ನೇಗಿಲ ಮಿಡಿತ  ಸಂಪುಟ 6 ಸಂಚಿಕೆ 3

ಕಬ್ಬಿನ ಅಧಿಕ ಇಳುವರಿಗಾಗಿ ಅನುಸರಿಸಬೇಕಾದ ಉತ್ಪಾದನಾ ತಾಂತ್ರಿಕತೆಗಳು

ಕೆ. ವಿ. ಕೇಶವಯ್ಯ, ಮತ್ತು ಎಸ್. ಎನ್. ಸ್ವಾಮಿಗೌಡ, ವಲಯ ಕೃಷಿ ಸಂಶೋಧನಾ ಕೇಂದ್ರ, ವಿ. ಸಿ. ಫಾರಂ, ಮಂಡ್ಯ
೯೧೧೦೬೨೫೩೮೫
1

ಕಬ್ಬು ರಾಜ್ಯದ ಒಂದು ಮುಖ್ಯ ಆರ್ಥಿಕ ಬೆಳೆಯಾಗಿದೆ. ರಾಜ್ಯದಲ್ಲಿ ಈ ಬೆಳೆಯನ್ನು ಸುಮಾರು ೪.೦ ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಕಬ್ಬಿನ ಬೆಳೆಗೆ ಸೂಕ್ತವಾದ ಮಣ್ಣು, ಹವಾಗುಣ ಪರಿಸ್ಥಿತಿ ಇದ್ದು, ಈಗಿನ ಇಳುವರಿ ಮಟ್ಟಕ್ಕಿಂತ (೯೦ ಟನ್/ಹೆ.) ಇನ್ನು ಹೆಚ್ಚಿನ ಇಳುವರಿ ಪಡೆಯುವ ವಿಪುಲ ಅವಕಾಶಗಳಿವೆ. ಕಬ್ಬಿನ ಇಳುವರಿ ಹೆಚ್ಚಿಸುವ ಮುಖ್ಯವಾದ ಬೇಸಾಯ ತಾಂತ್ರಿಕತೆಗಳಲ್ಲಿ ಬಿತ್ತನೆ ಬೀಜದ ಆಯ್ಕೆ, ಮಣ್ಣಿನ ನಿರ್ವಹಣೆ, ಸಾವಯವ ಮತ್ತು ರಸಗೊಬ್ಬರದ ನಿರ್ವಹಣೆ, ಸುಧಾರಿತ ನಾಟಿ ಪದ್ಧತಿಗಳ ಅಳವಡಿಕೆ, ಕಳೆ ನಿಯಂತ್ರಣ ಹಾಗೂ ರೋಗ ಮತ್ತು ಕೀಟಗಳ ನಿರ್ವಹಣೆ, ಕೊಯ್ಲು ಮತ್ತು ಕೊಯ್ಲೋತ್ತರ ನಿರ್ವಹಣೆ ಪ್ರಮುಖವಾದವುಗಳು. ಕೂಳೆ ಕಬ್ಬಿನ ನಿರ್ವಹಣೆಯಲ್ಲಿ ಅತಿ ಮುಖ್ಯವಾದುದೇನೆಂದರೆ ತನು ಕಬ್ಬಿಗಿಂತ ಕೂಳೆ ಕಬ್ಬಿನಲ್ಲಿ ಖರ್ಚು ಕಡಿಮೆ ಮಾಡಿ ನಿವ್ವಳ ಆದಾಯ ಹೆಚ್ಚಿಸಲು ಅವಕಾಶಗಳಿರುತ್ತವೆ.

ಮಣ್ಣು: ಕಬ್ಬನ್ನು ಎಲ್ಲಾ ವಿಧದ ಮಣ್ಣಿನಲ್ಲಿ ಬೆಳೆಯಬಹುದಾದರೂ, ಚೆನ್ನಾಗಿ ನೀರು ಬಸಿದು ಹೋಗುವ ಆಳವಾದ (೩-೪ ಅಡಿ) ತಟಸ್ಥ ರಸಸಾರವಿರುವ (೬.೫-೭.೫) ಮಧ್ಯಮ ದರ್ಜೆ ಕಪ್ಪು ಮಣ್ಣು ಯೋಗ್ಯವಾದುದು. ಹೆಚ್ಚು ಫಲವತ್ತತೆಯಿಂದ ಕೂಡಿದ ಮಣ್ಣಿನಿಂದ ಹೆಚ್ಚಿನ ಇಳುವರಿ ನಿರೀಕ್ಷಿಸಬಹುದು. ಕಬ್ಬಿನ ಬೇಸಾಯಕ್ಕೆ ಅಳವಡಿಸುವ ಮಣ್ಣಿನಲ್ಲಿ ಯಾವುದೇ ಸಮಸ್ಯೆಗಳು (ಕ್ಷಾರ/ಚೌಳು) ಇಲ್ಲದಿದ್ದಲ್ಲಿ ಉತ್ತಮ ಬೆಳೆಯನ್ನು ನಿರೀಕ್ಷಿಸಬಹುದಾಗಿದೆ. ಮಣ್ಣು ಪರೀಕ್ಷೆ ಮಾಡಿಸಿ ಮಣ್ಣಿನಲ್ಲಿರುವ ವಿವಿಧ ಪೋಷಕಾಂಶಗಳ ಲಭ್ಯತೆ ಅಥವಾ ಕೊರತೆಯನ್ನು ವಿಶ್ಲೇಷಣೆ ಮಾಡಿದರೆ ಪೋಷಕಾಂಶಗಳ ಪೂರೈಕೆಗೆ ನೆರವಾಗುತ್ತದೆ. ಇದರಿಂದ, ಮಣ್ಣಿನಲ್ಲಿರುವ ಸಮಸ್ಯೆಗಳನ್ನು ಅರಿಯಲು ಸಹ ನೆರವಾಗುತ್ತದೆ.

ಬಿತ್ತನೆ ಬೀಜ: ಆರೋಗ್ಯಕರವಾದ ಸದೃಢವಾದ ಬಿತ್ತನೆ ಬೀಜದ ಆಯ್ಕೆ ಕಬ್ಬಿನ ಬೇಸಾಯದಲ್ಲಿ ಬಹಳ ಮುಖ್ಯವಾದ ಅಂಶವಾಗಿದೆ. ರೋಗ ರಹಿತ ತನು ಕಬ್ಬಿನಿಂದ ಬಿತ್ತನೆ ಬೀಜವನ್ನು ಆರಿಸಬೇಕು. ಬಿತ್ತನೆ ಬೀಜವನ್ನು ಶಾಖೋಪಚಾರ ಮಾಡಿದ ಬಿತ್ತನೆಯಿಂದ ಬೆಳೆಸಿದ ಕಬ್ಬಿನ ಬೀಜೋತ್ಪಾದನಾ ತಾಕಿನಿಂದ ಆರಿಸಿ ಉಪಯೋಗಿಸುವುದು ಸೂಕ್ತ. ಸಂಶೋಧನಾ ಕೇಂದ್ರದಲ್ಲಿ (ವಿ.ಸಿ.ಫಾರಂ) ಶಾಖೋಪಚಾರ ಮಾಡಿದ ಬಿತ್ತನೆಯಿಂದ ಬೆಳೆಸಿದ ಬಿತ್ತನೆ ಲಭ್ಯವಿರುತ್ತದೆ. ೮-೧೦ ತಿಂಗಳ ತನು ಕಬ್ಬಿನಿಂದ ೧೦೦೦೦ -೧೨೦೦೦ ಮೂರು ಕಣ್ಣುಗಳ ಬಿತ್ತನೆಯಾಗಿ ತಯಾರು ಮಾಡಿ ಒಂದು ಎಕರೆ ಪ್ರದೇಶಕ್ಕೆ ಉಪಯೋಗಿಸಬಹುದು. ಬೀಜವನ್ನು ಆರಿಸುವಾಗ ರೋಗ ಪೀಡಿತ ತಾಕು, ಮೊಳಕೆಯೊಡೆದ ಬಿತ್ತನೆ, ಬಿದ್ದಿರುವ ಕಬ್ಬು, ಕೂಳೆ ಕಬ್ಬಿನಿಂದ ಆರಿಸಕೂಡದು.

ಬಿತ್ತನೆ ತಯಾರಾದ ನಂತರ ಕಾರ್ಬೆಂಡಜಿಮ್ ದ್ರಾವಣದಲ್ಲಿ(೧ ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ) ೧೫ ನಿಮಿಷಗಳವರೆಗೆ ಬೀಜೋಪಚಾರ ಮಾಡಿ ನಂತರ ನಾಟಿ ಮಾಡುವುದು ಸೂಕ್ತ. ಇದರಿಂದ ಮೊಳಕೆ ಪ್ರಮಾಣ ಹೆಚ್ಚಿಸಬಹುದು. ನಾಟಿ ಸಮಯದಲ್ಲಿ ಮೂರು ಕಣ್ಣುಗಳ ಬಿತ್ತನೆಯು ತುಂಡಿನ ಮಧ್ಯದ ಕಣ್ಣು ಪಕ್ಕಕ್ಕೆ ಬರುವಂತೆ ನಾಟಿ ಮಾಡಿದಾಗ ಹೆಚ್ಚಿನ ಮೊಳಕೆ ಪ್ರಮಾಣ ನಿರೀಕ್ಷಿಸಬಹುದು. ಇದರಿಂದ ಅಲ್ಲಲ್ಲಿ ಪಿಗ್ಗುಳಿಗಳಾಗುವುದನ್ನು ತಪ್ಪಿಸಬಹುದು.

ಭೂಮಿ ಸಿದ್ದತೆ: ಭೂಮಿಯನ್ನು ೨-೩ ಬಾರಿ ಆಳವಾಗಿ ಉಳುಮೆ ಮಾಡಿ ಹಸನು ಮಾಡುವುದು ಒಳ್ಳೆಯದು. ಇದರಿಂದ ಕಳೆ ನಿಯಂತ್ರಣದ ಜೊತೆಗೆ ಭೂಮಿಯಲ್ಲಿನ ಕೀಟಗಳ ಮೊಟ್ಟೆ, ಕೋಶಗಳನ್ನು ನಾಶಪಡಿಸಲು ಅನುವಾಗುತ್ತದೆ. ಆಳವಾಗಿ ಉಳುಮೆ ಮಾಡುವುದರಿಂದ ಕಬ್ಬು ಆಳವಾಗಿ ಬೇರೂರಲು ಸಹಕಾರಿಯಾಗುತ್ತದೆ. ಇದರಿಂದ ಕಬ್ಬಿಗೆ ಆಧಾರವು (anchorage) ಹೆಚ್ಚಾಗಿ ಕಬ್ಬು ಬೀಳುವುದನ್ನು ತಪ್ಪಿಸುವುದರಿಂದ ಕಬ್ಬಿನ ಗುಣಮಟ್ಟವನ್ನು ಕಾಪಾಡಲು ಸಹಕಾರಿಯಾಗುತ್ತದೆ. ಇದರ ಜೊತೆಗೆ ಕೊನೆ ಮುರಿ ಮಾಡುವಾಗ ಮಣ್ಣನ್ನು ಚೆನ್ನಾಗಿ ಏರು ಹಾಕಿ ಸುಭದ್ರವಾಗಿ ನಿಲ್ಲುವಂತೆ ಮಾಡುವುದರಿಂದ ಕಬ್ಬು ಬೀಳುವುದನ್ನು ತಡೆಗಟ್ಟಬಹುದು.

ಸಾವಯವ ಗೊಬ್ಬರದ ಉಪಯೋಗ: ಸಾವಯವ ವಸ್ತು ಮಣ್ಣಿನ ಜೀವಾಳ. ಸಾವಯವ ವಸ್ತು ಹೆಚ್ಚಾದಂತೆ ಮಣ್ಣಿನ ಗುಣಧರ್ಮಗಳು ವೃದ್ಧಿಸುತ್ತವೆ. ಒಂದು ಯಶಸ್ವಿ ಕಬ್ಬಿನ ಬೆಳೆಯನ್ನು ಪಡೆಯಬೇಕಾದರೆ ಮಣ್ಣಿನಲ್ಲಿ ಕನಿಷ್ಠ ಶೇ. ೦.೮ ರಷ್ಟು ಸಾವಯವ ಇಂಗಾಲದ ಅಂಶವಿರಬೇಕು. ಸಾವಯವ ವಸ್ತುಗಳನ್ನು ಹೆಚ್ಚಿಸಲು ಹಲವಾರು ಮೂಲಗಳನ್ನು ಅವಲಂಬಿಸಬಹುದು. ಬಹುಮುಖ್ಯವಾಗಿ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರವನ್ನು ಎಕರೆಗೆ ೧೦ ಟನ್‌ನಂತೆ ಉಪಯೋಗಿಸಬೇಕು. ಇದರಿಂದ ಕಬ್ಬಿಗೆ ಉಪಯೋಗಿಸುವ ರಸಗೊಬ್ಬರಗಳಿಗೆ ಹೆಚ್ಚಿನ ಸ್ಪಂದನೆ ಸಿಗುತ್ತದೆ. ಸಾವಯವ ವಸ್ತುಗಳ ಮೂಲವಾಗಿ ಇತರೆ ವಸ್ತುಗಳಾದ ಸಕ್ಕರೆ ಕಾರ್ಖಾನೆ ಮಡ್ಡಿ ಗೊಬ್ಬರ (ಎಕರೆಗೆ ೪ ಟನ್ ನಂತೆ), ಹಸಿರೆಲೆ ಗೊಬ್ಬರ, ಕೋಳಿ ಗೊಬ್ಬರ, ತೆಂಗಿನ ನಾರಿನ ಗೊಬ್ಬರ ಇತ್ಯಾದಿ ಬಳಸಬಹುದು. ಈ ಎಲ್ಲಾ ಗೊಬ್ಬರಗಳನ್ನು ಚೆನ್ನಾಗಿ ಕಾಂಪೋಸ್ಟೀಕರಿಸಿದ ನಂತರ ಪುಷ್ಠೀಕರಿಸಿ ಉಪಯೋಗಿಸಬಹುದು. ಪುಷ್ಠೀಕರಣಕ್ಕೆ ಜೀವಾಣುಗಳು, ಸೂಕ್ಷ್ಮ ಪೋಷಕಾಂಶಗಳನ್ನು ಬಳಸಬಹುದು. ಮಣ್ಣಿನಲ್ಲಿ ಸರಿಯಾದ ಪ್ರಮಾಣದಲ್ಲಿ ಸಾವಯವ ಅಂಶವಿದ್ದರೆ ಮಾತ್ರ ಕಬ್ಬಿಗೆ ಉಪಯೋಗಿಸಿದ ರಸಗೊಬ್ಬರಗಳ ಸಮರ್ಪಕ ಬಳಕೆಯಾಗುತ್ತದೆ ಮತ್ತು ರಸಗೊಬ್ಬರದ ಬಳಕೆ ಹೆಚ್ಚುತ್ತದೆ. ಜೊತೆಗೆ ಮಣ್ಣಿನ ಭೌತಿಕ ಗುಣಗಳು ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ, ಸ್ಥೂಲ ಸಾಂದ್ರತೆ, ಸಚ್ಚಿದ್ರತೆ, ನೀರು ಇಂಗುವಿಕೆಯು ಉತ್ತಮಗೊಳ್ಳುತ್ತವೆ ಹಾಗೂ ರಾಸಾಯನಿಕ ಗುಣಗಳಾದ- ಮಣ್ಣಿನ ಸಾವಯವ ಇಂಗಾಲದ ಅಂಶ, ಸಾರಜನಕ, ರಂಜಕ, ಪೊಟ್ಯಾಷ್ ಅಂಶಗಳು, ಸೂಕ್ಷ್ಮ ಪೋಷಕಾಂಶಗಳ ಸಹಿತ ಉತ್ತಮಗೊಳ್ಳುತ್ತವೆ. ಬಹಳ ಮುಖ್ಯವಾಗಿ ಮಣ್ಣಿನಲ್ಲಿ ಕ್ರಿಯಾಶೀಲವಾಗಿರುವ ಜೀವರಾಶಿ ಹೆಚ್ಚು ಪೋಷಕಾಂಶಗಳ ಬಿಡುಗಡೆಗೆ ಸಹಕಾರಿಯಾಗುತ್ತದೆ. ಮಣ್ಣಿನಲ್ಲಿರುವ ರೋಗಕಾರಕ ಸೂಕ್ಷ್ಮಜೀವಿಗಳು ಕಡಿಮೆಯಾಗಿ ಆರೋಗ್ಯವಾದ ಮಣ್ಣಿನ ನಿರ್ಮಾಣ ಮಾಡಿದಂತಾಗುತ್ತದೆ.

ಹಸಿರೆಲೆ ಗೊಬ್ಬರದ ಬಳಕೆ: ಕಬ್ಬಿನ ಬೆಳೆ ಪ್ರಾರಂಭವಾಗುವ ಮೊದಲು ಒಂದು ಹಸಿರೆಲೆ ಬೆಳೆದು ನಂತರ ಮಣ್ಣಿಗೆ ಸೇರಿಸಿದರೆ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಹಾಗೂ ಮುಂದಿನ ಕಬ್ಬಿನ ಬೆಳೆಗೆ ಅನುಕೂಲವಾಗುತ್ತದೆ. ಜೊತೆಗೆ ಹಸಿರೆಲೆ ಗೊಬ್ಬರದ ಜೀವರಾಶಿಯನ್ನು ಮಣ್ಣಿಗೆ ಸೇರಿಸಿದಾಗ ಯಥೇಚ್ಛವಾಗಿ ಪೋಷಕಾಂಶಗಳನ್ನು ಮಣ್ಣಿಗೆ ಸೇರಿಸುವುದರ ಜೊತೆಗೆ ಸಾವಯವ ಅಂಶವು ಮಣ್ಣಿಗೆ ಸೇರಿದಂತಾಗುತ್ತದೆ. ಹಸಿರೆಲೆ ಗೊಬ್ಬರಗಳನ್ನು ಕಬ್ಬಿನ ಬೆಳೆಗೆ ಪ್ರಾರಂಭವಾಗುವ ಮುಂಚೆ ಬೆಳೆಯುವುದರ ಜೊತೆಗೆ ಕಬ್ಬಿನ ನಾಟಿ ಮಾಡಿದ ನಂತರವೂ ಸಾಲುಗಳ ಮಧ್ಯೆ ಬಿತ್ತನೆ ಮಾಡಿ ಮಣ್ಣಿಗೆ ಸೇರಿಸಬಹುದು. ಹಸಿರೆಲೆ ಬೆಳೆಗಳನ್ನು ಹೂವಾಡುವ ಹಂತದಲ್ಲಿ ಮಣ್ಣಿನಲ್ಲಿ ಸೇರಿಸಲಾಗುವುದರಿಂದ ಪೋಷಕಾಂಶಗಳನ್ನು ಹೀರಿದಂತಹ ಅಂಶಗಳು ಮತ್ತೆ ಮಣ್ಣಿಗೆ ಸೇರುವುದರಿಂದ ಫಲವತ್ತತೆ ಹೆಚ್ಚಿಸಿದಂತಾಗುತ್ತದೆ.

ಚಂಬೆ, ಅಪ್ಸೆಣಬು ಮತ್ತು ದ್ವಿದಳ ಜಾತಿಗೆ ಸೇರಿದ ಕೆಲವು ಬೆಳೆಗಳನ್ನು ಹಸಿರೆಲೆ ಬೆಳೆಗಳಾಗಿ ಬೆಳೆದು ಮಣ್ಣಿಗೆ ಸೇರಿಸಬಹುದು. ಚಂಬೆ/ ಅಪ್ಸೆಣಬು ಬೀಜವನ್ನು ಎಕರೆಗೆ ೨೦ ಕಿ.ಗ್ರಾಂ ನಂತೆ ಉಪಯೋಗಿಸಿ ದಟ್ಟವಾಗಿ ಬಿತ್ತನೆ ಮಾಡಿದಾಗ ಹೆಚ್ಚಿನ ಜೀವರಾಶಿ (biomass) ಪಡೆಯಲು ಸಹಕಾರಿಯಾಗುತ್ತದೆ. ಹಸಿರೆಲೆ ಬೆಳೆಗಳನ್ನು ಕಬ್ಬಿನ ಜೊತೆಯಾಗಿಯೂ ಬೆಳೆದು ಪ್ರಾರಂಭದ ೫೦-೫೫ ದಿನಗಳಲ್ಲಿ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

ನಾಟಿ ಕಾಲ: ಕಬ್ಬಿನ ನಾಟಿಗೆ ಸೂಕ್ತವಾದ ಕಾಲವೆಂದರೆ, ಜೂನ್-ಜುಲೈ ಹಾಗೂ ಆಗಸ್ಟ್ ತಿಂಗಳುಗಳು. ಈ ಸಮಯದಲ್ಲಿ ನಾಟಿ ಮಾಡಿದ ಕಬ್ಬು ಹೆಚ್ಚು ಇಳುವರಿಯನ್ನು ಕೊಡುತ್ತದೆ. ಜುಲೈ, ಆಗಸ್ಟ್ ತಿಂಗಳಲ್ಲಿ ನಾಟಿ ಮಾಡಿದ ಕಬ್ಬು ಮುಂದಿನ ಅಕ್ಟೋಬರ್ ನಲ್ಲಿ ಹೂವಾಡುವವರೆಗೂ ಬೆಳವಣಿಗೆ ಅವಧಿಯಿದ್ದು, ಹೆಚ್ಚಿನ ಬೆಳವಣಿಗೆಗೆ ಅವಕಾಶವಿದ್ದು, ಹೆಚ್ಚಿನ ಇಳುವರಿ ಕೊಡುತ್ತದೆ. ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿಯೂ ಕಬ್ಬಿನ ನಾಟಿ ಕೈಗೊಳ್ಳಬಹುದು. ಕಡಿಮೆ ಹೂವಾಡುವ (ಸೂಲಂಗಿ ಬರುವ) ತಳಿಗಳನ್ನು ಜನವರಿ ತಿಂಗಳಿನಲ್ಲಿ ನಾಟಿಗೆ ಉಪಯೋಗಿಸಬಹುದು. ಮಧ್ಯಮಾವಧಿ ತಳಿಗಳನ್ನು ಜುಲೈ-ಆಗಸ್ಟ್ ತಿಂಗಳಲ್ಲಿ ನಾಟಿ ಮಾಡಿ ಅಕ್ಟೋಬರ್ ತಿಂಗಳಲ್ಲಿ ಕಟಾವು ಮಾಡಿದರೆ ಹೆಚ್ಚಿನ ಇಳುವರಿ ಮತ್ತು ಸಕ್ಕರೆ ಅಂಶ ಪಡೆಯಲು ಸಹಕಾರಿಯಾಗುತ್ತದೆ.

ಕಬ್ಬಿನ ನಾಟಿ ಪದ್ಧತಿಗಳು

ಸರಿಯಾದ ನಾಟಿ ಪದ್ಧತಿ ಮತ್ತು ಉತ್ತಮ ಸಸ್ಯ ಸಂಖ್ಯೆ ಕಾಪಾಡುವುದು ಇಳುವರಿ ಹೆಚ್ಚಿಸುವಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತವೆ.

ಅ) ಸಾಲು ಬೋದು ಪದ್ಧತಿ

ಸಾಮಾನ್ಯವಾಗಿ ಕಬ್ಬನ್ನು ಅಚ್ಚುಕಟ್ಟು ಪ್ರದೇಶದಲ್ಲಿ ಸಾಲು ಬೋದು ಪದ್ಧತಿಯಲ್ಲಿ ನಾಟಿ ಮಾಡಲಾಗುತ್ತದೆ. ಭೂಮಿಯನ್ನು ಚೆನ್ನಾಗಿ ೨-೩ ಬಾರಿ ಉಳುಮೆ ಮಾಡಿ ಚೆನ್ನಾಗಿ ಹದ ಮಾಡಿದ ನಂತರ ಸಾಲುಗಳನ್ನು ತೆಗೆಯಬೇಕು. ಸಾಮಾನ್ಯವಾದ ಶಿಫಾರಸ್ಸಿನಂತೆ ೩ ಅಡಿ ಅಂತರದಲ್ಲಿ ಕೂಪರ್‌ನ ಸಹಾಯದಿಂದ ಒಂದು ಅಡಿ ಆಳದ ಸಾಲುಗಳನ್ನು ತೆಗೆಯಬೇಕು. ಟ್ರಾಕ್ಟರ್ ಉಪಯೋಗಿಸಿದಲ್ಲಿ ಸರಿಯಾದ ಆಳಕ್ಕೆ ಸಾಲುಗಳನ್ನು ತೆಗೆಯಲು ಅನುಕೂಲವಾಗುತ್ತದೆ. ನಾಟಿ ಮಾಡುವಾಗ ೩ ಕಣ್ಣಿನ ಬಿತ್ತನೆ ತುಂಡುಗಳನ್ನು ಎಕರೆಗೆ ೧೦೦೦೦ -೧೨೦೦೦ ದಂತೆ ನಾಟಿ ಮಾಡಬೇಕು. ನಾಟಿ ಮಾಡುವಾಗ ಮಧ್ಯದ ಕಣ್ಣು ಪಕ್ಕಕ್ಕೆ ಬರುವಂತೆ ನೆಡಬೇಕು. ಇದರಿಂದ ಹೆಚ್ಚಿನ ಮೊಳಕೆ ಪ್ರಮಾಣ ನಿರೀಕ್ಷಿಸಬಹುದು. ಹೆಚ್ಚು ತೆಂಡೆ ಒಡೆಯುವ ತಳಿಗಳಿಗೆ ದೀರ್ಘ ಅಂತರದ ನಾಟಿಯನ್ನು ಇತ್ತೀಚೆಗೆ ಶಿಫಾರಸ್ಸು ಮಾಡಲಾಗಿದೆ. ೩ ಅಡಿ ಅಥವಾ ೫ ಅಡಿ ಅಂತರ ನಾಟಿಯಲ್ಲಿ ಇಳುವರಿಯಲ್ಲಿ ಅಂತಹ ವ್ಯತ್ಯಾಸ ಕಂಡು ಬರದ ಕಾರಣ ಮತ್ತು ಅಗಲ ಸಾಲು ನಾಟಿಯಲ್ಲಿ ಹೆಚ್ಚಿನ ಅನುಕೂಲವಾಗುವುದರಿಂದ ಈ ನಾಟಿ ಪದ್ಧತಿ ಹೆಚ್ಚು ಲಾಭಕರ.

ಬ) ಐದು ಅಡಿ ಅಂತರದ ನಾಟಿ

ಸಂಶೋಧನಾ ಫಲಿತಾಂಶದ ಪ್ರಕಾರ ೩ ಮತ್ತು ೫ ಅಡಿ ಅಂತರದ ನಾಟಿ ಪದ್ಧತಿಗಳ ನಡುವೆ ಇಳುವರಿಯಲ್ಲಿ ಗಣನೀಯವಾದ ವ್ಯತ್ಯಾಸವಿಲ್ಲದಿರುವುದರಿಂದ ೫ ಅಡಿ ಅಂತರದ ಕಬ್ಬಿನ ನಾಟಿ ಹೆಚ್ಚು ಅನುಕೂಲಕರ. ೫ ಅಡಿ ಅಂತರದ ನಾಟಿಯಲ್ಲಿ ಶೇ.೨೫ ರಷ್ಟು ಬಿತ್ತನೆ ಬೀಜದ ಉಳಿತಾಯ, ಕಬ್ಬಿನ ಸಾಲಿನ ನಡುವೆ ಹೆಚ್ಚಿನ ಅಂತರವಿರುವುದರಿಂದ ಹೆಚ್ಚಿನ ಅಂತರ ಬೆಳೆಗಳ ಬಿತ್ತನೆಗೆ ಅವಕಾಶ, ಕಬ್ಬಿನ ಸಾಲುಗಳ ನಡುವೆ ಬೆಳೆದ ಹಸಿರೆಲೆ ಬೆಳೆಗಳನ್ನು ಮಣ್ಣಿನಲ್ಲಿ ಸೇರಿಸಲು ಪವರ್ ಟಿಲ್ಲರ್‌ಗಳ ಬಳಕೆ, ಕಟಾವಾದ ನಂತರ ಸುಲಭ ತರಗು ನಿರ್ವಹಣೆ, ಬಿಳಿಉಣ್ಣೆ ಹೇನಿನ ಕಡಿಮೆ ಬಾಧೆ ಹಾಗೂ ಸುಲಭ ನಿರ್ವಹಣೆ ಇವು ಮುಖ್ಯ ಅನುಕೂಲಗಳು.

ಕಳೆ ನಿರ್ವಹಣೆ

ಕಬ್ಬಿನ ನಾಟಿಗೆ ಮುಖ್ಯ ಭೂಮಿಯಲ್ಲಿ ೨-೩ ಬಾರಿ ಆಳವಾಗಿ ಉಳುಮೆ ಮಾಡಿ ಕಳೆ ಬೀಜಗಳನ್ನು ನಾಶಪಡಿಸಬೇಕು. ಜೊತೆಗೆ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರ / ಕಾಂಪೋಸ್ಟ್ ಉಪಯೋಗಿಸಬೇಕು. ಕಳೆ ಬೀಜಗಳು ಸಾವಯವ ಗೊಬ್ಬರಗಳಿಂದ ಬರುವ ಸಾಧ್ಯತೆ ಹೆಚ್ಚು.

ಕಳೆ ನಿರ್ವಹಣೆಗೆ ಕಳೆನಾಶಕಗಳನ್ನು ಉಪಯೋಗಿಸುವುದು. ನಾಟಿ ಮಾಡಿದ ೩-೫ ದಿನಗಳಲ್ಲಿ ಉದಯಪೂರ್ವ ಕಳೆನಾಶಕವಾಗಿರುವ ಅಟ್ರಾಜಿನ್ ಶೇ. ೫೦ರಷ್ಟು ಪುಡಿಯನ್ನು ಎಕರೆಗೆ ೧ ಕಿ.ಗ್ರಾಂನಂತೆ ಅಥವಾ ಮೆಟ್ರಿಬ್ಯೂಜಿನ್ ಶೇ. ೭೦ರಷ್ಟು ಪುಡಿಯನ್ನು ಎಕರೆಗೆ ೬೦೦ ಗ್ರಾಂನಂತೆ ೩೦೦ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಿಂಪಡಿಸುವಾಗ ಸಾಕಷ್ಟು ತೇವಾಂಶ ಇರಬೇಕು. ಜೊತೆಗೆ ಸಿಂಪಡಿಸಿದ ಜಾಗವನ್ನು ತುಳಿಯದೆ ಹಿಮ್ಮುಖವಾಗಿ ಚಲಿಸಬೇಕು. ಈ ರೀತಿಯಿಂದ ಪ್ರಾರಂಭದ ೨೫-೩೦ ದಿನಗಳು ಕಳೆ ನಿಯಂತ್ರಣದಲ್ಲಿಡಬಹುದು. ನಂತರ ಕಬ್ಬಿನ ಸಾಲಿನಲ್ಲಿಯ ಕಳೆಯನ್ನು ಕೈಯಿಂದ ತೆಗೆಯಬೇಕು ಹಾಗೂ ಉದಯೋತ್ತರ ಕಳೆನಾಶಕವಾದ ೨, ೪ ಡಿ ಸೋಡಿಯಂ ಹರಳನ್ನು ಎಕರೆಗೆ ೧ ಕಿ.ಗ್ರಾಂ ನಂತೆ ಸಿಂಪರಣೆ ಮಾಡಿದರೆ ಅಗಲ ಎಲೆ ಕಳೆಗಳನ್ನು ನಿರ್ವಹಣೆ ಮಾಡಬಹುದು. ೨-೩ ಬಾರಿ ಅಂತರ ಬೇಸಾಯ ಮಾಡುವುದರಿಂದಲೂ ಸಹ ಕಳೆ ನಿರ್ವಹಣೆ ಸಾಧ್ಯ. ಜೊತೆಗೆ ಗಾಳಿಯಾಡುವಿಕೆ ಸಾಧ್ಯವಾಗಿ ಬೇರುಗಳ ಬೆಳವಣಿಗೆ ಉತ್ತಮವಾಗುತ್ತದೆ.

ಮಿಳ್ಳೆ ಬಳ್ಳಿ (ಐಪೋಮಿಯ) ಕಳೆ ಸಮಸ್ಯೆ ಇರುವ ಪ್ರದೇಶದಲ್ಲಿ ಕೊನೆಯ ಸಲ ಅಂತರ ಬೇಸಾಯ ಮಾಡಿ ಮಣ್ಣು ಏರು ಹಾಕುವಾಗ (ನಾಟಿಯಾದ 3 ½ ತಿಂಗಳಿಗೆ) ಅಟ್ರಾಜಿನ್ / ಮೆಟ್ರಿಬ್ಯೂಜಿನ್ ಕಳೆನಾಶಕವನ್ನು ಮೇಲೆ ಹೇಳಿದ ರೀತಿ ಇನ್ನೊಮ್ಮೆ ಸಿಂಪಡಿಸುವುದರಿಂದ ನಿಯಂತ್ರಣದಲ್ಲಿ ಇಡಬಹುದು.

ಕಬ್ಬಿನೊಡನೆ ಅಂತರ ಬೆಳೆಗಳನ್ನು ಬಿತ್ತನೆ ಮಾಡಿದಾಗ ೧ ಲೀಟರ್ ಅಲಾಕ್ಲೋರ್ ಕಳೆನಾಶಕವನ್ನು ೩೦೦ ಲೀಟರ್‌ನಲ್ಲಿ ಬೆರೆಸಿ ಸಿಂಪಡಿಸಬೇಕು.

ಸಮಗ್ರ ಪೋಷಕಾಂಶಗಳ ನಿರ್ವಹಣೆ

ಕಬ್ಬು ದೀರ್ಘಾವಧಿ ಬೆಳೆಯಾದ್ದರಿಂದ ಪೋಷಕಾಂಶಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಸಾಮಾನ್ಯವಾದ ಬೆಳೆ ೧ ಟನ್ ಕಬ್ಬಿನ ಕಟಾವಿಗೆ ಸುಮಾರು ೫ ಕಿ.ಗ್ರಾಂ ಸಾರಜನಕ, ೧½ ಕಿ.ಗ್ರಾಂ ರಂಜಕ, ಮತ್ತು ೫½ ಕಿ.ಗ್ರಾಂ ಪೊಟ್ಯಾಷ್ ಮುಖ್ಯ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ ಮತ್ತು ಈ ಪೋಷಕಾಂಶಗಳು ಮಣ್ಣಿನಲ್ಲಿ ಲಭ್ಯವಿರುವಂತೆ ಮಾಡುವುದರಿಂದ ಸುಸ್ಥಿರ ಇಳುವರಿ ಪಡೆಯಲು ಸಾಧ್ಯ. ಸಕ್ಕರೆ ಕಾರ್ಖಾನೆ ಮಡ್ಡಿ ಗೊಬ್ಬರವನ್ನು ಕಾಂಪೋಸ್ಟೀಕರಿಸಿ ಬಳಸುವುದರಿಂದ ಒಳ್ಳೆಯ ಕಬ್ಬಿನ ಬೆಳೆ ನಿರೀಕ್ಷಿಸಬಹುದು. ಮಡ್ಡಿ ಗೊಬ್ಬರದಲ್ಲಿ ಶೇ. ೧.೨-೧.೩ ಸಾರಜನಕ, ಶೇ. ೨.೫-೩.೦ ರಂಜಕ, ಶೇ. ೧.೫೦ ಪೊಟ್ಯಾಷ್ ಅಂಶಗಳಿರುವುದರ ಜೊತೆಗೆ ಸೂಕ್ಷ್ಮ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಮಡ್ಡಿ ಗೊಬ್ಬರವನ್ನು ಕಾಂಪೋಸ್ಟೀಕರಿಸದೆ ಉಪಯೋಗಿಸಬಾರದು. ಇದು ಬೆಳೆಯ ಬೆಳವಣಿಗೆಯ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತದೆ.

ಅಂತರ ಬೆಳೆಗಳನ್ನು ಬೆಳೆಯುವುದು

ದ್ವಿದಳ ಜಾತಿಗೆ ಸೇರಿದ ಅಂತರ ಬೆಳೆಗಳಾದ ತಿಂಗಳ ಹುರುಳಿ, ಸೋಯಾ ಅವರೆ ಬೆಳೆಗಳನ್ನು ಅಂತರ ಬೆಳೆಗಳಾಗಿ ಬೆಳೆಯುವುದರಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರ ಜೊತೆಗೆ ಈ ಬೆಳೆಗಳಿಂದ ಹೆಚ್ಚಿನ ವರಮಾನ ನಿರೀಕ್ಷಿಸಬಹುದು. ತಿಂಗಳ ಹುರುಳಿ, ತರಕಾರಿಯಾಗಿ ಹಾಗೂ ಸೋಯಾ ಅವರೆ ಕಾಳು ಕಟಾವಾದ ನಂತರ ಬೆಳೆ ಉಳಿಕೆಯನ್ನು ಮಣ್ಣಿಗೆ ಸೇರಿಸುವುದರಿಂದ ಹೆಚ್ಚಿನ ಸಾವಯವ ಅಂಶ ಮಣ್ಣಿಗೆ ಸೇರಿಸಿದಂತಾಗುತ್ತದೆ.

ಬೆಳೆ ತಿಂಗಳ ಹುರುಳಿ ಸೋಯಾ ಅವರೆ
ತಳಿಗಳು ಬೀಜ (ಎಕರೆಗೆ) ೨೦ ಕಿ.ಗ್ರಾಂ ೧೦ ಕಿ.ಗ್ರಾಂ
ಗೊಬ್ಬರ (ಎಕರೆಗೆ) - ೪:೧೦:೫ ಕಿ.ಗ್ರಾಂ
ನಿರೀಕ್ಷಿತ ಇಳುವರಿ (ಎಕರೆಗೆ) ೧೨ ಕ್ವಿಂಟಾಲ್ ಸಾ.ರಂ.ಪೊ ೨.೫-೪ ಕ್ವಿಂಟಾಲ್

ಜೈವಿಕ ಗೊಬ್ಬರಗಳು

ಸಾರಜನಕ ಸ್ಥಿರೀಕರಿಸುವ ಗೊಬ್ಬರಗಳಾದ ಅಜಟೋಬ್ಯಾಕ್ಟರ್, ಅಜೋಸ್ಪೈರುಲಂನ್ನು ಎಕರೆಗೆ ೧ ಕಿ.ಗ್ರಾಂನಂತೆ ೨ ಸಮ ಭಾಗಗಳಾಗಿ ಮಾಡಿ ನಾಟಿ ಮಾಡಿದ ೩೦ ಮತ್ತು ೬೦ ದಿನಗಳಲ್ಲಿ ೫೦ ಕಿ.ಗ್ರಾಂ ಕೊಟ್ಟಿಗೆ ಗೊಬ್ಬರದ ಜೊತೆ ಮಿಶ್ರಣ ಮಾಡಿ ಕಬ್ಬಿನ ಸಾಲುಗಳ ಪಕ್ಕದಲ್ಲಿ ತೆಗೆದ ನೇಗಿಲಿನ ಸಾಲಿನಲ್ಲಿ ಹಾಕಿ ಮಣ್ಣು ಮುಚ್ಚಬೇಕು. ಸಾರಜನಕ ಜೈವಿಕ ಗೊಬ್ಬರ ಉಪಯೋಗದಿಂದ ಶೇ. ೧೫ರಷ್ಟು ಕಬ್ಬಿನ ಇಳುವರಿ ಹೆಚ್ಚಿಸಬಹುದಲ್ಲದೆ ಶೇ. ೨೦-೨೫ರಷ್ಟು ಸಾರಜನಕ ಗೊಬ್ಬರದ ಬಳಕೆಯಲ್ಲಿ ಉಳಿತಾಯ ಮಾಡಬಹುದಾಗಿದೆ. ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿ ಅಜೋಲ ಗೊಬ್ಬರ ಹಾಗೂ ಜೇಡಿ ಹಾಗೂ ಕಪ್ಪು ಮಣ್ಣಿನಲ್ಲಿ ಅಜೋಸ್ಪೈರುಲಂ ಗೊಬ್ಬರವನ್ನು ಉಪಯೋಗಿಸಬಹುದು. ನಾಟಿ ಕಬ್ಬಿಗೆ ಅಜಟೋಬ್ಯಾಕ್ಟರ್ ಮತ್ತು ಕೂಳೆ ಬೆಳೆಗೆ ಅಜೋಸ್ಪೈರುಲಂ ಉಪಯೋಗಿಸುವುದು ಉತ್ತಮ.

ಎಕರೆಗೆ ೪ ಕಿ.ಗ್ರಾಂ ನಂತೆ ರಂಜಕ ಕರಗಿಸುವ ಜೈವಿಕ ಗೊಬ್ಬರಗಳಾದ ಅಗ್ರೋಬ್ಯಾಕ್ಟೀರಿಯಂ ರೇಡಿಯೋಬ್ಯಾಕ್ಟರ್ ಅಥವಾ ಬ್ಯಾಸಿಲಸ್ ತುರೆಂಜೆನೆಸಿಸ್ ಅನ್ನು ನಾಟಿ ಮಾಡಿದ ೩೦ ದಿನಗಳ ನಂತರ ಕೊಟ್ಟಿಗೆ ಗೊಬ್ಬರ/ ಕಾಂಪೋಸ್ಟ್ ಜೊತೆ ಬೆರೆಸಿ ಮಣ್ಣಿನಲ್ಲಿ ಸೇರಿಸುವುದು. ರಂಜಕ ಕರಗಿಸುವ ಜೈವಿಕ ಗೊಬ್ಬರವು ಮಣ್ಣಿನಲ್ಲಿ ಸ್ಥಿರೀಕರಿಸಿರುವ ರಂಜಕವನ್ನು ಕರಗಿಸಿ ಬೆಳೆಗೆ ಸಿಗುವ ರೂಪಕ್ಕೆ ಮಾರ್ಪಾಡು ಮಾಡಿ ಒದಗಿಸುತ್ತದೆ.

ಜೈವಿಕ ಗೊಬ್ಬರವನ್ನು ಸಕ್ಕರೆ ಕಾರ್ಖಾನೆ ಮಡ್ಡಿ ಗೊಬ್ಬರದ (೨ಟನ್ ಎಕರೆಗೆ) ಜೊತೆಯಲ್ಲಿ ಉಪಯೋಗಿಸಿದಲ್ಲಿ ಹೆಚ್ಚು ಫಲಕಾರಿಯಾಗುತ್ತದೆ.

ರಸಗೊಬ್ಬರಗಳು

ಮುಖ್ಯ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಷ್ ಗೊಬ್ಬರಗಳನ್ನು ಕಬ್ಬಿಗೆ ಒದಗಿಸಬೇಕಾಗುತ್ತದೆ. ಸಾಮಾನ್ಯ ಶಿಫಾರಸ್ಸಿನಂತೆ ಎಕರೆಗೆ ೧೦೦ ಕಿ.ಗ್ರಾಂ ಸಾರಜನಕ, ೪೦ ಕಿ.ಗ್ರಾಂ ರಂಜಕ ಮತ್ತು ೫೦ ಕಿ.ಗ್ರಾಂ ಪೊಟ್ಯಾಷ್ ಒದಗಿಸುವ ರಸಗೊಬ್ಬರಗಳನ್ನು ಕೆಳಗಿನ ಕೋಷ್ಟಕದಲ್ಲಿರುವಂತೆ ಬಳಸಬೇಕು.

ರಸಗೊಬ್ಬರ ನಾಟಿಗೆ ೬ ವಾರಗಳ ನಂತರ ೧೦ ವಾರಗಳ ನಂತರ ೧೪ ವಾರಗಳ ನಂತರ ಸಾರಜನಕ ೧೦ ಕಿ.ಗ್ರಾಂ (ಯೂರಿಯಾ ೨೨ ಕಿ.ಗ್ರಾಂ) ೨೦ (೪೪ ಕಿ.ಗ್ರಾಂ ಯೂರಿಯಾ) ೩೦ (೬೬ ಕಿ.ಗ್ರಾಂ ಯೂರಿಯಾ) ೪೦ (೮೮ ಕಿ.ಗ್ರಾಂ ಯೂರಿಯಾ) ರಂಜಕ ೪೦ (೨೫೦ ಕಿ.ಗ್ರಾಂ ಸೂಪರ್ ಪಾಸ್ಪೇಟ್) - - - ಪೊಟ್ಯಾಷ್ ೫೦ ಕೆ.ಜಿ. (೮೦ ಕಿ.ಗ್ರಾಂ ಮ್ಯೂರೇಟ್ ಪೊಟ್ಯಾಷ್) - - -

ರಸಗೊಬ್ಬರಗಳನ್ನು ಸಮಗ್ರವಾಗಿ ಬೇರೆ ಬೇರೆ ಸಾವಯವ ವಸ್ತುಗಳ ಸಹಿತ ಉಪಯೋಗಿಸುವಾಗ ರಸಗೊಬ್ಬರದ ದಕ್ಷ ಬಳಕೆಯಾಗುತ್ತದೆ.

ನೀರಿನ ನಿರ್ವಹಣೆ

ಕಬ್ಬಿನ ಉತ್ಪಾದನೆ, ಮಣ್ಣು ಮತ್ತು ಸ್ಥಳೀಯ ವಾತಾವರಣದ ಆಧಾರದ ಮೇಲೆ ೧೮೦೦-೨೦೦೦ ಮಿ.ಮೀ.ನಷ್ಟು ನೀರು ಬೇಕಾಗುತ್ತದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ಮರಳು ಮಿಶ್ರಿತ ಕೆಂಪು ಮಣ್ಣಿಗೆ ಪ್ರತಿ ನೀರಾವರಿಗೆ ಸುಮಾರು ೪೦ ಮಿ.ಮೀ. ನೀರನ್ನು ಕೊಡಬೇಕಾಗುತ್ತದೆ. ಕಬ್ಬಿನ ಸಂಧಿಗ್ಧ ಹಂತಗಳಲ್ಲಿ ಕೆಳಗೆ ತಿಳಿಸಿರುವಂತೆ ನೀರನ್ನು ಒದಗಿಸಬೇಕು. ನೀರಾವರಿ ಪದ್ಧತಿಗಳಲ್ಲಿ ಇತ್ತೀಚೆಗೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿದರೆ ನೀರಿನಲ್ಲಿ ಉಳಿತಾಯವಾಗುವುದಲ್ಲದೇ ಕಬ್ಬಿನ ಇಳುವರಿ ಹೆಚ್ಚಿಸಲು ಸಹಕಾರಿಯಾಗುತ್ತದೆ.

ಬೆಳವಣಿಗೆ ಹಂತ ನೀರು ಕೊಡುವ ಅಂತರ
ನಾಟಿಯಾದಾಗ (೩೫ ದಿನಗಳವರೆಗೆ) ೭ ದಿನಗಳಿಗೊಮ್ಮೆ
ತೆಂಡೆ ಒಡೆಯುವ ಹಂತ (೩೬-೧೨೦ ದಿನಗಳವರೆಗೆ) ೧೦ ದಿನಗಳಿಗೊಮ್ಮೆ
ತೀವ್ರ ಬೆಳವಣಿಗೆ ಹಂತ (೧೨೧-೨೭೦ ದಿನಗಳವರೆಗೆ) ೭ ದಿನಗಳಿಗೊಮ್ಮೆ
ಮಾಗುವ ಹಂತ (೨೭೧ ದಿವಸಗಳ ನಂತರ) ೧೫ ದಿನಗಳಿಗೊಮ್ಮೆ

ನೀರಿನ ಅಭಾವವಿರುವ ಪರಿಸ್ಥಿತಿಯಲ್ಲಿ ಹೆಚ್ಚು ನೀರಿನ ಬೇಡಿಕೆ ಇರುವ ಬೆಳೆಯಾದ ಕಬ್ಬಿನ ಬೇಸಾಯದಲ್ಲಿ ನೀರಿನ ಮಿತ ಬಳಕೆಯ ತಂತ್ರಜ್ಞಾನವನ್ನು ಉಪಯೋಗಿಸಿದರೆ ಮಾತ್ರ ಕಬ್ಬಿನ ಸುಸ್ಥಿರ ಇಳುವರಿ ಸಾಧ್ಯ.

ತರಗು ನಿರ್ವಹಣೆ

ತರಗನ್ನು ಅಚ್ಛಾದಿಸುವುದರಿಂದ ತರಗಿಲ್ಲದ ಕಬ್ಬಿನ ಗದ್ದೆಗೆ ಹೋಲಿಸಿದಾಗ ಮಣ್ಣಿನಲ್ಲಿರುವ ತೇವಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗದಂತೆ ದೀರ್ಘ ಕಾಲದವರೆಗೆ ತಡೆಯಲು ಸಹಾಯವಾಗುತ್ತದೆ. ಇದರ ಜೊತೆಗೆ ಸಾಲು ಬಿಟ್ಟು ಸಾಲು ನೀರು ಹಾಯಿಸುವುದು ಹೆಚ್ಚು ಪ್ರಯೋಜನಕರ. ಇದರಿಂದ ಶೇ. ೪೦ರಷ್ಟು ನೀರು ಭೂಮಿಯಲ್ಲಿ ಸಂರಕ್ಷಣೆ ಯಾಗಿ ಶೇ. ೨೦ ರಷ್ಟು ಇಳುವರಿ ಹೆಚ್ಚಳವಾಗುತ್ತದೆ.

ನೀರಿನ ಕೊರತೆ ಇದ್ದಾಗ ಕಬ್ಬಿನ ನಿರ್ವಹಣೆ

೧. ಕಬ್ಬು ಬೆಳೆಯುವ ಪ್ರಾರಂಭ ಹಂತದಲ್ಲಿದ್ದಾಗ ತರಗಿನ ಹೊದಿಕೆಯಿಂದ ನೀರನ್ನು ಸಂರಕ್ಷಿಸಬಹುದು ಇದರಿಂದ ಕಳೆ ನಿಯಂತ್ರಣ ಸಾಧ್ಯವಾಗುತ್ತದೆ.
೨. ಬೇಸಿಗೆ ಪ್ರಾರಂಭವಾಗುವುದಕ್ಕೂ ಮುಂಚೆ ಕಬ್ಬಿಗೆ ನೀರಾವರಿ ಅಂತರವನ್ನು ಸ್ವಲ್ಪ ಸ್ವಲ್ಪ ಹೆಚ್ಚಿಸುವುದರಿಂದ ನೀರಿನ ಅಭಾವದ ಪರಿಸ್ಥಿತಿಗೆ ಕಬ್ಬು ಹೊಂದಿಕೊಳ್ಳುತ್ತದೆ.
೩. ಕಬ್ಬಿನ ತರಗನ್ನು ಸಾಲುಗಳ ಮಧ್ಯೆ ಸಾಲು ಬಿಟ್ಟು ಸಾಲಿನಲ್ಲಿ ಹರಡುವುದರಿಂದ ತೇವಾಂಶ ಆವಿಯಾಗುವುದನ್ನು ತಡೆಯಬಹುದು. ಇದರಿಂದ ಶೇ.೧೪ ರಷ್ಟು ನೀರಿನ ಸಂರಕ್ಷಣೆಯಾಗಿ ಶೇ.೨೦ ರಷ್ಟು ಇಳುವರಿ ಹೆಚ್ಚಿಸಬಹುದಾಗಿದೆ.
೪. ಎರಡು ಸಾಲು (ಜೋಡಿ ಸಾಲು) ಬಿತ್ತನೆ ನಾಟಿಯು ಶೇ.೧೪ ರಷ್ಟು ಇಳುವರಿ ಹೆಚ್ಚಿಸುವುದರ ಜೊತೆಗೆ ಶೇ.೩೪ ರಷ್ಟು ನೀರನ್ನು ಉಳಿತಾಯ ಮಾಡಬಹುದು.
೫. ಎಕರೆಗೆ ಶೇ.೨೫ ರಷ್ಟು ಹೆಚ್ಚಿನ ಪೊಟ್ಯಾಷ್ ಒದಗಿಸುವುದರಿಂದ ಕಬ್ಬಿನ ಬೆಳೆಗೆ ಬರವನ್ನು ತಡೆಯುವ ಶಕ್ತಿ ಬರುತ್ತದೆ. ಜೊತೆಗೆ ಶೇ. ೨ರ ತೀಕ್ಷ್ಣತೆಯುಳ್ಳ ಯೂರಿಯಾ ಮತ್ತು ಪೊಟ್ಯಾಷ್ ಸಿಂಪರಣೆ ಮಾಡುವುದರಿಂದ ಕಬ್ಬಿನಲ್ಲಿ ಬರ ನಿರೋಧಕತೆ ಹೆಚ್ಚಿಸಬಹುದು.
೬. ಕಬ್ಬಿನ ಬಿತ್ತನೆ ತುಂಡುಗಳನ್ನು ನಾಟಿಗೆ ಮುಂಚಿತವಾಗಿ ಸುಣ್ಣದ ತಿಳಿ ನೀರಿನಲ್ಲಿ ಉಪಚರಿಸಿದಾಗ ಬರ ನಿರೋಧಕ ಶಕ್ತಿ ಬರುತ್ತದೆ. ಇದಕ್ಕೆ ೮೦ ಗ್ರಾಂ ಸುಣ್ಣವನ್ನು ೪೦೦ ಲೀಟರ್ ನೀರಿನಲ್ಲಿ ಕರಗಿಸಿ ಉಪಚರಿಸಬೇಕು. ಕಬ್ಬಿನ ಬೇರಿನ ಬೆಳವಣಿಗೆಗೂ ಸಹಕಾರಿಯಾಗುತ್ತದೆ.
೭. ಶೇ.೫ ರಷ್ಟು ಕೆವೋಲಿನ್ ಜೇಡಿಮಣ್ಣನ್ನು ಸಿಂಪಡಿಸುವುದರಿಂದ ಕಬ್ಬಿನ ಎಲೆಗಳ ಮುಖಾಂತರ ಆವಿಯಾಗುವ ನೀರನ್ನು ಸ್ವಲ್ಪ ಮಟ್ಟಿಗೆ ತಪ್ಪಿಸಬಹುದು.
೮. ಯಥೇಚ್ಛವಾಗಿ ಸಾವಯವ ವಸ್ತುಗಳನ್ನು ಉಪಯೋಗಿಸುವುದರಿಂದ ಮಣ್ಣಿಗೆ ನೀರನ್ನು ಹಿಡಿದಿಡುವ ಶಕ್ತಿ ಹೆಚ್ಚಿಸಬಹುದು. ನೀರುಗಾಲುವೆಗಳನ್ನು ಗಿಲಾವು ಮಾಡುವುದರಿಂದ ಸಾಗಾಣಿಕೆಯಲ್ಲಿ ನೀರು ಪೋಲಾಗುವುದನ್ನು ಶೇ.೧೫ ರಷ್ಟು ತಪ್ಪಿಸಬಹುದು.

ಕಬ್ಬಿನ ಕಟಾವು ನಿರ್ವಹಣೆ

ಕಬ್ಬಿನಲ್ಲಿ ಸಕ್ಕರೆ ಅಂಶವು ಮುಖ್ಯವಾಗಿ ಕಬ್ಬಿನ ತಳಿ, ನೀರಿನ ನಿರ್ವಹಣೆ, ರಾಸಾಯನಿಕ ಗೊಬ್ಬರಗಳ ಬಳಕೆ, ಕಬ್ಬಿನ ನಾಟಿ ಮತ್ತು ಕಟಾವಿನ ನಿರ್ವಹಣೆ, ಹವಾಮಾನ ಮತ್ತು ವಾತಾವರಣದ ಮೇಲೆ ಅವಲಂಬಿಸಿರುತ್ತದೆ. ಕಬ್ಬಿನ ವಯಸ್ಸು ಅಂದರೆ ಎಳಸು, ಮಾಗಿದ ಕಬ್ಬು, ಅತಿ ಮಾಗಿದ ಕಬ್ಬಾಗಿ ವಿಂಗಡಿಸಿದಾಗ ಎಳಸು ಕಬ್ಬಿನಲ್ಲಿ ಆಮ್ಲೀಯ ರಸವಾಗಿದ್ದು ರಸದ ಶುದ್ಧೀಕರಣ ಕಷ್ಟ ಸಾಧ್ಯವಾಗುತ್ತದೆ. ಗ್ಲೂಕೋಸ್ ಮತ್ತು ಫ್ರಕ್ಟೋಸ್ ಅಂಶಗಳು ಹೆಚ್ಚಿದ್ದು, ಸುಕ್ರೋಸ್ (ಸಕ್ಕರೆ) ಅಂಶ ಕಡಿಮೆ ಇರುತ್ತದೆ. ಸಕ್ಕರೆ/ಬೆಲ್ಲ ತಯಾರಿಕೆಗೆ ಇದು ಯೋಗ್ಯವಲ್ಲ. ಅತಿ ಬಲಿತ ಕಬ್ಬಿನಲ್ಲಿ ಸಕ್ಕರೆ ಅಂಶಗಳು ಹೆಚ್ಚಿರುತ್ತವೆ ಮತ್ತು ರಸದ ಶುದ್ಧತೆಯು ಕಡಿಮೆ ಇರುತ್ತದೆ. ಅಪಕರ್ಷಣ ಸಕ್ಕರೆ ಅಂಶ (ಗ್ಲೂಕೋಸ್ ಮತ್ತು ಫ್ರಕ್ಟೋಸ್) ಹೆಚ್ಚಾಗಿರುತ್ತದೆ. ಇದೂ ಸಹ ಸಕ್ಕರೆ ಉತ್ಪಾದನೆಗೆ ಯೋಗ್ಯವಾಗಿರುವುದಿಲ್ಲ. ಆದ್ದರಿಂದ ಕಬ್ಬಿನ ತಳಿಗಳಿಗನುಗುಣವಾಗಿ ಸರಿಯಾಗಿ ಮಾಗಿದ ಕಬ್ಬಿನಿಂದ ಹೆಚ್ಚಿನ ಸಕ್ಕರೆ ಪಡೆಯಲು ಸಾಧ್ಯ.

ಈ ಎಲ್ಲಾ ಬೇಸಾಯ ಕ್ರಮಗಳನ್ನು ರೈತರು ಅನುಸರಿಸಿದಲ್ಲಿ ಕಬ್ಬಿನಲ್ಲಿ ಹೆಚ್ಚಿನ ಎಕರೆವಾರು ಇಳುವರಿಯನ್ನು ಪಡೆಯಬಹುದಾಗಿದ್ದು, ಇಳುವರಿ ಸುಸ್ಥಿರತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ.

ಕಬ್ಬನ್ನು ಬಾಧಿಸುವ ಕೀಟಗಳು

ಆದಿ ಸುಳಿ ಕೊರೆಯುವ ಹುಳು: ಬಾಧೆ ಕಂಡುಬಂದಲ್ಲಿ ೨ ಮಿ.ಲೀ. ಕ್ಲೋರ್‌ಫೈರಿಫಾಸ್ ೨೦ ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು ಅಥವಾ ಟ್ರೈಕೋಗ್ರಾಮ ಪರತಂತ್ರ ಜೀವಿಗಳನ್ನು ಕಬ್ಬು ನೆಟ್ಟ ೪ನೇ ವಾರದಿಂದ ಪ್ರತಿ ಎಕರೆಗೆ ೬೦೦೦ ಪರತಂತ್ರ ಜೀವಿಗಳನ್ನು ಪ್ರತಿ ವಾರಕ್ಕೊಮ್ಮೆ ೫ ವಾರ ಬಿಡುಗಡೆ ಮಾಡುವುದು ಹಾಗೂ ಕಬ್ಬು ನೆಟ್ಟ ಒಂದೂವರೆ ತಿಂಗಳಿನಲ್ಲಿ ಬುಡಕ್ಕೆ ಮಣ್ಣು ಏರು ಹಾಕಿ ನೀರು ಹಾಯಿಸುವುದು.

ಆದಿ ಸುಳಿ ಕೊರೆಯುವ ಹುಳು: ಬಾಧೆ ಕಂಡುಬಂದಲ್ಲಿ ೨ ಮಿ.ಲೀ. ಕ್ಲೋರ್‌ಫೈರಿಫಾಸ್ ೨೦ ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು ಅಥವಾ ಟ್ರೈಕೋಗ್ರಾಮ ಪರತಂತ್ರ ಜೀವಿಗಳನ್ನು ಕಬ್ಬು ನೆಟ್ಟ ೪ನೇ ವಾರದಿಂದ ಪ್ರತಿ ಎಕರೆಗೆ ೬೦೦೦ ಪರತಂತ್ರ ಜೀವಿಗಳನ್ನು ಪ್ರತಿ ವಾರಕ್ಕೊಮ್ಮೆ ೫ ವಾರ ಬಿಡುಗಡೆ ಮಾಡುವುದು ಹಾಗೂ ಕಬ್ಬು ನೆಟ್ಟ ಒಂದೂವರೆ ತಿಂಗಳಿನಲ್ಲಿ ಬುಡಕ್ಕೆ ಮಣ್ಣು ಏರು ಹಾಕಿ ನೀರು ಹಾಯಿಸುವುದು.

ನೆತ್ತಿ ಸುಳಿ ಕೊರಕ: ಬಾಧೆ ಕಂಡುಬಂದಲ್ಲಿ ಮೊಟ್ಟೆಯ ಗುಂಪು ಹಾಗೂ ಬಾಧಿತ ಸುಳಿಗಳನ್ನು ಸಂಗ್ರಹಿಸಿ ನಾಶಮಾಡುವುದು, ಲಿಂಗಾಕರ್ಷಕ ಬಲೆಗಳನ್ನು ಸ್ಥಾಪಿಸಿ ಪತಂಗಗಳನ್ನು ಆಕರ್ಷಿಸಿ ನಾಶ ಮಾಡುವುದು ಹಾಗೂ ಬಿತ್ತನೆಯಾದ ೯೦ ದಿನಗಳ ನಂತರ ಪ್ರತಿವಾರ ಎಕರೆಗೆ ೨೦,೦೦೦ ದಂತೆ ಟ್ರೈಕೊಗ್ರಾಮ ಪರತಂತ್ರ ಜೀವಿಗಳನ್ನು ಬಿಡುಗಡೆ ಮಾಡಬೇಕು. ಬೆಳೆಗೆ ೧೫೦ ದಿನ ತುಂಬುವವರೆಗೂ ಪರತಂತ್ರ ಜೀವಿಗಳ ಬಿಡುಗಡೆಯನ್ನು ಮುಂದುವರಿಸಬೇಕು. ಪರಿಸರದಲ್ಲಿ ಐಸೋಟೀಮ ಎಂಬ ಪರೋಪಜೀವಿ ಸುಳಿಕೊರಕವನ್ನು ನಿಯಂತ್ರಿಸುವುದರಲ್ಲಿ ಪರಿಣಾಮಕಾರಿಯಾಗಿರುತ್ತದೆ. ಈ ಪರೋಪಜೀವಿಗೆ ಪ್ರೋತ್ಸಾಹ ಕೊಡುವುದು.

ಬಿಳಿ ಉಣ್ಣೆ ಹೇನು: ಬಾಧೆ ಕಂಡುಬಂದಲ್ಲಿ ೨ ಮಿ.ಲೀ. ಕ್ಲೋರ್‌ಪೈರಿಫಾಸ್ ೨೦ ಇ.ಸಿ. ಅಥವಾ ೧.೭ ಮಿ.ಲೀ. ಡೈಮಿಥೋಯೇಟ್ ೩೦ ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.

ಬಿಳಿ ಉಣ್ಣೆ ಹೇನು ಪೀಡಿತ ಪ್ರದೇಶದಲ್ಲಿ ನಿರೋಧಕ ಕಬ್ಬಿನ ತಳಿ ಅಭಿಮನ್ಯುವನ್ನು ಬೆಳೆಯುವುದು ಸೂಕ್ತ. ಇತರೆ ತಳಿಗಳನ್ನು ಹೆಚ್ಚು ಅಂತರ(೫ ಅಡಿ) ಸಾಲುಗಳಲ್ಲಿ ನೆಡುವುದು.

ಕಬ್ಬನ್ನು ಬಾಧಿಸುವ ರೋಗಗಳು

ಅನಾನಸ್ ರೋಗ: ಲಕ್ಷಣ ಕಂಡುಬಂದಲ್ಲಿ ೧ ಗ್ರಾಂ ಕಾರ್ಬೆಂಡಜಿಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಬಿತ್ತನೆ ತುಂಡುಗಳನ್ನು ೫ ನಿಮಿಷ ದ್ರಾವಣದಲ್ಲಿ ಅದ್ದಿ ನೆಡುವುದು.

ಎಲೆ ಚುಕ್ಕೆ ರೋಗ: ಲಕ್ಷಣ ಕಂಡುಬಂದಲ್ಲಿ ೨.೫ ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅಥವಾ ೨ ಗ್ರಾಂ ಮ್ಯಾಂಕೋಜೆಬ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು.

ಹುಲ್ಲು ಕಾಂಡ ರೋಗ: ಆರೋಗ್ಯವಂತ ಬಿತ್ತನೆ ತುಂಡುಗಳ ಆಯ್ಕೆ ಮಾಡಿ ಬಿಸಿ ನೀರಿನ ಬೀಜೋಪಚಾರ (೫೦೦ಸೆ-೨ ಗಂಟೆ), ಬಿಸಿ ಗಾಳಿ ಬೀಜೋಪಚಾರ (೫೪೦ಸೆ-೮ ಗಂಟೆ). ಅಂತರ್‌ವ್ಯಾಪಿ ಕೀಟನಾಶಕಗಳ ಸಿಂಪರಣೆ (೨ ಬಾರಿ ತಿಂಗಳಿಗೆ)ಯಿಂದ ನಿರ್ವಹಣೆ ಮಾಡಬಹುದು.

ಕಂದು ಚುಕ್ಕೆ ರೋಗ: ರೋಗ ನಿರೋಧಕ ಶಕ್ತಿಯುಳ್ಳ ತಳಿ ಸಿ.ಓ. ೬೨೧೭೫, ಸಿ.ಓ.೮೩೭೧, ಜೌಗು ಪ್ರದೇಶದಲ್ಲಿ ಸಮತೋಲನ ರಸಗೊಬ್ಬರಗಳನ್ನು ಸಮ ಪ್ರಮಾಣದಲ್ಲಿ ಬಳಸುವುದು. ಶೇ. ೦.೨ ಬ್ಲೈಟಾಕ್ಸ್ ಸಿಂಪರಣೆ. (೨ ಗ್ರಾಂ/ಲೀಟರ್ ನೀರಿನಲ್ಲಿ) ಈ ರೋಗವನ್ನು ನಿರ್ವಹಣೆ ಮಾಡಬಹುದು.

ಹಳದಿ ಎಲೆ ರೋಗ: ಆರೋಗ್ಯವಂತ ಬಿತ್ತನೆ ತುಂಡು ಮತ್ತು ಕೂಳೆ ಬೆಳೆಯಲ್ಲಿ ಉತ್ತಮ ಸಾವಯವ ಮತ್ತು ಪೋಷಕಾಂಶಗಳ ಬಳಕೆಯಿಂದ ನಿರ್ವಹಣೆ ಮಾಡಬಹುದು.