ನೇಗಿಲ ಮಿಡಿತ  ಸಂಪುಟ 6 ಸಂಚಿಕೆ 3

ಏಲಕ್ಕಿ ಬೇಸಾಯ ಕ್ರಮಗಳು

ರವಿರಾಜ್ ಶೆಟ್ಟಿ ಜಿ., ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ
೯೪೮೧೬೨೦೬೯೫,
1

“ಸಂಬಾರ ಪದಾರ್ಥಗಳ ರಾಣಿ” ಎಂದು ಕರೆಯಲ್ಪಡುವ ಏಲಕ್ಕಿ ಸಂಬಾರ ಪದಾರ್ಥಗಳ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಏಲಕ್ಕಿಯು ಪಶ್ಚಿಮ ಘಟ್ಟಗಳ ದಕ್ಷಿಣ ಭಾಗದ ನಿತ್ಯ ಹರಿದ್ವರ್ಣ ಕಾಡುಗಳ ಮೂಲ ನಿವಾಸಿಯಾಗಿದೆ. ಎಪ್ಪತ್ತರ ದಶಕದ ಆರಂಭದವರೆಗೆ ಏಲಕ್ಕಿ ಉತ್ಪಾದಿಸುವಲ್ಲಿ ಹಾಗೂ ರಫ್ತು ಮಾಡುವಲ್ಲಿ ಭಾರತವು ಮುಂಚೂಣೆಯಲ್ಲಿತ್ತು. ಪ್ರಪಂಚದಲ್ಲಿ ಈಗ ಗ್ವಾಟೆಮಾಲ ಅಧಿಕ ಉತ್ಪಾದಿಸುವ ದೇಶವಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಏಲಕ್ಕಿಯೊಂದಿಗೆ ತೀವ್ರ ಪೈಪೋಟಿ ನಡೆಸುತ್ತಿದೆ. ತಾಂಜಾನಿಯಾ, ಶ್ರೀಲಂಕಾ, ಎಲ್ ಸಾಲ್ವಡಾರ್, ವಿಯಟ್ನಾಂ, ಲಾವೋಸ್, ಕಾಂಬೋಡಿಯಾ ಮತ್ತು ಪಾಪಾ ನ್ಯೂಗಿನಿಯಾಗಳು ಏಲಕ್ಕಿ ಬೆಳೆಯುವ ಇತರೆ ದೇಶಗಳಾಗಿವೆ. ದಕ್ಷಿಣ ಭಾರತದ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಏಲಕ್ಕಿಯನ್ನು ಬೆಳೆಯಲಾಗುತ್ತಿದೆ. ಭಾರತದಲ್ಲಿನ ಏಲಕ್ಕಿ ಬೆಳೆಯುವ ಒಟ್ಟು ಕ್ಷೇತ್ರದಲ್ಲಿ ಶೇಕಡ ೬೦ ರಷ್ಟು ಕೇರಳದಲ್ಲಿಯೂ, ಶೇಕಡ ೩೨ ರಷ್ಟು ಕರ್ನಾಟಕದಲ್ಲಿಯೂ ಪಸರಿಸಿದೆ. ಭಾರತದಲ್ಲಿ ಸುಮಾರು ೬೯,೦೦೦ ಹೆಕ್ಟೇರ್ (೨೦೦೭-೦೮) ಪ್ರದೇಶದಲ್ಲಿ ಏಲಕ್ಕಿಯನ್ನು ಬೆಳೆಯಲಾಗುತ್ತಿದೆ.

ವಿವಿಧ ತರಹದ ಆಹಾರ ತಿನಿಸುಗಳು, ಮಿಠಾಯಿ, ಪಾನೀಯ ಹಾಗೂ ಮದ್ಯಗಳ ತಯಾರಿಕೆಯಲ್ಲಿ ಏಲಕ್ಕಿಯನ್ನು ಬಳಸಲಾಗುತ್ತದೆ. ಇದಲ್ಲದೆ, ಏಲಕ್ಕಿಯನ್ನು ಅಲೋಪಥಿ ಮತ್ತು ಆಯುರ್ವೇದ ಪದ್ಧತಿಗಳಲ್ಲಿ ಔಷಧಿಗಳ ತಯಾರಿಸುವಲ್ಲಿ ಉಪಯೋಗಿಸಲಾಗುತ್ತದೆ. ಮಧ್ಯ ಪೂರ್ವ ದೇಶಗಳಲ್ಲಿ ಏಲಕ್ಕಿಯನ್ನು “ಗಾವಾ” (ಏಲಕ್ಕಿ ಸುವಾಸಿತ ಕಾಫಿ) ತಯಾರಿಕೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ.

ಎಲಿಟೇರಿಯಾ ಕಾರ್ಡಮೊಮಂ ಎಂಬ ಸಸ್ಯಶಾಸ್ತ್ರೀಯ ನಾಮದಿಂದ ಕರೆಯಲ್ಪಡುವ ಸಸ್ಯದ ಒಣಗಿದ ಹಣ್ಣು ವಾಣಿಜ್ಯವಾಗಿ ಮಾರಾಟವಾಗುವ ಏಲಕ್ಕಿ, ಈ ಪ್ರಭೇದವು ಏಕ ದಳ ಜಾತಿಗೆ ಸೇರಿದ ನೈಸರ್ಗಿಕ ಪಂಗಡ ಸಿಟಾಮಿನೇ ಮತ್ತು ಜಿಂಜಿಬರೇಸೀ ಕುಟುಂಬಕ್ಕೆ ಸೇರಿದೆ. ಈ ಸಸ್ಯವು ಮೂಲತಃ ನಿತ್ಯಹರಿದ್ವರ್ಣ ಕಾಡುಗಳಲ್ಲಿ ನೆರಳಿನಲ್ಲಿ ಬೆಳೆಯುವ ಸಸ್ಯ. ಇದನ್ನು ಬೀಜಗಳು, ಕಂದುಗಳು ಮತ್ತು ಅಂಗಾಂಶ ಕೃಷಿಯಿಂದ ಉತ್ಪಾದಿಸಿ ಸಸ್ಯಾಭಿವೃದ್ಧಿ ಮಾಡಲಾಗುತ್ತದೆ. ಏಲಕ್ಕಿ ಸಸಿಗಳು ನಾಟಿ ಮಾಡಿದ ಸುಮಾರು ೨೦-೨೨ ತಿಂಗಳುಗಳಲ್ಲಿ ಪ್ರಾಯಕ್ಕೆ ಬರುತ್ತವೆ. ಆರ್ಥಿಕ ಇಳುವರಿಯು ನಾಟಿ ಮಾಡಿದ ೩ನೇ ವರ್ಷದಿಂದ ಪ್ರಾರಂಭವಾಗುತ್ತದೆ ಮತ್ತು ಹೆಚ್ಚು ಇಳುವರಿ ನೀಡುವ ತಳಿಗಳು ನಿರ್ವಹಣೆಯನ್ನು ಆಧರಿಸಿ ೮-೧೨ ವರ್ಷಗಳವರೆಗೆ ಆರ್ಥಿಕ ಇಳುವರಿ ನೀಡುತ್ತವೆ. ಏಲಕ್ಕಿ ಬೆಳೆಯ ಜೀವಿತದ ಅವಧಿಯು ೩೦ ವರ್ಷಗಳು ಅಥವಾ ಮೇಲ್ಪಟ್ಟು ಇರುತ್ತದೆ. ಆದರೆ ಗಿಡದಲ್ಲಿನ ಪ್ರತಿಯೊಂದು ಮಿಥ್ಯಾಕಾಂಡವು ದ್ವಿವಾರ್ಷಿಕ ಅವಧಿಯದಾಗಿರುತ್ತದೆ.

ತಳಿಗಳು

ಮಲಬಾರ್ ತಳಿ

ಈ ತಳಿಯ ಏಲಕ್ಕಿ ಗಿಡಗಳು ಮಧ್ಯಮ ಗಾತ್ರದವುಗಳಾಗಿದ್ದು, ವಯಸ್ಸಿಗೆ ಬಂದಾಗ ೨-೩ ಮೀಟರ್ ಎತ್ತರವಿರುತ್ತವೆ. ಎಲೆಗಳ ಮೇಲ್ಮೈಯು ಮೃದು ತುಪ್ಪಳದಿಂದ ಕೂಡಿರುತ್ತದೆ ಅಥವಾ ನುಣುಪಾಗಿರುತ್ತದೆ. ಪುಷ್ಪಗುಚ್ಛಗಳು ನೆಲದ ಮೇಲೆ ಹರಡಿದ್ದು, ಬೀಜ ಕೋಶಗಳು ಆಕಾರದಲ್ಲಿ ಗೋಳಾಕಾರದಿಂದ ಅಂಡಾಕಾರವನ್ನು ಹೊಂದಿರುತ್ತವೆ. ಈ ವಿಧದ ಏಲಕ್ಕಿ ಗಿಡಗಳು ೬೦೦ ರಿಂದ ೧೨೦೦ ಮೀಟರ್ ಎತ್ತರದ ಪ್ರದೇಶಗಳಿಗೆ ಬಹು ಸೂಕ್ತವಾಗುತ್ತವೆ. ಈ ತಳಿಯು ಥ್ರಿಪ್ಸ್‌ಗಳ ಬಾಧೆಗೆ ತುತ್ತಾಗುವುದು ಕಡಿಮೆ. ಈ ತಳಿಯನ್ನು ಸಾಮಾನ್ಯವಾಗಿ ಕರ್ನಾಟಕದಲ್ಲಿ ಸಾಗುವಳಿ ಮಾಡಲಾಗುತ್ತದೆ. ಕಡಿಮೆ ಮಳೆ ಬೀಳುವ ಹಾಗೂ ಕಡಿಮೆ ಅವಧಿ ಮಳೆಯಾಗುವ ಪ್ರದೇಶಗಳಲ್ಲಿ ಈ ತಳಿಯು ಹುಲುಸಾಗಿ ಬೆಳೆಯಬಲ್ಲದು. ಮಲಬಾರ್ ತಳಿಗಳನ್ನು ಕೇರಳ (ಕನ್ನಿಯೇಲಂ ಪ್ರದೇಶ) ಮತ್ತು ತಮಿಳುನಾಡು (ಕೆಳ ಭಾಗದ ಪಳನಿ ಬೆಟ್ಟಗಳು) ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸಾಗುವಳಿ ಮಾಡಲಾಗುತ್ತಿದೆ.

ಮೈಸೂರು ತಳಿ

ಈ ತಳಿಗೆ ಸೇರಿದ ಸಸ್ಯಗಳು ದೃಢಕಾಯವಾಗಿದ್ದು, ಮೂರರಿಂದ ನಾಲ್ಕು ಮೀಟರ್ ಎತ್ತರ ಬೆಳೆಯುತ್ತವೆ. ಎಲೆಗಳು ಈಟಿಯಂತೆ ಮೊನಚಾಗಿದ್ದು, ಎಲೆಯ ಮೇಲ್ಮೈ ಭಾಗ ಹಾಗೂ ತಳಭಾಗಗಳಲ್ಲಿ ರೋಮಗಳಿಂದ ಕೂಡಿರುತ್ತವೆ. ಈ ತಳಿಯಲ್ಲಿ ಸಂಕೀರ್ಣ ಪುಷ್ಪಗುಚ್ಛಗಳು ನೇರವಾಗಿ ನಿಂತಿದ್ದು, ಬೀಜಕೋಶಗಳು ಅಂಡಾಕಾರವಾಗಿದ್ದು, ಗಾತ್ರದಲ್ಲಿ ದೊಡ್ಡವಿದ್ದು, ಕಡು ಹಸಿರು ಬಣ್ಣ ಹೊಂದಿರುತ್ತವೆ. ಈ ತಳಿಗಳು ಸಮುದ್ರ ಮಟ್ಟದಿಂದ ೯೦೦ ರಿಂದ ೧೨೦೦ ಮೀಟರ್ ಎತ್ತರವಿರುವ ಪ್ರದೇಶಗಳಿಗೆ ಚೆನ್ನಾಗಿ ಹೊಂದಾಣಿಕೆಯಾಗಿದ್ದು, ಎಲ್ಲಾ ಸಮಯಗಳಲ್ಲಿ ಚೆನ್ನಾಗಿ ಹರಡಿ ಮಳೆ ಬೀಳುವ ಸನ್ನಿವೇಶದಲ್ಲಿ ಹುಲುಸಾಗಿ ಬೆಳೆಯುತ್ತವೆ. ಈ ತಳಿಗಳನ್ನು ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಸಾಗುವಳಿ ಮಾಡಲಾಗುತ್ತದೆ.

ವೆಜುಕ್ಕಾ ತಳಿ

ಈ ತಳಿಯು ಮಲಬಾರ್ ಮತ್ತು ಮೈಸೂರು ತಳಿಗಳಿಂದ ಉದ್ಭವಿಸಿರುವ ನೈಸರ್ಗಿಕ ಸಂಕರಣ ತಳಿಯಾಗಿದ್ದು, ಈ ತಳಿಯ ಸಸ್ಯಗಳು ಈ ಮೇಲ್ಕಂಡ ಎರಡೂ ತಳಿಗಳ ಹಲವಾರು ಮಧ್ಯಂತರ ಗುಣಗಳನ್ನು ಹೊಂದಿವೆ. ಈ ತಳಿಯ ಸಸ್ಯಗಳು ಮೈಸೂರು ತಳಿಯಂತೆ ದೃಢಕಾಯವಾಗಿರುತ್ತವೆ. ಇದರ ಎಲೆಗಳು ಕಡು ಹಸಿರು ಬಣ್ಣದಿದ್ದು, ಉದ್ದವಾಗಿ ಈಟಿಯ ಆಕಾರದಲ್ಲಿದ್ದು, ಸಂಕೀರ್ಣ ಪುಷ್ಪಗುಚ್ಛಗಳು ತೂಗು ಹಾಕಿರುವ ಸರದಂತೆ ಇದ್ದು, ಬೀಜಕೋಶಗಳು ದಪ್ಪ ಗಾತ್ರವಿದ್ದು, ಗೋಳಾಕಾರ ಅಥವಾ ಅಂಡಾಕಾರವಿರುತ್ತವೆ. ಈ ತಳಿಯನ್ನು ಕೇರಳ ಮತ್ತು ತಮಿಳುನಾಡುಗಳಲ್ಲಿ ಸಮುದ್ರ ಮಟ್ಟದಿಂದ ೯೦೦-೧೨೦೦ ಮೀಟರ್ ಎತ್ತರದ ಪ್ರದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯಲಾಗುತ್ತಿದೆ.

ಹವಾಗುಣ

ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳು ಏಲಕ್ಕಿ ಬೆಳೆಯ ನೈಸರ್ಗಿಕ ತಾಣ, ಸಮುದ್ರ ಮಟ್ಟದಿಂದ ೬೦೦ ರಿಂದ ೧೨೦೦ ಮೀಟರ್ ಎತ್ತರವಿರುವ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಏಲಕ್ಕಿ ಬೆಳೆಯಲಾಗುತ್ತಿರುವ ಪ್ರದೇಶಗಳಲ್ಲಿ ಬೀಳುತ್ತಿರುವ ಮಳೆಯ ಒಟ್ಟು ಪ್ರಮಾಣ ಹಾಗೂ ಹಂಚಿಕೆಯಲ್ಲಿ ಗಣನೀಯ ವ್ಯತ್ಯಾಸಗಳನ್ನು (೯೦೦-೪೦೦೦ ಮಿ.ಮೀ.) ಕಾಣಬಹುದಾದರೂ ಚೆನ್ನಾಗಿ ಪಸರಿಸಿ ಬೀಳುವ ೧೫೦೦-೨೫೦೦ ಮಿ. ಮೀ. ಮಳೆ (ಬೇಸಿಗೆಯಲ್ಲಿ ೨೦೦ ಮಿ.ಮೀ. ಗಿಂತ ಕಡಿಮೆ ಇಲ್ಲದ ಮಳೆ) ಮತ್ತು ಸರಾಸರಿ ಉಷ್ಣತೆ ೧೫ ರಿಂದ ೨೫ ಡಿಗ್ರಿ ಸೆ. ಈ ಬೆಳೆಗೆ ಸೂಕ್ತ.

ಮಣ್ಣು

ಆಮ್ಲೀಯ ರಸಸಾರ (೫.೫-೬.೫) ಹೊಂದಿರುವ ಕಾಡಿನ ಗೋಡು ಮಣ್ಣುಗಳಲ್ಲಿ ಈ ಬೆಳೆ ಹುಲುಸಾಗಿ ಬೆಳೆಯುತ್ತದೆ. ಏಲಕ್ಕಿ ಬೆಳೆಯಲಾಗುತ್ತಿರುವ ಮಣ್ಣುಗಳು ಹೆಚ್ಚು ಸಾವಯವ ಪದಾರ್ಥ ಮತ್ತು ಅಧಿಕ ಸಾರಜನಕ, ಕಡಿಮೆಯಿಂದ ಮಧ್ಯಮ ಪ್ರಮಾಣದಲ್ಲಿ ದೊರೆಯುವ ರಂಜಕ ಹಾಗೂ ಮಧ್ಯಮದಿಂದ ಅಧಿಕ ದೊರೆಯುವ ಪೊಟ್ಯಾಷ್ ಪೋಷಕಾಂಶಗಳನ್ನು ಹೊಂದಿರಬೇಕು.

ಸಸಿಮಡಿ ನಿರ್ವಹಣೆ

ಏಲಕ್ಕಿ ತೋಟಗಳನ್ನು ಸ್ಥಾಪಿಸಲು ಆಯಾ ಪ್ರದೇಶಗಳಿಗೆ ಸೂಕ್ತವಾಗಿರುವ ಹೆಚ್ಚು ಇಳುವರಿ ನೀಡುವ ತಳಿಗಳ ಬೀಜದಿಂದ ಬೆಳೆಸಿದ ಸಸಿಗಳನ್ನು ಅಥವಾ ಕಂದುಗಳನ್ನು ಬಳಸಬೇಕು. ವೈರಾಣು ಮುಕ್ತ ಸಸಿಗಳು ಬೇಕೆನಿಸಿದಲ್ಲಿ ಕಂದು ಮೂಲಕ ಸಸ್ಯಾಭಿವೃದ್ಧಿ ಮಾಡುವುದು ಅತ್ಯುತ್ತಮ ವಿಧಾನ. ಆದರೂ, ಕಂದುಗಳ ಮೂಲಕ ಸಸ್ಯಾಭಿವೃದ್ಧಿ ಮಾಡುವುದರಿಂದ ಏಲಕ್ಕಿಯ ಮೂಲ ಸಂತತಿಯೇ ಕಡಿಮೆಯಾಗುವ ಸಾಧ್ಯತೆ ಇದೆ. ಕೇರಳ ಮತ್ತು ತಮಿಳುನಾಡುಗಳಲ್ಲಿ ಕಂದುಗಳ ಮೂಲಕ ಸಸ್ಯಾಭಿವೃದ್ಧಿ ವಿಧಾನವನ್ನು ಅನುಸರಿಸಲಾಗುತ್ತಿದೆ. ಸಾಂಪ್ರದಾಯಕವಾಗಿ, ಏಲಕ್ಕಿ ತೋಟಗಳನ್ನು ಬೀಜಗಳಿಂದ ಅಭಿವೃದ್ಧಿಪಡಿಸಲಾಗುತ್ತಿದ್ದು, ವೈರಾಣು ಜೀವಿ ರೋಗದ ಬಾಧೆಯಿಂದ ಮುಕ್ತವಾದ ಸಸಿಗಳನ್ನು ಪಡೆಯಲು ಕರ್ನಾಟಕದಲ್ಲಿ ಈಗಲೂ ಸರ್ವೇಸಾಮಾನ್ಯವಾಗಿ ಎಲ್ಲರೂ ಅನುಸರಿಸುವಂತಹ ಹಾಗೂ ಶಿಫಾರಸ್ಸಿಗೆ ಯೋಗ್ಯವಾದ ಪದ್ಧತಿಯಾಗಿದೆ.

ಅಬೀಜ (ಕಂದುಗಳ ಮೂಲಕ) ಸಸ್ಯಾಭಿವೃದ್ಧಿ

ಕಂದುಗಳ ಮೂಲಕ ಸಸ್ಯಾಭಿವೃದ್ಧಿ ಮಾಡುವ ಅಬೀಜ ಪುನರುತ್ಪತ್ತಿ ವಿಧಾನವು ಹೆಚ್ಚು ಇಳುವರಿ ನೀಡುವ ತಾಯಿ ಗಿಡಗಳಿಂದ ತಾಯಿ ಗಿಡಗಳನ್ನೇ ಹೋಲುವಂತಹ ಸಸಿಗಳನ್ನು ಪಡೆಯಲು ಸಾಧ್ಯವಿದೆ. ಬೀಜಗಳಿಂದ ಬೆಳೆಸಿದ ಗಿಡಗಳಿಗಿಂತ ಬೇರುಕಾಂಡದ ಮೂಲಕ ಬೆಳೆಸಿದ ಎಲ್ಲಾ ಗಿಡಗಳು ಒಂದೇ ಸಮನಾದ ಬೆಳವಣಿಗೆಯನ್ನು ಹೊಂದಿರುವುದರ ಜೊತೆಗೆ ಬಹು ಬೇಗ ಇಳುವರಿ ನೀಡಲು ಪ್ರಾರಂಭಿಸುತ್ತವೆ. ಆದರೂ ಕಂದುಗಳ ಮೂಲಕ ಸಸ್ಯಾಭಿವೃದ್ಧಿ ಮಾಡುವುದರಿಂದ ವೈರಾಣು ರೋಗ ಹರಡುವ ಸಾಧ್ಯತೆ ಇರುವುದರಿಂದ ವೈರಾಣು ರೋಗಪೀಡಿತವಾದ ಪ್ರದೇಶಗಳಲ್ಲಿ ಈ ವಿಧಾನವನ್ನು ಅನುಸರಿಸಬಾರದು.

ಬೀಜದಿಂದ ಸಸ್ಯಾಭಿವೃದ್ಧಿ

ಗೊತ್ತಿರುವ ಮೂಲದ ಅಧಿಕ ಇಳುವರಿ ನೀಡುವ ಮತ್ತು ರೋಗ ಮುಕ್ತವಾದ ತಾಯಿಗಿಡದಿಂದ ಎರಡು ಮತ್ತು ಮೂರನೆಯ ಕೊಯ್ಲಿನಿಂದ ಸಂಪೂರ್ಣ ಬಲಿತ ದಪ್ಪನೆಯ ಬೀಜಕೋಶಗಳನ್ನು ಶೇಖರಣೆ ಮಾಡಿ, ಬೀಜಕೋಶಗಳಿಂದ ಬೀಜಗಳನ್ನು ಹೊರ ತೆಗೆಯಬೇಕು. ತಳಿಗಳು, ಬೀಜಗಳ ಗಾತ್ರ ಮತ್ತು ಬೀಜಕೋಶದಲ್ಲಿರುವ ಬೀಜಗಳ ಸಂಖ್ಯೆಯನ್ನು ಆಧರಿಸಿ, ಒಂದು ಕಿ.ಗ್ರಾಂನಷ್ಟು ಹಸಿ ಬೀಜಕೋಶಗಳಲ್ಲಿ ಸುಮಾರು ೩೫೦ ರಿಂದ ೪೦೦ ಕಾಯಿಗಳು ಇರುತ್ತವೆ. ಬೀಜಕೋಶಗಳಿಂದ ಬೀಜಗಳನ್ನು ಹೊರತೆಗೆದ ನಂತರ ನೀರಿನಲ್ಲಿ ತೊಳೆಯುವುದರ ಮೂಲಕ ಬೀಜಗಳ ಜೊತೆಗಿರುವ ಅಂಟು ಪದಾರ್ಥವನ್ನು ತೆಗೆಯಬೇಕು. ನಂತರ ಮರದ ಬೂದಿಯಿಂದ ಮಿಶ್ರ ಮಾಡಿ, ನೆರಳಿನಲ್ಲಿ ಒಣಗಿಸಬೇಕು. ಒಂದು ಹೆಕ್ಟೇರ್ ಪ್ರದೇಶಕ್ಕೆ ನಾಟಿ ಮಾಡಲು ಬೇಕಾಗುವಷ್ಟು ಉತ್ತಮ ಗುಣಮಟ್ಟದ ಸಸಿಗಳನ್ನು ಉತ್ಪಾದಿಸಲು ೧೭೫-೨೦೦ ಗ್ರಾಂ ನಷ್ಟು ಬೀಜಗಳು ಬೇಕಾಗುತ್ತವೆ. ಬೀಜಕೋಶಗಳಿಂದ ಬೀಜಗಳನ್ನು ಹೊರ ತೆಗೆದ ೧೫ ದಿನಗಳ ಒಳಗೆ ಬಿತ್ತನೆ ಮಾಡಬೇಕು. ಸೆಪ್ಟಂಬರ್ ತಿಂಗಳಿನಲ್ಲಿ ಬಿತ್ತನೆ ಮಾಡುವುದರಿಂದ ಅಧಿಕ ಮೊಳೆಯುವಿಕೆಯನ್ನು ಪಡೆಯಬಹುದು; ಚಳಿಗಾಲ ಮತ್ತು ಅಧಿಕ ಮುಂಗಾರು ಮಳೆ ಬೀಳುವ ಸಮಯದಲ್ಲಿ ಬಿತ್ತನೆ ಮಾಡಬಾರದು. ಉತ್ತಮ ಪರಿಸ್ಥಿತಿಯಲ್ಲಿಯೂ ಸಹ ಮೊಳಕೆ ಪ್ರಮಾಣವು ಅನೇಕ ವೇಳೆ ಶೇಕಡಾ ೫೦ ಕ್ಕಿಂತ ಕಡಿಮೆ ಇರುತ್ತದೆ.

ಶೇಕಡಾ ೨೫ ರಷ್ಟು ನೈಟ್ರಿಕ್ ಆಮ್ಲದೊಂದಿಗೆ ಬೀಜಗಳನ್ನು ಉಪಚಾರ ಮಾಡುವುದರಿಂದ ಬೀಜದ ಗಟ್ಟಿಯಾದ ಹೊರ ಪದರವು ಮೃದುವಾಗಿ ಮೊಳೆಯುವಿಕೆ ಪ್ರಮಾಣ ಹೆಚ್ಚುತ್ತದೆ. ಈ ಉಪಚಾರದ ನಂತರ ಮಾರನೆಯ ದಿನ ಬೀಜಗಳನ್ನು ಬಿತ್ತನೆ ಮಾಡಬಹುದು.

ಜಮೀನಿನಲ್ಲಿ ನಾಟಿ ಮಾಡುವುದು ಮತ್ತು ನಿರ್ವಹಣೆ

ಸಸಿಗಳ ನಾಟಿ: ಆಯಾ ಪ್ರದೇಶಕ್ಕೆ ಸೂಕ್ತವಾಗುವ ಅಧಿಕ ಇಳುವರಿ ನೀಡುವ ತಳಿಯಿಂದಲೇ ನಾಟಿ ಸಾಮಗ್ರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಸಸಿಗಳನ್ನು ಈಗಾಗಲೇ ತೆಗೆದು, ಭರ್ತಿ ಮಾಡಿದ ಗುಣಿಗಳಲ್ಲಿ ಈ ಸಸಿಗಳನ್ನು ನಾಟಿ ಮಾಡಬೇಕು. ನಾಟಿ ಮಾಡಿದ ಸಸಿಗಳು ಗಾಳಿಗೆ ಅಲುಗಾಡದಂತೆ ಕೋಲಿನಿಂದ ಆಧಾರ ಕೊಡಬೇಕು. ಮೈಸೂರು ತಳಿ ಮತ್ತು ವೆಜುಕ್ಕಾ ತಳಿಗಳಿಗೆ ಗಿಡಗಳಿಂದ ಗಿಡಗಳಿಗೆ ೩ ಮೀ. x ೩ ಮೀ. ಅಂತರದಲ್ಲಿ (ಹೆಕ್ಟೇರಿಗೆ ೧೧೧೧ ಸಸಿಗಳು) ನಾಟಿ ಮಾಡಬೇಕು. ತಮಿಳುನಾಡಿನಲ್ಲಿ ಗಿಡಗಳಿಂದ ಗಿಡಗಳಿಗೆ ೨.೪ ಮೀ. x ೨.೪ ಮೀ. ಅಂತರವನ್ನು (ಹೆಕ್ಟೇರಿಗೆ ೧೭೩೬ ಸಸಿಗಳು) ಶಿಫಾರಸ್ಸು ಮಾಡಲಾಗಿದೆ. ಕರ್ನಾಟಕದಲ್ಲಿ ಮಲಬಾರ್ ತಳಿಗೆ ಗಿಡಗಳಿಂದ ಗಿಡಗಳಿಗೆ ೧.೮ ಮೀ. x ೧.೮ ಮೀ. ಅಂತರವು (ಹೆಕ್ಟೇರಿಗೆ ೩೦೮೬ ಸಸಿಗಳು) ಸೂಕ್ತವಾದುದಾಗಿದೆ. ಸಸಿಗಳನ್ನು ನಾಟಿ ಮಾಡಿದ ತಕ್ಷಣ, ಸಸಿಗಳ ಬುಡದ ಭಾಗದಲ್ಲಿ ಮಣ್ಣಿನ ಮೇಲೆ ಒಣಗಿದ ತರಗೆಲೆಗಳನ್ನು ಹೊದಿಕೆಯಾಗಿ ಹಾಕಬೇಕು. ಹೀಗೆ ಹೊದಿಕೆ ಹಾಕುವುದರಿಂದ ಮಣ್ಣು ಕೊಚ್ಚಣಿಯನ್ನು ತಡೆಗಟ್ಟುವುದರ ಜೊತೆಗೆ ಮಣ್ಣಿನ ತೇವಾಂಶ ಸಂರಕ್ಷಣೆ ಮಾಡಲು ಸಹಾಯಕವಾಗುತ್ತದೆ. ನೀರು ರಭಸವಾಗಿ ಹರಿದು ಹೋಗುವುದನ್ನು ನಿಯಂತ್ರಿಸಲು ಕರ್ಣರೇಖೆಯನುಗುಣವಾಗಿ ನಾಟಿ ಮಾಡಬೇಕು.

ನೀರಾವರಿ: ಬೇಸಿಗೆ ತಿಂಗಳುಗಳಲ್ಲಿ ಹಾಗೂ ಬಹುಕಾಲದವರೆಗೆ ಮಳೆಯು ಬಾರದೇ ಇರುವ ಸಂದಿಗ್ಧ ಸಮಯ (ಎಳೆಯ ಕವಲುಗಳು ಮತ್ತು ಸಂಕೀರ್ಣ ಪುಷ್ಪಗುಚ್ಛಗಳ ಬೆಳವಣಿಗೆಯಾಗುವ ಅವಧಿ) ಗಳಲ್ಲಿ ಸರ್ವೇ ಸಾಮಾನ್ಯವಾಗಿ ನೀರು ಕೊಡಬೇಕಾಗುತ್ತದೆ. ಮಳೆಗಾಲದಲ್ಲಿ ವಿವಿಧ ನೀರು ಸಂಗ್ರಹಣಾ ವಿಧಾನಗಳ ಮೂಲಕ ನೀರನ್ನು ಸಂಗ್ರಹಣೆ ಮಾಡಬೇಕು. ಕುಂಡ ನೀರಾವರಿ, ಪೈಪುಗಳ ಮೂಲಕ ನೀರು ಕೊಡುವುದು, ತುಂತುರು (ಸಿಂಚನ) ನೀರಾವರಿ, ಹನಿ ನೀರಾವರಿ ಅಥವಾ ಕಿರು ತುಂತುರು ನೀರಾವರಿ ಇತ್ಯಾದಿ ನೀರಾವರಿ ವಿಧಾನಗಳ ಮೂಲಕ ನೀರು ಕೊಡಬಹುದು. ಕುಂಡ ನೀರಾವರಿ ಅಥವಾ ಪೈಪುಗಳ ಮೂಲಕ ನೀರು ಕೊಡುವುದಾದಲ್ಲಿ ವಾರಕ್ಕೊಮ್ಮೆ ಗಿಡವೊಂದಕ್ಕೆ ೨೦-೩೦ ಲೀ. ನಷ್ಟು (ಗಿಡದ ಬುಡದ ಗಾತ್ರವನ್ನು ಆಧರಿಸಿ) ನೀರು ಕೊಡಬಹುದು. ತುಂತುರು ನೀರಾವರಿ ಮೂಲಕ ನೀರು ಕೊಡುವುದಾದಲ್ಲಿ ಸಾಮಾನ್ಯವಾದ ಪರಿಸ್ಥಿತಿಯಲ್ಲಿ ೧೫ ದಿನಗಳಿಗೊಂದಾವರ್ತಿ ೩೫ ರಿಂದ ೪೫ ಮಿ. ಮೀ. ಮಳೆಗೆ ಸಮಾನವಾದಷ್ಟು ನೀರು ಕೊಡಬೇಕು. ಹನಿ ನೀರಾವರಿ ಅಥವಾ ಕಿರು ತುಂತುರು (ಸಿಂಚನ) ನೀರಾವರಿ ಕೊಡುವುದಾದಲ್ಲಿ ಪ್ರತಿ ದಿನ ಗಿಡವೊಂದಕ್ಕೆ ಐದರಿಂದ ಆರು ಲೀಟರ್‌ನಷ್ಟು ನೀರು ಕೊಡಬೇಕು. ಯಾವುದೇ ನೀರಾವರಿ ವಿಧಾನವನ್ನು ಅನುಸರಿಸುವಾಗ ಎಷ್ಟು ದಿನಗಳಿಗೊಮ್ಮೆ ನೀರು ಕೊಡಬೇಕೆನ್ನುವುದು ಸ್ಥಳೀಯ ಹವಾಗುಣವನ್ನು ಅವಲಂಬಿಸಿ ನಿರ್ಧರಿಸಬೇಕಾಗುತ್ತದೆ. ನೀರು ಕೊಡುವಾಗ ಗಿಡದ ಬುಡಭಾಗದಲ್ಲಿ ಅತಿ ಹೆಚ್ಚು ಅವಧಿಯವರೆಗೆ ಅಧಿಕ ತೇವಾಂಶವಿರದಂತೆ ಎಚ್ಚರಿಕೆ ವಹಿಸಬೇಕು.

ಗೊಬ್ಬರ ಮತ್ತು ರಸಗೊಬ್ಬರಗಳನ್ನು ಹಾಕುವುದು

ಏಲಕ್ಕಿ ಬೆಳೆಯು ಗೊಬ್ಬರ ಮತ್ತು ರಸಗೊಬ್ಬರಗಳೆರಡಕ್ಕೂ ಪ್ರತಿಕ್ರಿಯೆ ತೋರಿಸುತ್ತದೆ. ನಿರಂತರವಾಗಿ ಅತ್ಯುತ್ತಮವಾದ ಉತ್ಪಾದನೆ ಪಡೆಯಲು ಮಣ್ಣು ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಗೊಬ್ಬರಗಳನ್ನು ವಿವೇಕಯುತವಾಗಿ ಕೊಡಬೇಕು. ಮೈಲಾದುಂಪಾರಾದಲ್ಲಿರುವ ಭಾರತೀಯ ಏಲಕ್ಕಿ ಸಂಶೋಧನಾ ಕೇಂದ್ರದಲ್ಲಿ ನಡೆಸಿದ ಗೊಬ್ಬರಗಳ ಧೀರ್ಘಾವಧಿ ಅಧ್ಯಯನಗಳ ಫಲಿತಾಂಶಗಳ ಪ್ರಕಾರ ಏಲಕ್ಕಿ ಬೆಳೆಯಲ್ಲಿ ನಿರಂತರ ಉತ್ಪಾದನೆ ಪಡೆಯಲು ಸಮಗ್ರ ಪೋಷಕಾಂಶಗಳನ್ನು ಹಾಕುವುದು ಉಪಯೋಗಕಾರಿ ಎಂದು ತಿಳಿದುಬಂದಿದೆ.

ಕೊಯ್ಲು

ಉತ್ತಮ ಗುಣಮಟ್ಟದ ಏಲಕ್ಕಿಯನ್ನು ಪಡೆಯಲು ಸರಿಯಾದ ಬಲಿಯುವಿಕೆಯ ಹಂತದಲ್ಲಿ ಬೀಜಕೋಶಗಳನ್ನು ಕೊಯ್ಲು ಮಾಡುವುದು ಅತ್ಯಾವಶ್ಯಕ. ಚಿಕ್ಕದಾದ ಇನ್ನೂ ಬಲಿಯದ ಬೀಜಕೋಶಗಳನ್ನು ಕೊಯ್ಲು ಮಾಡುವುದರಿಂದ ಅಸಮಗಾತ್ರದ ಸುಕ್ಕುಗಟ್ಟಿದ ಮತ್ತು ಅನಪೇಕ್ಷಿತ ಬಣ್ಣದ ಬೀಜಕೋಶಗಳು (ಸಂಸ್ಕರಣೆಯ ನಂತರ) ಲಭಿಸುತ್ತವೆ. ಬೀಜಕೋಶಗಳ ಒಳಗೆ ಬೀಜಗಳು ಸಂಪೂರ್ಣ ಬೆಳವಣಿಗೆಯಾಗಲು ಅನುಕೂಲವಾಗುವಂತೆ ಚೆನ್ನಾಗಿ ಬಲಿತ ಹಂತದಿಂದ (ಕರಿಕಾಯಿ) ಸಂಪೂರ್ಣ ಹಣ್ಣಾಗಿರುವ ಬೀಜಕೋಶಗಳನ್ನು ಕೊಯ್ಲು ಮಾಡಬೇಕು. ಇದರಿಂದ ಬೀಜಕೋಶಗಳ ಜೊತೆಗೆ ಬೀಜಗಳ ಹೆಚ್ಚಿನ ಇಳುವರಿ ಬರುತ್ತದೆ.

ಆದರೂ ಹೆಚ್ಚಿಗೆ ಹಣ್ಣಾಗುವವರೆಗೂ ಕೊಯ್ಲು ಮಾಡದೇ ನಂತರ ಕೊಯ್ಲು ಮಾಡಿದರೆ ಇಲಿಗಳು ಮತ್ತು ಅಳಿಲುಗಳಿಂದ ತೋಟದಲ್ಲಿ ಬೀಜಕೋಶಗಳು ನಷ್ಟವಾಗುವುದರ ಜೊತೆಗೆ ಕೊಯ್ಲಿನ ನಂತರ ಬೀಜಕೋಶಗಳನ್ನು ಒಣಗಿಸುವಾಗ ಬೀಜಕೋಶಗಳು ಸೀಳುವುದರಿಂದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಲಭಿಸುತ್ತದೆ. ಸಂಪೂರ್ಣ ಹಣ್ಣಾದಾಗ ಕೊಯ್ಲು ಮಾಡಿದಾಗ ಅತಿ ಹೆಚ್ಚು (ಶೇಕಡಾ ೨೪) ಒಣ ಏಲಕ್ಕಿಯ ಇಳುವರಿಯೂ, ಬಲಿತಾಗ ಕೊಯ್ಲು ಮಾಡಿದಾಗ ಶೇಕಡಾ ೨೦ ರಷ್ಟು ಮತ್ತು ಇನ್ನೂ ಬಲಿಯದ ಹಂತದಲ್ಲಿ ಕೊಯ್ಲು ಮಾಡಿದಾಗ ಶೇಕಡಾ ೧೪ ರಷ್ಟು ಒಣ ಏಲಕ್ಕಿ ಇಳುವರಿಯೂ ಲಭಿಸುತ್ತದೆ. ತೈಲದ ಅಂಶವು ಬೀಜಕೋಶಗಳ ಬಲಿಯುವಿಕೆಯ ಮೇಲೆ ವ್ಯತ್ಯಾಸವಾಗುತ್ತದೆ. ಕಡಿಮೆ ಪ್ರಮಾಣದ ೧-೮ ಸಿನಿಯೋಲ್ ಅಂಶವೂ ಮತ್ತು ಹೆಚ್ಚಿನ ಪ್ರಮಾಣದ ಆಲ್ಫಾಟರ್ಪಿನೈಲ್ ಅಸಿಟೇಟ್ ಅಂಶವೂ ಏಲಕ್ಕಿಯಲ್ಲಿ ಸುವಾಸನೆಗೆ ಒಂದು ಸೂಚ್ಯಂಕ. ಈ ಸೂಚ್ಯಂಕವು ಬೀಜಕೋಶಗಳು ಬಲಿತಾಗ ಹೆಚ್ಚು ಇರುತ್ತದೆ. ಚೆನ್ನಾಗಿ ಬಲಿತ (ಬೀಜಗಳು ಕಂದು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗುತ್ತವೆ) ಹಂತದಿಂದ ಸಂಪೂರ್ಣ ಹಣ್ಣಾದ ಬೀಜಕೋಶಗಳನ್ನು ಮಾತ್ರ ಕೊಯ್ಲು ಮಾಡಬೇಕು.

ಸಾರಜನಕ ರಂಜಕ ಮತ್ತು ಪೊಟ್ಯಾಷ್ ರಸಗೊಬ್ಬರಗಳನ್ನು ಹಾಕುವ ಪ್ರಮಾಣ

(೨ ಕಂತುಗಳಲ್ಲಿ)
ಗಿಡಗಳ ವಯಸ್ಸು ಮಳೆಯಾಶ್ರಯದ ಪ್ರದೇಶಗಳು(ಕಿ.ಗ್ರಾಂ/ಹೆಕ್ಟೇರ್) ನೀರಾವರಿ ಆಶ್ರಿತ ಪ್ರದೇಶಗಳು (ಕಿ.ಗ್ರಾಂ/ಹೆಕ್ಟೇರ್)
ನಾಟಿ ಮಾಡಿದ ಮೊದಲನೆ ವರ್ಷ ಸಾರಜನಕ - ೨೫ ರಂಜಕ - ೨೫ ಪೊಟ್ಯಾಷ್ - ೫೦ಸಾರಜನಕ - ೨೫ ರಂಜಕ - ೨೫ ಪೊಟ್ಯಾಷ್ - ೫೦ (೨ ಕಂತುಗಳಲ್ಲಿ)
ನಾಟಿ ಮಾಡಿದ ಎರಡನೆಯ ವರ್ಷ (ಸ್ಥಿರವಲ್ಲದ ಇಳುವರಿ) ಸಾರಜನಕ - ೪೦ ರಂಜಕ - ೪೦ ಪೊಟ್ಯಾಷ್ - ೮೦ (೨ ಕಂತುಗಳಲ್ಲಿ) ಸಾರಜನಕ - ೬೦ ರಂಜಕ - ೬೦ ಪೊಟ್ಯಾಷ್ - ೮೦ (೩ ಕಂತುಗಳಲ್ಲಿ)
ನಾಟಿ ಮಾಡಿದ ಮೂರನೆಯ ವರ್ಷ (ಸ್ಥಿರ ಇಳುವರಿ) ಸಾರಜನಕ - ೭೫ ರಂಜಕ - ೭೫ ಪೊಟ್ಯಾಷ್ - ೧೫೦ (೨ ಕಂತುಗಳಲ್ಲಿ) ಸಾರಜನಕ - ೧೨೫ ರಂಜಕ - ೧೨೫ ಪೊಟ್ಯಾಷ್ - ೨೫೦ (೩ ಕಂತುಗಳಲ್ಲಿ)