ನೇಗಿಲ ಮಿಡಿತ  ಸಂಪುಟ 6 ಸಂಚಿಕೆ 3

ಭತ್ತವನ್ನು ಬಾಧಿಸುವ ಪ್ರಮುಖ ಕೀಟಗಳು ಮತ್ತು ಅವುಗಳ ಸಮಗ್ರ ನಿರ್ವಹಣ

ಜಯಲಕ್ಷ್ಮೀ ನಾರಾಯಣ ಹೆಗಡೆ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಶಿವಮೊಗ್ಗ
೯೪೪೮೬೪೨೪೧೬,
1

ಭತ್ತ ನಮ್ಮ ರಾಜ್ಯದ ಪ್ರಮುಖ ಆಹಾರ ಬೆಳೆಯಾಗಿದ್ದು, ಇದನ್ನು ರೈತರು ಮುಂಗಾರು, ಹಿಂಗಾರು ಹಾಗೂ ಬೇಸಿಗೆಯಲ್ಲಿ ಬೆಳೆಯುತ್ತಿದ್ದಾರೆ. ರೈತರು ಶಿಫಾರಸ್ಸಿನ ಮೇರೆಗೆ ವಿವಿಧ ಆಧುನಿಕ ತಂತ್ರಜ್ಞಾನಗಳನ್ನು ಭತ್ತದ ಬೇಸಾಯದಲ್ಲಿ ಅಳವಡಿಸುತ್ತಾ ಬಂದಾಗ್ಯೂ, ಇಳುವರಿ ರೈತರು ನಿರೀಕ್ಷಿಸಿದ ಮಟ್ಟದಲ್ಲಿಲ್ಲ. ಅದಕ್ಕೆ ಅನೇಕ ಕಾರಣಗಳಿದ್ದು ಅವುಗಳಲ್ಲಿ ಭತ್ತವನ್ನು ಬಾಧಿಸುವ ಕೀಟಗಳು ಪ್ರಮುಖವಾಗಿವೆ.

ಭತ್ತಕ್ಕೆ ಬಾಧಿಸುವ ಪ್ರಮುಖ ಕೀಟಗಳು

ಕಾಂಡ ಕೊರೆಯುವ ಹುಳು: ಈ ಕೀಟ ಭತ್ತವನ್ನು ಮಾತ್ರ ಬಾಧಿಸುತ್ತದೆ. ಇದು ಪೈರಿನ ಕಾಂಡವನ್ನು ಕೊರೆಯುವುದರ ಮೂಲಕ ಹಾನಿಯನ್ನುಂಟು ಮಾಡುತ್ತದೆ. ಅತಿ ಬೇಗನೆ ಅಥವಾ ತುಂಬಾ ತಡವಾಗಿ ನಾಟಿ ಮಾಡಿದ ಭತ್ತದಲ್ಲಿ ಈ ಹುಳುವಿನ ಬಾಧೆ ತೀವ್ರವಾಗಿರುತ್ತದೆ. ಇದು ಸಸಿ ಮಡಿಯಿಂದ ಪ್ರಾರಂಭಗೊಂಡು ಬೆಳೆಯ ಬೆಳವಣಿಗೆಯ ಎಲ್ಲಾ ಹಂತಗಳನ್ನು ಬಾಧಿಸುತ್ತದೆ.

ಬಾಧೆಯ ಲಕ್ಷಣಗಳು: ಮರಿ ಹುಳು ಒಂದೆರಡು ದಿನಗಳವರೆಗೆ ಎಳೆಯ ಎಲೆಗಳನ್ನು ಕೊರೆದು, ಅನಂತರ ಸಣ್ಣ ರಂಧ್ರಗಳನ್ನು ಕೊರೆದು ಕಾಂಡದೊಳಗೆ ಪ್ರವೇಶಿಸಿ, ಕಾಂಡವನ್ನು ಕೊರೆದು ಮಧ್ಯದ ಸುಳಿಯನ್ನು ತಿಂದು, ಮಧ್ಯದ ಸುಳಿಯು ಬಾಡಿಹೋಗುವಂತೆ ಮಾಡುತ್ತದೆ. ಕ್ರಮೇಣ ಎಳೆಯ ಪೈರಿನ ಸುಳಿಯು ಒಣಗಲಾರಂಭಿಸುತ್ತದೆ. ಇದನ್ನು ಕೈಯಿಂದ ಎಳೆದಾಗ ಸುಲಭವಾಗಿ ಗಿಡದಿಂದ ಬೇರ್ಪಡುತ್ತದೆ (ಡೆಡ್ ಹಾರ್ಟ್). ಪೈರು ದೊಡ್ಡದಾಗಿದ್ದು ತೆನೆ ಹಂತದಲ್ಲಿದ್ದರೆ ತೆನೆಯಲ್ಲಿ ಕಾಳುಗಳು ತುಂಬದೆ ತೆನೆ ಬೆಳ್ಳಗಾಗಿ ಜೊಳ್ಳು ತೆನೆಗಳಾಗುತ್ತವೆ (ಬಿಳಿ ತೆನೆ).

ನಿರ್ವಹಣೆ

ಬೇಸಿಗೆಯಲ್ಲಿ ಆಳವಾದ ಉಳುಮೆ ಮಾಡಬೇಕು. ಭತ್ತದ ಕೊಳೆಗಳನ್ನು ಕಿತ್ತು ನಾಶಪಡಿಸಬೇಕು. ಶಿಫಾರಸ್ಸಿನ ಮೇರೆಗೆ ರಸಗೊಬ್ಬರಗಳನ್ನು ಬಳಸಬೇಕು. ಚಿಟ್ಟೆ ಮೊಟ್ಟೆಗಳನ್ನು ಎಲೆಸಹಿತ ಕಿತ್ತು ಹಿಸುಕಿ ಸಾಯಿಸಬೇಕು.

• ಬೆಳಕಿನ ಬಲೆಗಳನ್ನು ಗದ್ದೆಗಳಲ್ಲಿ ಅಳವಡಿಸಿ ಪತಂಗಗಳನ್ನು ಸೆರೆಹಿಡಿದು ಸಾಯಿಸಬೇಕು. • ಆಯಾ ಪ್ರದೇಶಕ್ಕೆ ಶಿಫಾರಸ್ಸು ಮಾಡಿದ ಪ್ರತಿರೋಧಕ ತಳಿಗಳನ್ನು ಬಿತ್ತನೆಗೆ ಬಳಸಬೇಕು. • ನಾಟಿ ಮಾಡುವಾಗ ಸಸಿಗಳ ತುದಿಯನ್ನು ಚಿವುಟಿ ಹಾಕಬೇಕು. ಇದರಿಂದ ಕೀಟ ಮೊಟ್ಟೆ ಇಡುವುದನ್ನು ತಪ್ಪಿಸಬಹುದು. ಈ ರೀತಿ ಚಿವುಟಿದ ಸಸಿಗಳನ್ನು ಕ್ಲೋರ್‌ಪೈರಿಫಾಸ್ ೨೦ ಇ.ಸಿ (೨. ಮಿ.ಲೀ. ಪ್ರತಿ ಲೀಟರ್‌ ನೀರಿಗೆ ಬೆರೆಸಿ) ದ್ರಾವಣದಲ್ಲಿ ಅದ್ದಿ ನಾಟಿ ಮಾಡಬೇಕು. • ಸಸಿ ಮಡಿಗಳಿಗೆ ಬಿತ್ತನೆ ಮಾಡುವ ಮೊದಲು ೧.೨೫ ಕೆ.ಜಿ. ಕಾರ್ಬಾಪ್ಯುರಾನ್ ೩ ಜಿ. ಅಥವಾ ೦.೭೫ ಕೆ.ಜಿ. ಫೊರೇಟ್ ೧೦ ಜಿ. ಸಿಂಪಡಿಸಬೇಕು. ಗದ್ದೆಗಳಲ್ಲಿ ಇದರ ಹತೋಟಿಗೆ ೨.೦ಮಿ.ಲೀ. ಕ್ಲೋರ್‌ಪೈರಿಫಾಸ್ ೨೦ ಇ.ಸಿ. ಅಥವಾ ೦.೦೮ ಮಿ.ಲೀ. ಪ್ಲೂಬೆಂಡಿಅಮೈಡ್ ೪೮ ಎಸ್.ಸಿ. ಅಥವಾ ೦.೨ ಗ್ರಾಂ ಪ್ಲೂಬೆಂಡಿಅಮೈಡ್ ೨೦ ಡಬ್ಲ್ಯೂ. ಈ. ಪ್ರತಿ ಲೀಟರ್‌ಗೆ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ ಎಕರೆಗೆ ೧೦ ಕೆ.ಜಿ. ಫಿಪ್ರೋನಿಲ್ ೦.೩ ಜಿ ಅಥವಾ ೮ ಕೆ.ಜಿ. ಕಾರ್ಬಾಪ್ಯುರಾನ್ ೩ ಜಿ. ಯನ್ನು ಮರಳು ಜೊತೆ ಮಿಶ್ರಣ ಮಾಡಿ ಮಣ್ಣಿಗೆ ಸೇರಿಸುವುದು ಅಥವಾ ನಾಟಿ ಮಾಡಿದ ೨೦ ದಿನಗಳ ನಂತರ ಕ್ಲೋರಂಟ್ರನಿಲಿಪ್ರೊಲ್ ೦.೪ ಜಿ. ಹೆಕ್ಟೇರ್‌ಗೆ ೧೦ ಕೆ. ಜಿ. ಯಂತೆ ಬಳಸಿದರೆ ಕಾಂಡ ಕೊರೆಯುವ ಹುಳುವಿನ ಬಾಧೆ ನಿಯಂತ್ರಿಸಬಹುದು.

ಗೂಡು ಹುಳು/ ಕೊಳವೆ ಹುಳು: ಇವು ಸಾಮಾನ್ಯವಾಗಿ ಹೆಚ್ಚಾಗಿ ಮಳೆ ಬೀಳುವ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಕಂಡುಬರುತ್ತವೆ.

ಬಾಧೆಯ ಲಕ್ಷಣಗಳು: ಮರಿ ಹುಳುಗಳು ಎಲೆಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಜೋಡಿಸಿ ಗೂಡುಗಳನ್ನು ರಚಿಸಿ ಒಳಗೆ ಸೇರಿಕೊಂಡು ಎಲೆಗಳನ್ನು ಕೆರೆದು ತಿಂದು ಏಣಿಯಾಕೃತಿಯ ಬೆಳ್ಳಗಿನ ಸಾಲುಗಳನ್ನು ರಚಿಸುತ್ತವೆ. ಇದರಿಂದ ಈ ಹುಳಕ್ಕೆ ಗೂಡು ಹುಳು ಎಂದು ಕರೆಯುತ್ತಾರೆ. ಪೈರಿನ ತುದಿಗಳು ಬೆಳ್ಳಗಾಗಿ ಬಾಗಿಕೊಂಡಿರುತ್ತವೆ. ಈ ಹುಳುಗಳು ಪೈರಿನಲ್ಲಿ ದಾರಗಳ ಸಹಾಯದಿಂದ ನೇತಾಡುತ್ತಿರುತ್ತವೆ ಅಥವಾ ನೀರಿನಲ್ಲಿ ತೇಲಿಕೊಂಡಿರುತ್ತವೆ. ಇದನ್ನು ರೈತರು ಕೊಕ್ಕರೆ ರೋಗವೆಂದೂ ಕರೆಯುತ್ತಾರೆ.

ನಿರ್ವಹಣೆ

• ನೀರಿನ ಕಾಲುವೆಗಳ ಬದಿಗಳಲ್ಲಿರುವ ಆಸರೆ ಸಸ್ಯಗಳನ್ನು ಕಿತ್ತು ನಾಶಪಡಿಸಬೇಕು. ಮರಿಹುಳುಗಳು ರಚಿಸಿದ ಗೂಡುಗಳನ್ನು ಹಗ್ಗ ಅಥವಾ ಮುಳ್ಳಿನ ಪೊದೆಗಳನ್ನು ಹಾಯಿಸುವುದರ ಮೂಲಕ ನಾಶಪಡಿಸಬೇಕು. ಸೀಮೆ ಎಣ್ಣೆ ಲೇಪಿತ ಗೋಣಿ ಚೀಲಗಳನ್ನು ನೀರಿನ ಕಾಲುವೆಯ ಬಾಯಿಯ ಹತ್ತಿರ ಇಡಬೇಕು. ಅದರಿಂದ ಇಡೀ ಗದ್ದೆಯ ನೀರಿಗೆ ಸೀಮೆ ಎಣ್ಣೆ ಹರಡುವಂತೆ ಮಾಡಿ ನೀರಿನಲ್ಲಿ ತೇಲುತ್ತಿರುವ ಹುಳುಗಳ ಉಸಿರಾಟಕ್ಕೆ ಅಡ್ಡಿಯನ್ನುಂಟು ಮಾಡಿ ಹುಳುಗಳನ್ನು ಸಾಯಿಸಬಹುದು. ಗದ್ದೆಗಳಲ್ಲಿರುವ ನೀರನ್ನು ಖಾಲಿಮಾಡಿ, ತೇಲುತ್ತಿರುವ ಹುಳುಗಳನ್ನು ಕೈಯಿಂದ ಆಯ್ದು ಸಾಯಿಸಬಹುದು.
• ೨ ಮಿ.ಲೀ. ಫೊಸಲೋನ್ ೩೫ ಇ.ಸಿ. ಅಥವಾ ೧ ಮಿ.ಲೀ. ಡಯಾಜಿನಾನ್ ೬೦ ಇ.ಸಿ. ಅಥವಾ ೧ ಮಿ.ಲೀ. ಪೆಂಥೊಯೇಟ್ ೧೦೦ ಇ.ಸಿ ಪ್ರತಿ ಲೀಟರ್‌ಗೆ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ ಎಕರೆಗೆ ೮ ಕೆ.ಜಿ. ಕಾರ್ಬಾಪ್ಯುರಾನ್ ೩ ಜಿ. ಅಥವಾ ೫ ಕೆ.ಜಿ. ಪೋರೇಟ್ ೧೦ ಜಿ. ಅಥವಾ ೮ ಕೆ.ಜಿ. ಕಾರ್ ಟಾಪ್ ೪ ಜಿ. ಯನ್ನು ಮರಳು ಜೊತೆ ಮಿಶ್ರಣ ಮಾಡಿ ಬಳಸುವುದು.

ಗರಿ ಮಡಿಸುವ ಹುಳು/ ಎಲೆಸುರುಳಿ ಹುಳು: ಈ ಕೀಟವು ಕರಾವಳಿ ಮತ್ತು ಮಲೆನಾಡಿನ ಭತ್ತಕ್ಕೆ ಅತ್ಯಂತ ಸಮಸ್ಯೆಯಾಗಿರುವ ಕೀಟವಾಗಿದೆ. ಇದು ಭತ್ತವನ್ನಲ್ಲದೇ ಗೋಧಿ, ಕಬ್ಬು, ರಾಗಿ ಮತ್ತು ಹುಲ್ಲುಗಳನ್ನು ಆಶ್ರಯಿಸುತ್ತದೆ.

ಬಾಧೆಯ ಲಕ್ಷಣಗಳು: ಈ ಹುಳುಗಳು ೩-೪ ಭತ್ತದ ಗರಿಗಳನ್ನು ಸೇರಿಸಿ ಎರಡೂ ಅಂಚನ್ನು ಮಡಿಚಿ ಸುರುಳಿ ಮಾಡಿ ಒಳಗಡೆ ಸೇರಿ ಹಸಿರು ಭಾಗವನ್ನು (ಪತ್ರ ಹರಿತ್ತ) ಕೆರೆದು ತಿನ್ನುತ್ತವೆ. ಬಾಧಿತ ಗರಿಗಳು ಬೆಳ್ಳಗಾಗಿ ಆ ಭಾಗವು ಪೊರೆಯಂತೆ ಕಾಣಿಸಿಕೊಂಡು, ಕಂದು ಬಣ್ಣಕ್ಕೆ ತಿರುಗಿ ಉದ್ದಕ್ಕೆ ಸೀಳಿಹೋಗುತ್ತವೆ. ಪೈರು ಸುಟ್ಟುಹೋದಂತೆ ಕಾಣಿಸುತ್ತದೆ. ಇದರ ಬಾಧೆಯಿಂದ ತೆನೆಗಳ ಉದ್ದ ಮತ್ತು ತೂಕದಲ್ಲಿ ಕಡಿತವುಂಟಾಗಿ, ಇಳುವರಿ ಕಡಿಮೆಯಾಗುತ್ತದೆ.

ನಿರ್ವಹಣೆ

• ಗದ್ದೆಗಳಲ್ಲಿ ಮತ್ತು ಬದುಗಳ ಮೇಲೆ ಇರುವ ಆಸರೆ ಸಸ್ಯಗಳನ್ನು ಕಿತ್ತು ಸ್ವಚ್ಛ ಮಾಡಬೇಕು/ಸುಡಬೇಕು.
• ಈ ಕೀಟದ ಹತೋಟಿಗೆ ೨ ಮಿ.ಲೀ. ಕ್ಲೋರ್‌ಪೈರಿಫಾಸ್ ೨೦ ಇ.ಸಿ. ಅಥವಾ ಕ್ವಿನಾಲ್‌ಫಾಸ್ ೨೫ ಇ.ಸಿ. ಅಥವಾ ೦.೫ ಮಿ.ಲೀ. ಇಂಡಾಕ್ಸಿಕಾರ್ಬ್ ೧೪.೫ ಎಸ್.ಸಿ ಅಥವಾ ೦.೦೮ ಮಿ.ಲೀ. ಪ್ಲೂಬೆಂಡಿಅಮೈಡ್ ೪೮ ಎಸ್.ಸಿ. ಅಥವಾ ೦.೨ ಗ್ರಾಂ ಪ್ಲೂಬೆಂಡಿಅಮೈಡ್ ೨೦ ಡಬ್ಲ್ಯೂ.ಜಿ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ ನಾಟಿ ಮಾಡಿದ ೨೦ ದಿನಗಳ ನಂತರ ಕ್ಲೋರಂಟ್ರನಿಲಿಪ್ರೊಲ್ ೦.೪ ಜಿ. ಹೆಕ್ಟೇರ್‌ಗೆ ೧೦ ಕೆ. ಜಿ. ಯಂತೆ ಬಳಸಿದರೆ ಎಲೆಸುರುಳಿ ಹುಳುವಿನ ಬಾಧೆ ನಿಯಂತ್ರಿಸಬಹುದು.

17

ಸೈನಿಕ ಹುಳು: ಸಾಮಾನ್ಯವಾಗಿ ಈ ಕೀಟದ ಹಾವಳಿ ಜುಲೈನಿಂದ ಅಕ್ಟೋಬರ್ವರೆಗೆ ತೀವ್ರವಾಗಿದ್ದು, ಶೇ. ೩೦ ರಿಂದ ೮೦ಕ್ಕೂ ಹೆಚ್ಚು ನಷ್ಟವನ್ನುಂಟು ಮಾಡುತ್ತದೆ. ಈ ಹುಳುಗಳು ರಾತ್ರಿ ವೇಳೆ ಹಾನಿಯನ್ನುಂಟು ಮಾಡುತ್ತವೆ. ಹಗಲು ಹೊತ್ತಿನಲ್ಲಿ ಗದ್ದೆಗಳಲ್ಲಿ ಮಣ್ಣು ಕಲ್ಲುಗಳ ಅಡಿಯಲ್ಲಿ ಅಡಗಿಕೊಂಡಿದ್ದು, ಸಂಜೆ ಹಾಗೂ ರಾತ್ರಿ ಹೊತ್ತಿನಲ್ಲಿ ಬೆಳೆಯನ್ನು ಬಾಧಿಸುತ್ತವೆ. ತೆನೆ ಹಂತದಲ್ಲಿ ಆಕ್ರಮಣ ಮಾಡಿದರೆ ಇಳುವರಿಯಲ್ಲಿ ಗಣನೀಯ ನಷ್ಟವುಂಟಾಗುತ್ತದೆ. ಕೀಟಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಾಣಿಸುವುದಿಲ್ಲ.

ಬಾಧೆಯ ಲಕ್ಷಣಗಳು: ಮರಿಹುಳುಗಳು ಗುಂಪುಗಳಲ್ಲಿ ಎಲೆಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಇವು ಗಿಡದ ಎಲ್ಲ್ಲಾ ಭಾಗಗಳನ್ನು ಹಾನಿ ಮಾಡುತ್ತವೆ. ಸಸಿ ಮಡಿಯಲ್ಲಿ ಈ ಹುಳುಗಳು ಸಸಿಯ ಬುಡ ಭಾಗವನ್ನು ಕತ್ತರಿಸಿ, ಕೆಳಕ್ಕೆ ಬಿದ್ದ ಎಲೆಗಳನ್ನು ತಿನ್ನುವುದರಿಂದ ಪೈರು ಕಟ್ಟಾಗಿ ದನಗಳು ಮೇಯ್ದಂತೆ ಕಾಣುತ್ತದೆ. ನಾಟಿ ಮಾಡಿದ ಪೈರಿನಲ್ಲಿ ಎಲೆಗಳನ್ನು ಪೂರ್ಣವಾಗಿ ತಿಂದು ನಡುದಂಟನ್ನು ಮಾತ್ರ ಉಳಿಸಿರುತ್ತದೆ. ತೆನೆ ಹಂತದಲ್ಲಿ ತೆನೆಗಳ ಬುಡಭಾಗವನ್ನು ಕತ್ತರಿಸುತ್ತದೆ. ಒಂದು ಗದ್ದೆಯಿಂದ ಇನ್ನೊಂದು ಗದ್ದೆಗೆ ಗುಂಪುಗಳಲ್ಲಿ ಹೋಗಿ ಹಾನಿ ಮಾಡುವುದರಿಂದ ಇದನ್ನು ಸೈನಿಕ ಹುಳು ಎಂದು ಕರೆಯುತ್ತಾರೆ. ಎಲೆಗಳನ್ನು ತಿಂದು ಗಿಡಗಳನ್ನು ಅಸ್ಥಿಪಂಜರ ಗಳನ್ನಾಗಿ ಮಾಡುತ್ತವೆ.

20

ನಿರ್ವಹಣೆ

• ಗದ್ದೆಗಳಲ್ಲಿ ಜಾಸ್ತಿ ನೀರು ಹಾಯಿಸುವುದರಿಂದ ಹಗಲಿನಲ್ಲಿ ಭೂಮಿಯಲ್ಲಿ ಅಡಗಿರುವ ಹುಳುಗಳು ಹೊರಗೆ ಬರುತ್ತವೆ. ಅವುಗಳನ್ನು ಆಯ್ದು ನಾಶಪಡಿಸಬೇಕು. ಮೊಟ್ಟೆ ಮತ್ತು ಮರಿಗಳನ್ನು ಬಾಧಿತ ಗಿಡಗಳ ಭಾಗ ಸಹಿತ ಕಿತ್ತು ನಾಶಪಡಿಸಬೇಕು. • ಮೆಲಾಥಿಯಾನ್ ೫ ಡಿ ಎಕರೆಗೆ ೮ ಕಿ.ಗ್ರಾಂ ನಂತೆ ಸಾಯಂಕಾಲ ಧೂಳೀಕರಿಸುವುದು. • ವಿಷ ತಿಂಡಿಯನ್ನು ತಯಾರಿಸಿ ಗದ್ದೆಗಳಲ್ಲಿ ಸಾಯಂಕಾಲ ಸಮಯದಲ್ಲಿ ಎರಚಬೇಕು. • ವಿಷ ತಿಂಡಿ ತಯಾರಿಸುವ ವಿಧಾನ: ೧೦ಕೆ.ಜಿ. ಭತ್ತದ ತೌಡಿಗೆ ೨.ಕೆ.ಜಿ.ಯಷ್ಟು ಬೆಲ್ಲವನ್ನು ಪುಡಿ ಮಾಡಿ ಸ್ವಲ್ಪ ಪ್ರಮಾಣದ ನೀರಿನಲ್ಲಿ ಚೆನ್ನಾಗಿ ಕಲಸಬೇಕು. ಈ ಮಿಶ್ರಣಕ್ಕೆ ೧೨೫ ಮಿ.ಲೀ. ಮೊನೊಕ್ರೊಟೊಫಾಸ್‌ಅನ್ನು ಸಮವಾಗಿ ಬೆರೆಸಿ ಉಂಡೆ ಮಾಡಿ ಸಂಜೆ ವೇಳೆ ಸಸಿ ಮಡಿಯ ಸುತ್ತಲೂ ಎರಚಬೇಕು. ವಿಷ ತಿಂಡಿಯಿಂದ ಸಾಕು ಪ್ರಾಣಿಗಳನ್ನು ದೂರವಿಡಬೇಕು.

ಗಂಟು ನೊಣ/ ಕಣೆ: ಈ ನೊಣವು ರಾಜ್ಯದ ಕರಾವಳಿ ಮತ್ತು ಹೆಚ್ಚು ಮಳೆ ಬೀಳುವ ಪ್ರದೇಶಕ್ಕೆ ಸೀಮಿತವಾಗಿರುವ ಕೀಟವಾಗಿದೆ. ತಡವಾಗಿ ನಾಟಿ ಮಾಡಿದ ಬೆಳೆಯಲ್ಲಿ ಈ ಕೀಟದ ಬಾಧೆ ಕಂಡುಬರುತ್ತದೆ. ಇದು ಸಸಿ ಮಡಿಯಲ್ಲಿ ಮತ್ತು ನಾಟಿ ಮಾಡಿದ ೩೦-೪೦ ದಿನಗಳವರೆಗೂ ಕಂಡುಬರುತ್ತದೆ.

24

ಬಾಧೆಯ ಲಕ್ಷಣಗಳು: ಮೊಟ್ಟೆಗಳಿಂದ ಹೊರಬಂದ ಮರಿಗಳು ಕಾಂಡ ಮತ್ತು ಗರಿಗಳ ನಡುವೆ ಹರಿದು ಬುಡವನ್ನು ತಿನ್ನುತ್ತವೆ. ಇದರಿಂದ ಕಾಂಡದ ಮಧ್ಯ ಭಾಗದ ಕೋಶಗಳು ಚೇತನಗೊಂಡು ಸುಳಿಯು ಹೊಳೆಯುವ ಬೆಳ್ಳಗಿನ ನೀಳವಾದ ಕೊಳವೆಯಂತೆ ಬೆಳೆಯುತ್ತದೆ. ಈ ರೀತಿ ಬೆಳ್ಳನೆಯ ಕೊಳವೆಗಳು ಕಾಣಿಸಿಕೊಳ್ಳುವುದರಿಂದ ಇದನ್ನು ಕೊಳವೆ ರೋಗ ಅಥವಾ ಆನೆಕೊಂಬು ಅಥವಾ ಸಿಲ್ವರ್ ಶೂಟ್ (ಬೆಳ್ಳಿ ಕಾಂಡ) ಅಥವಾ ಕಣೆ ಎಂದು ಕರೆಯುತ್ತಾರೆ. ಬಾಧೆಗೊಳಗಾದ ಸಸಿಗಳು ಕುಳ್ಳಗಿದ್ದು, ಹೆಚ್ಚು ಕುಡಿ ಸಸಿಗಳನ್ನು ಹೊಂದಿರುತ್ತವೆ. ತಡವಾಗಿ ನಾಟಿ ಮಾಡಿದ ಭತ್ತದ ಗದ್ದೆಗಳಲ್ಲಿ ಈ ನೊಣದ ಹಾವಳಿ ಹೆಚ್ಚು. ಇಂತಹ ಪೈರಿನಲ್ಲಿ ತೆನೆ ಬರುವುದಿಲ್ಲ.

ಹತೋಟಿ: ಸಸಿಮಡಿಗೆ ೭೫೦ ಗ್ರಾಂ ಫೋರೇಟ್ ೧೦ ಜಿ. ಅಥವಾ ೧.೨೫ ಕೆ.ಜಿ. ಕಾರ್ಬಾಪ್ಯುರಾನ್ ೩ ಜಿ. ಅನ್ನು ಬೆರೆಸಬೇಕು. ನಾಟಿ ಮಾಡಿದ ೧೨-೧೫ ದಿವಸಗಳ ನಂತರ ಪ್ರತಿ ಎಕರೆಗೆ ೫ ಕೆ.ಜಿ. ಫೋರೆಟ್ ೧೦ ಜಿ. ಅಥವಾ ೮ ಕೆ. ಜಿ. ಕಾರ್ಬಾಪ್ಯುರಾನ್ ೩ಜಿ. ಅಥವಾ ಕ್ವಿನಾಲ್‌ಫಾಸ್ ೪ ಜಿ. ಯನ್ನು ಮರಳು ಜೊತೆ ಮಿಶ್ರಣಮಾಡಿ ಬಳಸುವುದು.

ಹಸಿರು ಜಿಗಿ ಹುಳು: ದೇಶದ ಎಲ್ಲಾ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಹಸಿರು ಜಿಗಿಹುಳುಗಳು ಕಂಡುಬರುತ್ತವೆ. ಬಾಧೆಯ ಲಕ್ಷಣಗಳು: ಅಪ್ಸರೆ ಹುಳುಗಳು ಮತ್ತು ಬೆಳೆದ ಹುಳುಗಳು ಎಲೆಗಳ ರಸವನ್ನು ಹೀರುವುದರಿಂದ ಎಲೆಯು ಹಳದಿ ಬಣ್ಣಕ್ಕೆ ತಿರುಗಿ ವಿಲಕ್ಷಣವಾದ ಕೆಂಪು ಗುರುತುಗಳು ಎಲೆಗಳ ತುದಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದ ಪೈರಿನ ಬೆಳವಣಿಗೆಯು ಕುಗ್ಗಿ ಪೈರು ಬಾಡುತ್ತದೆ. ಈ ಕೀಟಗಳು ತುಂಗ್ರಾ ಎಂಬ ನಂಜು ರೋಗ ಹರಡುವುದಕ್ಕೆ ಕಾರಣವಾಗುತ್ತದೆ.

28

ನಿರ್ವಹಣೆ: ಬಾಧೆ ಕಂಡುಬಂದಾಗ ಪ್ರತಿ ಲೀಟರ್ ನೀರಿಗೆ ೧.೫ ಮಿ.ಲೀ. ಮಾನೋಕ್ರೋಟೊಫಾಸ್ ೩೬ ಎಸ್.ಎಲ್. ಅಥವಾ ೦.೫ ಮಿ.ಲೀ. ಇಮಿಡಾಕ್ಲೊಪ್ರಿಡ್ ೧೭.೮ ಎಸ್. ಎಲ್. ಅನ್ನು ಬೆರೆಸಿ ಸಿಂಪರಣೆ ಮಾಡಬೇಕು.

ಕಂದು ಜಿಗಿ ಹುಳು: ನೀಲಪರ್ವತ ಲ್ಯೂಗನ್ಸ್ (ಡೆಲ್ಫಾಸಿಡೆ: ಹೋಮೋಪ್ಟೆರಾ)

ಇದೊಂದು ಭತ್ತದ ಬೆಳೆಗೆ ಮಾರಕವಾಗಿರುವ ಪ್ರಮುಖ ಕೀಟ. ಇದರ ಹಾವಳಿಯಿಂದ ರೈತರಿಗೆ ಶೇ.೧೦ ರಿಂದ ೯೦ ಕ್ಕೂ ಹೆಚ್ಚು ಇಳುವರಿಯಲ್ಲಿ ಮತ್ತು ಹುಲ್ಲಿನಲ್ಲಿ ನಷ್ಟವಾಗುತ್ತದೆ. ಭತ್ತವನ್ನೇ ವರ್ಷದಲ್ಲಿ ೨-೩ ಬೆಳೆಯಾಗಿ ಬೆಳೆಯುವುದರಿಂದ, ಹೆಚ್ಚು ಕೀಟನಾಶಕಗಳ ಬಳಕೆಯಿಂದ ಮತ್ತು ಅತಿಯಾದ ಸಾರಜನಕ ಬಳಕೆ ಹಾಗೂ ಅತಿಯಾಗಿ ನೀರು ಹಾಯಿಸುವುದರಿಂದ ಈ ಕೀಟಗಳು ವೃದ್ಧಿಯಾಗಲು ಕಾರಣವಾಗುತ್ತವೆ. ಇದರ ಹಾವಳಿಯು ತೆನೆಬರುವ ಕಾಲದಲ್ಲಿ ಅಂದರೆ ಸೆಪ್ಟೆಂಬರ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಾಸ್ತಿ ಇರುತ್ತದೆ.

ಬಾಧೆಯ ಲಕ್ಷಣಗಳು: ಈ ಕೀಟದ ಅಪ್ಸರೆ ಮತ್ತು ಪ್ರೌಢ ಹುಳುಗಳು ಭತ್ತದ ಬುಡ ಭಾಗದಲ್ಲಿ (ನೀರಿನ ಮಟ್ಟಕ್ಕಿಂತ ೧-೨” ಮೇಲೆ) ಎಲೆ ಕವಚ/ಕಾಂಡದ ಮೇಲೆ ಅಧಿಕ ಸಂಖ್ಯೆಯಲ್ಲಿ ಆವರಿಸಿ ಗಿಡಗಳ ಮೇಲ್ಭಾಗಗಳಿಂದ ರಸವನ್ನು ಹೀರುತ್ತವೆ. ಇದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಎಲೆಗಳು ಸುಟ್ಟಂತೆ ಕಾಣುತ್ತವೆ. ಇದನ್ನು ಜಿಗಿಸುಡು (ಹಾಫರ್ ಬರ್ನ್) ಎಂದು ಕರೆಯುತ್ತಾರೆ. ಈ ಹುಳುಗಳು ಅತಿ ಮಧುರವಾದ ಒಂದು ಬಗೆಯ ದ್ರವವನ್ನು ಸ್ರವಿಸುವುದರಿಂದ ಎಲೆಗಳ ಮೇಲೆ ಶಿಲೀಂಧ್ರಗಳು ಬೆಳೆದು ಪೈರುಗಳು ಕೊಳೆಯುವುದು ಉಂಟು. ಈ ಕೀಟದ ಹಾವಳಿಯಿಂದ ಭತ್ತದ ಕಾಳು ತುಂಬದೇ ಜೊಳ್ಳಾಗುತ್ತದೆ ಹಾಗೂ ಇಳುವರಿಯಲ್ಲಿ ಗಣನೀಯವಾಗಿ ಕುಂಠಿತವಾಗುತ್ತದೆ.

ನಿರ್ವಹಣೆ

• ಸಾರಜನಕವನ್ನು ಶಿಫಾರಸ್ಸಿನ ಮೇರೆಗೆ ನಿಗದಿತ ಪ್ರಮಾಣದಲ್ಲಿ ಹಾಕಬೇಕು. ಕಂದು ಜಿಗಿ ಹುಳು ಬಾಧಿತ ಗದ್ದೆಗಳಲ್ಲಿ ಮೇಲು ಗೊಬ್ಬರವನ್ನು ೨-೩ ಹಂತಗಳಲ್ಲಿ ಕೊಡಬೇಕು.
• ಗಿಡಗಳನ್ನು ಸರಿಯಾದ ಅಂತರದಲ್ಲಿ ನಾಟಿ ಮಾಡಬೇಕು. ಪ್ರತಿ ೨೦ ಸಾಲು ನಾಟಿ ಮಾಡಿದ ನಂತರ ಒಂದು ಸಾಲು ಖಾಲಿ ಬಿಡುವುದರಿಂದ ಗಿಡಗಳಿಗೆ ಗಾಳಿ, ಬೆಳಕು ಚೆನ್ನಾಗಿ ಸಿಗುವುದರಿಂದ ಕೀಟ ಬಾಧೆ ಕಡಿಮೆಯಾಗುತ್ತದೆ.
• ಬಾಧಿತ ಗದ್ದೆಗಳಲ್ಲಿ ಗದ್ದೆಗಳಲ್ಲಿರುವ ನೀರನ್ನು ಒಂದು ವಾರದ ಕಾಲ ಖಾಲಿ ಮಾಡಬೇಕು. ಇದರಿಂದ ಕಂದು ಜಿಗಿ ಹುಳುಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.
• ೦.೫ ಮಿ.ಲೀ. ಇಮಿಡಾಕ್ಲೊಪ್ರಿಡ್ ೧೭.೮ ಎಸ್. ಎಲ್. ಅಥವಾ ೦.೭ ಗ್ರಾಂ ಥಯೋಮೆಥಾಕ್ಸಿಮ್ ೨೫ ಡಬ್ಲ್ಯೂ.ಜಿ. ಅಥವಾ ೧.೫ ಮಿ.ಲೀ. ಮಾನೋಕ್ರೋಟೊಫಾಸ್ ೩೬ ಎಸ್.ಎಲ್. ಅಥವಾ ೨ ಮಿ.ಲೀ. ಕ್ಲೋರ್‌ಫೈರಿಫಾಸ್ ೨೦ ಇ.ಸಿ. ಅಥವಾ ೧.೪ ಮಿ.ಲೀ. ಬುಪ್ರೋಫೀಜಿನ್ ೨೫ ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು ಅಥವಾ ಪ್ರತಿ ಎಕರೆಗೆ ೫ ಕೆ.ಜಿ. ಫೋರೆಟ್ ೧೦ ಜಿ. ಅಥವಾ ೮ ಕೆ.ಜಿ. ಕಾರ್ಬಾಪ್ಯುರಾನ್ ೩ಜಿ. ಅಥವಾ ಕ್ವಿನಾಲ್‌ಫಾಸ್ ೪ ಜಿ. ಯನ್ನು ಮರಳು ಜೊತೆ ಮಿಶ್ರಣ ಮಾಡಿ ಬಳಸುವುದು.

ಗಂಧಿ ತಿಗಣೆ/ ತೆನೆ ತಿಗಣೆ (ಬಂಬೂಚಿ): ಈ ಕೀಟದ ಹಾವಳಿಯು ಕಾಳಿನಲ್ಲಿ ಹಾಲು ತುಂಬುವ ಸಮಯದಲ್ಲಿ ಹೆಚ್ಚು. ಬಾಧೆಯ ಲಕ್ಷಣಗಳು: ಪ್ರೌಢ ಮತ್ತು ಅಪ್ಸರೆ ಕೀಟಗಳು ತೆನೆಗಳಲ್ಲಿ ಹಾಲು ತುಂಬುತ್ತಿರುವ ಎಳೆ ಕಾಳಿನಿಂದ ರಸವನ್ನು ಹೀರುತ್ತವೆ. ಇದರಿಂದ ಕಾಳಿನ ಮೇಲೆ ಸಣ್ಣ ಕಂದು ಬಣ್ಣದ ಚುಕ್ಕೆಗಳಾಗುತ್ತವೆ. ಕ್ರಮೇಣ ಚಿಕ್ಕ ರಂಧ್ರವನ್ನು ಸಹ ಭತ್ತದ ಕಾಳಿನ ಮೇಲೆ ನೋಡಬಹುದು. ಇದರಿಂದ ಭತ್ತದ ಕಾಳುಗಳು ಜೊಳ್ಳಾಗುತ್ತವೆ. ಆದರೆ ಸಂಪೂರ್ಣ ಬೆಳೆದು ಗಟ್ಟಿಯಾದ ಕಾಳುಗಳನ್ನು ಈ ಕೀಟಗಳು ಹಾನಿ ಮಾಡುವುದಿಲ್ಲ. ಈ ಕೀಟಗಳನ್ನು ಮುಟ್ಟಿದಾಗ ಒಂದು ರೀತಿಯ ದುರ್ವಾಸನೆಯನ್ನು ಹೊಮ್ಮಿಸುತ್ತದೆ.

ನಿರ್ವಹಣೆ

• ಆಸರೆ ಸಸ್ಯಗಳನ್ನು ನಾಶಪಡಿಸಬೇಕು.
• ಭತ್ತ ಹೂ ಬಿಡುವ ಕಾಲದಲ್ಲಿ ಮೆಲಾಥಿಯಾನ್ ಶೇ. ೫ ಅನ್ನು ಎಕರೆಗೆ ೮ ಕೆ.ಜಿ ಯಂತೆ ಧೂಳೀಕರಿಸಬೇಕು ಅಥವಾ ಮೆಲಾಥಿಯಾನ್ ೫೦ ಇ.ಸಿ. ಯನ್ನು ೨ ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಇವುಗಳಲ್ಲದೆ, ಭತ್ತದ ಬೆಳೆಯನ್ನು ಮುಳ್ಳು ಚಿಪ್ಪಿನ ಹುಳು, ನೀಲಿ ಚಿಪ್ಪಿನ ಹುಳು, ಭತ್ತದ ಜಿಗಿಪತಂಗ, ಮಿಡತೆ, ಕೊಂಬಿನ ಹುಳು, ಇತ್ಯಾದಿ ಆಗಾಗ ಬಾಧಿಸುತ್ತಿದ್ದು, ಅವುಗಳ ತೀವ್ರತೆಯನ್ನು ನೋಡಿ ಅವುಗಳ ಹತೋಟಿಗೆ ಕ್ಲೋರ್‌ಪೈರಿಫಾಸ್ ೨೦ ಇ.ಸಿ. ಅಥವಾ ಕ್ವಿನಾಲ್‌ಫಾಸ್ ೨೫ ಇ.ಸಿ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಭತ್ತದಲ್ಲಿ ಥ್ರಿಪ್ಸ್ ಕೀಟದ ಬಾಧೆ ಕಂಡುಬಂದರೆ ಡೈಮಿಥೊಯೇಟ್ ೧.೭೫ ಮಿ.ಲೀ ಅಥವಾ ೦.೫ ಮಿ.ಲೀ. ಇಮಿಡಾಕ್ಲೊಪ್ರಿಡ್ ೧೭.೮ ಎಸ್. ಎಲ್. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

"ಸಮಗ್ರ ಪೀಡೆ ನಿರ್ವಹಣೆ ಪರಿಸರ ಸಂರಕ್ಷಣೆ"