ನೇಗಿಲ ಮಿಡಿತ  ಸಂಪುಟ 6 ಸಂಚಿಕೆ 3

ಮೌಲ್ಯವರ್ಧನೆ - ಬಾಳೆದಿಂಡಿನ ತ್ಯಾಜ್ಯದಿಂದ ಮೌಲ್ಯವರ್ಧನೆ

ಲಕ್ಷ್ಮಣ ಕುಕನೂರ, ಜಿತೇಂದ್ರ ಸಿ. ಎಸ್. ಮತ್ತು ಮಂಜುಳಾ ಕರಡಿಗುದ್ದಿ, ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕ, ಕುಂಬಾಪುರ, ಧಾರವಾಡ
೯೪೪೮೬೩೭೯೪೬,
1

ಭಾರತ ಜಗತ್ತಿನಲ್ಲಿ ಅತೀ ಹೆಚ್ಚು ಬಾಳೆ ಬೆಳೆಯುವ ದೇಶವಾಗಿದೆ. ಇಲ್ಲಿ ಪ್ರಮುಖವಾಗಿ ಬೆಳೆಯುವ ತಳಿಗಳೆಂದರೆ ಕ್ಯಾವಿಂಡಿಶ್, ಗ್ರಾಂಡ್‌ನೈನ್, ಪಚ್ಚ ಬಾಳೆ, ಮೈಸೂರು, ಇತ್ಯಾದಿ. ಬಾಳೆ ಬೆಳೆಯುವ ಪ್ರಮುಖ ರಾಜ್ಯಗಳು ಅಂದರೆ ತಮಿಳುನಾಡು, ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ಗುಜರಾತ್, ಅಸ್ಸಾಂ ಮತ್ತು ಕೇರಳ. ಭಾರತದಲ್ಲಿ ೨೦೧೮ನೇ ಸಾಲಿನಲ್ಲಿ ಸರಾಸರಿ ೩೦ ಮಿಲಿಯನ್ ಟನ್ ಬಾಳೆಯನ್ನು ೦.೮೮ ಮಿಲಿಯನ್ ಹೆಕ್ಟೇರ್‌ನಿಂದ ಬೆಳೆಯಲಾಗಿತ್ತು. ಬಾಳೆ ಹಣ್ಣಿನಿಂದ ಸುಮಾರು ೧೭ ತರಹದ ಪದಾರ್ಥಗಳನ್ನು ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಬಾಳೆಯ ಗೊನೆಯನ್ನು ತೆಗೆದ ನಂತರ ಸುಮಾರು ೨೫-೩೦ ಟನ್ ಪ್ರತಿ ಹೆಕ್ಟೇರ್‌ಗಳಷ್ಟು ಬಾಳೆದಿಂಡು ನಿರುಪಯುಕ್ತ ತ್ಯಾಜ್ಯವಾಗಿ ಸಂಗ್ರಹಗೊಳ್ಳುತ್ತದೆ. ಇಂತಹ ಸಂಗ್ರಹಗೊಂಡ ಬಾಳೆದಿಂಡುಗಳನ್ನು ಬಹಳಷ್ಟು ಸಲ ವಿಲೇವಾರಿ ಮಾಡುವುದೇ ರೈತರಿಗೆ ಕಷ್ಟವಾಗುತ್ತದೆ. ಕಾರಣ ಇದರಲ್ಲಿ ಜಾಸ್ತಿ ನಾರು ಇರುವುದರಿಂದ ಇದು ಬೇಗನೆ ಕೊಳೆಯುವುದಿಲ್ಲ. ಇದರಿಂದ ಒಂದೊಂದು ಸಲ ಪರಿಸರ ಮಾಲಿನ್ಯವಾಗುವುದುಂಟು. ಕೆಲವು ರೈತರು ಸಾಮಾನ್ಯವಾಗಿ ಇದನ್ನು ಗೊಬ್ಬರ ಹಾಗೂ ಎರೆಹುಳು ಗೊಬ್ಬರವನ್ನು ತಯಾರಿಸಲು ಬಳಸುತ್ತಾರೆ. ಆದರೆ ಇದನ್ನು ಸರಿಯಾಗಿ ಸಂಸ್ಕರಿಸಿ ಬೇರೆ ಬೇರೆ ತರಹದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಉಪಯೋಗಿಸಬಹುದು. ಬಾಳೆದಿಂಡಿನ ಒಳಪದರವಾದ ಕೋರ್ (Core) ನಲ್ಲಿ ಹೆಚ್ಚು ಪ್ರಮಾಣದಲ್ಲಿ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಕಬ್ಬಿಣ, ಮೆಗ್ನೇಷಿಯಂ ಮತ್ತು ಇತರೆ ಕಿಣ್ವಗಳಿವೆ. ಇವುಗಳೆಲ್ಲವು ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳಾಗಿವೆ ಹಾಗೂ ಮೂತ್ರ ಪಿಂಡದಲ್ಲಿ ಕಲ್ಲಾಗುವುದನ್ನು ತಡೆಗಟ್ಟುವಲ್ಲಿ ಬಾಳೆದಿಂಡಿನ ರಸ ಮತ್ತು ಉಪ್ಪಿನಕಾಯಿ ಸೇವನೆಯು ಬಹಳ ಪರಿಣಾಮಕಾರಿಯಾಗಿವೆ.

3

ಬಾಳೆದಿಂಡಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ನಾಲ್ಕು ವಿಧವಾಗಿ ವಿಂಗಡಿಸಬಹುದು. ೧. ಸೆಂಟ್ರಲ್ ಕೋರ್‌ನ ಉತ್ಪನ್ನಗಳು, ೨. ಬಾಳೆದಿಂಡಿನ ದ್ರವದ ಉತ್ಪನ್ನಗಳು ೩.ಬಾಳೆದಿಂಡಿನ ನಾರಿನ ಉತ್ಪನ್ನಗಳು ೪.ಬಾಳೆದಿಂಡಿನ ಸ್ಕಚರ್‌ನ ಉತ್ಪನ್ನಗಳು

5

ಸೆಂಟ್ರಲ್ ಕೋರ್‌ನ ಉತ್ಪನ್ನಗಳು

ಸೆಂಟ್ರಲ್ ಕೋರ್‌ನಿಂದ ಖಾದ್ಯ (Edible) ಉತ್ಪನ್ನಗಳನ್ನೂ ಕೂಡ ತಯಾರಿಸಬಹುದು. ಅವುಗಳಲ್ಲಿ ಕ್ಯಾಂಡಿ, ತಂಪು ಪಾನೀಯಗಳಾದ ನೆಕ್ಟರ್, ಸ್ಕ್ವಾಷ್, ಆರ್.ಟಿ.ಎಸ್ ಮತ್ತು ಉಪ್ಪಿನಕಾಯಿಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೇಡಿಕೆ ಬರುತ್ತಿದೆ.

8

ಬಾಳೆದಿಂಡಿನ ನೆಕ್ಟರ್

ಬೇಕಾಗುವ ಸಾಮಗ್ರಿಗಳು ಬಾಳೆದಿಂಡಿನ ಕೋರ್ - ೩ ಕೆ.ಜಿ., ಸಕ್ಕರೆ ೨.೫ - ೩ ಕೆ.ಜಿ., ನೀರು - ೫ ಲೀಟರ್, ಆಮ್ಲ (ಸಿಟ್ರಿಕ್ ಎಸಿಡ್) - ಶೇಕಡಾ ೧

ವಿಧಾನ: ಬಾಳೆಗೊನೆ ತೆಗೆದ ನಂತರ ಬಾಳೆದಿಂಡನ್ನು ತೆಗೆದುಕೊಳ್ಳಬೇಕು. ನಂತರ ಬಾಳೆದಿಂಡನ್ನು ತುಂಡು ತುಂಡಾಗಿ ಕತ್ತರಿಸಬೇಕು. ನಂತರ ಮೇಲ್ಮೈ ನಾರಿನ ಪದರವನ್ನು ಸಂಪೂರ್ಣವಾಗಿ ಬೇರ್ಪಡಿಸಿದಾಗ ಕೋರ್ (Core) ಸಿಗುತ್ತದೆ. ಅದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು. ರುಬ್ಬುವ ಅಥವಾ ರಸ ತೆಗೆಯುವ ಯಂತ್ರದ ಸಹಾಯದಿಂದ ಕೋರಿನ ರಸವನ್ನು ತೆಗೆದು ಸೋಸುವ ಜಾಳಿಗೆ ಸಹಾಯದಿಂದ ರಸವನ್ನು ಶೋಧಿಸಬೇಕು. ಸೋಸಿದ ಬಾಳೆದಿಂಡಿನ ರಸಕ್ಕೆ ಮೇಲೆ ಸೂಚಿಸಿದ ಪ್ರಮಾಣದಲ್ಲಿ ಸಕ್ಕರೆ ಮತ್ತು ನೀರನ್ನು ಮಿಶ್ರಣ ಮಾಡಿ ಶೇಕಡಾ ೧ ರ ಆಮ್ಲವನ್ನು ಅದರಲ್ಲಿ ಬೆರೆಸಬೇಕು. ಆಗ ನೆಕ್ಟರ್ ತಯಾರಾಗುತ್ತದೆ. ನಂತರ ಗಾಜಿನ ಬಾಟಲಿಗಳನ್ನು ಕುದಿಯುವ ನೀರಿನಲ್ಲಿ ೧೦-೧೫ ನಿಮಿಷಗಳವರೆಗೆ ಕ್ರಿಮಿಗಳಿರದಂತೆ ಶುದ್ಧೀಕರಿಸಬೇಕು. ಶುದ್ದೀಕರಿಸಿದ ಬಾಟಲಿಗಳಲ್ಲಿ ನೆಕ್ಟರ್ ಅನ್ನು ತುಂಬಿ ಸಾಧಾರಣ ವಾತಾವರಣದಲ್ಲಿ ೩ ತಿಂಗಳವರೆಗೆ ಶೇಖರಿಸಿಡಬಹುದು. ಶೀತಲ ಶೈತ್ಯಗಾರದಲ್ಲಿ ೬ ತಿಂಗಳಿಗಿಂತಲೂ ಹೆಚ್ಚು ದಿವಸಗಳವರೆಗೆ ಶೇಖರಿಸಿ ಉಪಯೋಗಿಸಬಹುದು.

12

ಬಾಳೆದಿಂಡಿನ ಕ್ಯಾಂಡಿ

ಬೇಕಾಗುವ ಸಾಮಗ್ರಿಗಳು ಬಾಳೆದಿಂಡಿನ ಕೋರ್ - ೧ ಕೆ.ಜಿ., ಸಕ್ಕರೆ - ೭೦೦ ಗ್ರಾಂ, ನೀರು - ೧ ಲೀಟರ್, ಆಮ್ಲ - ಶೇಕಡಾ ೧ ವಿಧಾನ: ಗೊನೆ ತೆಗೆದ ನಂತರ ಬಾಳೆ ದಿಂಡನ್ನು ತುಂಡು ತುಂಡಾಗಿ ಕತ್ತರಿಸಿ ನಂತರ ಮೇಲ್ಮೈ ನಾರಿನ ಪದರವನ್ನು ಸಂಪೂರ್ಣವಾಗಿ ಬೇರ್ಪಡಿಸಬೇಕು. ನಂತರ ಸಿಗುವ ಒಳಾಂಗಣದ ಕೋರ್ ಅನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು. ಈ ಕತ್ತರಿಸಿದ ತುಂಡುಗಳನ್ನು ೩-೪ ನಿಮಿಷ ಕುದಿಯುವ ನೀರಿನಲ್ಲಿ ಬೇಯಿಸಬೇಕು. ನಂತರ ಸಕ್ಕರೆ ಪಾಕವನ್ನು ೧ ಲೀಟರ್ ನೀರಿಗೆ ೭೦೦ ಗ್ರಾಂ ಸಕ್ಕರೆ ಸೇರಿಸಿ ತಯಾರಿಸಿಕೊಳ್ಳಬೇಕು. ಕತ್ತರಿಸಿದ ಬಾಳೆದಿಂಡಿನ ಕೋರ್ ಅನ್ನು ಸಕ್ಕರೆ ಪಾಕ ತಣ್ಣಗಾದ ಮೇಲೆ ಹಾಕಿ ಅದಕ್ಕೆ ಶೇಕಡಾ ಒಂದರಷ್ಟು ಆಮ್ಲವನ್ನು ಬೆರೆಸಿ ೨೪ ತಾಸು ಅದ್ದಿಡಬೇಕು. ೨೪ ತಾಸಿನ ನಂತರ ಅದ್ದಿದ ತುಂಡುಗಳನ್ನು ಪಾಕದಿಂದ ಹೊರತೆಗೆದು ಒಣಗಿಸುವ ಯಂತ್ರದಲ್ಲಿ (೬೦೦ ಸೆಲ್ಸಿಯಸ್) ೨೪ ಗಂಟೆಗಳ ಕಾಲ ಒಣಗಲು ಇಡಬೇಕು. ಇದೇ ಬಾಳೆದಿಂಡಿನ ಕ್ಯಾಂಡಿ. ಒಣಗಿದ ಬಾಳೆದಿಂಡಿನ ಕ್ಯಾಂಡಿಯನ್ನು ಪಾಲಿಥೀನ್ ಕವರ್‌ನಲ್ಲಿ ಪ್ಯಾಕ್ ಮಾಡಿ ಉಪಯೋಗಿಸಬಹುದು ಅಥವಾ ಶೇಖರಿಸಿಡಬಹುದು.

15

ಬಾಳೆದಿಂಡು ಉಪ್ಪಿನಕಾಯಿ

ಬೇಕಾಗುವ ಸಾಮಗ್ರಿಗಳು ಬಾಳೆದಿಂಡಿನ ಹೋಳುಗಳು - ೧ ಕೆ.ಜಿ., ಸಾಸಿವೆ - ೨೫೦ ಗ್ರಾಂ, ಮೆಂತೆ - ೧೦೦ ಗ್ರಾಂ, ಕರಿಮೆಣಸು (Black Pepper) - ೧೦೦ ಗ್ರಾಂ, ಇಂಗು - ೨ ಚಮಚ, ಒಣಮೆಣಸಿನ ಖಾರ - ೫೦೦ ಗ್ರಾಂ, ಎಣ್ಣೆ - ೨೫೦ ಮಿ.ಲೀ., ಅರಿಷಿಣ - ೫೦ ಗ್ರಾಂ, ಉಪ್ಪು-೨೫೦ - ೩೦೦ ಗ್ರಾಂ, ಲಿಂಬೆ ಹಣ್ಣು-೧೫-೨೦ ಲಿಂಬೆ ಹಣ್ಣಿನ ರಸ ವಿಧಾನ: ೧ ಕೆ.ಜಿ.ಬಾಳೆದಿಂಡನ್ನು ಚಿಕ್ಕ ಚಿಕ್ಕ ಹೋಳುಗಳಾಗಿ ಕತ್ತರಿಸಿ ಈ ಹೋಳುಗಳ ಮೇಲೆ ತಿಳಿಸಿದಷ್ಟು ಉಪ್ಪು ಹಾಕಿ ೨-೩ ಗಂಟೆ ನೆನೆಸಿ ಇಡಬೇಕು. ಅದೇ ನೀರನ್ನು ಕುದಿಸಿ ಆರಲು ಬಿಡಿ. ನಂತರ ಮೇಲೆ ತಿಳಿಸಿದ ಸಾಂಬಾರು ಪದಾರ್ಥಗಳಲ್ಲಿ ಅರ್ಧ ಭಾಗ ಹುರಿದು ಮಿಕ್ಕ ಅರ್ಧ ಭಾಗದಲ್ಲಿ ಕೂಡಿಸಿ ಪುಡಿ ಮಾಡಿಕೊಂಡು ಕುದಿಸಿದ ಉಪ್ಪು ನೀರಿಗೆ ಹಾಕಿ ಚೆನ್ನಾಗಿ ಬೆರೆಸಬೇಕು. ನಂತರ ಎಣ್ಣೆ ಕಾಯಿಸಿ ಅದಕ್ಕೆ ೨-೩ ಚಮಚ ಸಾಸಿವೆ, ಇಂಗು ಹಾಕಿ ತಣ್ಣಗಾಗಲು ಬಿಡಬೇಕು. ನಂತರ ಹೋಳುಗಳನ್ನು ಹಾಕಿ ಚೆನ್ನಾಗಿ ಕಲಸಿ ಪೂರ್ಣ ತಣ್ಣಗಾದ ಮೇಲೆ ಗಾಜಿನ / ಪ್ಲಾಸ್ಟಿಕ್ ಡಬ್ಬಿಗೆ ಹಾಕಿ ಇಡಬೇಕು. ನಂತರ ೩ ದಿನ ಬಿಟ್ಟು ಮತ್ತೊಮ್ಮೆ ಚೆನ್ನಾಗಿ ಕಲಸಿ ಶೇಖರಿಸಿಡಬೇಕು. ಈ ಉಪ್ಪಿನಕಾಯಿಯನ್ನು ೩-೬ ತಿಂಗಳವರೆಗೆ ಉಪಯೋಗಿಸಬಹುದು.

18

ಮೊರಬ್ಬ (ಪಾಕಕ್ಕೆ ಹಾಕಿದ ಬಾಳೆದಿಂಡು)

ಬೇಕಾಗುವ ಸಾಮಗ್ರಿಗಳು ಬಾಳೆದಿಂಡಿನ ಕೋರ್ - ೧ ಕೆ.ಜಿ., ಬೆಲ್ಲ -೭೦೦ ಗ್ರಾಂ, ನೀರು - ೧ ಲೀಟರ್ ಮಾಡುವ ವಿಧಾನ: ಗೊನೆ ತೆಗೆದ ಬಾಳೆದಿಂಡನ್ನು ತೆಗೆದುಕೊಂಡು ಬಾಳೆದಿಂಡಿನ ಮೇಲ್ನಾರಿನ ಪದರವನ್ನು ಸಂಪೂರ್ಣವಾಗಿ ಬೇರ್ಪಡಿಸಿದಾಗ ಬರುವ ಒಳಾಂಗವಾದ ಕೋರ್‌ಅನ್ನು ತುಂಡು ತುಂಡಾಗಿ ಗಾಲಿಯ ಆಕಾರದಲ್ಲಿ ಕತ್ತರಿಸಬೇಕು. ಕತ್ತರಿಸಿದ ಗಾಲಿಯಾಕಾರದ ತುಂಡುಗಳನ್ನು ೫ ನಿಮಿಷ ಕುದಿಯುವ ನೀರಿನಲ್ಲಿ ಬೇಯಿಸಬೇಕು. ನಂತರ ೧ ಲೀಟರ್ ನೀರಿಗೆ ೭೦೦ ಗ್ರಾಂ ಬೆಲ್ಲ ಸೇರಿಸಿ ಬೆಲ್ಲದ ಪಾಕವನ್ನು ತಯಾರಿಸಿಕೊಳ್ಳಬೇಕು. ಗಾಲಿಯಾಕಾರದಲ್ಲಿ ಕತ್ತರಿಸಿದ ಬಾಳೆದಿಂಡಿನ ಕೋರ್‌ಗಳನ್ನು ಬೆಲ್ಲದ ಪಾಕದಲ್ಲಿ ಮುಳುಗಿಸಿ ೧ ನಿಮಿಷ ಕುದಿಸಿ ಅದನ್ನು ತಣ್ಣಗಾಗಲು ಬಿಡಬೇಕು. ಇದೇ ಬಾಳೆದಿಂಡಿನ ಮೊರಬ್ಬ. ತಣ್ಣಗಾದ ನಂತರ ಇದನ್ನು ಸೇವಿಸಬಹುದು. ಇದನ್ನು ಶಿರಸಿ ಭಾಗದಲ್ಲಿ ಕೇಳಿಗಬ್ಬ ಅಥವಾ ಬಾಳೆದಿಂಡಿನ ಮುಳ್ಕ ಅಂತಲೂ ಕರೆಯುತ್ತಾರೆ.

ಬಾಳೆದಿಂಡಿನ ದ್ರವದ ಉತ್ಪನ್ನಗಳು

ಸಾವಯವ ದ್ರವಗೊಬ್ಬರ (Organic Liquid fertilizer): ಬಾಳೆಗಿಡದ ಹಸಿ ಕಾಂಡದ ದ್ರವವು, ಸಸ್ಯ ಪೋಷಕಾಂಶಗಳಾದ ಸಾರಜನಕ(N), ರಂಜಕ(P), ಪೊಟ್ಯಾಷ್(K), ಸೈಟೋಕೈನಿನ್ ಮತ್ತು ಜಿಬ್ಬರ್‌ಲಿಕ್ ಆಮ್ಲದಂತಹ ಬೆಳವಣಿಗೆಯನ್ನು ಉತ್ತೇಜಿಸುವ ಸತ್ವಗಳನ್ನು ಒಳಗೊಂಡಿದೆ. ಆದ್ದರಿಂದ ಈ ದ್ರವವನ್ನು ಹನಿ ನೀರಾವರಿ ವ್ಯವಸ್ಥೆಯ ಮೂಲಕ ಅಥವಾ ಬೆಳೆಗಳಿಗೆ ತೇವಗೊಳಿಸುವ ಮೂಲಕ ದ್ರವಗೊಬ್ಬರವಾಗಿ ಬಳಸಬಹುದು. ಇದನ್ನು ಬಳಸುವುದರಿಂದ ರಾಸಾಯನಿಕ ಗೊಬ್ಬರದ ಶೇ. ೨೦ ರಿಂದ ೩೦ ರಷ್ಟು ಪ್ರಮಾಣವನ್ನು ಕಡಿಮೆಗೊಳಿಸಬಹುದು. ಜೊತೆಗೆ ಶೇ. ೧೦ ರಿಂದ ೧೫ ರಷ್ಟು ಹೆಚ್ಚು ಬೆಳೆ ಇಳುವರಿಯನ್ನು ಪಡೆಯಬಹುದು. ಬಹಳಷ್ಟು ರೈತರು ಈಗಾಗಲೇ ಬಾಳೆದಿಂಡಿನ ಸಾವಯವ ದ್ರವ್ಯ ಗೊಬ್ಬರವನ್ನು ಬಳಸಿಕೊಂಡು ಬಾಳೆ, ದ್ರಾಕ್ಷಿ, ದಾಳಿಂಬೆ, ಉಳ್ಳಾಗಡ್ಡಿ, ಕಿತ್ತಳೆ ಹಾಗೂ ಸ್ಟ್ರಾಬೆರ್ರಿಯಲ್ಲಿ ಅತ್ಯುತ್ತಮ ಇಳುವರಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಬಾಳೆದಿಂಡಿನ ದ್ರವವನ್ನು ಜೀವಾಮೃತದೊಂದಿಗೆ ಬೆರೆಸಿ ಗಿಡಗಳಿಗೆ ಸಿಂಪಡಿಸಬಹುದು. ಸಾವಯವ ಕೀಟನಾಶಕವಾಗಿಯೂ ಇದನ್ನು ಉಪಯೋಗಿಸಬಹುದು. ಇದು ಕೀಟನಾಶಕವಾಗಿ ಕಾರ್ಯನಿರ್ವಹಿಸುವುದಲ್ಲದೇ ಬೆಳೆಗೆ ಪೋಷಕಾಂಶಗಳನ್ನೂ ಕೂಡ ಒದಗಿಸುತ್ತದೆ.

23

ಬಾಳೆದಿಂಡಿನ ನಾರಿನ ಉತ್ಪನ್ನಗಳು

ಕಾಗದ ತಯಾರಿಸುವಿಕೆ: ಬಾಳೆದಿಂಡಿನ ನಾರಿನಿಂದ ಕಾಗದವನ್ನು ಉತ್ಪಾದಿಸುತ್ತಾರೆ. ಈ ತಂತ್ರಜ್ಞಾನವನ್ನು ಹೆಚ್ಚೆಚ್ಚು ಉಪಯೋಗಿಸಿದರೆ ಕಾಗದ ತಯಾರಿಸಲು ಇತರೆ ಬೇರೆ ಮರಗಳನ್ನು ಕಾಗದ ತಯಾರಿಕೆಯಲ್ಲಿ ಉಪಯೋಗಿಸುವುದನ್ನು ಕಡಿಮೆ ಮಾಡಬಹುದು.

ಕರಕುಶಲ ವಸ್ತುಗಳು (Handicraft): ಬಾಳೆದಿಂಡಿನ ನಾರನ್ನು ಉಪಯೋಗಿಸಿ ಬಹಳಷ್ಟು ತರಹದ ಕರಕುಶಲ ವಸ್ತುಗಳನ್ನು ತಯಾರಿಸಬಹುದು. ಈ ವಸ್ತುಗಳನ್ನು ಮಾಡುವ ತರಬೇತಿಯನ್ನು “The Tapti Valley Banana Processing and Products Co-operative society Ltd. Jaipur” ಕೊಡುತ್ತದೆ. ಈ ಸಹಕಾರ ಸಂಘವು ಪ್ರತಿ ಹಳ್ಳಿಯ ೧೦ ಮಹಿಳೆಯರಿಗೆ / ಪುರುಷರಿಗೆ ತರಬೇತಿ ಕೊಡುತ್ತಾ ಬರುತ್ತಿದೆ ಮತ್ತು ಅವರು ತಯಾರಿಸಿದ ವಸ್ತುಗಳನ್ನು ಸಂಘವೇ ಮಾರಾಟ ಮಾಡಿಸಿ ಲಾಭವನ್ನು ವಿತರಿಸುತ್ತಿದೆ. ಜವಳಿ: ಬಾಳೆದಿಂಡಿನ ನಾರಿನಿಂದ ನೂಲು ತಯಾರಿಸುವ ಘಟಕಗಳೂ ಕೂಡ ಇತ್ತೀಚಿನ ದಿನಗಳಲ್ಲಿ ಸ್ಥಾಪನೆಗೊಳ್ಳುತ್ತಿವೆ. ಈ ನೂಲಿನಿಂದ ವಿವಿಧ ಬಗೆಯ ಬೆಡ್‌ಶೀಟ್, ಚಾದರ, ಮ್ಯಾಟ್ಸ್, ಶರ್ಟ್ಸ್ ತಯಾರಿಸುವುದಲ್ಲದೇ ಮೈಕ್ರೋಕ್ರಿಸ್ಟಲಿನ್ ಸೆಲ್ಯುಲೋಸ್ ಅನ್ನು ಕೂಡ ಉತ್ಪಾದಿಸಲಾಗುತ್ತಿದೆ. ಇದನ್ನು ಸ್ಟೆಬಿಲೈಸಿಂಗ್ ಏಜೆಂಟ್ ಆಗಿ ಸಹ ಬಳಸುತ್ತಾರೆ.

ಪೋಮೇಸ್‌ನಿಂದ ಸಾವಯವ ಗೊಬ್ಬರ ತಯಾರಿಕೆ (Pomace)

ಬಾಳೆದಿಂಡಿನಿಂದ ನಾರು ಮತ್ತು ದ್ರವವನ್ನು ತೆಗೆದ ನಂತರ ಉಳಿದ ಭಾಗವೇ ಪೋಮೇಸ್. ಇದರಿಂದ ಉತ್ತಮ ಗುಣಮಟ್ಟದ ಗೊಬ್ಬರ (ಕಾಂಪೋಸ್ಟ್) ಮತ್ತು ಎರೆಹುಳು ಗೊಬ್ಬರ (ವರ್ಮಿಕಾಂಪೋಸ್ಟ್) ಗಳನ್ನು ತಯಾರಿಸಬಹುದು. ಪೋಮೇಸ್‌ನನ್ನು ಎರೆಹುಳುಗಳು ಬಲು ಸುಲಭವಾಗಿ ಜೀರ್ಣಿಸಿಕೊಳ್ಳುವುದರಿಂದ ಬೇಗನೇ ಗುಣಮಟ್ಟದ ವರ್ಮಿಕಾಂಪೋಸ್ಟ್ ಹಾಗೂ ವರ್ಮಿವಾಷ್ ಅನ್ನು ಪಡೆಯಬಹುದು.