ನೇಗಿಲ ಮಿಡಿತ  ಸಂಪುಟ 6 ಸಂಚಿಕೆ 3

ಶ್ರೀಗಂಧದ ಮರದಲ್ಲಿ ಸವರುವಿಕೆ ಬೇಡ - ಚೇಗಿಗಾಗಿಯೇ ಭಾರತೀಯ ಶ್ರೀಗಂಧವನ್ನು ಬೆಳೆಯುವುದು

ಆರ್. ಸುಂದರರಾಜ್, ಮತ್ತು ನಳಿನಿ ಯು. ಆರ್., ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ, ಬೆಂಗಳೂರು
೯೭೪೦೪೩೩೯೫೯
1

ಭಾರತದ ಶ್ರೀಗಂಧವು ಒಂದು ಅತ್ಯಮೂಲ್ಯವಾದ ಜೈವಿಕ ಸಂಪತ್ತು. ಅದರ ಚೇಗವು ಸುಗಂಧ ದ್ರವ್ಯಕ್ಕೆ ಹಾಗೂ ಪರಿಮಳಯುಕ್ತ ತೈಲಕ್ಕೆ ಪ್ರಸಿದ್ಧವಾದುದು. ಶ್ರೀಗಂಧವು ನೈಸರ್ಗಿಕವಾಗಿಯೇ ಭಾರತದ ಕಾಡುಗಳಲ್ಲಿ ಬೆಳೆಯುತ್ತದೆ. ಶ್ರೀಗಂಧವು ವಿಶಿಷ್ಟತೆಯನ್ನು ಹೊಂದಿದ್ದು ತೈಲ, ಪರಿಮಳ, ಸಾಬೂನು ಇತ್ಯಾದಿ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಶ್ರೀಗಂಧವು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆದಿದ್ದು, ಧಾರ್ಮಿಕ ಗುಣಗಳನ್ನು ಸಹ ಹೊಂದಿದೆ. ಕಲಾ ಕೆತ್ತನೆಯಲ್ಲಿಯೂ ಸಹ ಶ್ರೀಗಂಧವು ತನ್ನದೇ ಛಾಪು ಮೂಡಿಸಿದೆ. ಶ್ರೀಗಂಧದ ಮರವು ನಮ್ಮ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇದು ಸ್ಯಾಂಟಾಲಮ್ ಎಂಬ ಪ್ರಭೇದಕ್ಕೆ ಸೇರಿದೆ. ಇದರ ವಿಶಿಷ್ಟತೆಯಿಂದ ವಿಶೇಷ ಸ್ಥಾನ ಪಡೆದು ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ.

ಶ್ರೀಗಂಧ ಮರಕ್ಕೆ ಪುನರುತ್ಪಾದನೆ ಸಾಮರ್ಥ್ಯ ಇರುವುದರಿಂದ, ಇತರ ಮರಗಳೊಂದಿಗೆ ಸ್ಪರ್ಧಾತ್ಮಕ ವಾತಾವರಣದಲ್ಲಿ ನೇರವಾಗಿ ಬೆಳೆಯುತ್ತದೆ. ಆದಾಗ್ಯೂ ಶ್ರೀಗಂಧದ ಮರವು ಸದ್ಯಕ್ಕೆ ಅಪಾಯವನ್ನು ಎದುರಿಸುತ್ತಿದೆ. ಇದಕ್ಕೆ ಪ್ರಕೃತಿಯಿಂದ ಆಗುವ ಒತ್ತಡ, ಕಳ್ಳತನ ಹಾಗೂ ಮುಖ್ಯವಾಗಿ ’ಸ್ಯಾಂಡಲ್ ಸ್ಪೈಕ್’ಎಂಬ ರೋಗವೇ ಕಾರಣ. ಈಗ ಈ ಮರವನ್ನು ಅಳಿವಿನಂಚಿನಲ್ಲಿರುವ ಪ್ರಭೇದಕ್ಕೆ (IUCN-ಪರಿಸರ ಮತ್ತು ಸಂಪನ್ಮೂಲಗಳ ಸಂರಕ್ಷಣಾ ಒಕ್ಕೂಟ) ಸೇರಿಸಲಾಗಿದೆ. ಈ ಸಂದರ್ಭದಲ್ಲಿ ಶ್ರೀಗಂಧ ಬೆಳೆಯಲು ಕಾನೂನು ನಿಯಮಗಳಲ್ಲಿ ರಿಯಾಯಿತಿ ಇದ್ದು, ಶ್ರೀಗಂಧದ ಮರವನ್ನು ಬೆಳೆಯುವುದು ಗಣನೀಯವಾಗಿ ಏರಿಕೆಯಾಗುತ್ತಿದೆ.

ಶ್ರೀಗಂಧ ಸಸಿ ತಯಾರಿಕೆ

ಶ್ರೀಗಂಧ ಬೆಳೆಯಲು ಅದರ ಬೀಜಗಳನ್ನು ಸಂಗ್ರಹಿಸಿ, ಬಿತ್ತನೆ ಮಾಡಿ ಸಸಿಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತದೆ. ಇದನ್ನು ಸಾಂಪ್ರದಾಯಿಕವಾಗಿ ಗೋಣಿ ಚೀಲದಲ್ಲಿ ಹಾಕಿ ಅದಕ್ಕೆ ಹಸುವಿನ ಗಂಜಲ ಹಾಗೂ ಸಗಣಿಯನ್ನು ಉಪಯೋಗಿಸಿ ಬೀಜೋಪಚಾರ ಮಾಡಲಾಗುತ್ತದೆ. ನಂತರ ಮೊಳಕೆ ಬಂದ ಬೀಜಗಳನ್ನು ಪ್ಯಾಕೆಟ್‌ಗಳಲ್ಲಿ ಹಾಕಿ ಸಸಿಗಳನ್ನು ಬೆಳೆಸಲಾಗುತ್ತದೆ. ಆರು ತಿಂಗಳಿಂದ ವರ್ಷದೊಳಗಿನ ಸಸಿಗಳನ್ನು ಜಮೀನಿನಲ್ಲಿ ನಾಟಿ ಮಾಡುವ ಮೂಲಕ ಶ್ರೀಗಂಧವನ್ನು ಬೆಳೆಯಬಹುದಾಗಿದೆ.

ಶ್ರೀಗಂಧದ ಮರಕ್ಕೆ ಸವರುವಿಕೆ ಮಾಡಬಾರದು

ಶ್ರೀಗಂಧವು ಸೆಮಿ-ಪ್ಯಾರಾಸೈಟಿಕ್ ಆಗಿದೆ. ಆದುದರಿಂದ ಶ್ರೀಗಂಧವನ್ನು ಇಂದು ರೈತರು ಆಯ್ಕೆ ಮಾಡುವ ಕೃಷಿ/ತೋಟಗಾರಿಕೆ ಮತ್ತು ಅರಣ್ಯ ಪ್ರಭೇದದ ಸಸಿಗಳೊಂದಿಗೆ ಬೆಳೆಯುತ್ತಿದ್ದಾರೆ. ಇಲ್ಲಿ ನುಗ್ಗೆ, ರೇಷ್ಮೆಯಂತಹ ಬೆಳೆಗಳಿಗೆ ಸವರುವಿಕೆ ಮಾಡುವ ಹಾಗೆಯೇ ಶ್ರೀಗಂಧದ ಮರವನ್ನು ಸಹ ಸವರುವಿಕೆ ಮಾಡುತ್ತಿದ್ದಾರೆ.

ರೇಷ್ಮೆ ಹಾಗೂ ನುಗ್ಗೇ ಮರಗಳನ್ನು ಸವರುವಿಕೆ ಮಾಡುವುದರಿಂದ ಕಡಿಮೆ ಎತ್ತರದಲ್ಲಿ ಎಲೆಗಳು ಹೆಚ್ಚಾಗಿ ಬರುತ್ತವೆ. ಹಾಗೂ ಮಾವಿನ ಮರದಲ್ಲಿ ಸವರುವಿಕೆ ಮಾಡುವುದರಿಂದ ಕಡಿಮೆ ಎತ್ತರದಲ್ಲಿ ಹಣ್ಣುಗಳು ಕೈಗೆ ಎಟಕುವಂತಿದ್ದು ಕಟಾವು ಮಾಡುವುದಕ್ಕೆ ಸಹಾಯ ಮಾಡಿಕೊಡುತ್ತದೆ. ಆದರೆ ನಾವು ಶ್ರೀಗಂಧದ ಮರವನ್ನು ಬೆಳೆಯುತ್ತಿರುವುದು ಅದರ ಚೇಗಿಗಾಗಿ ಹಾಗೂ ತೈಲಕ್ಕಾಗಿ. ಇದನ್ನು ಅರ್ಥ ಮಾಡಿಕೊಳ್ಳದೇ, ನಾವು ಶ್ರೀಗಂಧವನ್ನೂ ಸಹ ನಿರಂತರವಾಗಿ ಸವರುವಿಕೆ ಮಾಡುತ್ತಿದ್ದೇವೆ. ಈ ಸವರುವಿಕೆ ಅನಗತ್ಯವಾದದ್ದು ಹಾಗೂ ಅದರ ದುಷ್ಪರಿಣಾಮಗಳನ್ನು ಈಗ ತಿಳಿಯೋಣ.

ಸವರುವಿಕೆಯಿಂದ ಆಗುವ ದುಷ್ಪರಿಣಾಮಗಳು

ಶ್ರೀಗಂಧದ ಮರವನ್ನು ಸವರುವಿಕೆ ಮಾಡಿದಾಗ ಸವರುವಿಕೆಯ ಪ್ರಮಾಣದ ಮೇಲೆ ಅದರ ದುಷ್ಪರಿಣಾಮಗಳನ್ನು ನೋಡಬಹುದು. ಈ ಸವರುವಿಕೆಯಿಂದ ಗಂಧದ ಮರದ ಬೆಳವಣಿಗೆಯು ಕುಂಠಿತವಾಗುತ್ತದೆ. ಅದು ತನ್ನ ಸಮತೋಲನವನ್ನು ಕಳೆದುಕೊಂಡು ಗಾಳಿಯಿಂದ ಸುಲಭವಾಗಿ ಕೊಂಬೆಗಳು ಮುರಿಯುವುದು. ನಂತರ ಆ ಶ್ರೀಗಂಧ ಮರವು ಬೀಳಬಾರದು ಎಂದು ಅದಕ್ಕೆ ಆಸರೆ ಕೋಲನ್ನು ಕೊಟ್ಟರೆ ಆ ಕಟ್ಟಿಗೆಯು ಒಣಗಿ ಗೆದ್ದಲುಗಳನ್ನು ಆಕರ್ಷಿಸುತ್ತದೆ. ಹಾಗೆಯೇ ಶ್ರೀಗಂಧದ ಮರವನ್ನು ಸವರುವಿಕೆ ಮಾಡಿದ ಜಾಗದಲ್ಲಿಯೂ ಆವರಿಸುತ್ತದೆ. ಇದರಿಂದ ಶ್ರೀಗಂಧದ ಮರ ಸಾವನಪ್ಪುವುದಲ್ಲದೇ, ಚೇಗದ ಬೆಳವಣಿಗೆ ಆಗದೆ ರೈತರಿಗೆ ನಷ್ಟವಾಗುತ್ತದೆ.

ಸವರುವಿಕೆಗೆ ಒಳಗಾದ ಶ್ರೀಗಂಧ ಮರವು ಬಲಹೀನವಾಗಿ, ಎಲೆಯು ಹೆಮ್ಮೊಳೆಯ(spike) ಆಕಾರವಾಗಿ, ಹಣ್ಣುಗಳು ಅಕಾಲಿಕವಾಗಿ ಒಣಗಿ ಉದರುತ್ತವೆ. ಸಸ್ಯಗಳು ತುದಿಯಿಂದ ಒಣಗಿ ನಿಧಾನವಾಗಿ ಸಾಯುತ್ತವೆ. ಆದರೆ ಕೆಲವೊಮ್ಮೆ ಕಾಂಡದ ತಳದ ಭಾಗದಲ್ಲಿ ಶಾಖೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸಸ್ಯಗಳು ಚೇತರಿಸಿಕೊಳ್ಳುತ್ತವೆ.

ಮಳೆಗಾಲದಲ್ಲಿ ಸವರುವಿಕೆ ಮಾಡಿದಾಗ ಅಲ್ಲಿ ನೀರು ಸಂಗ್ರಹವಾಗಿ, ಕಾಂಡಗಳು ಕೊಳೆತು ಹೋಗಿ, ಕೊಳೆಯುವ ಶಿಲೀಂಧ್ರಗಳನ್ನು ಆಕರ್ಷಿಸುತ್ತದೆ. ಇಂತಹ ಶ್ರೀಗಂಧದ ಚೇಗಿಗೆ ಬೆಲೆ ಇಲ್ಲದಂತಾಗುತ್ತದೆ.

13

ಸವರುವಿಕೆ ಅತಿಯಾದಾಗ ಮರವು ಸಾಯುತ್ತದೆ. ಕೆಲವೊಮ್ಮೆ ಎರಡು ಇಂಚಿನಷ್ಟು ಪಾರ್ಶ್ವ ಕೊಂಬೆಗಳನ್ನು ಸವರುವಿಕೆ ಮಾಡುತ್ತಾರೆ. ಆದರೆ ಕೊಂಬೆಯಲ್ಲೂ ಸಹ ಚೇಗ ಉತ್ಪತ್ತಿಯಾಗುತ್ತದೆ. ಆದ್ದರಿಂದ ಸವರುವಿಕೆ ಮಾಡಬಾರದು. ಸವರುವಿಕೆ ಮಾಡಿದ ನಂತರ ಬೋರ್ಡಾಕ್ಸ್ ಮಿಶ್ರಣವನ್ನು ವಿವೇಚನೆ ಇಲ್ಲದೆ ಯಥೇಚ್ಛವಾಗಿ ಬಳಸಿ ಪ್ರಕೃತಿಯನ್ನು ಹಾಳು ಮಾಡಲಾಗುತ್ತಿದೆ. ಘಾಸಿಗೊಳಿಸಿದ ಸ್ಥಳದಲ್ಲಿ ಕೀಟಗಳು ಮೊಟ್ಟೆಯನ್ನು ಇಡುತ್ತವೆ. ಇವುಗಳಲ್ಲಿ ತೊಗಟೆ ತಿನ್ನುವ ಇಂಡರ್‌ಬೆಲ ಕ್ವಾಡ್ರಿನೋಟೆಟಾ (Indarbela quadrinotata), ಚೇಗ ಕೊರೆಯುವ ಆರಿಸ್ಟೋಬಿಯಾ ಆಕ್ಟೋಫ್ಯಾಸಿಕ್ಯೂಲೇಟಾ (Aristobia octofasciculata), ಕಾಂಡ ಕೊರೆಯುವ ಕೆಂಪು ಜುಜೇರಾ ಕಾಫಿಯೇ (Zeuzera coffeae) ಎಂಬ ಕೀಟಗಳನ್ನು ಆಕರ್ಷಿಸುತ್ತದೆ. ಸವರುವಿಕೆ ಮಾಡಿರುವ ಜಾಗದಲ್ಲಿ/ತೋಟದಲ್ಲಿ ಕೀಟಗಳ ಮುತ್ತಿಕೊಳ್ಳುವಿಕೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಸವರುವಿಕೆಯನ್ನು ಮಾಡಿದ ತೋಟಗಳು ನೈಸರ್ಗಿಕ, ಜೈವಿಕ ಕಂಟಕಗಳಾದ ಓಡೋನೇಟ್ಸ್, ಕ್ರೈಸೋಪಿಡ್ಸ್, ಮ್ಯಾಂಟಿಡ್ಸ್, ಕೋಕ್ಸಿನೆಲಿಡ್ಸ್, ಸ್ಪೈಡರ್ ಮತ್ತು ಲೈಸಿಡ್ ಪರಭಕ್ಷಕಗಳ ಬೆಳವಣಿಗೆಯನ್ನು ಬೆಂಬಲಿಸುವುದಿಲ್ಲ. ನೈಸರ್ಗಿಕ ಜೈವಿಕ ಕೀಟಗಳು ಇದ್ದಾಗ ಮಾತ್ರ ಪರಿಸರದಲ್ಲಿ ಕೀಟಗಳನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯ.

ಇಲ್ಲಿ ತಿಳಿಯಬೇಕಾದ ನೈಜ ಸಂಗತಿ ಎಂದರೆ ಶ್ರೀಗಂಧ ಮರಕ್ಕೆ ರೈತರು ಮಾಡುವ ಸವರುವಿಕೆಯ ಅಗತ್ಯವಿಲ್ಲ. ಅದು ನೈಸರ್ಗಿಕವಾಗಿ ಸ್ವಯಂ ಸವರುವಿಕೆಯನ್ನು ಪೂರ್ಣಗೊಳಿಸಿಕೊಳ್ಳುತ್ತದೆ. ಸವರುವಿಕೆಗೆ ಒಳಗಾದ ಮರಗಳೇ ಚೆನ್ನಾಗಿ ಬೆಳೆಯುವುದು ಎಂಬುದು ನಮ್ಮ ತಪ್ಪು ತಿಳುವಳಿಕೆ. ಸತ್ಯದ ಸಂಗತಿ ಏನೆಂದರೆ ಸವರುವಿಕೆ ಮಾಡದೇ ಇರುವ ಮರಗಳೇ ಮೂರರಿಂದ-ನಾಲ್ಕು ಪಟ್ಟು ಯಥೇಚ್ಛವಾಗಿ, ಉದ್ದವಾಗಿ, ಅಗಲವಾಗಿ ಬೆಳೆಯುತ್ತವೆ. ಆದ್ದರಿಂದ ಶ್ರೀಗಂಧದ ಮರವನ್ನು ಬೆಳೆಯುವವರು ಆ ಮರವನ್ನು ಸವರುವಿಕೆ ಮಾಡಬಾರದು.

ನಾವು ನೆನಪಿನಲ್ಲಿ ಇಡಬೇಕಾದ ಸಂಗತಿ ಎಂದರೆ, ನಾವು ಶ್ರೀಗಂಧವನ್ನು ಬೆಳೆಯುತ್ತಿರುವುದು ಅದರ ಚೇಗಿಗಾಗಿ ಮತ್ತು ತೈಲಕ್ಕಾಗಿಯೇ ಹೊರತು ಎಲೆ ಮತ್ತು ಹಣ್ಣುಗಳಿಗಾಗಿ ಅಲ್ಲ. ಆದ್ದರಿಂದ ಶ್ರೀಗಂಧ ಮರವನ್ನು ಸವರುವಿಕೆ ಮಾಡದಿರಿ. ಶ್ರೀಗಂಧವನ್ನು ಅದರ ಚೇಗಿಗಾಗಿಯೇ ಬೆಳೆಯೋಣ.

“ಮರವನ್ನು ಪ್ರೀತಿಸಿ, ಚೌಬಿನೆಯನ್ನು ಬೆಳೆಸಿ”