ನೇಗಿಲ ಮಿಡಿತ  ಸಂಪುಟ 6 ಸಂಚಿಕೆ 3

ಮಿಡಿತ - ತುಡಿತ

ಎಂ. ಸಿ. ಮಲ್ಲಿಕಾರ್ಜುನ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
೯೭೪೦೩೬೯೩೨೭,
1

ನಿಮ್ಮ ಪತ್ರಿಕೆಯು ಕೃಷಿಕರಿಗೆ ಉಪಯುಕ್ತವಾದಂತಹ ಮಾಹಿತಿ ನೀಡುತ್ತಿದೆ. ಮಳೆಗಾಲದಲ್ಲಿ ಹರಿಯುವ ನೀರನ್ನು ವ್ಯರ್ಥವಾಗದಂತೆ ಸಂಗ್ರಹಿಸಿ, ಬೇಸಿಗೆ ಕಾಲಕ್ಕೆ ನೀರನ್ನು ಬಳಸುವ ಕುರಿತ ಮಾಹಿತಿಯನ್ನು ನೀಡಿದರೆ ನಮಗೆ ಉಪಯುಕ್ತ. ಹೀಗೆ ಸಂಗ್ರಹಿಸಿದ ನೀರಿನಲ್ಲಿ ಕಡಿಮೆ ವೆಚ್ಚದಲ್ಲಿ ತರಕಾರಿಗಳನ್ನು, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಹಿತ್ತಲ ತರಕಾರಿ ಕೃಷಿ ಮತ್ತು ಮನೆಯ ಖರ್ಚಿನ ನಿರ್ವಹಣೆಗೆ ಅಲ್ಪ ಜಮೀನಿನಲ್ಲಿ ತರಕಾರಿ ಬೆಳೆದು ಲಾಭಗಳಿಸುವ ಬಗ್ಗೆ ಮಾಹಿತಿಯನ್ನು ನೀಡಲು ಕೋರುತ್ತೇನೆ. ತರಕಾರಿ ಬೆಳೆಗಳ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ನೀಡಿದರೆ ನನ್ನಂಥ ಸಾವಿರಾರು ಗೃಹಿಣಿಯರಿಗೆ ಅನುಕೂಲವಾಗುತ್ತದೆ.

--ಎಸ್. ಚಂದ್ರಮ್ಮ, ಸುಣ್ಣದಹಳ್ಳಿ ಗ್ರಾಮ, ದೋರನಾಳು, ತರೀಕೆರೆ (ತಾ), ಚಿಕ್ಕಮಗಳೂರು (ಜಿ)


ನಮ್ಮ ಭಾಗದಲ್ಲಿ ಭತ್ತವನ್ನು ಹೆಚ್ಚಾಗಿ ಬೆಳೆಯುತ್ತೇವೆ. ನಿಮ್ಮ ಪತ್ರಿಕೆಯಲ್ಲಿ ಭತ್ತದ ಬಗ್ಗೆ ಮಾಹಿತಿಯನ್ನು ನೀಡಬೇಕೆಂದು ಕೇಳಿಕೊಳ್ಳುತ್ತೇನೆ. ಕಳೆದ ಸಂಚಿಕೆಯಲ್ಲಿ ಹೊಸ ಬೆಳೆಯಾದ ಮಡಹಾಗಲದ ಬಗ್ಗೆ ಸಮಗ್ರವಾಗಿ ಮಾಹಿತಿಯನ್ನು ನೀಡಿರುವುದು ತುಂಬಾ ಉಪಯುಕ್ತವಾಗಿದೆ. ನಮ್ಮಲ್ಲಿ ಕಬ್ಬು ಬೆಳೆಯನ್ನು ಬೆಳೆಯುತ್ತಿದ್ದು, ಕಬ್ಬು ಬೆಳೆಯ ಸಮಗ್ರ ನಿರ್ವಹಣೆಯ ಕುರಿತು ಮಾಹಿತಿಯನ್ನು ನೀಡಬೇಕಾಗಿ ಕೋರುತ್ತೇನೆ. ಇದಲ್ಲದೆ ಪ್ರತಿ ಸಂಚಿಕೆಯಲ್ಲಿ ಸಾಧಕ ರೈತ, ಮೌಲ್ಯವರ್ಧನೆ, ನಮ್ಮ ವಿಶ್ವವಿದ್ಯಾಲಯ ಅಂಕಣಗಳು ಪ್ರಕಟಿಸುತ್ತಿರುವುದು ನಮಗೆ ಉಪಯುಕ್ತವಾಗಿವೆ. ಡಾ.ಎ.ಎಸ್. ಕುಮಾರ ಸ್ವಾಮಿಯವರ ಚಿಂತನ ಅಂಕಣದ ಮುಂಗಾರು ಲೇಖನವು ನಮ್ಮಂತಹ ರೈತರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದೆ. ಈ ಪತ್ರಿಕೆಯಲ್ಲಿ ಆಯಾಕಾಲದ ಬೆಳೆಗಳ ಬಗ್ಗೆ ಮಾಹಿತಿ ನೀಡುತ್ತಿರುವುದಕ್ಕೆ ಧನ್ಯವಾದಗಳು.

--ಹೆಚ್.ಸಿ.ರಾಜಶೇಖರ್, ಹೊಳ್ಳೇನಹಳ್ಳಿ(ಗ್ರಾಮ) ದುದ್ದ(ಹೋ), ಮಂಡ್ಯ(ತಾ), ಮಂಡ್ಯ (ಜಿ)


ನೇಗಿಲ ಮಿಡಿತ ಪತ್ರಿಕೆ ಕೃಷಿಕರಿಗೆ ತುಂಬಾ ಒಳ್ಳೆಯ ಮಾಹಿತಿಯನ್ನು ನೀಡುತ್ತಿದೆ. ನಮಗೆ ಮುಖ್ಯವಾಗಿ ವಾಣಿಜ್ಯ ಬೆಳೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಬೇಕೆಂದು ಕೋರುತ್ತಿದ್ದೇನೆ. ನಾನು ಕೃಷಿಯ ಜೊತೆಗೆ ಮೀನುಗಾರಿಕೆ ಕೃಷಿ ಮಾಡುತ್ತಿದ್ದೇನೆ. ಆದುದರಿಂದ ಮೀನು ಕೃಷಿಯ ಬಗ್ಗೆ ಸಮಗ್ರ ವಾದಂತಹ ಮಾಹಿತಿಯನ್ನು ನೀಡಬೇಕಾಗಿ ಕೇಳಿಕೊಳ್ಳುತ್ತೇನೆ. ಹಿಂದಿನ ಸಂಚಿಕೆಯಲ್ಲಿ ಮಡಹಾಗಲ ಬೆಳೆ ಬಗ್ಗೆ ಹೊಸ ಮಾಹಿತಿ ಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ಬಹಳ ಮುಖ್ಯವಾಗಿ ಸಾವಯವ ಪದ್ದತಿಯ ಬಗ್ಗೆ, ಸಾವಯವದ ಮೂಲಕ ಕೀಟ ಮತ್ತು ರೋಗ ನಿಯಂತ್ರಣದ ಮಾಹಿತಿಯನ್ನು ನೀಡಿದರೆ ನಮ್ಮ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ.

--ಎಂ.ಎನ್ ವಸಂತನಾಯ್ಕ್, ಮಟಪ್ಪಾಡಿ ಮತ್ತು ಅಂಚೆ, ಬ್ರಹ್ಮಾವರ, ಉಡುಪಿ ಜಿಲ್ಲೆ


ನಿಮ್ಮ ಪತ್ರಿಕೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ಬರುತ್ತಿದೆ. ಅಲ್ಲದೆ ಕಲರ್ ಮುದ್ರಣದಿಂದಾಗಿ ನೋಡಲಿಕ್ಕೆ ಆಕರ್ಷಕವಾಗಿದ್ದು, ಎಲ್ಲಾ ಲೇಖನಗಳು ನಮ್ಮ ಗಮನ ಸೆಳೆಯುತ್ತವೆ. ಇದರ ಜೊತೆಗೆ ನೀವು ಕರ್ನಾಟಕದ ಎಲ್ಲಾ ಪ್ರದೇಶದ ಬೆಳೆಗಳ ಬಗ್ಗೆ ಪ್ರಕಟಿಸುತ್ತಿರುವುದು ನಮಗೆ ಉಪಯುಕ್ತ. ನಮ್ಮ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಮಳೆ ಹೆಚ್ಚಾಗಿದ್ದು, ಬೆಟ್ಟಗಳ ಕುಸಿತ, ಮಣ್ಣು ಕೊಚ್ಚಾಣಿಕೆಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಮಣ್ಣಿನ ಸವಕಳಿ ತಡೆಗಟ್ಟುವ ವಿಧಾನಗಳ ಕುರಿತಂತೆ ಮಾಹಿತಿಯನ್ನು ತಿಳಿಸಿಕೊಡಿ. ನಮ್ಮಲ್ಲಿ ಕಾಫಿ ಬೆಳೆ ಹೆಚ್ಚಾಗಿರುವುದರಿಂದ ಕಾಫಿ ಬೆಳೆ ಬಗ್ಗೆ ಸಮಗ್ರವಾದಂತಹ ಮಾಹಿತಿಯನ್ನು ನೀಡಿದರೆ ನಮ್ಮ ಭಾಗದ ಕೃಷಿಕರಿಗೆ ಅನುಕೂಲವಾಗುತ್ತದೆ. ಅಲ್ಲದೇ ಅತಿಯಾದ ಮಳೆಯಿಂದ ನಮ್ಮ ಭಾಗದಲ್ಲಿ ಕಾಳು ಮೆಣಸು ಬೆಳೆಯು ರೋಗದ ಬಾಧೆಗೆ ತುತ್ತಾಗುತ್ತಿದೆ. ಇದರ ಬಗ್ಗೆ ಮಾಹಿತಿ ಸಿಕ್ಕರೆ ನಮಗೆ ಅನುಕೂಲವಾಗುತ್ತದೆ.

--ಎಂ.ಎನ್. ಅಜ್ಜಮಾದ ದೇವಯ್ಯ, ತಾಳತ್ ಮನೆ, ಮಡಿಕೇರಿ ಜಿಲ್ಲೆ