ನೇಗಿಲ ಮಿಡಿತ  ಸಂಪುಟ 6 ಸಂಚಿಕೆ 3

ಬಹು ಉಪಯೋಗಿ ಹುರುಳಿ ಬೆಳೆಯ ಮಹತ್ವ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಜಿ. ಕೆ. ಗಿರಿಜೇಶ್, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
೯೪೮೦೩೫೪೨೩೭,
1

ಭಾರತ ದೇಶವು ಹುರುಳಿ ಬೆಳೆಯ ಮೂಲ ಸ್ಥಾನವಾಗಿದ್ದು, ದಕ್ಷಿಣ ಭಾರತದ ಒಂದು ಪ್ರಮುಖ ದ್ವಿದಳ ಧಾನ್ಯ ಬೆಳೆಯಾಗಿದೆ. ಹುರುಳಿಯನ್ನು ಹೆಚ್ಚಾಗಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ನಮ್ಮ ರಾಜ್ಯದ ಕೃಷಿ ಹವಾಮಾನ ವಲಯಗಳಾದ ೪, ೫, ೬ ಮತ್ತು ೭ರಲ್ಲಿ ಹುರುಳಿ ಬೆಳೆಯುವ ಕ್ಷೇತ್ರ ಹೆಚ್ಚು ಕೇಂದ್ರೀಕೃತವಾಗಿದೆ.

ಹುರುಳಿ ಬೆಳೆಯ ವಿಶೇಷತೆಗಳು

ಹುರುಳಿ ಬೆಳೆ ಬಡವರ ದ್ವಿದಳ ಬೆಳೆ ಎಂಬುದು ಪ್ರತೀತಿ. ಈ ಧಾನ್ಯದಲ್ಲಿ ಶೇ. ೨೨ರಷ್ಟು ಸಸಾರಜನಕ, ಶೇ. ೬೨ರಷ್ಟು ಪಿಷ್ಠ ಮತ್ತು ಶೇ. ೧ರಷ್ಟು ಕೊಬ್ಬಿನ ಅಂಶವನ್ನು ಕಾಣಬಹುದಾಗಿದೆ. ಇದರ ಮೊಳಕೆ ಕಾಳಿನ ಸಾಂಬಾರು ಮತ್ತು ಹುರುಳಿ ಕಟ್ಟು (ತಿಳಿ ಸಾರು) ಬಹಳ ರುಚಿ ಮತ್ತು ಆರೋಗ್ಯಕ್ಕೆ ಉತ್ತಮ. ಉಪ್ಪು ಹಾಕಿ ಹುರಿದ ಕಾಳುಗಳು ನೇರವಾಗಿ ತಿನ್ನಲು ಮತ್ತು ಕಾಳನ್ನು ಬೇಕರಿ ಉತ್ಪನ್ನ, ಸಿಹಿ ತಿನಿಸುಗಳ ತಯಾರಿಕೆಯಲ್ಲಿ ಮತ್ತು ಹಪ್ಪಳ ಮಾಡಲು ಉಪಯೋಗಿಸುತ್ತಾರೆ. ಬೇಯಿಸಿದ ಕಾಳುಗಳಿಂದ ಸೂಪ್ ಕೂಡ ತಯಾರಿಸಬಹುದು. ಕಾಳುಗಳನ್ನು ಬೇಯಿಸಿ ನೀರನ್ನು ಬಸಿದು ನಂತರ ಬೇಯಿಸಿದ ಕಾಳುಗಳಿಂದ ಸಿಹಿಯನ್ನು ಅಥವಾ ಒಗ್ಗರಣೆ ಹಾಕಿ ಪಲ್ಯವನ್ನು ಸಹಾ ಮಾಡಬಹುದು.

ಹುರುಳಿ ಕಾಳು ಉತ್ತಮ ಪಶು ಆಹಾರವಾಗಿಯೂ ಬಳಕೆಯಲ್ಲಿದೆ. ವಿಶೇಷವಾಗಿ ಉಳುಮೆ ಮಾಡುವ ರಾಸುಗಳಾದ ಎತ್ತು, ಕುದುರೆ ಇತ್ಯಾದಿಗಳ ಬಲವರ್ಧನೆ ಮತ್ತು ಬಲಿಷ್ಠ ಬೆಳವಣಿಗೆಗೆ ರಾತ್ರಿಯಲ್ಲಿ ನೆನೆಸಿದ ಕಾಳನ್ನು ಬೆಳಗ್ಗೆ ರುಬ್ಬಿ ಹಿಂಡಿಯ ರೂಪದಲ್ಲಿ ಕೊಡಲಾಗುವುದು. ಇದು ಬಹಳ ಕಾಲದಿಂದ ನಮ್ಮ ರೈತರಲ್ಲಿ ರೂಢಿಯಲ್ಲಿದೆ. ಅಲ್ಲದೆ, ಹುರುಳಿಯನ್ನು ಕೊಯ್ಲು ಮಾಡಿದ ನಂತರ ಹುರುಳಿ ಕೂಳೆ ಹೊಲದಲ್ಲಿ ಪಶುಗಳನ್ನು ಮೇಯಿಸುವುದರಿಂದ ಅದರಲ್ಲೂ ವಿಶೇಷವಾಗಿ ಕುರಿ (ಟಗರು) ಮತ್ತು ಆಡುಗಳಲ್ಲಿ ದೇಹದ ಬೆಳವಣಿಗೆ (ತೂಕ) ವೇಗವಾಗಿ ಹೆಚ್ಚುತ್ತದೆ. ಹುರುಳಿ ಹೊಟ್ಟು ಸಹಾ ಉತ್ತಮ ಒಣ ಮೇವಾಗಿದೆ. ಇದನ್ನು ದನಕರುಗಳು, ಆಡು ಮತ್ತು ಕುರಿಗಳು ಚೆನ್ನಾಗಿ ತಿನ್ನುತ್ತವೆ.

ಅಲ್ಲದೆ, ಹುರುಳಿ ಬೆಳೆಯು ಹಸಿರು ಮೇವಿನ ಬೆಳೆಯಾಗಿ ಹಾಗೂ ಹಸಿರು ಗೊಬ್ಬರದ ಬೆಳೆಯಾಗಿಯೂ ಉಪಯುಕ್ತ. ಹುರುಳಿಯನ್ನು ಸಾರಜನಕ ಕೊರತೆಯಿರುವ ಮತ್ತು ಸಾಧಾರಣವಾಗಿ ಕಡಿಮೆ ಫಲವತ್ತಾದ ಮಣ್ಣುಗಳಲ್ಲಿ ಬೆಳೆಯಲಾಗುವುದು. ಇದರಿಂದ ಮಣ್ಣಿನ ಫಲವತ್ತತೆಯೂ ಸಹಾ ವೃದ್ಧಿಯಾಗುವುದು. ಹುರುಳಿ ಬರ ತಡೆಯುವ ಗುಣ ಹೊಂದಿದ್ದು, ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿಯೂ ಸಹಾ ಉತ್ತಮ ಇಳುವರಿ ಕೊಡುವ ಸಾಮರ್ಥ್ಯ ಈ ಬೆಳೆಗೆ ಇದೆ. ಮೊದಲು ಸ್ವಂತ ಉಪಯೋಗಕ್ಕಾಗಿ ಬೆಳೆಯುತ್ತಿದ್ದ ಹುರುಳಿ ಕಾಳು ಇಂದು ದಿನಸಿ ಅಂಗಡಿಗಳಲ್ಲಿ ಪ್ರತಿ ಕಿ.ಗ್ರಾಂಗೆ ರೂ. ೬೦-೭೦ ರವರೆಗೆ ಮಾರಾಟವಾಗುತ್ತಿದೆ. ಇದು ಒಂದು ಕಡಿಮೆ ಖರ್ಚಿನ ಲಾಭದಾಯಕ ಬೆಳೆಯಾಗಿದೆ.

7

ನಮ್ಮ ರಾಜ್ಯದಲ್ಲಿ ಸುಮಾರು ೮.೨೫ ಲಕ್ಷ ಎಕರೆ ಪ್ರದೇಶದಿಂದ ೩.೯ ಲಕ್ಷ ಟನ್‌ಗಳಷ್ಟು ಉತ್ಪಾದನೆಯಾಗುತ್ತಿದೆ. ಆದರೆ, ಎಕರೆವಾರು ಇಳುವರಿ ೧೯೦ ಕಿ.ಗ್ರಾಂ ನಷ್ಟು ಇದ್ದು ಕನಿಷ್ಠ ಮಟ್ಟದ್ದಾಗಿದೆ.

ಕಡಿಮೆ ಇಳುವರಿಗೆ ಕಾರಣಗಳು

ಹುರುಳಿಯನ್ನು ಪೂರ್ಣ ಬೆಳೆಯಾಗಿ ಅಥವಾ ರಾಗಿ, ಭತ್ತ, ಶೇಂಗಾ, ಮುಸುಕಿನ ಜೋಳ ಇತ್ಯಾದಿ ಬೆಳೆಗಳ ನಂತರ ಎರಡನೇ ಬೆಳೆಯಾಗಿ ಅಥವಾ ಸಜ್ಜೆ, ಜೋಳ, ಹರಳು ಮತ್ತು ತೊಗರಿ ಬೆಳೆಗಳಲ್ಲಿ ಅಂತರ ಬೆಳೆ/ಅಕ್ಕಡಿ ಬೆಳೆಯಾಗಿಯೂ ಬೆಳೆಯಲಾಗುತ್ತದೆ. ಜೊತೆಗೆ ಯಾವುದೇ ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸದೇ ಇರುವುದು. ಅಂದರೆ ಸೂಕ್ತ ಭೂ ಸಿದ್ಧತೆ ಇಲ್ಲದೆ ಸಾವಯವ ಗೊಬ್ಬರ ಮತ್ತು ರಸಗೊಬ್ಬರಗಳ ಬಳಕೆಯಿಲ್ಲದೆ ಕೇವಲ ಬೀಜ ಚೆಲ್ಲಿ ಬಂದಷ್ಟನ್ನು ಒಕ್ಕಣೆ ಮಾಡುವುದು ಸಾಮಾನ್ಯ ಪದ್ಧತಿಯಾಗಿದೆ. ಮಲೆನಾಡು ಭಾಗದಲ್ಲಿ ಭತ್ತದ ಕಟಾವಿನ ನಂತರ ಮಣ್ಣಿನ ಫಲವತ್ತತೆ ವೃದ್ಧಿಗಾಗಿ ಮತ್ತು ಉಳಿಕೆ ತೇವಾಂಶ ಮತ್ತು ಪೋಷಕಾಂಶಗಳ ಸದ್ಭಳಕೆಗೆ ಹುರುಳಿಯನ್ನು ಬೆಳೆಯುತ್ತಿದ್ದಾರೆ.

ಆದರೆ, ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳ ಪೈಪೋಟಿ, ಕಾರ್ಮಿಕರ ಕೊರತೆ, ಕುಟುಂಬ ಸದಸ್ಯರ ಅಲಭ್ಯತೆಯಿಂದ, ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಹುರುಳಿ ಬೆಳೆ ಹಾಕುವುದೂ ಸಹಾ ಕಡಿಮೆಯಾಗಿದೆ. ಅಲ್ಪ ಇಳುವರಿ ಕೊಡುವ ಸ್ಥಳೀಯ ತಳಿಗಳ ಜೊತೆ ಗುಣಮಟ್ಟವಿಲ್ಲದ ಬೀಜಗಳ ಬಳಕೆಯೂ ಸಹ ಕಡಿಮೆ ಇಳುವರಿಗೆ ಪ್ರಮುಖ ಕಾರಣಗಳು.

ಉತ್ತಮ ಇಳುವರಿಗೆ ಅನುಸರಿಬೇಕಾದ ಬೇಸಾಯ ಕ್ರಮಗಳು

ತಳಿಗಳ ಆಯ್ಕೆ

ರಾಜ್ಯದ ದಕ್ಷಿಣ ಭಾಗದ (ಕೃಷಿ ಹವಾಮಾನ ವಲಯ ೪, ೫, ೬ ಮತ್ತು ೭ಕ್ಕೆ) ಸುಧಾರಿತ ತಳಿಗಳಾದ ಕೆ.ಬಿ.ಹೆಚ್.-೧ (ಬಿ.ಜಿ.ಎಂ.-೧) ಹಾಗೂ ಪಿ.ಹೆಚ್.ಜಿ.-೯ ಮತ್ತು ಉತ್ತರ ಕರ್ನಾಟಕ ಪ್ರದೇಶಗಳಿಗೆ (ಕೃಷಿ ಹವಾಮಾನ ವಲಯ ೧, ೨, ೩ ಮತ್ತು ೮ಕ್ಕೆ) ಜೆ.ಪಿ.ಎಮ್.-೬) ತಳಿಗಳನ್ನು ಉಪಯೋಗಿಸಬೇಕು. ಸದರಿ ಎಲ್ಲ ತಳಿಗಳು ೯೦-೧೦೫ ದಿವಸಗಳಲ್ಲಿ ಕೊಯ್ಲಿಗೆ ಬರುತ್ತವೆ.

ಬಿತ್ತನೆ ಮತು ಪೋಷಕಾಂಶ ನಿರ್ವಹಣೆ

ಬಿತ್ತನೆಗೆ ೧೫ ದಿವಸ ಮೊದಲು ಎಕರೆಗೆ ೨.೫ಯಿಂದ ೩ ಟನ್ ಕೊಟ್ಟಿಗೆ ಗೊಬ್ಬರ/ಕಾಂಪೋಸ್ಟ್ ಅನ್ನು ಹಾಕಿ ಹರಡಬೇಕು. ನಂತರ ಬಿತ್ತನೆಗೆ ಭೂ ಸಿದ್ಧತೆ ಮಾಡಿದ ಕೂಡಲೇ ಸಂಯುಕ್ತ ಕೂರಿಗೆಯಲ್ಲಿ ೧೦ ಕೆ.ಜಿ. ಬೀಜವನ್ನು ಮತ್ತು ಶಿಫಾರಸ್ಸು ಮಾಡಿದ ೧೦ ಕೆ.ಜಿ. ಸಾರಜನಕ, ೧೫ ಕೆ.ಜಿ. ರಂಜಕ ಮತ್ತು ೧೦ ಕೆ.ಜಿ. ಪೊಟ್ಯಾಷ್ ಒದಗಿಸುವ ರಸಗೊಬ್ಬರವನ್ನು ಬೆರೆಸಿ ಒಂದು ಅಡಿ ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಬೇಕು. ಒಂದು ವೇಳೆ ಬೀಜವನ್ನು ಚೆಲ್ಲುವುದಾದಲ್ಲಿ ಪ್ರತಿ ಎಕರೆಗೆ ಮೇಲೆ ತಿಳಿಸಿದ ರಸಗೊಬ್ಬರಗಳನ್ನು ಎರಚಿ ನಂತರ ಎಕರೆಗೆ ೧೫-೧೬ ಕೆ.ಜಿ. ಬೀಜವನ್ನು ಸಮನಾಗಿ ಚೆಲ್ಲಿ ಕಡಿಮೆ ಆಳದಲ್ಲಿ ಕಲ್ಟಿವೇಟರ್ ಹೊಡೆಯುವುದರಿಂದ ಬೀಜ ಮತ್ತು ಮಣ್ಣಿನ ನಡುವೆ ಉತ್ತಮ ಸಂಪರ್ಕ ಬಂದು ಮೊಳಕೆಗೆ ಸಹಕಾರಿಯಾಗುತ್ತದೆ.

ಕಳೆ ನಿರ್ವಹಣೆ: ಬಿತ್ತಿದ ೨೦ ದಿವಸಕ್ಕೆ ಒಮ್ಮೆ ಕೈಕಳೆ ಮತ್ತು ೩೦-೪೦ ದಿವಸಗಳಲ್ಲಿ ಅಂತರ ಬೇಸಾಯ ಮಾಡುವುದರಿಂದ ಕಳೆ ಹತೋಟಿ ಮಾಡಬಹುದು.

ಸಸ್ಯ ಸಂರಕ್ಷಣಾ ಕ್ರಮಗಳು: ಹುರುಳಿ ಬೆಳೆಯಲ್ಲಿ ಆರ್ಥಿಕವಾಗಿ ನಷ್ಟವನ್ನುಂಟು ಮಾಡುವಂತಹ ಯಾವುದೇ ಕೀಟ ಅಥವಾ ರೋಗಗಳ ಹಾವಳಿ ಇರುವುದಿಲ್ಲ. ಆದಾಗ್ಯೂ ತಡ ಮುಂಗಾರು ವರ್ಷಗಳಲ್ಲಿ ತಡವಾದ ಬಿತ್ತನೆ ಬೆಳೆಯಲ್ಲಿ ಬೂದು ರೋಗದ ಬಾಧೆ ಕಂಡುಬರುತ್ತದೆ. ಇದರ ಕಾರಣದಿಂದ ಆಗುವ ಹಾನಿ ತಪ್ಪಿಸಲು ಎಲೆಗಳ ಮೇಲೆ ಬಿಳಿ ಬೂದಿ ಕಾಣಿಸಿಕೊಂಡ ಕೂಡಲೇ ಪ್ರತಿ ಲೀಟರ್ ನೀರಿಗೆ ೦.೫ ಮಿ.ಲೀ. ಕ್ಯಾಲಿಕ್ಸನ್ ಬೆರೆಸಿ ಬೆಳೆಗೆ ಸಿಂಪರಣೆ ಮಾಡಬೇಕು.

ಕೊಯ್ಲು ಮತ್ತು ಒಕ್ಕಣೆ: ಬಿತ್ತನೆ ಸಮಯ ಮತ್ತು ತಳಿಗಳ ಆಧಾರದ ಮೇಲೆ ಹುರುಳಿ ಬೆಳೆಯು ೯೦ ರಿಂದ ೧೦೫ ದಿವಸಕ್ಕೆ ಕೊಯ್ಲಿಗೆ ಬರುತ್ತದೆ. ಕಾಯಿಗಳು ಕೊಯ್ಲಿಗೆ ಬಂದಾಗ ಕಾಯಿಗಳ ಕವಚ ಒಣ ಬತ್ತದ ಹುಲ್ಲು ಅಥವಾ ಜೋಳದ ಸಪ್ಪೆ ಬಣ್ಣಕ್ಕೆ ತಿರುಗುತ್ತದೆ. ಎಲೆಗಳು ಬಹಳಷ್ಟು ಉದುರುತ್ತವೆ. ಆ ಸಂದರ್ಭದಲ್ಲಿ ಕುಡುಗೋಲಿನಿಂದ ನೆಲಸಮಕ್ಕೆ ಕಟಾವು ಮಾಡಿ ಹೊಲದಲ್ಲೆ ೨-೩ ದಿವಸ ಒಣಗಿಸಿ ನಂತರ ಕಣಕ್ಕೆ ಸಾಗಿಸಿ ಕೋಲುಗಳಿಂದ ಬಡಿದು ಅಥವಾ ಟ್ರ್ಯಾಕ್ಟರಿನಿಂದ ತುಳಿಸಿದಾಗ ಕಾಳುಗಳು ಬೇರ್ಪಡುತ್ತವೆ. ನಂತರ ತೂರಿ ಹೊಟ್ಟು ಮತ್ತು ಕಾಳನ್ನು ಬೇರೆ ಮಾಡಬೇಕು. ಹೊಟ್ಟು ಉತ್ಕೃಷ್ಟ ಮೇವಾಗಿ ಉಪಯೋಗವಾಗುತ್ತದೆ.

ಸದರಿ ಬೇಸಾಯ ಕ್ರಮಗಳನ್ನು ಅನುಸರಿಸುವುದರಿಂದ ಪ್ರತಿ ಎಕರೆಗೆ ೩-೪ ಕ್ವಿಂಟಾಲ್ ಕಾಳು ಇಳುವರಿ ಪಡೆಯಬಹುದು. ಕಾಳಿನ ಜೊತೆ ೧-೧.೫ ಕ್ವಿಂಟಾಲ್‌ನಷ್ಟು ಉತ್ಕೃಷ್ಟ ಗುಣಮಟ್ಟದ ಹೊಟ್ಟು(ಮೇವು) ಸಹ ದೊರಕುವುದು.

"ಹುರಿದ ಹುರುಳಿ ಹಿಟ್ಟು ಮೂತ್ರಪಿಂಡದ ಕಲ್ಲಿಗೆ ರಾಮಬಾಣ"