ನೇಗಿಲ ಮಿಡಿತ  ಸಂಪುಟ 6 ಸಂಚಿಕೆ 3

ಸಾಧಕ ರೈತ - ದೇಶಿ ಗೋವು ಸಾಕಾಣಿಕೆಯಿಂದ ಯಶಸ್ಸು ಕಂಡ ಯುವ ರೈತ ನಿಶಾನ್ ಡಿ’ಸೋಜ

ಎನ್. ಈ. ನವೀನ ಮತ್ತು ಬಿ. ಧನಂಜಯ, ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ಉಡುಪಿ
೯೯೬೪೧೭೭೪೭೪
1

ಹಸು ಎಂದರೆ ಯಾರಿಗೆ ಪ್ರೀತಿ ಇಲ್ಲ ಹೇಳಿ! ಈಗ ಅಷ್ಟೇ ಹುಟ್ಟಿರುವ ಮಗುವಿನಿಂದ ಹಿಡಿದು ಹಲ್ಲು ಬಿದ್ದೋಗಿರೊ ಮುದುಕರಿಗು ಹಸು ಅಂದರೆ ತುಂಬಾನೇ ಪ್ರೀತಿ ಇದೆ. ಅದಕ್ಕಿಂತ ಹೆಚ್ಚಾಗಿ ಅದು ಕೊಡೋ ಹಾಲು, ಆ ಹಾಲಿನ ಉತ್ಪನ್ನಗಳು ತುಂಬಾನೆ ಇಷ್ಟ ಆಗುತ್ತೆ. ಉಡುಪಿಯ ಬ್ರಹ್ಮಾವರದ ಬಳಿ ಇರುವ ನೀಲಾವರದಲ್ಲಿ ತುಂಬಾನೆ ಗೋ ಶಾಲೆಗಳಿವೆ. ಇದೆಲ್ಲದರ ನಡುವೆ ನಿಶಾನ್ ಡಿ’ಸೋಜ ಎಂಬ ಯುವ ರೈತ ತುಂಬಾ ವಿಶೇಷವಾಗಿ ಮಾಡ್ತಿರೊದೆ “ಗೋ ದೇಶಿ ಹೈನುಗಾರಿಕೆ”. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹೋಟಲ್ ಮ್ಯಾನೇಜ್‌ಮೆಂಟ್ ಪದವಿಯನ್ನು ಪಡೆದುಕೊಂಡ ಇವರು ಬೆಂಗಳೂರಿಂದ ಹೊರದೇಶ ಬಿಯಾಮಿಯಲ್ಲಿರುವ ಕ್ರುಸ್ ಕಂಪನಿಯಲ್ಲಿ ೬ ವರ್ಷಗಳ ಕಾಲ ಕೆಲಸ ಮಾಡಿ, ಕೃಷಿ ಕೆಲಸ ಹಾಗೂ ದೇಶೀಯ ಗೋವುಗಳ ಸಾಕಾಣಿಕೆ ಆಸಕ್ತಿಯಿಂದ ಹುಟ್ಟೂರಿನಲ್ಲಿ ಏನಾದರು ಸಾಧನೆ ಮಾಡಬೇಕೆಂದು ತಮ್ಮ ಹುಟ್ಟೂರಾದ ಮೂಲ ಮನೆ ಪಡುನೀಲಾವರದಲ್ಲಿ ಎನ್.ಎನ್.ಫಾರ್ಮ್ಸನಲ್ಲಿ ಗೋ ದೇಶಿ ಹೈನುಗಾರಿಕೆಯನ್ನು ೨೦೧೭ರಲ್ಲಿ ಪ್ರಾರಂಭಿಸಿದ್ದಾರೆ. ಇದಕ್ಕೂ ಮೊದಲು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಗೋವುಗಳನ್ನು ಖರೀದಿಸಿರುತ್ತಾರೆ. ಗೋ ದೇಶಿ ಎಂದರೆ, ದೇಸಿಯ ತಳಿಗಳ ಹಸುಗಳನ್ನ ಬಳಸಿ ಹೈನುಗಾರಿಕೆಯನ್ನು ಮಾಡುವಂಥದ್ದು. ಪ್ರಸ್ತುತ ಇವರ ಹತ್ತಿರ ೩೨ ದನಗಳು ಹಾಗೂ ೧೪ ಕರುಗಳಿವೆ.

ಗುಜರಾತ್ ಗಿರ್, ಪಂಜಾಬಿನ ಸಾಹಿವಾಲ, ರಾಜಸ್ಥಾನದ ರಾಟಿ, ಭಾರತ ಪಾಕಿಸ್ಥಾನದ ರೆಡ್ ಸಿಂಧಿ, ಸ್ಥಳೀಯ ಮಲೆನಾಡು ಗಿಡ್ಡ ಸೇರಿದಂತೆ ಸಂಪೂರ್ಣ ದೇಶೀ ತಳಿಯ ಹಸುಗಳು ಇಲ್ಲಿವೆ. ಈ ಹಸುಗಳು ದಿನಕ್ಕೆ ೮೦ ಲೀಟರ್‌ನಷ್ಟು ಹಾಲನ್ನು ಕರೆಯುತ್ತವೆ. ಈ ಹಾಲಿನ ವಿಶೇಷವೇನೆಂದರೆ ಬೇರೆ ತಳಿ ಜರ್ಸಿ ಹಸುವಿನ ಹಾಲಿಗೆ ಹೋಲಿಕೆ ಮಾಡಿದರೆ ಈ ಹಸುವಿನ ಹಾಲಿನಲ್ಲಿ ಪೋಷಕಾಂಶ ಅತ್ಯಂತ ಅಧಿಕ ಮಟ್ಟದಲ್ಲಿರುತ್ತದೆ ಹಾಗೇನೆ ಈ ಹಸುಗಳಿಗೆ ವಿಶೇಷವಾಗಿ ಬೆನ್ನಿನ ಮೇಲೆ ದುಬ್ಬು ಇರುತ್ತದೆ. ಅದನ್ನು ಸೂರ್ಯನ ಬಿಸಿಲಿಗೆ ಇಟ್ಟು ಸವರಿದರೆ “ವಿಟಮಿನ್ ಇ” ಪೋಷಕಾಂಶ ಜಾಗೃತವಾಗುತ್ತದೆ, ಅದಲ್ಲದೆ ಇದರ ಹಾಲು ಶೇಕಡ ೧೦೦ ರಷ್ಟು “ಎ೨” ಹಾಲು ಹಾಗೂ ಸಸಾರಜನಕ (ಪ್ರೋಟಿನ್ “ಎ೨”) ಹೊಂದಿದೆ. ಇದು ನಮ್ಮ ದೇಹಕ್ಕೆ ಪೂರ್ಣ ಪ್ರಮಾಣವಾಗಿ ಉಪಯೋಗವಾಗುತ್ತದೆ. ಅದೇ ಜರ್ಸಿ ಮತ್ತು ಕ್ರಾಸ್ ಬ್ರೀಡ್ ತಳಿಗಳಲ್ಲಿ ಇರುವ “ಎ೧” ಪ್ರೋಟಿನ್ ಅದು ನಮ್ಮ ದೇಹಕ್ಕೆ ಪೂರ್ಣ ಪ್ರಮಾಣವಾಗಿ ಲಭ್ಯವಾಗುವುದಿಲ್ಲ.

ದೇಶಿ ತಳಿಗಳ ಸಾಕಾಣಿಕೆ ಅಷ್ಟು ಸುಲಭವಲ್ಲ, ಈ ತಳಿಗಳು ಆ ಸ್ಥಳೀಯ ಪ್ರದೇಶಕ್ಕೆ ಹೊಂದಿಕೊಂಡಿದ್ದು ಕರಾವಳಿ ಪ್ರದೇಶಕ್ಕೆ ಹೊಂದಿಕೊಳ್ಳಲು ಕಷ್ಟಸಾಧ್ಯ. ಕಾರಣ ಹೆಚ್ಚು ಮಳೆ, ಬಿಸಿಲು ಹಾಗೂ ಆರ್ದ್ರತೆಯ ವಾತಾವರಣಕ್ಕೆ ಹೊಂದಿಕೊಳ್ಳುವುದು. ಮೊದಲ ಹಂತದಲ್ಲಿ ಈ ಪ್ರದೇಶಕ್ಕೆ ಹೊಂದಿಕೊಳ್ಳಲು ತುಂಬಾನೇ ಕಷ್ಟವಾಯಿತು. ಆಹಾರ ಪದ್ಧತಿಯಲ್ಲಿ ವ್ಯತ್ಯಾಸವಿದ್ದು ಅದನ್ನು ಸರಿಪಡಿಸಲು ಹಸುಗಳಿಗೆ ಬೇಕಾಗುವ ಆಹಾರದ ಉತ್ಪನ್ನಗಳನ್ನು ಇವರು ತನ್ನ ಜಮೀನಿನಲ್ಲಿ ಬೆಳೆದು ಹಸುಗಳಿಗೆ ನೀಡುತ್ತಿರುವುದು ವಿಶೇಷ. ಇದರಿಂದ ಕಾಲ ಕ್ರಮೇಣವಾಗಿ ಹಸುಗಳು ಈ ಪ್ರದೇಶಕ್ಕೆ ಹೊಂದಿಕೊಳ್ಳಲು ಪ್ರಾರಂಭಿಸಿದವು. ಈ ಹಸುಗಳ ಸಗಣಿಯನ್ನು ಮೂಲ ಆಧಾರವಾಗಿ ಇಟ್ಟುಕೊಂಡು ಸಮಗ್ರ ಕೃಷಿ ಪದ್ಧತಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಮಣ್ಣಿನ ಫಲವತ್ತತೆಗೂ ಹೆಚ್ಚು ಗಮನವನ್ನ ನೀಡುತ್ತಿದ್ದಾರೆ.

5

ಸಾಧಾರಣವಾಗಿ ಒಂದು ಹಸುವಿನಿಂದ ದಿನವೊಂದಕ್ಕೆ ೮ ರಿಂದ ೧೦ ಲೀಟರ್ ಹಾಲನ್ನು ಕರೆಯುತ್ತಿದ್ದು, ಆ ಹಾಲನ್ನು ಸುತ್ತಮುತ್ತಲಿನ ನಗರ ಪ್ರದೇಶಗಳಾದ ಬ್ರಹ್ಮಾವರ, ಮಣಿಪಾಲ್ ಹಾಗೂ ಉಡುಪಿಗೆ ತಾವೇ ಸ್ವತಃ ಮಾರುಕಟ್ಟೆಗೆ ಮಾರಾಟ ಮಾಡುತ್ತಿರುವುದು ವಿಶೇಷ. ಒಂದು ದಿನಕ್ಕೆ ಒಟ್ಟಾರೆಯಾಗಿ ೮೦ ರಿಂದ ೯೦ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದ್ದು ೧ ಲೀಟರ್ ಹಾಲಿಗೆ ರೂ. ೮೦ರಂತೆ ಗ್ರಾಹಕರು ಖರೀದಿ ಮಾಡುತ್ತಿದ್ದು, ದಿವಸಕ್ಕೆ ರೂ.೬೪೦೦ ರಂತೆ ಆದಾಯವನ್ನು ಗಳಿಸುತ್ತಿದ್ದಾರೆ. ಇವರು ಹೇಳುವ ಪ್ರಕಾರ ಒಟ್ಟು ಆದಾಯದ ಹಣದಲ್ಲಿ ಶೇ. ೬೦ರಿಂದ ೬೫ ರಷ್ಟು ಹಣ (ಅಂದರೆ ರೂ. ೩೮೪೦ ರಿಂದ ೪೨೦೦) ಖರ್ಚು ಹಾಗೂ ವೆಚ್ಚದ ರೂಪದಲ್ಲಿ ಹೋಗುತ್ತಿದೆ.

ಹೆತ್ತ ನಾಡು ಹೊತ್ತ ತಾಯಿ ಸ್ವರ್ಗಕ್ಕಿಂತ ಮಿಗಿಲು ಎನ್ನುವಂತೆ ಹುಟ್ಟೂರಿಗೆ ಬಂದ ಇವರು ಕೇವಲ ೧೮ ತಿಂಗಳಿನಲ್ಲಿ ತಾವು ಕಂಡ ಕನಸನ್ನ ನನಸು ಮಾಡಿಕೊಂಡಿದ್ದಾರೆ. ಅದಕ್ಕೆ ಹೇಳೋದು ಪ್ರಯತ್ನಕ್ಕೆ ತಕ್ಕ ಫಲ ಸಿಕ್ಕೆ ಸಿಗುತ್ತೆ ಅಂತ. ಶಿಕ್ಷಣ ತೊರೆದು, ಹಸು ಸಾಕಾಣಿಕೆ ಉದ್ಯಮದಲ್ಲಿ ಯಶಸ್ಸು ಕಂಡ ಈ ಯುವ ರೈತನಿಗೊಂದು ಕೋಟಿ ನಮನ.

ರೈತರ ಸಂಪರ್ಕ ವಿಳಾಸ: ನಿಶಾನ್ ಡಿ’ಸೋಜ, ೯೯೦೨೧೯೭೭೯೧, ಎನ್. ಎನ್. ಫಾರ್ಮ್ಸ್, ಪಡುನೀಲಾವರ, ಬ್ರಹ್ಮಾವರ ತಾಲ್ಲೂಕು.