ನೇಗಿಲ ಮಿಡಿತ  ಸಂಪುಟ 6 ಸಂಚಿಕೆ 3

ನಮ್ಮ ವಿಶ್ವವಿದ್ಯಾಲಯ - ನಮ್ಮ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರಗಳು

ಜಯಲಕ್ಷ್ಮೀ ನಾರಾಯಣ ಹೆಗಡೆ ಮತ್ತು ಎಂ. ಸಿ. ಮಲ್ಲಿಕಾರ್ಜುನ,
೯೪೮೦೮೩೮೨೧೮
1

ಕೃಷಿಯಲ್ಲಿ ಅಭಿವೃದ್ಧಿಪಡಿಸಿದ ನವೀನ ತಂತ್ರಜ್ಞಾನಗಳನ್ನು ರೈತರಿಗೆ ಕೊಂಡೊಯ್ಯಲು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಯುವಕರಿಗೆ ಹಾಗೂ ಮಹಿಳೆಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ನವದೆಹಲಿಯಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ ದೇಶಾದ್ಯಂತ ಪ್ರತಿ ಜಿಲ್ಲೆಗೊಂದರಂತೆ ಒಟ್ಟು ೭೧೬ ಕೃಷಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಿರುತ್ತದೆ. ಇವುಗಳು, ಕೃಷಿ ತಂತ್ರಜ್ಞಾನಗಳನ್ನು ರೈತ ಮತ್ತು ರೈತ ಮಹಿಳೆಯರಿಗೆ, ಯುವಕ-ಯುವತಿಯರಿಗೆ ಹಾಗೂ ವಿಸ್ತರಣಾ ಕಾರ್ಯಕರ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳು ದೇಶದ ಕೃಷಿ ಮತ್ತು ಕೃಷಿ ಪೂರಕ ಉತ್ಪನ್ನಗಳನ್ನು ಹೆಚ್ಚಿಸುವುದರ ಜೊತೆಗೆ ರೈತರ ಸಾಮಾಜಿಕ ಮತ್ತು ಆರ್ಥಿಕ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಈ ಕೃಷಿ ವಿಜ್ಞಾನ ಕೇಂದ್ರಗಳು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು, ಭಾರತೀಯ, ಕೃಷಿ ಅನುಸಂಧಾನ ಪರಿಷತ್ತಿನ ನಿಯಂತ್ರಣದಲ್ಲಿ ಹಾಗೂ ಸರ್ಕಾರೇತರ ಸಂಸ್ಥೆಗಳಡಿಯಲ್ಲಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿವೆ. ಪ್ರತಿ ಕೇಂದ್ರದಲ್ಲಿ ೧೬ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು ಕೇಂದ್ರದ ಮುಖ್ಯಸ್ಥರಾಗಿದ್ದು, ೬ ವಿವಿಧ ವಿಷಯಗಳಲ್ಲಿ ಪರಿಣತಿ ಪಡೆದ ವಿಜ್ಞಾನಿಗಳು, ೩ ತಾಂತ್ರಿಕ ಸಿಬ್ಬಂದಿ ಹಾಗೂ ೬ ಇತರೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ.

3

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಕೃಷಿ ವಿಜ್ಞಾನ ಕೇಂದ್ರಗಳು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ, ಶಿವಮೊಗ್ಗದ ನವಿಲೆಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಮುಖ್ಯ ಆವರಣದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಬ್ಬೂರಿನಲ್ಲಿ, ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಕೃಷಿ ವಿಜ್ಞಾನ ಕೇಂದ್ರದ ಪ್ರಮುಖ ಚಟುವಟಿಕೆಗಳು

ತಂತ್ರಜ್ಞಾನದ ಮರುಪರಿಶೀಲನೆಗೆ ರೈತರ ತಾಕುಗಳಲ್ಲಿ ತಂತ್ರಜ್ಞಾನ ಪರೀಕ್ಷೆಗಳನ್ನು ಏರ್ಪಡಿಸುವುದು, ಉತ್ಪನ್ನ ಮಾಹಿತಿ ಪಡೆಯಲು ಹಾಗೂ ರೈತರ ಅಭಿಪ್ರಾಯ ತಿಳಿಯಲು ವಿವಿಧ ತಂತ್ರಜ್ಞಾನಗಳ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ರೈತರ ತಾಕುಗಳಲ್ಲಿ ಏರ್ಪಡಿಸುವುದು, ರೈತರಿಗೆ ಮತ್ತು ವಿಸ್ತರಣಾ ಕಾರ್ಯಕರ್ತರಿಗೆ ಅವಶ್ಯಕತೆಗೆ ಅನುಸಾರವಾಗಿ ನೂತನ ತಂತ್ರಜ್ಞಾನ ಹಾಗೂ ಮರುಪರಿಶೀಲನೆ, ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ನೂತನ ಕೃಷಿ ತಂತ್ರಜ್ಞಾನಗಳ ಜಾಗೃತಿಗಾಗಿ ಹಲವಾರು ಸೂಕ್ತ ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು, ರೈತರ ಅಗತ್ಯಕ್ಕನುಗುಣವಾಗಿ ಗುಣಮಟ್ಟದ ಬೀಜ, ಕಸಿಗಿಡಗಳು, ಜಾನುವಾರು ತಳಿಗಳು, ಪ್ರಾಣಿಜನ್ಯ ಉತ್ಪನ್ನಗಳು ಮತ್ತು ಜೈವಿಕ ಉತ್ಪನ್ನಗಳನ್ನು ಒದಗಿಸುವುದು, ಜಿಲ್ಲೆಯ ಕೃಷಿ ಆರ್ಥಿಕತೆಯ ಅಭಿವೃದ್ಧಿಗಾಗಿ ಶ್ರಮಿಸುವ ಸರ್ಕಾರಿ, ಖಾಸಗೀ ಹಾಗೂ ಸ್ವಯಂ ಪ್ರೇರಿತ ಸಂಸ್ಥೆಗಳಿಗೆ ಅಗತ್ಯವಿರುವ ಕೃಷಿ ತಂತ್ರಜ್ಞಾನಗಳ ಮಾಹಿತಿ ಹಾಗೂ ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸುವುದು ಈ ಕೇಂದ್ರಗಳ ಪ್ರಮುಖ ಚಟುವಟಿಕೆಗಳಾಗಿವೆ.

7

ಕೇಂದ್ರಗಳ ಇತರೆ ಚಟುವಟಿಕೆಗಳು

ರೈತ ಮತ್ತು ವಿಜ್ಞಾನಿಗಳ ಚರ್ಚಾಗೋಷ್ಠಿಗಳು, ರೈತರಿಗೆ ಸೂಕ್ತ ಮಾಹಿತಿ ಮತ್ತು ಸಲಹೆಗಳು, ಪ್ರಾತ್ಯಕ್ಷಿಕೆ ತಾಕುಗಳಲ್ಲಿ ಕ್ಷೇತ್ರೋತ್ಸವಗಳು, ಪದ್ಧತಿ ಪ್ರಾತ್ಯಕ್ಷಿಕೆಗಳು, ಸಮಸ್ಯಾತ್ಮಕ ತಾಕುಗಳಿಗೆ ಭೇಟಿ ಮತ್ತು ಸೂಕ್ತ ಸಲಹೆಗಳು, ರೈತರ ಅಧ್ಯಯನ ಪ್ರವಾಸಗಳು, ರೈತ ಕ್ಷೇತ್ರ ಪಾಠಶಾಲೆಗಳು, ಪಶು ಚಿಕಿತ್ಸಾ ಶಿಬಿರಗಳು, ರೈತರ ಕೃಷಿ ಸಮಸ್ಯೆಗಳಿಗೆ ದೂರವಾಣಿ ಹಾಗೂ ಮಿಂಚಂಚೆ ಮುಖಾಂತರ ಸಲಹೆಗಳು, ರೇಡಿಯೋ, ದೂರದರ್ಶನ ಮತ್ತು ದಿನಪತ್ರಿಕೆಗಳ ಮೂಲಕ ಕೃಷಿ ತಂತ್ರಜ್ಞಾನ ಮಾಹಿತಿ ವಿಸ್ತರಣೆ, ವೈಜ್ಞಾನಿಕ ಸಲಹಾ ಸಮಿತಿ ಸಭೆ, ಕೃಷಿ ಮೇಳ, ರೈತ ದಿನಾಚರಣೆ, ರೈತ ಮಹಿಳಾ ದಿನಾಚರಣೆ, ವಿಶ್ವ ಆಹಾರ ದಿನಾಚರಣೆ, ಇತ್ಯಾದಿ ಮತ್ತು ಕಳೆ ನಿರ್ಮೂಲನಾ ಸಪ್ತಾಹ, ಮಾಹಿತಿ ತಂತ್ರಜ್ಞಾನ ಸಪ್ತಾಹ ಹಾಗೂ ರಾಜ್ಯ ಸರ್ಕಾರದ ಅನುದಾನದ ಅಡಿಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಇತ್ಯಾದಿ, ಈ ಕೇಂದ್ರಗಳ ಚಟುವಟಿಕೆಗಳಾಗಿವೆ.

ಕೇಂದ್ರದಲ್ಲಿರುವ ಲಭ್ಯವಿರುವ ಸೌಲಭ್ಯಗಳು

ಮಣ್ಣು ಮತ್ತು ನೀರು ಪರೀಕ್ಷಾ ಪ್ರಯೋಗಾಲಯ, ಪ್ರಮುಖ ಬೆಳೆಗಳ ಬೀಜೋತ್ಪಾದನೆ, ತೋಟಗಾರಿಕೆ ನರ್ಸರಿ, ವಿವಿಧ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಘಟಕ, ರೈತರಿಗೆ ಮೊಬೈಲ್ ಮೂಲಕ ಕೃಷಿ ಸಂದೇಶ, ಸುಸಜ್ಜಿತವಾದ ತರಬೇತಿ ಕೊಠಡಿ ಮತ್ತು ಆಧುನಿಕ ಉಪಕರಣಗಳು, ಇತ್ಯಾದಿ. ರೈತರ ಅಗತ್ಯಕ್ಕನುಗುಣವಾಗಿ ಗುಣಮಟ್ಟದ ಬೀಜ, ಕಸಿಗಿಡಗಳು, ಜಾನುವಾರು ತಳಿಗಳು, ಪ್ರಾಣಿಜನ್ಯ ಉತ್ಪನ್ನಗಳು ಮತ್ತು ಜೈವಿಕ ಉತ್ಪನ್ನಗಳನ್ನು ಒದಗಿಸಲಾಗುವುದು. ತರಬೇತಿ ಸಮಯದಲ್ಲಿ ಶಿಕ್ಷಣಾರ್ಥಿಗಳಿಗೆ ಕೇಂದ್ರದಲ್ಲಿ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ನೀಡಲಾಗುವುದು.

13