ನೇಗಿಲ ಮಿಡಿತ  ಸಂಪುಟ 6 ಸಂಚಿಕೆ 3

ಸಂಪಾದಕೀಯ

------

ಪ್ರಿಯ ಓದುಗರೇ,

ಭಾರತ ಹಳ್ಳಿಗಳ ದೇಶ. ಕೊರೋನಾ ವೈರಸ್‌ನಿಂದ ತಪ್ಪಿಸಿಕೊಂಡು ಸುರಕ್ಷಿತ ಜಾಗವೊಂದಕ್ಕೆ ಹೋಗಿ ನೆಲೆಸುವ ಉದ್ದೇಶದಿಂದ, ನಗರದಲ್ಲಿ ವಾಸಿಸುವ ಗ್ರಾಮೀಣ ಜನರು ನಗರಗಳಿಂದ ವಾಪಸ್ ಗ್ರಾಮೀಣ ಪ್ರದೇಶಗಳಿಗೆ ಹೋಗಿ ತಮ್ಮಲ್ಲಿರಬಹುದಾದ ಜಮೀನುಗಳಲ್ಲೇ ಕೃಷಿ ಮಾಡುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡು ಕೃಷಿಯ ಬಗ್ಗೆ ಯುವಕರಿಗೆ ಒಲವು ಮೂಡಿಸುವ ಪ್ರಯತ್ನವನ್ನು ಮಾಡಬೇಕಾಗಿದೆ. ಇಂತಹ ಸನ್ನಿವೇಶದಲ್ಲಿ ರಾಜ್ಯ ಸರ್ಕಾರವು ಅನ್ನದಾತರಿಗೆ ಎಲ್ಲ ರೀತಿಯ ನೆರವು ನೀಡುವುದರೊಂದಿಗೆ ಕೃಷಿಯನ್ನು ಉದ್ಯಮವಾಗಿಸುವುದು, ವೈಜ್ಞಾನಿಕ ಬೆಲೆ ಒದಗಿಸುವುದು, ಉತ್ಪಾದನೆ ದ್ವಿಗುಣಗೊಳಿಸುವುದು ಸೇರಿದಂತೆ ಅನುಕೂಲ ಕಲ್ಪಿಸಲು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಜೊತೆಗೆ ಭೂಮಿ ಇಲ್ಲದ ಜನರು ನಮ್ಮ ಗ್ರಾಮಗಳಲ್ಲಿರುತ್ತಾರೆ. ಅಂತಹವರು ಗೌರವಯುತವಾಗಿ ಬಾಳಲು ಅವರಿಗೆ ಸೂಕ್ತ ಉದ್ಯೋಗದ ಅವಕಾಶಗಳ ಸೃಷ್ಟಿ ಗ್ರಾಮಗಳಲ್ಲೇ ಆಗಬೇಕು. ಈ ದಿಸೆಯಲ್ಲಿ ವಲಸೆ ಬಂದವರಿಗೆ ಕೃಷಿ ಜೊತೆ, ಕೃಷಿ ಆಧಾರಿತ ಉಪಕಸುಬುಗಳು, ಸಣ್ಣಪುಟ್ಟ ಯಂತ್ರಗಳ ಉಪಯೋಗ, ಅಂತಹ ಯಂತ್ರಗಳ ದುರಸ್ತಿ ಕಾರ್ಯಗಳು, ಇತ್ಯಾದಿಗಳ ಮೂಲಕ ಸ್ವಉದ್ಯೋಗಿಗಳಾಗುವಂತೆ ಮಾಡಬೇಕಾಗಿದೆ.

ಕೊರೋನಾ ವೈರಸ್‌ನ ಅವಾಂತರದಿಂದ ನಮ್ಮ ಶಿಕ್ಷಣವು ಡಿಜಿಟಲೀಕರಣದ ಹೊಸ ದಿಕ್ಕಿನ ಕಡೆಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಜಗತ್ತಿನಾದ್ಯಂತ ಅನೇಕ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕೋರ್ಸುಗಳನ್ನು ನಡೆಸಲು ಮುಂದಾಗಿವೆ. ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳ ಬಹುಶಿಸ್ತೀಯ ಆನ್‌ಲೈನ್ ಕೋರ್ಸ್‌ಗಳು ಎಲ್ಲಡೆ ಲಭ್ಯವಾಗುವ ಸಾಧ್ಯತೆಗಳಿದ್ದು, ಇದೇ ಸಾಮಾನ್ಯ ಶಿಕ್ಷಣ ಕ್ರಮವಾಗಬಹುದಾದ ಲಕ್ಷಣಗಳು ಗೋಚರಿಸುತ್ತಿವೆ. ಉನ್ನತ ಹಂತದಲ್ಲಿ ಶಿಕ್ಷಣ ಪಡೆಯಲು ಅಥವಾ ಜ್ಞಾನವನ್ನು ವಿಸ್ತರಣೆ ಮಾಡಿಕೊಳ್ಳಲು ಸದ್ಯಕ್ಕೆ, ಆನ್‌ಲೈನ್ ಶಿಕ್ಷಣ ಉಪಯುಕ್ತ ಮಾರ್ಗವಾಗಿದೆ. ಅಲ್ಲಿಯೂ ಶಿಕ್ಷಕರನ್ನೇ ಅವಲಂಬಿಸಿದೆ ಎನ್ನುವುದನ್ನು ಮರೆಯುವಂತಿಲ್ಲ. ೨೦೨೦ರ ನೂತನ ಶಿಕ್ಷಣ ನೀತಿಯೂ ಆನ್‌ಲೈನ್ ಶಿಕ್ಷಣ ಎಂಬುದಾಗಿ ಪ್ರತಿಪಾದಿಸಿದೆ. ಇನ್ನೂ ಆನ್‌ಲೈನ್ ಶಿಕ್ಷಣ ಬದಲಿ ಅಥವಾ ಪರ್ಯಾಯ ಶಿಕ್ಷಣ ವ್ಯವಸ್ಥೆ ಅಲ್ಲ. ಇದನ್ನು ಮುಖಾಮುಖಿ ಶಿಕ್ಷಣದ ಜೊತೆಗೆ ಪೂರಕವಾಗಿ ಬಳಸಿಕೊಳ್ಳಬಹುದಾದ ಅವಕಾಶಗಳಿವೆ.

ಕೊರೋನಾ ವೈರಸ್ ಅವಾಂತರ ದಿನೇ ದಿನೇ ಜಾಸ್ತಿಯಾಗುತ್ತಿದ್ದು, ಮನುಕುಲ ಕಂಗಾಲಾಗಿದೆ. ಜಗತ್ತಿನಲ್ಲಿ ಈ ಹಿಂದೆಯೂ ಬಂದಿರುವ ಪ್ಲೇಗ್, ಕಾಲರಾ, ಮಲೇರಿಯಾ ಮೊದಲಾದ ಸಾಂಕ್ರಾಮಿಕ ರೋಗಗಳು ಹಿಂದಿನ ಸಮಾಜಗಳನ್ನು ಹೆದರಿಸಿವೆ, ಅಳಿಸಿವೆ ಮತ್ತು ಹೊಸದಾಗಿ ಬದುಕುವ ದಾರಿಯನ್ನೂ ಸಹ ಕಲಿಸಿಕೊಟ್ಟಿವೆ. ಆದರೆ, ಈಗಿನ ಜಾಗತೀಕರಣದ ಜಗತ್ತಿನಲ್ಲಿ, ನಮ್ಮ ಅರಿವಿಗೆ ಇಲ್ಲದ ಹೊಸ ಹೊಸ ವೈರಸ್ಸುಗಳು, ಉತ್ಪತ್ತಿಯಾದ ಕೆಲವೇ ದಿನಗಳಲ್ಲಿ ಜಗತ್ತಿನಾದ್ಯಂತ ಹರಡಿ ಲಕ್ಷಾಂತರ ಜನರನ್ನು ಬಲಿಪಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ ಮನುಕುಲ ಈ ವೈರಸ್ಸನ್ನು ಮೀರಿ ನಿಲ್ಲಬೇಕಾಗಿದೆ. ಸದ್ಯದಲ್ಲೇ ಈ ಕೊರೋನಾ ಮಹಾಮಾರಿಯನ್ನು ನಿಯಂತ್ರಿಸುವ ವ್ಯಾಕ್ಸಿನ್ ಮನುಕುಲಕ್ಕೆ ಸಿಗಲಿದೆ ಎಂಬ ಆಶಾಭಾವನೆ ನಮಗಿದೆ. ಪ್ರಸ್ತುತ ಸಂಚಿಕೆಯಲ್ಲ್ಲಿ ಜೋಳ, ಹುರುಳಿ, ಸೋಯಾ ಅವರೆ, ಕಬ್ಬು, ಭತ್ತ, ಏಲಕ್ಕಿ, ಬಾಳೆ ಇತ್ಯಾದಿ ಬೆಳೆಗಳಲ್ಲಿ ವೈಜ್ಞಾನಿಕ ಮಾಹಿತಿಗಳನ್ನು ನೀಡಲಾಗಿದೆ. ಪ್ರಸ್ತುತ ಮಳೆಗಾಲದ ಹಂಗಾಮಿನ ರೈತರ ಕೃಷಿ ಲಾಭದಾಯಕವಾಗಲಿ ಎಂದು ಆಶಿಸುತ್ತಾ............

ಜಯಲಕ್ಷ್ಮಿ ನಾರಾಯಣ ಹೆಗಡೆ