ನೇಗಿಲ ಮಿಡಿತ  ಸಂಪುಟ 6 ಸಂಚಿಕೆ 3

ಔಷಧಿಯ ಗುಣ ಹೊಂದಿರುವ ವಿಶಿಷ್ಟ ರುಚಿಯ ನಕ್ಷತ್ರ ಹಣ್ಣು

ಯಲ್ಲೇಶ್ ಕುಮಾರ್ ಹೆಚ್. ಎಸ್., ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ
೯೮೪೪೫೮೪೮೧೭,
1

ನಕ್ಷತ್ರ ಹಣ್ಣು ಇದು ಇಂಡೊನೇಷಿಯಾಕ್ಕೆ ಸೇರಿದೆ. ಇದನ್ನು ಕ್ಯಾರಾಂಬೋಲ, ಸ್ಟಾರ್‌ಫ್ರುಟ್, ನಕ್ಷತ್ರ ಹಣ್ಣು, ಬೆಂಬುಳಿ ಕಮರಕ, ದಾರೆಕಾಯಿ, ದಾರೆಹುಳಿ, ದಾರೆ ಹಣ್ಣು, ಕರಂಬಳ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಇದರಲ್ಲಿ ಆಕ್ಸಾಲಿಕ್ ಅಂಶವು ಶೇ. ೬ ರಷ್ಟು ಇದೆ. ಭಾರತದಲ್ಲಿ ಆರ್ಥಿಕವಾಗಿ ಅಷ್ಟೇನು ಬೆಳೆಯದಿದ್ದರೂ, ಇದು ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಹಣ್ಣಾಗಿದೆ. ಈ ಹಣ್ಣನ್ನು ಹೆಚ್ಚಾಗಿ ಉಪ್ಪಿನಕಾಯಿ ತಯಾರಿಸಲು ಉಪಯೋಗಿಸುತ್ತಾರೆ. ಇದರ ಹಣ್ಣಿನಿಂದ ಗೊಜ್ಜು ಮತ್ತು ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಬಹುದು. ಅವುಗಳೆಂದರೆ ಕೇಕ್, ಕ್ಯಾಂಡಿ, ಜಾಮ್, ಜ್ಯೂಸ್ ಹಾಗೂ ಇದನ್ನು ಚರ್ಮದ ದ್ರವ ಔಷಧಗಳ ತಯಾರಿಕೆಯಲ್ಲೂ ಬಳಸಲಾಗುತ್ತದೆ.

ಔಷಧೀಯ ಉಪಯೋಗಗಳು

೧. ಈ ಹಣ್ಣಿನ ಎಲೆಯನ್ನು ಚಿಕನ್ ಫಾಕ್ಸ್ ಹಾಗೂ ಉಲ್ಲಕಡ್ಡಿ ಚರ್ಮರೋಗ ನಿವಾರಿಸಲು ಉಪಯೋಗಿಸುತ್ತಾರೆ.
೨. ಈ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಈ ಹಣ್ಣಿನ ಬಳಕೆ ಮಾಡುವುದರಿಂದ ಕಫ, ಕೆಮ್ಮು, ನೆಗಡಿ, ಅಲ್ಸರ್, ಗಂಟಲಿನ ನೋವು ಸೇರಿದಂತೆ ಇನ್ನಿತರ ರೋಗಗಳಿಗೆ ತುಂಬಾ ಸಹಕಾರಿ. ಜೊತೆಗೆ ಮಧುಮೇಹವನ್ನು ಕಡಿಮೆ ಮಾಡುತ್ತದೆ ಬೆಂಬುಳಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಪಿತ್ತ, ಗ್ಯಾಸ್ಟ್ರಿಕ್, ಮಲಬದ್ಧತೆ ಸೇರಿದಂತೆ ವಿವಿಧ ರೋಗಗಳಿಗೆ ಇದು ರಾಮಬಾಣ.
೩. ಈ ಬೆಂಬುಳಿ ಹಣ್ಣು ಎಲ್ಲೆಂದರಲ್ಲಿ ಸಿಗುವುದಿಲ್ಲ. ಪಶ್ಚಿಮ ಘಟ್ಟ ಭಾಗದ ಅರಣ್ಯ ಪ್ರದೇಶಗಳಲ್ಲಿ ಮಾತ್ರ ಲಭ್ಯವಾಗುತ್ತದೆ. ದಿನಕ್ಕೆ ಒಂದರಂತೆ ಹತ್ತು ದಿನಗಳ ಕಾಲ ಈ ಹಣ್ಣು ಸೇವನೆ ಮಾಡಿದರೆ ಹೊಟ್ಟೆಗೆ ಸಂಬಂಧಿಸಿದ ರೋಗಗಳಿಗೆ ತುಂಬಾ ಸಹಕಾರಿ.
೪. ಬೆಂಬುಳಿ ಹಣ್ಣಿನಲ್ಲಿ ಆಕ್ಸಾಲಿಕ್ ಆಮ್ಲ ಹೆಚ್ಚಿರುವುದರಿಂದ, ಕಿಡ್ನಿ ಸ್ಟೋನ್ ರೋಗದಿಂದ ಬಳಲುತ್ತಿರುವ ವ್ಯಕ್ತಿಗಳು ಹೆಚ್ಚು ತಿನ್ನಬಾರದು.

ಮಣ್ಣು

ಈ ಹಣ್ಣನ್ನು ವಿವಿಧ ಮಣ್ಣುಗಳಲ್ಲಿ ಬೆಳೆಯಬಹುದಾದರೂ, ಕ್ಷಾರವಲ್ಲದ ಆಳವಾದ ಗೋಡು ಮಣ್ಣು ಹಾಗೂ ಮಧ್ಯಮ ಕಪ್ಪು ಮಣ್ಣು ಹೆಚ್ಚು ಸೂಕ್ತ.

ಹವಾಗುಣ

ಬೆಚ್ಚಗಿರುವ ಹಾಗೂ ತೇವಾಂಶವಿರುವ ಹವಾಗುಣವು ಹೆಚ್ಚು ಸೂಕ್ತ. ಗುಡ್ಡಗಾಡು ಮತ್ತು ಬಯಲು ಸೀಮೆ ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ ೧೨೦೦ ಮೀಟರ್ ಎತ್ತರದವರೆಗೆ ಇದನ್ನು ಬೆಳೆಯಬಹುದಾಗಿದೆ. ಉತ್ತಮ ಮಳೆ ವರ್ಗೀಕರಣವು ಈ ಬೆಳೆಯನ್ನು ಚೆನ್ನಾಗಿ ಬೆಳೆಯುವಂತೆ ಉತ್ತೇಜಿಸುತ್ತದೆ.

ತಳಿಗಳು

ನಕ್ಷತ್ರ ಹಣ್ಣಿನಲ್ಲಿ ನಿರ್ದಿಷ್ಟ ತಳಿಗಳು ಇಲ್ಲ. ಸಾಮಾನ್ಯವಾಗಿ ಈ ಹಣ್ಣಿನಲ್ಲಿ ಹುಳಿ ಮಿಶ್ರಿತ ಹಣ್ಣು ಹಾಗೂ ಗಾತ್ರದ ಸಿಹಿ ಮಿಶ್ರಿತ ಹಣ್ಣು ಎಂಬ ಎರಡು ಬಗೆಯ ತಳಿಗಳನ್ನು ಗುರುತಿಸಲಾಗಿದೆ ಅವುಗಳೆಂದರೆ, ೧) ಉಳಿಹಣ್ಣು - ಇದರಲ್ಲಿ ಶೇ. ೧ ಆಸಿಡ್ ಇರುತ್ತದೆ. ೨) ಸಿಹಿಹಣ್ಣು - ಇದರಲ್ಲಿ ಶೇ. ೦.೪ ಆಸಿಡ್ ಇರುತ್ತದೆ. ಅತೀ ಹೆಚ್ಚಾಗಿ ಬೆಳೆಯುವ ತಳಿಗಳು: ಗೋಲ್ಡ್ ಸ್ಟಾರ್, ಇಕಂಬೋಲ, ಗೋಲ್ಡ್‌ನ್ ಸ್ಟಾರ್ (ಹವಾಯಿ), ಆರ್ಕಿನ್ ವಿಲ್ಹರ್ ಮಾಹ ಸ್ಟಾರ್‌ಕಿಂಗ್

ಸಸ್ಯಾಭಿವೃದ್ಧಿ

ನಕ್ಷತ್ರ ಹಣ್ಣನ್ನು ಬೀಜದಿಂದ ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಕಸಿ, ಗೂಟಿ ಪದ್ಧತಿಗಳು ಕೂಡ ಹೆಚ್ಚು ಸೂಕ್ತವಾಗುತ್ತವೆ. ಹಣ್ಣಿನಲ್ಲಿನ ಬೀಜಗಳನ್ನು ತೆಗೆದು ಮಣ್ಣಿನಲ್ಲಿ ಹಾಕಿ ಅವು ೧೦-೧೫ ಸೆಂ.ಮೀ. ಬೆಳೆದ ನಂತರ ಅವುಗಳನ್ನು ನಾಟಿ ಮಾಡಬಹುದು. ಕಸಿ ಮಾಡಲು ವಿನೀರ್ ಕಸಿ ಪದ್ಧತಿಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಅಪ್ರೋಚ್ ಕಸಿ ಭಾರತದಲ್ಲಿ ಹೆಚ್ಚು ಪ್ರಚಲಿತವಾಗಿದೆ.

ನಾಟಿ ಮಾಡುವಿಕೆ

ನಿಗದಿ ಮಾಡಿದ ಪ್ರದೇಶದಲ್ಲಿ ಗಿಡಗಳನ್ನು ನೆಡುವುದಕ್ಕೆ ೧ ರಿಂದ ೨ ತಿಂಗಳು ಮುಂಚಿತವಾಗಿ ಸುಮಾರು ೮ ಮೀ. x ೮ ಮೀ. ಅಂತರದಲ್ಲಿ ೧ ಘನ ಮೀಟರ್ ಗಾತ್ರದ ಗುಂಡಿಗಳನ್ನು ತೆಗೆದು ಮಳೆಗಾಲ ಪ್ರಾರಂಭವಾದ ನಂತರ ಬೆಳೆಯಬೇಕಾಗುತ್ತದೆ. ಬೆಳೆಯ ನಡುವೆ ಸೂಕ್ತ ಅಂತರವನ್ನು ನಿಯಮಿತವಾಗಿ ಮಾಡುವುದರಿಂದ ಒಳ್ಳೆಯ ಇಳುವರಿಯನ್ನು ಪಡೆಯಬಹುದಾಗಿದೆ. ಕ್ಯಾರಂಬೋಲ ಬೆಳೆಯ ತೋಟವನ್ನು ನೀಟಾಗಿ ಇಡುವುದು ಒಳ್ಳೆಯದು. ಈ ಬೆಳೆಯನ್ನು ಜೂನ್-ಜುಲೈ ತಿಂಗಳುಗಳಲ್ಲಿ ನಾಟಿ ಮಾಡಲು ಅತೀ ಸೂಕ್ತವಾಗಿದೆ.

ನಾಟಿಯ ನಂತರ ಬೇಸಾಯ ಕ್ರಮಗಳು

ಈ ಮರಗಳು ತಮ್ಮದೇ ಆದ ನೈಜ ಆಕಾರವನ್ನು ಹೊಂದುತ್ತವೆ. ಮರಗಳ ನೆತ್ತಿ ಬಲು ದಟ್ಟವಾಗಿ ಬೆಳೆದು ಪೊದೆಯಂತಾಗುವುದು. ನೆಲ ಮಟ್ಟದಿಂದ ೧ ಮೀ. ಎತ್ತರದವರೆಗೆ ಕಾಂಡ ಹಸನಾಗಿರಬೇಕು. ಅದೇ ರೀತಿ ಬೇರು ಚಿಗುರು, ನೀರ್ಚಿಗುರು ಮುಂತಾದವುಗಳನ್ನು ಸವರಬೇಕು.

ಸವರುವಿಕೆ

ಪ್ರತಿ ಮರದಲ್ಲಿ ಭೂಮಿಯಿಂದ ೧.೦ ಮೀ. ಎತ್ತರದಲ್ಲಿ ೪-೫ ಅಗಲವಾದ ಕೋನವುಳ್ಳ ಸದೃಢವಾದ ಕೊಂಬೆಗಳನ್ನು ಬಿಟ್ಟು ಉಳಿದ ರೆಂಬೆಗಳನ್ನು ಕತ್ತರಿಸಬೇಕು. ಇದಲ್ಲದೆ ರೋಗಗ್ರಸ್ತ ಒಣಗಿದ ಕೊಂಬೆಗಳನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಕತ್ತರಿಸಿ ತೆಗೆಯಬೇಕು.

ರಾಸಾಯನಿಕ ಗೊಬ್ಬರಗಳು

ಈ ಬೆಳೆಗೆ ೩೦ ಕೆ.ಜಿ ತಿಪ್ಪೆಗೊಬ್ಬರವನ್ನು ಒಂದು ಗುಣಿಗೆ ಪೂರೈಸಬೇಕು. ಮೊದಲನೇ ವರ್ಷದ ನಂತರ ಪ್ರತಿ ವರ್ಷ ಪ್ರತಿ ಗಿಡಕ್ಕೆ ೪೦ ಗ್ರಾಂ ಸಾರಜನಕ, ೧೦ ಗ್ರಾಂ ರಂಜಕ ಮತ್ತು ೭೦ ಗ್ರಾಂ ಪೊಟ್ಯಾಷ್ ಗೊಬ್ಬರಗಳನ್ನು ೯ ವರ್ಷದವರೆಗೂ ಹೆಚ್ಚಿಸುತ್ತಾ ಹೋಗಬೇಕು. ತದ ನಂತರ ೧೦ನೇ ವರ್ಷದಲ್ಲಿ ೬೦೦ ಗ್ರಾಂ ಸಾರಜನಕ, ೧೨೦ ಗ್ರಾಂ ರಂಜಕ ಮತ್ತು ೧೦೦೦ ಗ್ರಾಂ ಪೊಟ್ಯಾಷ್ ಗೊಬ್ಬರಗಳನ್ನು ವರ್ಷದ ಎರಡು ಕಂತುಗಳಲ್ಲಿ ಪೂರೈಸಬೇಕು.

21

ನೀರಾವರಿ

ನಾಟಿ ಮಾಡಿದ ಕಸಿಗಳಿಗೆ ೧೫ ದಿನಗಳ ಅಂತರದಲ್ಲಿ ನೀರು ಕೊಡಬೇಕು. ಫಸಲು ಕೊಡುವ ಮರಗಳಿಗೆ ಬೇಸಿಗೆಯಲ್ಲಿ ಪ್ರತಿ ವಾರಕ್ಕೊಮ್ಮೆ ನೀರು ಕೊಡಬೇಕು.

ಕೊಯ್ಲು ಮತ್ತು ಇಳುವರಿ.

ನಾಟಿ ಮಾಡಿದ ೪ ನೇ ವರ್ಷದಿಂದ ಇಳುವರಿ ಪಡೆಯಬಹುದು. ಐದನೇ ವರ್ಷದಿಂದ ಪ್ರತಿ ಗಿಡಕ್ಕೆ ೧೦೦-೧೫೦ ಕಿ.ಗ್ರಾಂ (೪-೬ ಟನ್/ಹೆ.) ತದನಂತರ ಸರಿಸುಮಾರು ೪೦೦-೫೦೦ ಕೆ.ಜಿ. ಹಣ್ಣುಗಳನ್ನು ಒಂದು ಗಿಡದಲ್ಲಿ ಇಳುವರಿ ಪಡೆಯಬಹುದು (೮-೧೦ಟನ್/ಹೆ.). ಗಿಡದ ವಯಸ್ಸು ಮತ್ತು ನಿರ್ವಹಣಾ ಕ್ರಮಗಳನ್ನನುಸರಿಸಿ ಇಳುವರಿ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ.