹುದು. ಹೂವಾಡುವ ಹಂತದಲ್ಲಿ ಗಿಡಗಳನ್ನು ಕಟಾವು ಮಾಡಿ ಹಸಿರು ಮೇವಾಗಿ ಉಪಯೋಗಿಸಬಹುದು ಅಥವಾ ಹಸಿರು ಗೊಬ್ಬರವಾಗಿ ಸಹ ಉಪಯೋಗಕ್ಕೆ ಬರುತ್ತದೆ.

ಹವಾಗುಣ

ಅಲಸಂದೆಯು ಮೊಳಕೆಯೊಡೆಯಲು ೧೨-೧೫೦ ಸೆಲ್ಸಿಯಸ್ ಉಷ್ಣಾಂಶ ಬೇಕಾಗುತ್ತದೆ ಹಾಗೂ ಬೆಳೆಯು ೨೭-೩೫೦ ಸೆಲ್ಸಿಯಸ್ ಉಷ್ಣಾಂಶದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಅಲಸಂದೆಯು ಬರ ಪರಿಸ್ಥಿತಿ ತಡೆದುಕೊಳ್ಳುವುದು. ಆದರೆ ನೀರು ನಿಲ್ಲುವ ಅಥವಾ ಜೌಗು ಪ್ರದೇಶ ಇಲ್ಲವೆ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಈ ಬೆಳೆಗೆ ಯೋಗ್ಯವಲ್ಲ.

ಮಣ್ಣು

ಅಲಸಂದೆಯು ವಿವಿಧ ಮಣ್ಣುಗಳಲ್ಲಿ ಬೆಳೆಯುವುದಾದರೂ ನೀರು ಬಸಿಯುವ ಮರಳು ಮಿಶ್ರಿತ ಜೇಡಿಮಣ್ಣು ಅತಿ ಸೂಕ್ತ.

ತಳಿಗಳು

ಸಿ-೧೫೨: ಇದನ್ನು ಇರಾನ್ ತಳಿ ಪಿ-೪೨ರಿಂದ ಆಯ್ಕೆ ಮಾಡಲಾಗಿದೆ. ಇದು ೯೦-೧೦೦ ದಿವಸಗಳಲ್ಲಿ ಕಟಾವಿಗೆ ಬರುತ್ತದೆ. ಗಿಡಗಳು ಮಧ್ಯಮ ಎತ್ತರ ಬೆಳೆದು ಹಬ್ಬುತ್ತದೆ. ಕಾಳುಗಳ ಕವಚ ಕಂದು ಬಣ್ಣ, ಬೇಸಿಗೆ ಹಂಗಾಮು ಅಂದರೆ ಜನವರಿ-ಮಾರ್ಚ್ ಮಾತ್ರ ಬಿತ್ತಲು ಸೂಕ್ತವಾದ ತಳಿ. ಸಾಮಾನ್ಯವಾಗಿ ಎಕರೆಗೆ ೫-೬ ಕ್ವಿಂಟಾಲ್ ಇಳುವರಿಯನ್ನು ಪಡೆಯಬಹುದು.

ಟಿ.ವಿ.ಎಕ್ಸ್-೯೪೪-೦೨ ಇ: ಇದು ೧೦೦-೧೧೦ ದಿನಗಳಲ್ಲಿ ಕಟಾವಿಗೆ ಬರುತ್ತದೆ. ಗಿಡಗಳು ಎತ್ತರವಾಗಿ ಬೆಳೆದು ಹಬ್ಬುತ್ತವೆ. ಎಲೆಗಳು ಉದ್ದವಾಗಿದ್ದು ಮೊನಚಾಗಿರುತ್ತವೆ. ವಿವಿಧ ಹವಾಗುಣಕ್ಕೆ ಹೊಂದಿಕೊಂಡು ಬೆಳೆಯುತ್ತದೆ. ಬೀಜವು ಕಂದು ಬಣ್ಣದಿಂದ ಕೂಡಿರುತ್ತವೆ ಮತ್ತು ಗಿಡವು ಅನಿರ್ದಿಷ್ಟ ಬೆಳವಣಿಗೆಯನ್ನು ಹೊಂದಿರುತ್ತದೆ.

ಕೆ.ಬಿ.ಸಿ-೧: ಈ ತಳಿಯು ೯೦-೯೫ ದಿನಗಳಲ್ಲಿ ಕಟಾವಿಗೆ ಬರುತ್ತದೆ ಮತ್ತು ಬೀಜವು ಕಂದು ಬಣ್ಣದಿಂದ ಕೂಡಿರುತ್ತದೆ. ಈ ತಳಿಯು ಹಳದಿ ನಂಜು ರೋಗ ಮತ್ತು ತುಕ್ಕು ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ.

ಕೆ.ಬಿ.ಸಿ-೨: ಈ ತಳಿಯ ಬೀಜವು ಕಂದುಬಣ್ಣದಿಂದ ಕೂಡಿದ್ದು, ೯೫-೧೦೦ ದಿನಗಳಲ್ಲಿ ಕಟಾವಿಗೆ ಬರುತ್ತದೆ. ಈ ತಳಿಯು ಹಳದಿ ನಂಜು ರೋಗ ಮತ್ತು ತುಕ್ಕು ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ. ಮೇವಿಗಾಗಿ ಮತ್ತು ಹಸಿರೆಲೆ ಗೊಬ್ಬರಕ್ಕೆ ಮುಂಗಾರಿಗೆ ಮೊದಲು (ಏಪ್ರಿಲ್-ಮೇ) ಬಿತ್ತಬೇಕು. ತಡ ಮುಂಗಾರು (ಆಗಸ್ಟ್ ೧೫ ನಂತರ) ಬಿತ್ತನೆಯನ್ನು ಕಾಳಿಗಾಗಿ ಬಿತ್ತನೆ ಮಾಡಬೇಕು.

ಐಟಿ-೯೮೪೫೬-೧: ಇದು ಅಲ್ಪಾವಧಿ ತಳಿಯಾಗಿದ್ದು ೭೫-೮೦ ದಿನಗಳಲ್ಲಿ ಕಟಾವಿಗೆ ಬರುತ್ತದೆ ಮತ್ತು ಜನವರಿ-ಮಾರ್ಚ್ ತಿಂಗಳಲ್ಲಿ ಬಿತ್ತನೆ ಮಾಡಬೇಕು. ಈ ತಳಿಯ ಕಾಳು ಬಿಳಿ ಬಣ್ಣದಿಂದ ಕೂಡಿರುತ್ತದೆ.

ಕೆ.ಎಂ-೫: ಇದು ಒಂದು ಮಧ್ಯಮಾವಧಿ ತಳಿಯಾಗಿದ್ದು, ೯೦-೯೫ ದಿನಗಳಲ್ಲಿ ಕಟಾವಿಗೆ ಬರುತ್ತದೆ ಮತ್ತು ಬೇಸಿಗೆ ಕಾಲಕ್ಕೆ ಸೂಕ್ತ ತಳಿಯಾಗಿದ್ದು, ಜನವರಿ-ಮಾರ್ಚ್ ತಿಂಗಳಿನಲ್ಲಿ ಬಿತ್ತನೆ ಮಾಡಬೇಕು.

ಕೆ.ಬಿ.ಸಿ-೯: ಈ ತಳಿಯ ಅವಧಿಯು ೮೦-೮೫ ದಿನಗಳು ಮತ್ತು ಜನವರಿ-ಮಾರ್ಚ್ ತಿಂಗಳಿನಲ್ಲಿ ಬಿತ್ತನೆ ಮಾಡಬೇಕು. ಈ ತಳಿಯ ಕಾಳು ಬಿಳಿ ಬಣ್ಣದಿಂದ ಕೂಡಿರುತ್ತದೆ.

ಮಣ್ಣು

ಎಲ್ಲಾ ತರಹದ ಮಣ್ಣುಗಳಲ್ಲಿ ಅಲಸಂದೆಯನ್ನು ಬೆಳೆಯಬಹುದು. ಆದರೆ ಜೇಡಿನಿಂದ ಕೂಡಿದ್ದ, ಜಿಗಟು ಮಣ್ಣು ಅಥವಾ ಕ್ಷಾರ ಅಥವಾ ಚೌಳು ಮಣ್ಣು ಈ ಬೆಳೆಗೆ ಸೂಕ್ತವಲ್ಲ. ನೆರಳನ್ನು ತಡೆದುಕೊಂಡು ಬೆಳೆ ಯಾವುದಾದರೂ ಚಳಿ ಅಥವಾ ಹಿಮವನ್ನು ತಡೆಯಲಾಗುವುದು.

ಬಿತ್ತನೆ ಕಾಲ

ಮಳೆಯಾಶ್ರಿತ ಅಲಸಂದೆ ಬೆಳೆಯನ್ನು ಮುಂಗಾರು ಹಂಗಾಮಿನ ಪ್ರಥಮ ಮಳೆ ಬಂದ ಕೂಡಲೆ ಬಿತ್ತನೆ ಮಾಡಬಹುದು. ದಕ್ಷಿಣ ಕರ್ನಾಟಕದ ಒಣ ಪ್ರದೇಶದಲ್ಲಿ ವರ್ಷದಲ್ಲಿ ದ್ವಿ ಮಾದರಿ ಮಳೆ ಬರುವ ಪ್ರದೇಶಗಳಲ್ಲಿ ಅಲಸಂದೆ-ರಾಗಿ ಸರದಿ ಬೆಳೆ ಅಳವಡಿಸಿಕೊಳ್ಳಬಹುದು. ಮುಂಗಾರು ಹಂಗಾಮಿನಲ್ಲಿ ಜೂನ್-ಜುಲೈ ತಿಂಗಳಲ್ಲಿ ಬಿತ್ತನೆಗೆ ಸೂಕ್ತ. ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್-ನವಂಬರ್ ತಿಂಗಳು ಮತ್ತು ಬೇಸಿಗೆ ಹಂಗಾಮಿನಲ್ಲಿ ಜನವರಿ-ಮಾರ್ಚ್ ತಿಂಗಳು ಬಿತ್ತನೆಗೆ ಸೂಕ್ತ. ಆದರೆ ಫೆಬ್ರವರಿ ತಿಂಗಳು ಮೇವಿನ ಅಲಸಂದೆಯನ್ನು ಬಿತ್ತಲು ಸೂಕ್ತವಾಗಿದೆ.

ಪೋಷಕಾಂಶಗಳು

ಎಕರೆಗೆ ೩ ಟನ್ ಕೊಟ್ಟಿಗೆ ಗೊಬ್ಬರ ಹಾಗೂ ೧೦ ಕಿ.ಗ್ರಾಂ ಸಾರಜನಕ, ೨೦ ಕಿ.ಗ್ರಾಂ ರಂಜಕ ಮತ್ತು ೧೦ ಕಿ.ಗ್ರಾಂ ಪೊಟ್ಯಾಷಿಯಂ ಶಿಫಾರಸ್ಸು ಮಾಡಲಾಗಿದೆ. ಇದರ ಜೊತೆಗೆ ೨೦೦ ಗ್ರಾಂ ರೈಜೋಬಿಯಂ ಮತ್ತು ೨೦೦ ಗ್ರಾಂ ರಂಜಕ ಕರಿಗಿಸುವ ಜೈವಿಕ ಗೊಬ್ಬರ ಬೇಕಾಗುತ್ತದೆ. ಪೋಷಕಾಂಶಗಳ ಬಳಕೆ ಮಣ್ಣಿನ ಫಲವತ್ತತೆ ಮತ್ತು ಬೆಳೆ ಪರಿವರ್ತನೆಯ ಮೇಲೆ ಅವಲಂಬಿಸಿರುತ್ತದೆ.

ಬಿತ್ತನೆ ಮತ್ತು ಬಿತ್ತನೆ ಅಂತರ

ಬಿತ್ತನೆ ಮಾಡುವ ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ನಂತರ ಶಿಫಾರಸ್ಸು ಮಾಡಿರುವ ಕೊಟ್ಟಿಗೆ ಗೊಬ್ಬರವನ್ನು ೨-೩ ವಾರಗಳ ಮೊದಲು ಮಣ್ಣಿಗೆ ಸೇರಿಸಬೇಕು ಹಾಗೂ ಬಿತ್ತನೆ ಸಮಯದಲ್ಲಿ ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರಗಳನ್ನು ಸಾಲಿನಲ್ಲಿ ಹಾಕಿ, ತದನಂತರ ಮಣ್ಣಿನಲ್ಲಿ ಬೆರೆಯುವಂತೆ ಮಾಡಬೇಕು. ಅಲಸಂದೆ ಬೆಳೆಯನ್ನು ೩೦-೪೫ ಸೆಂ.ಮೀ. ಅಂತರದ ಸಾಲುಗಳಲ್ಲಿ ಮತ್ತು ಬೀಜದಿಂದ ಬೀಜಕ್ಕೆ ೧೦ ಸೆಂ.ಮೀ. ಅಂತರವನ್ನು ಕೊಡಬೇಕು. ಈ ಅಂತರವು ತಳಿ ಮತ್ತು ಬಿತ್ತನೆ ಕಾಲವನ್ನು ಅವಲಂಬಿಸಿರುತ್ತದೆ. ಬೇಸಿಗೆಯಲ್ಲಿ ಬೆಳವಣಿಗೆ ಅವಧಿ ಕಡಿಮೆ ಇರುವುದರಿಂದ ಕಡಿಮೆ ಅಂತರದ ಸಾಲುಗಳಲ್ಲಿ (೩೦ ಸೆಂ.ಮೀ.) ಮತ್ತು ಬೀಜದಿಂದ ಬೀಜಕ್ಕೆ ೭ ಸೆಂ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕು. ಒಂದು ಎಕರೆಗೆ ೧೦-೧೨ ಕಿ.ಗ್ರಾಂ ಬಿತ್ತನೆ ಬೀಜ ಬೇಕಾಗುತ್ತದೆ. ಮೇವಿನ ಹಾಗೂ ಹಸಿರು ಗೊಬ್ಬರಕ್ಕಾಗಿ ೨೦-೩೫ ಕಿ.ಗ್ರಾಂ ಬೀಜ ಬೇಕಾಗುವುದು. ಬಿತ್ತನೆ ಮಾಡುವಾಗ ಬೀಜವನ್ನು ೩ ಗ್ರಾಂ ಥೈರಾಮ್ ಅಥವಾ ಕ್ಯಾಪ್ಟನ್ ಪ್ರತಿ ಕಿ.ಗ್ರಾಂ ಬೀಜಕ್ಕೆ ಉಪಚರಿಸಿ ಬಿತ್ತನೆ ಮಾಡಬೇಕು.

23

ಕಳೆ ನಿರ್ವಹಣೆ

ಬಿತ್ತನೆಯಾದ ೨೫-೩೦ ದಿವಸಗಳಲ್ಲಿ ಒಂದು ಸಾರಿ ಕೈ ಕಳೆ ತೆಗೆದು ಕುಂಟೆ ಹಾಯಿಸಿದರೆ ಸಾಕು. ೩೦ ದಿನಗಳ ನಂತರ ಕಳೆ ಬಾಧೆ ಅಷ್ಟಾಗಿ ಕಾಣುವುದಿಲ್ಲ. ಕಾರಣ ಅಲಸಂದೆಯು ತುಂಬಾ ಬೇಗ ಬೆಳೆದು ಖಾಲಿ ಜಾಗವನ್ನು ಆವರಿಸುವುದರಿಂದ ಕಳೆಗಳು ಹೆಚ್ಚಾಗಿ ಬರುವುದಿಲ್ಲ ಅಥವಾ ಲ್ಯಾಸೋ ಮೊಳಕೆ ಪೂರ್ವದ ಕಳೆನಾಶಕವನ್ನು ಎಕರೆಗೆ ೪೦೦ ಮಿ.ಲೀ. ಅನ್ನು ಅಲಸಂದೆ ಬಿತ್ತಿದ ೨೪ ಗಂಟೆಗಳ ಒಳಗೆ ಸಿಂಪಡಿಸಬೇಕು ಮತ್ತೆ ಬಿತ್ತಿದ ೨೫-೩೦ ದಿನಗಳ ನಂತರ ಒಂದು ಬಾರಿ ಕುಂಟೆ ಹಾಯಿಸಿದರೆ ಕಳೆಗಳನ್ನು ಹತೋಟಿ ಮಾಡಬಹುದು.

ನೀರು ನಿರ್ವಹಣೆ

ಮಳೆಗಾಲದಲ್ಲಿ ಬೆಳೆದಾಗ ನೀರಾವರಿಯ ಅವಶ್ಯಕತೆ ಇರುವುದಿಲ್ಲ. ಆದರೆ ಬೇಸಿಗೆ ಹಂಗಾಮಿನಲ್ಲಿ ಬೆಳೆದ ಬೆಳೆಗೆ ೫-೬ ಬಾರಿ ನೀರಾವರಿ ಕೊಡುವುದು ಅವಶ್ಯಕವಾಗಿರುತ್ತದೆ. ನೀರಾವರಿ ಮಣ್ಣಿನ ವಿಧ ಮತ್ತು ರಚನೆಯನ್ನು ಅವಲಂಬಿಸಿದ್ದು ಜೇಡಿಮಣ್ಣಿನಲ್ಲಿ ಕಡಿಮೆ ನೀರಾವರಿ ಸಾಕಾಗುತ್ತದೆ. ಮುಂಗಾರು ಹಂಗಾಮಿನ ಮಳೆ ಕೊರತೆಯಾದಲ್ಲಿ ನೀರಾವರಿ ಕೊಡುವುದರಿಂದಲೂ ಅಧಿಕ ಇಳುವರಿ ಬರುವ ನಿರೀಕ್ಷೆ ಇದೆ. ಮಣ್ಣಿನ ಗುಣಧರ್ಮಕ್ಕೆ ಅನುಸಾರವಾಗಿ ೧೦-೧೫ ದಿನಗಳಿಗೊಮ್ಮೆ ನೀರು ಹಾಯಿಸಬೇಕು.

ಸಸ್ಯ ಸಂರಕ್ಷಣೆ

ಕೀಟಗಳು

ಎಲೆಜಿಗಿ ಹುಳು, ಸಸ್ಯ ಹೇನು ಮತ್ತು ಕಾಂಡದ ನೊಣಗಳ ಹಾವಳಿ ಕಂಡುಬಂದಾಗ ಡೈಮಿಥೋಯೇಟ್ ೩೦ ಇ.ಸಿ.ಯನ್ನು ಪ್ರತಿ ಲೀಟರ್ ನೀರಿಗೆ ೧.೭ ಮಿ.ಲೀ. ನಂತೆ ಎಕರೆಗೆ ೨೫೦ ಲೀಟರ್ ಸಿಂಪರಣಾ ದ್ರಾವಣವನ್ನು ಬಳಸಬೇಕು.

ಕಾಯಿಕೊರಕ ಹುಳದ ಹಾವಳಿ ಕಂಡುಬಂದಾಗ ಕ್ಲೋರ್‌ಪೈರಿಫಾಸ್ ೨೦ ಇ.ಸಿ.ಯನ್ನು ಪ್ರತಿ ಲೀಟರ್‌ಗೆ ೨ ಮಿ.ಲೀ.ಯಂತೆ ಎಕರೆಗೆ ೨೫೦-೩೦೦ ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ. ಉಗ್ರಾಣದ ಕೀಟಗಳನ್ನು ಹತೋಟಿ ಮಾಡಲು ಇಮಾಮೆಕ್ಟಿನ್‌ಬೆಂಜೊಯೇಟ್ ೫ ಎಸ್.ಜಿ. ೪೦೦ ಮಿ.ಲೀ. ಅಥವಾ ೦.೪ ಮಿ.ಲೀ. ಸ್ಫೈನೋಸಾಡ್ ೪೫ ಎಸ್.ಸಿ. ೫೦ ಮಿ.ಲೀಟರ್ ನೀರಿನಲ್ಲಿ ಬೆರೆಸಿ ಪ್ರತಿ ೧೦ ಕಿ.ಗ್ರಾಂ ಬೀಜಗಳಿಗೆ ಲೇಪನ ಮಾಡಿ ನೆರಳಿನಲ್ಲಿ ಒಣಗಿಸಿ ಸಂಗ್ರಹಿಸುವುದರಿಂದ ೧೨ ತಿಂಗಳು ಕಾಲ ಉಗ್ರಾಣದ ಕೀಟಗಳಿಂದ ಸಂರಕ್ಷಿಸಬಹುದು.

ರೋಗಗಳು

ಎಲೆ ಚುಕ್ಕೆ ರೋಗ: ರೋಗದ ಲಕ್ಷಣಗಳು ಕಂಡುಬಂದರೆ ಮ್ಯಾಂಕೋಜೆಬ್ ೨ ಗ್ರಾಂ ಅಥವಾ ತಾಮ್ರದ ಆಕ್ಸಿಕ್ಲೋರೈಡ್ ೩ ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಬೆಳೆಯ ೩೦-೩೫ ದಿನಗಳಲ್ಲಿ ರೋಗ ಕಾಣಿಸಿಕೊಂಡಾಗ ಪ್ರತಿ ಎಕರೆಗೆ ೨೦೦ ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು.

ಬೂದಿ ರೋಗ: ಬೂದಿಯಂತಹ ಬಿಳಿ ಪುಡಿ ಎಲೆ ಮತ್ತು ಕಾಂಡಗಳ ಮೇಲೆ ಕಂಡಾಗ ನೀರಿನಲ್ಲಿ ಕರಗುವ ಗಂಧಕ ೩ ಗ್ರಾಂ ಅಥವಾ ಕಾರ್ಬೆಂಡಜಿಮ್ ೧ ಗ್ರಾಂ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಎಕರೆಗೆ ೨೦೦ ಲೀಟರ್ ದ್ರಾವಣ ಬೇಕಾಗುತ್ತದೆ.

ನಂಜು ರೋಗ: ಈ ರೋಗ ಕಂಡುಬಂದಾಗ ೧.೭ ಮಿ.ಲೀ. ಡೈಮಿಥೋಯೇಟ್ ೩೦ ಇ.ಸಿ. ಯನ್ನು ಪ್ರತಿ ಲೀಟರ್‌ಗೆ ಬೆರೆಸಿ ಸಿಂಪಡಿಸಬೇಕು. ಎಕರೆಗೆ ಒಟ್ಟು ೨೦೦ ಲೀಟರ್ ದ್ರಾವಣ ಬೇಕಾಗುತ್ತದೆ.

ತುಕ್ಕು ರೋಗ: ಈ ರೋಗ ಕಂಡುಬಂದಾಗ ಹೆಕ್ಸಾಕೋನಜೋಲ್ ೧ ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಕಟಾವು: ಗಿಡಗಳಲ್ಲಿರುವ ಕಾಯಿ ಬಿಡಿಸಿ ಉಳಿದ ಗಿಡದ ಭಾಗವನ್ನು ಹಸಿರು ಗೊಬ್ಬರ ಇಲ್ಲವೆ ಒಣ ಮೇವಿಗಾಗಿ ಬಳಕೆ ಮಾಡಬಹುದು. ಚೆನ್ನಾಗಿ ಬೆಳೆದ ಬೆಳೆಯಿಂದ ಎಕರೆಗೆ ೫-೬ ಕ್ವಿಂಟಾಲ್ ಕಾಳಿನ ಇಳುವರಿಯನ್ನು ನೀರಾವರಿಯಲ್ಲಿ ಮತ್ತು ೩-೪ ಕ್ವ್ವಿಂಟಾಲ್ ಕಾಳಿನ ಇಳುವರಿಯನ್ನು ಖುಷ್ಕಿ ಜಮೀನಿನಲ್ಲಿ ಪಡೆಯಬಹುದು. ಮೇವಿಗಾಗಿ ಬೆಳೆದಾಗ ಎಕರೆಗೆ ೪-೫ ಟನ್ ಹಸಿರು ಮೇವು ದೊರೆಯುತ್ತದೆ.