ನೇಗಿಲ ಮಿಡಿತ  ಸಂಪುಟ 6 ಸಂಚಿಕೆ 3

ಸೋಯಾ ಅವರೆ ಬೇಸಾಯ ಕ್ರಮಗಳು

ಓಂಕಾರಪ್ಪ ಟಿ. ಮತ್ತು ಸೌಮ್ಯ ಹೆಚ್., ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು
೯೫೯೦೭೩೯೧೨೩
1

ಸೋಯಾ ಅವರೆ ಒಂದು ಮುಖ್ಯವಾದ ಎಣ್ಣೆಕಾಳು ಬೆಳೆ. ಇದು ದ್ವಿದಳ ಧಾನ್ಯ ಬೆಳೆಯಾಗಿದ್ದು, ಇದು ಶೇ. ೪೦ ರಷ್ಟು ಸಸಾರಜನಕ ಮತ್ತು ಶೇ.೨೦ರಷ್ಟು ಎಣ್ಣೆಯನ್ನು ಒದಗಿಸಬಲ್ಲದು. ಇದನ್ನು ಎಲ್ಲಾ ಬಗೆಯ ಮಣ್ಣುಗಳಲ್ಲಿಯೂ ಬೆಳೆಯಬಹುದು. ಆದರೆ ರಸಸಾರ ೫ಕ್ಕಿಂತ ಕಡಿಮೆ ಇರುವ ಹುಳಿ ಮಣ್ಣಿನ ಜಮೀನು ಈ ಬೆಳೆಗೆ ಯೋಗ್ಯವಲ್ಲ. ಇದರ ಬೇರುಗಳಲ್ಲಿ ವಾತಾವರಣದಲ್ಲಿರುವ ಸಾರಜನಕ ಸ್ಥಿರೀಕರಿಸುವ ಗಂಟುಗಳಿರುವುದರಿಂದ, ಬೆಳೆಯ ಕಟಾವಿನ ನಂತರ ಬೇರಿನ ಭಾಗ ಮತ್ತು ಉದುರಿರುವ ಎಲೆಗಳನ್ನು ಭೂಮಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಇದು ಮಿಶ್ರ ಬೆಳೆಗೆ ಮತ್ತು ಬೆಳೆ ಪರಿವರ್ತನೆಗೆ ಉಪಯುಕ್ತ. ರಾಜ್ಯದಲ್ಲಿ ಈ ಬೆಳೆಯನ್ನು ಮುಂಗಾರಿನಲ್ಲಿ ೩.೧೮ ಲಕ್ಷ ಹೆ. ವಿಸ್ತೀರ್ಣದಲ್ಲಿ ಬೆಳೆಯುತ್ತಿದ್ದು, ಒಟ್ಟು ಇಳುವರಿ ೨.೩೭ ಲಕ್ಷ ಟನ್‌ಗಳಷ್ಟಿದ್ದು ಸರಾಸರಿ ಇಳುವರಿಯು ಹೆಕ್ಟೇರ್‌ಗೆ ೯.೪೫ ಕ್ವಿಂಟಾಲ್‌ಗಳಷ್ಟಿದೆ.

ತಳಿಗಳು ಬಿತ್ತನೆ ಕಾಲ ಮತ್ತು ವಿಶೇಷ ಗುಣಗಳು ಕಾಲಾವಧಿ (ದಿನಗಳು) ಇಳುವರಿ ಧಾನ್ಯ (ಕ್ವಿಂ./ಎ)
ಎಂ.ಎ.ಯು.ಎಸ್-೨ (ಪೂಜಾ) ನೀರಾವರಿಯಲ್ಲಿ ಎಲ್ಲಾ ಕಾಲಗಳಲ್ಲಿ ಮತ್ತು ಖುಷ್ಕಿಯಲ್ಲಿ ಆಗಸ್ಟ್ ತಿಂಗಳ ಮೊದಲನೇ ವಾರದವರೆಗೂ ೧೦೫-೧೧೦ ಕಾಳು ೮-೧೦(ನೀ) ಕಾಳು ೪-೬(ಖು)
ಕೆ.ಬಿ.ಎಸ್. -೨೩ ೯೦-೯೫ ಕಾಳು ೧೦-೧೨(ನೀ) ಕಾಳು ೮-೧೦(ಖು)
ಕೆ.ಬಿ-೭೯ ಕಬ್ಬಿನೊಳಗೆ ಮಿಶ್ರ ಬೆಳೆಯಾಗಿ ಮಾತ್ರ ೮೫-೯೦ ಕಾಳು ೫-೬(ನೀ)
ಕರುಣೆ (ತರಕಾರಿ ಸೋಯಾ ಅವರೆ) ತರಕಾರಿಯಾಗಿ ನೀರಾವರಿಯಲ್ಲಿ ಎಲ್ಲಾ ಕಾಲಗಳಲ್ಲಿಯೂ ಬೆಳೆಯಬಹುದು ೬೫-೭೦ (ಹಸಿರು ಕಾಯಿ) ೯೫-೧0೦ (ಒಣಕಾಳು) ಹಸಿರುಕಾಯಿ ೨೫-೩೦ ಕಾಳು ೩.೫-೪ (ನೀ)
ನೀ: ನೀರಾವರಿ, ಖು: ಖುಷ್ಕಿ

ಬೇಸಾಯ ಕ್ರಮಗಳು: ನೀರಾವರಿ ಬೆಳೆಯನ್ನು ವರ್ಷದ ಎಲ್ಲಾ ಕಾಲಗಳಲ್ಲಿಯೂ ಬೆಳೆಯಬಹುದು. ಖುಷ್ಕಿ ಬೆಳೆಯನ್ನು ಆಗಸ್ಟ್ ಮೊದಲನೇ ವಾರದವರೆಗೆ ಬಿತ್ತಬಹುದು. ಭತ್ತದ ಕೂಳೆ ಜಮೀನಿನಲ್ಲಿ ಇದನ್ನು ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಬಿತ್ತನೆ ಮಾಡಬಹುದು. ಒಂದು ಎಕರೆಗೆ ೨.೫ ಟನ್ ಕೊಟ್ಟಿಗೆ ಗೊಬ್ಬರವನ್ನು ಬಿತ್ತನೆಗೆ ೧೫ ದಿವಸ ಮುನ್ನ ಮಣ್ಣಿಗೆ ಸೇರಿಸಬೇಕು. ಬಿತ್ತನೆಗೆ ಭೂಮಿ ಸಿದ್ಧವಾದ ಕೂಡಲೇ ಪೂರ್ತಿ ರಸಗೊಬ್ಬರಗಳನ್ನು ಮಣ್ಣಿನಲ್ಲಿ ಬೆರೆಸಬೇಕು. ಬಿತ್ತನೆ ಬೀಜವನ್ನು ೧೮ ಅಂಗುಲ ಅಂತರದಲ್ಲಿ ಪ್ರತಿ ೪ ಅಂಗುಲಕ್ಕೆ ಒಂದರಂತೆ ಬಿತ್ತುವುದು. ಎಕರೆಗೆ ಬೇಕಾಗುವ ೨೫ ಕಿ.ಗ್ರಾಂ ಬಿತ್ತನೆ ಬೀಜವನ್ನು ಮೊದಲು ೫೦ ಗ್ರಾಂ ಥೈರಾಮ್ ಮತ್ತು ೨೫ ಗ್ರಾಂ ಕಾರ್ಬೆಂಡೈಜಿಂ ಶಿಲೀಂಧ್ರನಾಶಕಗಳಿಂದ, ನಂತರ ೨೦೦ ಗ್ರಾಂ ರೈಜೋಬಿಯಂ ಹಾಗೂ ರಂಜಕ ಕರಗಿಸುವ ಜೀವಾಣುಗಳಿಂದ ಉಪಚರಿಸುವುದು.

ನೀರಾವರಿ ಮತ್ತು ಅಂತರ ಬೇಸಾಯ: ನೀರಾವರಿ ಬೆಳೆಗೆ ಬಿತ್ತನೆಗೆ ಮುಂಚೆ ನೀರು ಹಾಯಿಸಿ, ಹದ ಬಂದ ಕೂಡಲೆ ಬಿತ್ತನೆ ಮಾಡುವುದು. ನಂತರ ಮಣ್ಣು ಮತ್ತು ಹವಾಗುಣವನ್ನು ಅನುಸರಿಸಿ, ಮರಳು ಭೂಮಿಯಾದಲ್ಲಿ ೬-೮ ದಿವಸಗಳಿಗೊಮ್ಮೆ, ಕಪ್ಪು ಭೂಮಿಯಾದಲ್ಲಿ ೧೨-೧೫ ದಿನಗಳಿಗೊಮ್ಮೆ ನೀರು ಹಾಯಿಸುವುದು ಸೂಕ್ತ. ಬಿತ್ತನೆ ಮಾಡಿದ ೨೫-೩೦ ದಿವಸಗಳಲ್ಲಿ ಅಂತರ ಬೇಸಾಯ ಮಾಡುವುದು ಅವಶ್ಯಕ.

ಕಳೆ ನಿರ್ವಹಣೆ: ಬಿತ್ತಿದ ದಿವಸ ಅಥವಾ ಮಾರನೆಯ ದಿವಸ ಎಕರೆಗೆ ೧ ಲೀಟರ್ ಅಲಾಕ್ಲೋರ್ ಶೇ. ೫೦ ಇ.ಸಿ.ಯನ್ನು ೩೦೦ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದು ಅಥವಾ ಒಂದು ಲೀಟರ್ ಅಲಾಕ್ಲೋರ್ ೫೦ ಇ.ಸಿ. ಯನ್ನು ೩೫-೪೦ ಕಿ.ಗ್ರಾಂ ಮರಳಿನಲ್ಲಿ ಚೆನ್ನಾಗಿ ಬೆರೆಸಿ ಸಮನಾಗಿ ಹರಡುವುದು. ಕಳೆನಾಶಕವನ್ನು ಮರಳಿನಲ್ಲಿ ಬೆರೆಸುವಾಗ ಪಾಲಿಥಿನ್ ಕೈ ಕವಚಗಳನ್ನು ಉಪಯೋಗಿಸಬೇಕು. ಸಿಂಪರಣೆಯ ನಂತರ ಭೂಮಿಯನ್ನು ತುಳಿಯಬಾರದು. ಸಿಂಪರಣೆ ಸಮಯದಲ್ಲಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿದ್ದು, ಹೆಚ್ಚು ಹೆಂಟೆಗಳಿರದಂತೆ ಎಚ್ಚರವಹಿಸಿದಲ್ಲಿ ಬೀಜದಿಂದ ಪ್ರಸಾರವಾಗುವ ಕಳೆಗಳೆಲ್ಲವನ್ನು ಹತೋಟಿ ಮಾಡಬಹುದು.

ಬಿತ್ತನೆ ಮಾಡಿದ ೧೫-೨೦ ದಿವಸಗಳಲ್ಲಿ ಎಕರೆಗೆ ೧೫೦ ಮಿ.ಲೀ. ಉದಯೋತ್ತರ ಕಳೆನಾಶಕವಾದ ಕ್ವಿಜಾಲೋಫೊಪೆತಿಲ್ ೧೦ ಇ.ಸಿ. ಯನ್ನು ೩೦೦ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದರಿಂದ ಪ್ರಮುಖ ಕಳೆಗಳನ್ನು ಹತೋಟಿ ಮಾಡಬಹುದು.

ಸೂಚನೆ

• ಬಲಿತು ಒಣಗಿರುವ ಸೋಯಾ ಅವರೆ ಕಾಯನ್ನು ಬಹಳ ದಿನಗಳ ಕಾಲ ಕೊಯ್ಲು ಮಾಡದೆ ಇದ್ದಲ್ಲಿ ಕಾಳು ಉದುರುತ್ತದೆ.
• ಸೋಯಾ ಅವರೆ ಬೀಜಕ್ಕಿರುವ ಮೊಳೆಯುವ ಶಕ್ತಿ ಒಂದು ವರ್ಷ ಮಾತ್ರ.

ಮಿಶ್ರ ಬೆಳೆಯಾಗಿ ಸೋಯಾ ಅವರೆ

೧. ತೊಗರಿಯೊಡನೆ ಮಿಶ್ರ ಬೆಳೆ: ಎರಡು ಅಡಿ ಅಂತರದ ತೊಗರಿ ಸಾಲುಗಳ ಮಧ್ಯೆ ಒಂದು ಸಾಲು ಸೋಯಾ ಅವರೆ ಬೆಳೆಯಬಹುದು. ಇದರಿಂದ ಎಕರೆಗೆ ಸುಮಾರು ೪-೫ ಕ್ವಿಂಟಾಲ್ ತೊಗರಿ ಮತ್ತು ೩.೦ ಕ್ವಿಂಟಾಲ್ ಸೋಯಾ ಅವರೆ ಪಡೆಯಬಹುದು.

೨. ರಾಗಿಯೊಡನೆ ಮಿಶ್ರ ಬೆಳೆ: ಒಂದೂವರೆ ಅಡಿ (೧೮ ಅಂಗುಲ) ಅಂತರವಿರುವ ಎರಡು ರಾಗಿ ಸಾಲುಗಳ ಮಧ್ಯೆ ಒಂದು ಸಾಲು ಸೋಯಾ ಅವರೆ ಬೆಳೆಯುವುದರಿಂದ ಎಕರೆಗೆ ಸುಮಾರು ೬ ಕ್ವಿಂಟಾಲ್ ರಾಗಿ ಮತ್ತು ೩ ಕ್ವಿಂಟಾಲ್ ಸೋಯಾ ಅವರೆ ಇಳುವರಿ ಪಡೆಯಬಹುದು ಅಥವಾ ಒಂದು ಅಡಿ ಅಂತರವಿರುವ ಪ್ರತಿ ನಾಲ್ಕು ಸಾಲು ರಾಗಿಯ ನಂತರ ಒಂದು ಸಾಲು ಸೋಯಾ ಅವರೆ ಬೆಳೆಯುವುದರಿಂದ ಎಕರೆಗೆ ಸುಮಾರು ೮ ಕ್ವಿಂಟಾಲ್ ರಾಗಿ ಮತ್ತು ೧.೫ ಕ್ವಿಂಟಾಲ್ ಸೋಯಾ ಅವರೆ ಇಳುವರಿ ಪಡೆಯಬಹುದು. ಈ ಎರಡೂ ಪದ್ಧತಿಗಳಲ್ಲಿ ರಾಗಿ ಬೆಳೆಗೆ ಶಿಫಾರಸ್ಸು ಮಾಡಿರುವ ಗೊಬ್ಬರಗಳನ್ನು ಉಪಯೋಗಿಸಬಹುದು.

೩. ಕಬ್ಬಿನಲ್ಲಿ ಮಿಶ್ರ ಬೆಳೆಯಾಗಿ ವಿಧಾನ: ಕಬ್ಬಿಗೆ ನಿಗದಿಪಡಿಸಿದಂತೆ ೩ ಅಡಿ ಅಂತರದಲ್ಲಿರುವ ಎರಡು ಕಬ್ಬಿನ ಸಾಲುಗಳ ಮಧ್ಯದಲ್ಲಿ ಒಂದು ಸಾಲು ಸೋಯಾ ಅವರೆ ಬೆಳೆಯಬಹುದು. ಕಬ್ಬನ್ನು ನಾಟಿ ಮಾಡಿರುವ ಬೋದಿನ ಇನ್ನೊಂದು ಬದಿಗೆ, ತುದಿಯಿಂದ ೩-೪ ಅಂಗುಲ ಕೆಳಗೆ ಇಳಿಜಾರಿನಲ್ಲಿ ಸೋಯಾ ಅವರೆ ಸಾಲು ಬರಬೇಕು. ಬೀಜದಿಂದ ಬೀಜಕ್ಕೆ ೪ ಅಂಗುಲ ಅಂತರ ಇರಬೇಕು. ನಾಟಿ ಮತ್ತು ಬಿತ್ತನೆ ಸಮಯದಲ್ಲಿ ಮಾತ್ರ ಕಬ್ಬಿಗೆ ನಿಗದಿಪಡಿಸಿರುವುದಕ್ಕಿಂತ ಹೆಚ್ಚುವರಿ ರಸಗೊಬ್ಬರಗಳನ್ನು (ಸಾರಜನಕ ೪ ಕಿ.ಗ್ರಾಂ, ರಂಜಕ ೧೦ ಕಿ.ಗ್ರಾಂ, ಪೊಟ್ಯಾಷ್ ೫ ಕಿ.ಗ್ರಾಂ) ಕೊಡಬೇಕಾಗುತ್ತದೆ.

ಕಳೆ ನಾಶಕ: ಎಕರೆಗೆ ೧ ಲೀಟರ್ ಅಲಾಕ್ಲೋರ್ ಶೇ.೫೦ ಇ.ಸಿ. ೩೦೦ ಲೀಟರ್ ನೀರಿನಲ್ಲಿ ಬೆರೆಸಿ, ಬಿತ್ತನೆ ಮಾಡಿದ ದಿನ ಅಥವಾ ಮಾರನೇ ದಿನ ಮಣ್ಣಿನ ಮೇಲೆ ಸಿಂಪರಿಸಿ (ಸೂಚನೆ: ಕಬ್ಬಿಗೆ ಶಿಫಾರಸ್ಸು ಮಾಡಿರುವ ಅಟ್ರಾಜಿನ್, ೨, ೪ - ಡಿ ಮತ್ತು ಸಿಮಾಜಿನ್ ಕಳೆನಾಶಕಗಳು ಸೋಯಾ ಅವರೆಗೆ ಹಾನಿಕಾರಕ).

೪. ಮುಸುಕಿನ ಜೋಳದೊಡನೆ ಮಿಶ್ರ ಬೆಳೆ: ಸಾಲಿನಿಂದ ಸಾಲಿಗೆ ೧.೫ ಅಡಿ ಅಂತರವಿರುವ ಎರಡು ಜೋಡಿ ಮುಸುಕಿನ ಜೋಳದ ಸಾಲುಗಳ ಮಧ್ಯೆ ೩ ಅಡಿ ಅಂತರವಿರಲಿ. ಈ ಜಾಗದಲ್ಲಿ ಒಂದು ಅಡಿಗೊಂದರಂತೆ ೨ ಸಾಲು ಸೋಯಾ ಅವರೆ ಬಿತ್ತುವುದು. ಈ ವಿಧಾನದಿಂದ ಎಕರೆಗೆ ೧೮ ಕ್ವಿಂಟಾಲ್ ಮುಸುಕಿನ ಜೋಳ ಮತ್ತು ೩ ಕ್ವಿಂಟಾಲ್ ಸೋಯಾ ಅವರೆ ಇಳುವರಿ ನಿರೀಕ್ಷಿಸಬಹುದು.

೫. ಭತ್ತದ ಕೂಳೆ ಗದ್ದೆಯಲ್ಲಿ ಸೋಯಾ ಅವರೆ: ಸೋಯಾ ಅವರೆ ವರ್ಷದ ಎಲ್ಲಾ ಕಾಲಗಳಲ್ಲಿಯೂ ಬೆಳೆಯಬಹುದಾದ್ದರಿಂದ ಮತ್ತು ಇದಕ್ಕೆ ಚಳಿಯನ್ನು ತಡೆದುಕೊಂಡು ಬೆಳೆಯುವ ಶಕ್ತಿಯಿರುವುದರಿಂದ ಭತ್ತದ ಕಟಾವಿನ ನಂತರ ಅದೇ ಗದ್ದೆಯಲ್ಲಿ ಬೆಳೆಯಲು ಸೂಕ್ತ ಬೆಳೆಯಾಗಿದ್ದು, ಇದು ಹೆಸರು ಬೆಳೆಗಿಂತ ಲಾಭದಾಯಕವಾಗಿದೆ. ಮುಂಗಾರು ಭತ್ತವು ನವೆಂಬರ್- ಡಿಸೆಂಬರ್ ತಿಂಗಳುಗಳಲ್ಲಿ ಕಟಾವಾದ ನಂತರ ಮರಳು ಮಿಶ್ರಿತ ಮಣ್ಣಾದಲ್ಲಿ ಭೂಮಿಯ ಸಿದ್ಧತೆಯ ನಂತರ ಸೋಯಾ ಅವರೆಯನ್ನು ಬಿತ್ತನೆ ಮಾಡಿ. ಭತ್ತ ಕಟಾವಿನ ಸಮಯದಲ್ಲಿ ಕಾಳುಗಳು ಉದುರುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಈ ರೀತಿ ಸ್ವಯಂ ಬಿತ್ತನೆಯಾದ ಭತ್ತವನ್ನು ಮೊಳೆಕೆಯೊಡೆಸಿ, ಉಳುಮೆ ಮಾಡಿ, ಭೂಮಿ ಸಿದ್ಧತೆ ಮಾಡುವ ಸಮಯದಲ್ಲಿಯೇ ಮೊಳೆಯುವ ಭತ್ತದ ಪೈರನ್ನು ಸಂಪೂರ್ಣವಾಗಿ ನಾಶಪಡಿಸಬೇಕು. ಈ ರೀತಿ ನಾಶ ಪಡಿಸುವುದರಿಂದ ಭತ್ತದ ಪೈರಿನಿಂದ ಸೋಯಾ ಅವರೆ ಬೆಳೆಗೆ ಉಂಟಾಗಬಹುದಾದ ತೊಂದರೆಯನ್ನು ತಡೆಯಬಹುದು. ಕಪ್ಪು ಮಣ್ಣಿನ ಪ್ರದೇಶವಾದಲ್ಲಿ ಭೂಮಿಯನ್ನು ಉತ್ತು ಸಿದ್ಧಪಡಿಸುವ ಅಗತ್ಯವಿಲ್ಲ. ಬದಲಾಗಿ ಭತ್ತದ ಸಾಲುಗಳ ಮಧ್ಯೆ ಒಂದು ಸಾಲು ಸೋಯಾ ಅವರೆಯನ್ನು ಬೀಜದಿಂದ ಬೀಜಕ್ಕೆ ೪ ಅಂಗುಲ ಅಂತರವಿರುವಂತೆ ಬಿತ್ತನೆ ಮಾಡುವುದು. ಬೀಜವು ಮೊಳಕೆಯೊಡೆದ ನಂತರ ಗೊಬ್ಬರಗಳನ್ನು ಮಣ್ಣಿನಲ್ಲಿ ಸೇರಿಸುವುದು. ಬಿತ್ತಿದ ೨೦ ದಿವಸಗಳ ನಂತರ ಭತ್ತದ ಕೂಳೆಗಳನ್ನು ಕಿತ್ತು ಅಂತರ ಬೇಸಾಯ ಮಾಡುವುದು. ಮಣ್ಣಿನ ಹದವರಿತು ೩-೫ ಸಾರಿ ನೀರು ಹಾಯಿಸುವುದು. ಕೀಟಗಳ ಬಾಧೆ ಕಂಡುಬಂದಲ್ಲಿ ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸುವುದು. ಈ ಬೆಳೆಯಿಂದ ಎಕರೆಗೆ ೬-೮ ಕ್ವಿಂಟಾಲ್ ಸೋಯಾ ಅವರೆ ಇಳುವರಿಯನ್ನು ಪಡೆಯಬಹುದು.

ಕೀಟಗಳು

ಕಾಂಡಕೊರಕ ನೊಣ (ಆಗ್ರೋ ಮೈಜಿಡ್ ನೊಣ): ಬಾಧೆ ಕಂಡುಬಂದಲ್ಲಿ ಕ್ಲೋರ್‌ಪೈರಿಫಾಸ್ - ೨೦ ಇ.ಸಿ. ಅಥವಾ ಕ್ವಿನಾಲ್‌ಫಾಸ್ - ೨೫ ಇ.ಸಿ ೨ ಮಿ.ಲೀ. ಅಥವಾ ಟ್ರೈಯಜೋಫಾಸ್ - ೪೦ ಇ.ಸಿ ೧ ಮಿ.ಲೀ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕಾಗುತ್ತದೆ.

ಎಲೆ ತಿನ್ನುವ ಹುಳು ಹಾಗೂ ಕಂಬಳಿ ಹುಳು: ಬಾಧೆ ಕಂಡುಬಂದಲ್ಲಿ ಕ್ಲೋರ್‌ಪೈರಿಫಾಸ್ - ೨೦ ಇ.ಸಿ ೨ ಮಿ.ಲೀ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕಾಗುತ್ತದೆ.

ಎಲೆ ಮಡಿಸುವ ಹುಳು: ಬಾಧೆ ಕಂಡುಬಂದಲ್ಲಿ ಡೈಮಿಥೋಯೇಟ್ - ೩೦ ಇ.ಸಿ. ೧.೭ ಮಿ.ಲೀ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕಾಗುತ್ತದೆ.

ಕಾಯಿಕೊರಕ ಬಾಧೆ ಕಂಡುಬಂದಲ್ಲಿ ಮೆಲಾಥಿಯಾನ್ ಶೇ. ೫ ಡಿ ೧೦ ಕಿ.ಗ್ರಾಂ/ಎಕರೆಗೆ ಅಥವಾ ಕ್ಲೋರ್‌ಪೈರಿಫಾಸ್ - ೨೦ ಇ.ಸಿ ೨ ಮಿ.ಲೀ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕಾಗುತ್ತದೆ.

ರೋಗಗಳು

ತುಕ್ಕುರೋಗ: ಬಾಧೆ ಕಂಡುಬಂದಲ್ಲಿ ಪ್ರೋಪಿಕೋನಜೋಲ್ ಅಥವಾ ಹೆಕ್ಸಾಕೋನಜೋಲ್ ೧ ಮಿ.ಲೀ. ಯಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕಾಗುತ್ತದೆ.

ಹಳದಿ ನಂಜುರೋಗ: ಬಾಧೆ ಕಂಡುಬಂದಲ್ಲಿ ಡೈಮಿಥೋಯೇಟ್ - ೩೦ ಇ.ಸಿ. ೧.೭ ಮಿ.ಲೀ. ಯಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕಾಗುತ್ತದೆ.

ಎಲೆ ಚುಕ್ಕೆ ರೋಗ: ಬಾಧೆ ಕಂಡುಬಂದಲ್ಲಿ ಜೈನೆಬ್ ಅಥವಾ ಮ್ಯಾಂಕೋಜೆಬ್ ೨ ಗ್ರಾಂ ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕಾಗುತ್ತದೆ.