ನೇಗಿಲ ಮಿಡಿತ  ಸಂಪುಟ 6 ಸಂಚಿಕೆ 3

ಹಿಂಗಾರಿ ಜೋಳದ ಉತ್ಪಾದನಾ ತಾಂತ್ರಿಕತೆಗಳು

ವಿ. ಎಸ್. ಕುಬಸದ, ಕೃಷಿ ವಿಶ್ವವಿದ್ಯಾಲಯ, ಧಾರವಾಡ
೯೪೮೦೪೮೨೨೮೮,
1

ಹಿಂಗಾರಿ ಜೋಳವು ಉತ್ತರ ಕರ್ನಾಟಕದ ಬಹುಮುಖ್ಯವಾದ ಆಹಾರ ಹಾಗೂ ಮೇವಿನ ಬೆಳೆಯಾಗಿದೆ. ಬಿಳಿ ಜೋಳದ ರೊಟ್ಟಿ ಇಲ್ಲದೆ ರಾಜ್ಯದ ಉತ್ತರ ಭಾಗದ ಸಮಸ್ತ ಜನರ ಊಟ ಸಂಪೂರ್ಣ ಎನಿಸದು. ನಮ್ಮ ಸಾಂಪ್ರದಾಯಿಕ ವಾಡಿಕೆಯಲ್ಲಿ ಹೇಳುವಂತೆ ಜೋಳ ತಿಂದವನು ತೋಳನಂತಾಗುತ್ತಾನೆ ಎಂಬ ಗಾದೆ ಮಾತು ಎಳ್ಳಷ್ಟು ಸುಳ್ಳಲ್ಲಾ. ಅಷ್ಟರ ಮಟ್ಟಿಗೆ ಬಿಳಿ ಜೋಳವು ಗ್ರಾಮ ಮತ್ತು ನಗರವಾಸಿ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಈ ಬೆಳೆಯನ್ನು ಹೆಚ್ಚಾಗಿ ಖುಷ್ಕಿ ಬೆಳೆಯಾಗಿ ಮತ್ತು ಅಲ್ಪ ಪ್ರಮಾಣದಲ್ಲಿ ನೀರಾವರಿಯಲ್ಲಿಯೂ ಬೆಳೆಯಲಾಗುತ್ತಿದೆ. ರಾಜ್ಯದ ಜೋಳದ ಒಟ್ಟು ಕ್ಷೇತ್ರ ೧೩.೨ ಲಕ್ಷ ಹೆಕ್ಟೇರ್‌ಗಳಿದ್ದು, ೧೪.೩ ಲಕ್ಷ ಟನ್ ಜೋಳದ ಉತ್ಪಾದನೆಯಿದೆ. ಹಿಂಗಾರಿಯಲ್ಲಿ ೮.೪೨ ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಯಲಾಗುತ್ತಿದ್ದು, ಇದರ ಉತ್ಪಾದನೆಯು ೭.೨೨ ಲಕ್ಷ ಟನ್‌ಗಳಷ್ಟಿದೆ. ರಾಜ್ಯದಲ್ಲಿ ಶೇ. ೬೫ ರಷ್ಟು ಪ್ರದೇಶ ಹಿಂಗಾರು ಹಂಗಾಮಿನಲ್ಲಿದ್ದು, ಈ ಕ್ಷೇತ್ರದಿಂದ ಶೇ. ೪೫ ರಷ್ಟು ಉತ್ಪಾದನೆಯನ್ನು ಪಡೆಯಲಾಗುತ್ತಿದೆ. ಹಿಂಗಾರಿಯಲ್ಲಿ ಜೋಳವನ್ನು ಗುಲ್ಬರ್ಗ, ರಾಯಚೂರು, ಬಳ್ಳಾರಿ, ಕೊಪ್ಪಳ, ಗದಗ, ಬಾಗಲಕೋಟೆ, ಬಿಜಾಪುರ, ಧಾರವಾಡ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಶ್ರಿತ ಬೆಳೆಯಾಗಿ ಬೆಳೆಯಲಾಗುತ್ತಿದೆ. ಇನ್ನೊಂದು ಮುಖ್ಯವಾಗಿ ಗಮನಿಸಬೇಕಾದಂಥ ವಿಷಯವೇನೆಂದರೆ ಜೋಳದ ಕ್ಷೇತ್ರ ಕಡಿಮೆಯಾಗಿದ್ದರೂ ಸಹ, ಅದರ ಉತ್ಪಾದಕತೆ ಮಾತ್ರ ಗಣನೀಯವಾಗಿ ಹೆಚ್ಚಾಗಿದೆ. ಸದರಿ ಹೆಚ್ಚಾದ ಉತ್ಪಾದಕತೆಗೆ ರೈತರು ಹೊಸ ಬೇಸಾಯ ತಾಂತ್ರಿಕತೆಗಳನ್ನು ಅನುಸರಿಸುತ್ತಿರುವುದೇ ಪ್ರಮುಖ ಕಾರಣವೆಂದು ಹೇಳಬಹುದು. ಹಿಂಗಾರಿ ಜೋಳದ ಒಟ್ಟಾರೆ ಉತ್ಪಾದನೆ ನಿರೀಕ್ಷೆಗಿಂತ ಕಡಿಮೆ ಇದ್ದು, ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದು ಅತೀ ಅವಶ್ಯಕವಾಗಿದೆ. ಆದ್ದರಿಂದ ಜೋಳ ಬೆಳೆಯುವ ರೈತರು ಈ ಕೆಳಗೆ ತಿಳಿಸಿದ ಹೊಸ ತಾಂತ್ರಿಕತೆಗಳನ್ನು ಅಳವಡಿಸಿ ಇನ್ನು ಹೆಚ್ಚಿನ ಇಳುವರಿ ಹಾಗೂ ಲಾಭವನ್ನು ಪಡೆಯಬಹುದು.

3

ತಳಿಗಳು

೧. ಎಸ್.ಪಿ.ವಿ.-೨೨೧೭: ಈ ತಳಿಯು ಎಲ್ಲ ತರಹದ ಜಮೀನುಗಳಿಗೆ ಸೂಕ್ತವಾದುದು. ಈ ತಳಿಯು ಮುಖ್ಯವಾಗಿ ದಪ್ಪ, ದುಂಡಾದ, ಹೊಳಪುಳ್ಳ ಕಾಳುಗಳ ಜೊತೆಗೆ ಮಾಗುವ ಸಮಯದಲ್ಲಿ ಹಸಿರಾದ ಎಲೆಗಳನ್ನು ಹೊಂದಿರುತ್ತದೆ. ಹೊಸ ತಳಿಯು ಮಾಲ್ದಂಡಿ ತಳಿಗಿಂತ ಶೇ. ೨೦-೨೫ ರಷ್ಟು ಹೆಚ್ಚಿನ ಕಾಳಿನ ಇಳುವರಿ ನೀಡುತ್ತದೆ. ಅಲ್ಲದೆ ಉತ್ತಮ ಗುಣಮಟ್ಟದ ಮೇವಿನ ಗುಣಧರ್ಮ ಹೊಂದಿದೆ. ಈ ತಳಿಯು ಇದ್ದಲು ಕಾಂಡ ಕೊಳೆ ರೋಗ ತಡೆದುಕೊಳ್ಳುವ ಶಕ್ತಿಯನ್ನು ಪಡೆದಿದೆ. ಮಾಗುವ ಸಮಯದಲ್ಲಿ ಈ ತಳಿಯು ನೆಲಕ್ಕೆ ಬೀಳುವುದಿಲ್ಲ (ವಲಯ-೮).

೨. ಬಿ.ಜೆ.ವಿ-೪೪: ಈ ತಳಿಯು ಮಧ್ಯಮ ಮತ್ತು ಹೆಚ್ಚು ಆಳದ ಮಣ್ಣಿನ ಜಮೀನಿಗೆ ಸೂಕ್ತವಾದುದು. ಇದು ಎಮ್-೩೫-೧ ತಳಿಗಿಂತ ಉತ್ತಮ ಕಾಳಿನ ಇಳುವರಿ (೨೨-೨೫ ಕ್ವಿಂಟಾಲ್ ಪ್ರತಿ ಹೆಕ್ಟೇರಿಗೆ) ಮತ್ತು ಮೇವಿನ ಇಳುವರಿ (೫೦-೬೦ ಕ್ವಿಂಟಾಲ್ ಪ್ರತಿ ಹೆಕ್ಟೇರಿಗೆ) ನೀಡಬಲ್ಲುದಾಗಿದೆ. ಇದರ ಕಾಳು ಮತ್ತು ರೊಟ್ಟಿಯ ಗುಣಮಟ್ಟ ಎಮ್-೩೫-೧ ತಳಿಗೆ ಸಮನಾಗಿದೆ. ಇದರ ಮೇವಿನ ಗುಣಮಟ್ಟ ಎಮ್-೩೫-೧ ತಳಿಗಿಂತ ಚೆನ್ನಾಗಿದೆ. ಈ ತಳಿಯು ೧೨೫-೧೩೦ ದಿನಗಳಲ್ಲಿ ಮಾಗುವುದು ಮತ್ತು ೨೨೦ ಸೆಂ.ಮೀ. ಎತ್ತರ ಹೊಂದಿರುತ್ತದೆ. ಇದು ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ, ಆಳವಾದ ಕಪ್ಪು ಮಣ್ಣಿನ ಭೂಮಿಗೆ ಸೂಕ್ತವಾಗಿದೆ (ವಲಯ-೩ ಮತ್ತು ೮).

೩. ಡಿ.ಎಸ್.ವಿ-೪: ಈ ತಳಿಯು ಇತರೆ ತಳಿಗಳಿಗಿಂತ ೫ ದಿವಸ ತಡವಾಗಿ ಮಾಗುವುದರಿಂದ ಇದನ್ನು ಹೆಚ್ಚು ಆಳದ ಮಣ್ಣಿನಲ್ಲಿ ಬೆಳೆಯಬಹುದು. ಇದ್ದಿಲು ಕಾಂಡ ಕೊಳೆ ರೋಗ ಮತ್ತು ತುಕ್ಕು ರೋಗನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಮೇವಿನ ಗುಣಮಟ್ಟ ಕಡಿಮೆಯಾಗುವುದಿಲ್ಲ ಮತ್ತು ಬೆಳೆಯು ಭೂಮಿಗೆ ಬೀಳುವುದಿಲ್ಲ. ಕಾಳು ದುಂಡಾಗಿದ್ದು ಎಂ.೩೫-೧ ಗಿಂತ ದಪ್ಪವಿರುತ್ತದೆ. ಕಾಳು ಗಟ್ಟಿಯಾಗಿದ್ದರಿಂದ ಶೇಖರಣೆ ಮಾಡಿದಾಗ ನುಶಿ ಮತ್ತಿತರ ಹುಳುಗಳ ಬಾಧೆಗೊಳಗಾಗುವುದಿಲ್ಲ. ಬೆಳೆಯು ೧೮೦-೨೦೦ ಸೆಂ.ಮೀ. ಎತ್ತರ ಬೆಳೆದು ೧೨೫ ದಿನಗಳಲ್ಲಿ ಮಾಗುತ್ತದೆ (ವಲಯ-೩ ಮತ್ತು ೮).

೪. ಎಂ. ೩೫-೧: ಈ ತಳಿಯು ಎಲ್ಲ ತರಹದ ಜಮೀನುಗಳಿಗೆ ಸೂಕ್ತವಾದುದು. ತೇವಾಂಶದ ಕೊರತೆ ಮತ್ತು ಸುಳಿ ನೊಣದ ಬಾಧೆಯನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ. ಹಿಂಗಾರಿ ಹಂಗಾಮಿನ ಎಲ್ಲ ಪ್ರದೇಶಗಳಿಗೂ ಸೂಕ್ತವಾಗಿದೆ. ಉತ್ತಮ ಗುಣಮಟ್ಟದ ಕಾಳನ್ನು ಹೊಂದಿದೆ.

ಭೂಮಿ ಸಿದ್ಧಪಡಿಸುವಿಕೆ

ಮುಂಗಾರು ಬೆಳೆ ಕಟಾವು ಮಾಡಿದ ಕೂಡಲೆ ಭೂಮಿಯನ್ನು ಚೆನ್ನಾಗಿ ಹರಗಿ ಕಸವನ್ನು ಆರಿಸಿ ಬಿತ್ತನೆಗೆ ತಯಾರು ಮಾಡಬೇಕು. ಮುಂಗಾರು ಪಡಾ ಬಿಟ್ಟು ಹಿಂಗಾರಿ ಜೋಳ ಬೆಳೆಯುವ ಪ್ರದೇಶಗಳಲ್ಲಿ ಭೂಮಿಯನ್ನು ನೇಗಿಲು ಹೊಡೆದು, ಗುರಾ ಹೊಡೆದು ಚೆನ್ನಾಗಿ ಹರಗಬೇಕು. ನಂತರ “ಬಂಡ್ ಫಾರ್ಮ್” ಸಹಾಯದಿಂದ ೫ ಮೀ. x ೫ ಮೀ. ಅಳತೆಯ ಚೌಕು ಮಡಿಗಳನ್ನು ಮಾಡಬೇಕು. ಇದರಿಂದ ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ಬಂದಂಥ ಮಳೆ ನೀರನ್ನು ಸಂಗ್ರಹಿಸಿ ಭೂಮಿಯಲ್ಲಿಯೇ ಇಂಗುವಂತೆ ಮಾಡಬಹುದು. ಇದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಹಿಂಗಾರಿ ಜೋಳದ ಬೆಳೆಗೆ ಲಭ್ಯವಾಗಿ ಉತ್ತಮವಾದ ಇಳುವರಿಯನ್ನು ಪಡೆಯಬಹುದು.

ಬಿತ್ತನೆ ಕಾಲ

ಹಿಂಗಾರು ಬೆಳೆಯನ್ನು ಸೆಪ್ಟೆಂಬರ್ ೧೫ ದಿಂದ ಅಕ್ಟೋಬರ್ ೧೫ ರವರೆಗೆ ಬಿತ್ತನೆ ಮಾಡುವುದು ಸೂಕ್ತವಾಗಿದೆ.

ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳು : (ಪ್ರತಿ ಎಕರೆಗೆ)

ಬೀಜ
ಖುಷ್ಕಿ ನೀರಾವರಿ
೩.೦ ಕಿ.ಗ್ರಾಂ ೩.೦ ಕಿಗ್ರಾಂ
ಸಾವಯವ ಗೊಬ್ಬರ ೧ ಟನ್ ೨.೫ ಟನ್
ರಾಸಾಯನಿಕ ಗೊಬ್ಬರಗಳು
ಎಲ್ಲಾ ವಲಯಗಳು ವಲಯ
೧ ಮತ್ತು ೨ ೩ ೮

ಬೀಜೋಪಚಾರ

• ಪ್ರತಿ ಕಿ. ಗ್ರಾಂ ಬೀಜವನ್ನು ೧.೫ ಲೀ. ನೀರಿನಲ್ಲಿ ೩೦ ಗ್ರಾಂ ಕ್ಯಾಲ್ಸಿಯಂ ಕ್ಲೋರೈಡ್ ಅಥವಾ ೭.೫ ಗ್ರಾಂ ಪೊಟ್ಯಾಷಿಯಂ ನೈಟ್ರೇಟ್ ಅಥವಾ ಗೋಮೂತ್ರ (ಶೇ. ೨೫) ಬೆರೆಸಿದ ದ್ರಾವಣದಲ್ಲಿ ೮ ಗಂಟೆಗಳ ಕಾಲ ನೆನೆಸಿ ನೆರಳಿನಲ್ಲಿ ಒಣಗಿಸಿ ಬಿತ್ತುವುದರಿಂದ ಬೀಜ ಮೊಳಕೆ ಹಾಗೂ ಸಸಿಗಳ ಬೆಳವಣಿಗೆ ಸುಧಾರಿಸುವುದಲ್ಲದೆ ಇಳುವರಿಯು ಹೆಚ್ಚಾಗುವುದು.
• ಪ್ರತಿ ಕೆಜಿ ಬೀಜಕ್ಕೆ ೫೦ ಗ್ರಾಂ ಅಜೋಸ್ಪಿರಿಲ್ಲಂ ಅಣುಜೀವಿ ಗೊಬ್ಬರದಿಂದ ಬೀಜೋಪಚಾರ ಮಾಡುವುದರಿಂದ ಸಾರಜನಕ ಗೊಬ್ಬರದ ಪ್ರಮಾಣವನ್ನು ಶೇ.೨೦-೨೫ ರಷ್ಟು ಕಡಿಮೆ ಮಾಡಬಹುದು.

ಬಿತ್ತನೆ

ಬೀಜವನ್ನು ೪೫ ಸೆಂ.ಮೀ. ಅಂತರದ ಸಾಲುಗಳಲ್ಲಿ ಬೀಜದಿಂದ ಬೀಜಕ್ಕೆ ೧೫ ಸೆಂ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕು. ಹಿಂಗಾರು (ಖುಷ್ಕಿ) ಬಿತ್ತನೆಯಲ್ಲಿ ಬೀಜವನ್ನು ೫-೭ ಸೆಂ.ಮೀ. ಆಳದಲ್ಲಿ ಹಾಗೂ ಬೇಸಿಗೆ (ನೀರಾವರಿ) ಬಿತ್ತನೆಯಲ್ಲಿ ಬೀಜವನ್ನು ೨.೫ - ೫ ಸೆಂ.ಮೀ. ಆಳದಲ್ಲಿ ಬಿತ್ತನೆ ಮಾಡಬೇಕು.

ಚೌಕು ಮಡಿ ಪದ್ಧತಿಯಲ್ಲಿ ಮಳೆ ನೀರು ಸಂಗ್ರಹಣೆ

ಹಿಂಗಾರು ಜೋಳವನ್ನು ಬಿತ್ತನೆ ಮಾಡಿದ ನಂತರ ಕಟ್ಟಿಗೆ ರೆಂಟೆಯಿಂದ ೫ಮೀ.  ೫ಮೀ. ಅಳತೆಯ ಚೌಕು ಮಡಿಗಳನ್ನು ಮಾಡಬೇಕು. ಎಡೆ ಹೊಡೆಯುವಾಗ ಮಡಿಗಳು ಹಾಳಾಗದಂತೆ ನೋಡಿಕೊಳ್ಳಬೇಕು. ಇದರಿಂದ ಮಳೆ ನೀರು ಚೌಕು ಮಡಿಗಳಲ್ಲಿ ಸಂಗ್ರಹಣೆಯಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ, ಹಿಂಗಾರಿ ಜೋಳದ ಉತ್ಪಾದನೆ ಹೆಚ್ಚಾಗುವುದು.

ರಸಗೊಬ್ಬರ ಬಳಕೆ

ರಸಗೊಬ್ಬರಗಳ ಪ್ರಮಾಣವನ್ನು ಮಣ್ಣು ಪರೀಕ್ಷಾ ಆಧಾರದ ಮೇಲೆ ನಿರ್ಧರಿಸಬೇಕು. ಹಿಂಗಾರು ಹಾಗೂ ಬೇಸಿಗೆ (ನೀರಾವರಿ-ವಲಯ ೧,೨,೩,೮) ಬೆಳೆಗೆ ಶಿಫಾರಸ್ಸಿನ ಶೇ.೫೦ರಷ್ಟು ಸಾರಜನಕ, ಪೂರ್ತಿ ರಂಜಕ ಹಾಗೂ ಪೊಟ್ಯಾಷ್ ಗೊಬ್ಬರಗಳನ್ನು ಬಿತ್ತುವಾಗ ಕೊಟ್ಟು, ಉಳಿದ ಶೇ.೫೦ರಷ್ಟು ಸಾರಜನಕವನ್ನು ಬಿತ್ತಿದ ೩೦ ದಿನಗಳ ನಂತರ ಮೇಲು ಗೊಬ್ಬರವಾಗಿ ಕೊಡಬೇಕು. ಹಿಂಗಾರು ಖುಷ್ಕಿ ಬೆಳೆಗೆ ಪೂರ್ತಿ ಸಾರಜನಕ ಹಾಗೂ ರಂಜಕ ಗೊಬ್ಬರಗಳನ್ನು ಬಿತ್ತುವಾಗ ಕೊಡಬೇಕು.

ಕಳೆ ಹತೋಟಿ

ಬೀಜ ಬಿತ್ತಿದ ದಿನ ಅಥವಾ ಮರು ದಿನ ೪೦೦ ಗ್ರಾಂ ಅಟ್ರಾಜಿನ್ ೫೦ ಡಬ್ಲುಪಿ ಕಳೆನಾಶಕವನ್ನು ೨೦೦ ಲೀಟರ್ ನೀರಿನಲ್ಲಿ ಬೆರೆಸಿ ಮಣ್ಣಿನ ಮೇಲೆ ಸಿಂಪಡಿಸಬೇಕು. ಸಿಂಪರಣೆ ಸಮಯದಲ್ಲಿ ಮಣ್ಣು ಹುಡಿಯಾಗಿದ್ದು, ಸಾಕಷ್ಟು ತೇವ ಹೊಂದಿರಬೇಕು. ಉಪಯೋಗಿಸುವ ಅಟ್ರಾಜಿನ್ ಪ್ರಮಾಣ ಶಿಫಾರಿಸ್ಸಿನ ಪ್ರಮಾಣಕ್ಕಿಂತ ಹೆಚ್ಚಾದಲ್ಲಿ ಜೋಳದ ಮೊಳಕೆ ಪ್ರಮಾಣ ಕಡಿಮೆಯಾಗುವುದು. ಮೊಳಕೆ ಬಂದರೂ ಬೆಳೆ ಕುಂಠಿತವಾಗುತ್ತದೆ.

ಅಂತರ ಬೇಸಾಯ

ಬಿತ್ತಿದ ೧೦-೧೨ ದಿವಸಗಳ ಅಂತರದಲ್ಲಿ ೩-೪ ಬಾರಿ ಅಂತರ ಬೇಸಾಯ ಮಾಡಿ, ಅವಶ್ಯವಿದ್ದಲ್ಲಿ ಕಳೆ ತೆಗೆಯಬೇಕು. ಶಾವೆಲ್ ಮಾದರಿಯ ಎಡೆಕುಂಟೆಯಿಂದ, ಆಳವಾದ ಅಂತರ ಬೇಸಾಯ ಮಾಡುವುದು ಉತ್ತಮ. ಬೆಳೆಗೆ ಮೇಲುಗೊಬ್ಬರ ಕೊಟ್ಟ ನಂತರ ಮಣ್ಣು ಏರು ಹಾಕಿ ಅಂತರ ಬೇಸಾಯವನ್ನು ಆಳವಾಗಿ ಮಾಡಬೇಕು.

ನೀರಾವರಿ

ಮಣ್ಣು ಮತ್ತು ಹವಾಗುಣ ಅನುಸರಿಸಿ ಮರಳು ಮಿಶ್ರಿತ ಮಣ್ಣಿನಲ್ಲಿ ೮ ದಿನಗಳಿಗೊಮ್ಮೆ ಹಾಗೂ ಜೇಡಿ ಮಿಶ್ರಿತ ಮಣ್ಣಿನಲ್ಲಿ ೧೫ ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಮುಖ್ಯವಾಗಿ ಸಸಿಯ ಬೆಳವಣಿಗೆ ಸಮಯ, ತೆನೆ ಬರುವ ಸಮಯ ಮತ್ತು ಕಾಳು ಕಟ್ಟುವ ಸಮಯದಲ್ಲಿ ತಪ್ಪದೇ ನೀರು ಒದಗಿಸಬೇಕು.

ಕೀಟಗಳು ಹಾಗೂ ನಿರ್ವಹಣೆ

೧. ಸುಳಿ ನೊಣ: ಈ ಬೆಳೆಗೆ ೩-೫ ವಾರದಲ್ಲಿ ಈ ಕೀಟದ ಬಾಧೆ ಹೆಚ್ಚಾಗಿ ಕಾಣಿಸುತ್ತದೆ. ಕೀಟದ ಬಾಧೆಯಿಂದ ಸಸಿಗಳ ಸುಳಿ ಒಣಗುವುದು. ಈ ಕೀಟವು ೫ ವಾರದೊಳಗಿನ ಜೋಳದ ಸಸಿಯನ್ನು ಮಾತ್ರ ಪೀಡಿಸುತ್ತದೆ. ಬಿತ್ತನೆ ತಡವಾದ ಸಂದರ್ಭಗಳಲ್ಲಿ ಶೇ. ೯೦ಕ್ಕಿಂತಲೂ ಹೆಚ್ಚಿನ ಸಸಿಗಳು ನಾಶವಾಗುವ ಸಾಧ್ಯತೆ ಇರುತ್ತದೆ.

ನಿರ್ವಹಣೆ: ಸುಳಿ ಮತ್ತು ಕಾಂಡ ಕೊರೆವ ಹುಳು ಬಿದ್ದ ಸಸಿಗಳನ್ನು ಕಿತ್ತು ನಾಶಪಡಿಸುವುದರಿಂದ ಅವುಗಳ ಅಭಿವೃದ್ಧಿಯನ್ನು ತಡೆಗಟ್ಟಬಹುದು.

೧. ಪ್ರತಿ ಕಿ.ಗ್ರಾಂ ಬೀಜಕ್ಕೆ ೫ ಮಿ.ಲೀ.ಕ್ಲೋರ್‌ಪೈರಿಫಾಸ್ ೨೦ ಇ.ಸಿ ಯನ್ನು ೨೦ ಮಿ.ಲೀ. ನೀರಿನೊಂದಿಗೆ ಮಿಶ್ರಣ ಮಾಡಿ ಬೀಜೋಪಚಾರ ಮಾಡಿ ನೆರಳಿನಲ್ಲಿ ಒಣಗಿಸಿ ಬಿತ್ತಬೇಕು. ೨. ಶೇ. ೩ರ ಕಾರ್ಬೋಫ್ಯುರಾನ್ ೩ ಜಿ. ಹರಳನ್ನು ಎಕರೆಗೆ ೧೨ ಕಿ.ಗ್ರಾಂನಷ್ಟು ಬಿತ್ತುವಾಗ ಮಣ್ಣಿನಲ್ಲಿ ಬೆರೆಸಬೇಕು. ೩. ಎಕರೆಗೆ ೩ ಕಿ.ಗ್ರಾಂ ಶೇ.೩ರ ಕಾರ್ಬೋಫ್ಯುರಾನ್ ೩ ಜಿ. ಅನ್ನು ಬಿತ್ತನೆ ಮಾಡಿದ ೨೫ ಹಾಗೂ ೩೫ ದಿವಸಗಳ ನಂತರ ಸುಳಿಯಲ್ಲಿ ಹಾಕಬೇಕು. ೪. ಈ ಕೀಟದ ಹತೋಟಿಗೆ ೨ ಮಿ.ಲೀ. ಕ್ಲೋರ್‌ಪೈರಿಫಾಸ್ ೨೦ ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ೨. ಕಾಂಡ ಕೊರೆಯುವ ಹುಳು: ಮರಿಹುಳು ಸುಳಿಯ ಎಲೆಗಳನ್ನು ಕೆರೆದು ತಿನ್ನುತ್ತದೆ. ಬೆಳೆದಂತಹ ಕೀಟ ಕಾಂಡವನ್ನು ಕೊರೆದು ಹಾನಿ ಮಾಡುವುದರಿಂದ ಸುಳಿ ಒಣಗುವುದು. ಇದಲ್ಲದೆ ಈ ಕೀಟದ ಬಾಧೆಯಿಂದ ಎಲೆಯ ಮೇಲೆ ಅಡ್ಡವಾಗಿ ರಂಧ್ರಗಳ ಸಾಲುಗಳು ಕಾಣಿಸುವುದು ಈ ಕೀಟದ ಬಾಧೆಯ ಪ್ರಮುಖ ಲಕ್ಷಣ. ಈ ಕೀಟ ೪-೬ ವಾರಗಳ ಬೆಳೆಯಲ್ಲಿ ಹೆಚ್ಚು ಬಾಧೆಯನ್ನುಂಟು ಮಾಡುವುದು. ಈ ಕೀಟದ ಬಾಧೆಗೊಳಗಾದ ತೆನೆ ಕಾಳು ಕಟ್ಟದೆ ಜೊಳ್ಳಾಗುವುದು.

ನಿರ್ವಹಣೆ

• ಎಕರೆಗೆ ೩ ಕಿ.ಗ್ರಾಂ ಶೇ.೩ರ ಕಾರ್ಬೋಫ್ಯುರಾನ್ ೩ ಜಿ. ಅನ್ನು ಬಿತ್ತನೆ ಮಾಡಿದ ೨೫ ಹಾಗೂ ೩೫ ದಿವಸಗಳ ನಂತರ ಸುಳಿಯಲ್ಲಿ ಹಾಕಬೇಕು.
• ಈ ಕೀಟದ ಹತೋಟಿಗೆ ೨ ಮಿ.ಲೀ. ಕ್ಲೋರ್‌ಪೈರಿಫಾಸ್ ೨೦ ಇ.ಸಿ. ಅಥವಾ ಕ್ವಿನಾಲ್‌ಫಾಸ್ ೨೫ ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

೩. ಹೇನು: ಹೇನುಗಳು ಗುಂಪು ಗುಂಪಾಗಿ ಜೋಳದ ಎಲೆಯ ಕೆಳಗಿನಿಂದ ರಸ ಹೀರುತ್ತವೆ. ಇದರಿಂದ ಎಲೆ ಹಳದಿ ಬಣ್ಣಕ್ಕೆ ತಿರುಗಿ ಸುಕ್ಕಾಗಿ ಒಣಗುವುದು. ಹೇನುಗಳು ಸಕ್ಕರೆ ಅಂಶ ಸ್ರವಿಸುವುದರಿಂದ ಕಪ್ಪು ಬೂಸ್ಟ್ ಬೆಳೆದು ಬೆಳೆಯ ಬೆಳವಣಿಗೆ ಕುಂಠಿತವಾಗುತ್ತದೆ. ಇತ್ತೀಚೆಗೆ ಈ ಹೇನು ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಜೋಳವನ್ನು ಬಾಧಿಸುವ ಪ್ರಮುಖ ಕೀಟವಾಗಿದೆ.

ನಿರ್ವಹಣೆ

೧. ಶೇ.೫ರ ಹುಲುಗಲ ಅಥವಾ ಕರಿಲಕ್ಕಿ ಸೊಪ್ಪಿನ ಕಷಾಯ ಅಥವಾ ಬೇವಿನ ಎಲೆ ಕಷಾಯವನ್ನು ಸಿಂಪಡಿಸಬೇಕು. ಹೆಕ್ಟೇರಿಗೆ ೩೫೦ ಲೀ. ಸಿಂಪರಣಾ ದ್ರಾವಣ ಬಳಸಬೇಕು.
೨. ಪ್ರತಿ ಕಿ.ಗ್ರಾಂ ಬೀಜಕ್ಕೆ ೨ ಗ್ರಾಂ ಇಮಿಡಾಕ್ಲೋಪ್ರಿಡ್ ೭೦ ಡಬ್ಲುಎಸ್ ನಿಂದ ಬೀಜೋಪಚಾರ ಮಾಡುವುದರಿಂದ ಇದರ ಬಾಧೆಯನ್ನು ತಡೆಯಬಹುದು.
೩. ಜೋಳದ ಬೆಳೆಯಲ್ಲಿ ಈ ಕೀಟದ ಬಾಧೆ ಕಂಡುಬಂದರೆ ೦.೫ ಮಿ.ಲೀ. ಇಮಿಡಾಕ್ಲೊಪ್ರಿಡ್ ೧೭.೮ ಎಸ್.ಎಲ್. ಅಥವಾ ೧.೭೦ ಮಿ.ಲೀ. ಡೈಮಿಥೊಯೇಟ್ ೩೦ ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ರೋಗಗಳು ಹಾಗೂ ನಿರ್ವಹಣೆ

೧. ಬೂಜುರೋಗ ಅಥವಾ ಕೇದಿಗೆ ರೋಗ ಜೋಳದ ಸಸಿಗಳಲ್ಲಿ ೨೫-೩೦ ದಿನಗಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ. ರೋಗ ತಗಲಿದ ಸಸಿಗಳು ತಿಳಿ ಹಳದಿ ಬಣ್ಣದವುಗಳಾಗಿರುತ್ತವೆ. ನಿರ್ವಹಣೆ
೧. ಪ್ರತಿ ಕಿ.ಗ್ರಾಂ ಬೀಜಕ್ಕೆ ೪ ಗ್ರಾಂ ಮೆಟಲ್ಯಾಕ್ಸಿಲ್ ಎಮ್.ಝೆಡ್ ೭೨ ಡಬ್ಲೂ.ಪಿ. ಶಿಲೀಂಧ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತಬೇಕು.
೨. ರೋಗ ತಗಲಿದ ಗಿಡಗಳನ್ನು ಕಿತ್ತು ನಾಶಮಾಡಬೇಕು.
೩. ಅವಶ್ಯವಿದ್ದರೆ ಬಿತ್ತಿದ ೩೦ ದಿವಸಗಳ ನಂತರ ಮೆಟಲ್ಯಾಕ್ಸಿಲ್ ೧ ಗ್ರಾಂ ಎ.ಐ. (೦.೧%) ಸಿಂಪರಣೆ ಮಾಡಬೇಕು.
೨. ತುಕ್ಕು ರೋಗ ಅಥವಾ ಭಂಡಾರ ರೋಗ
ಬಿತ್ತಿದ ೩೦ ದಿವಸಗಳಲ್ಲಿ ಕೆಳಗಿನ ಎಲೆಗಳ ಮೇಲೆ ಸಣ್ಣ ಚುಕ್ಕೆಗಳ ರೂಪದಲ್ಲಿ ಈ ರೋಗ ಕಂಡುಬರುತ್ತದೆ. ಈ ಚುಕ್ಕೆಗಳು ಉಬ್ಬಿದವುಗಳಾಗಿದ್ದು ದುಂಡಗೆ ಅಥವಾ ಅಂಡಾಕಾರವಾಗಿರುತ್ತವೆ.
ನಿರ್ವಹಣೆ: ರೋಗದ ಲಕ್ಷಣಗಳು ಕಂಡಾಗ (ಬಿತ್ತಿದ ೫೦-೬೦ ದಿವಸಗಳ ನಂತರ) ಮ್ಯಾಂಕೊಝೆಬ್ ೭೫ ಡಬ್ಲೂ. ಪಿ. ಯನ್ನು ಪ್ರತಿ ಲೀಟರ್ ನೀರಿಗೆ ೨ ಗ್ರಾಂ ನಂತೆ ಬೆರೆಸಿ ಸಿಂಪಡಿಸಬೇಕು.

೩. ಕಾಡಿಗೆ ರೋಗ

ತೆನೆ ಹೊರ ಬಂದಾಗ, ತೆನೆಯಲ್ಲಿ ಬಹುತೇಕ ಎಲ್ಲಾ ಕಾಳುಗಳ ಬದಲು ಕಾಳಿನಂತೆ ಕಾಣುವ ಆದರೆ ಕಾಳಿಗಿಂತ ಸ್ವಲ್ಪ ದೊಡ್ಡದಾದ ಬೂದು ಬಣ್ಣದ ಶಿಲೀಂಧ್ರದ ಕೋಶಗಳನ್ನು ಕಾಣಬಹುದು. ಈ ಕೋಶದ ಒಳಗೆ ಕಪ್ಪು ಬಣ್ಣದ ಹುಡಿ ತುಂಬಿರುತ್ತದೆ. ಸಾಮಾನ್ಯವಾಗಿ ಈ ಕೋಶಗಳು ಹೊಲದಲ್ಲಿ ಒಡೆಯುವುದಿಲ್ಲ. ಕಾಳನ್ನು ರಾಶಿ ಮಾಡಿದಾಗ ಈ ಕೋಶಗಳು ಒಡೆದು ಕಪ್ಪು ಹುಡಿಯು ಹೊರಬೀಳುವುದು.

ನಿರ್ವಹಣೆ

೧. ಬಿತ್ತನೆ ಬೀಜಗಳನ್ನು ಶಿಲೀಂಧ್ರ ನಾಶಕಗಳಿಂದ (೨ ಗ್ರಾಂ ಕ್ಯಾಪ್ಟಾನ್ ೮೦ ಡಬ್ಲೂ.ಪಿ ಅಥವಾ ಥೈರಾಮ್ ೭೫ ಡಬ್ಲೂ.ಪಿ. ಇಲ್ಲವೆ ಗಂಧಕದ ಪುಡಿ ಪ್ರತಿ ಕಿ.ಗ್ರಾಂ ಬೀಜಕ್ಕೆ) ಬೀಜೋಪಚಾರ ಮಾಡಿ ಬಿತ್ತಬೇಕು.
೨. ರೋಗ ಪೀಡಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು.
೩. ರೋಗ ತಗುಲಿದ ತೆನೆಗಳನ್ನು ಕಿತ್ತು ನಾಶ ಮಾಡಬೇಕು. ಅವುಗಳನ್ನು ಯಾವುದೇ ಕಾರಣಕ್ಕೂ ರಾಶಿ ಮಾಡುವಾಗ ಉಳಿದ ತೆನೆಯೊಂದಿಗೆ ಬೆರೆಸಬಾರದು.

೪. ಕಪ್ಪುಕಾಂಡ ಕೊಳೆ ರೋಗ

ಜೋಳ ಕೊಯ್ಲಿಗೆ ಬರುವ ಸಮಯಕ್ಕೆ ದಂಟುಗಳು ಮುರಿದು ನೆಲಕ್ಕೆ ಬೀಳುತ್ತವೆ. ನೆಲದಿಂದ ೧೫-೪೫ ಸೆಂ.ಮೀ. ಅಂತರದ ಮೇಲೆ (ಎರಡು ಮೂರರ ಗಣ್ಣಿನ ನಡುವೆ) ದಂಟು ಮುರಿದಿರುವುದನ್ನು ಕಾಣಬಹುದು. ಇಂಥ ದಂಟನ್ನು ಸೀಳಿ ನೋಡಿದರೆ ಒಳಗಿನ ಕಾಂಡವು ಎಳೆ ಎಳೆಯಾಗಿರುವುದಲ್ಲದೇ ಕಪ್ಪಾಗಿರುತ್ತದೆ.

ನಿರ್ವಹಣೆ

೧. ಹೊಲದಲ್ಲಿ ತೇವಾಂಶ ಕಡಿಮೆ ಆಗದಂತೆ ನೋಡಿಕೊಳ್ಳುವುದು.
೨. ಹೊಲಕ್ಕೆ ಸಾಕಷ್ಟು ತಿಪ್ಪೆ ಗೊಬ್ಬರ ಹಾಕಬೇಕು.
೩. ಸಾಧ್ಯವಾದರೆ ತೆನೆ ಬಿಡುವ ಸಮಯದಲ್ಲಿ ಒಂದು ಸಲ ನೀರು ಕೊಡಬೇಕು.
೪. ರೋಗ ನಿರೋಧಕ ಶಕ್ತಿ ಇರುವ ತಳಿಗಳನ್ನು (ಡಿ.ಎಸ್.ವಿ.-೪, ಎಸ್.ಪಿ.ವಿ.-೨೨೧೭) ಬೆಳೆಯುವುದು ಸೂಕ್ತ.
ಹಿಂಗಾರಿ ಜೋಳ ಬೆಳೆಯುವ ರೈತರು ಈ ಎಲ್ಲ್ಲಾ ಬೇಸಾಯ ಕ್ರಮಗಳನ್ನು ಸೂಕ್ತ ಕಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ಅನುಸರಿಸುವುದರಿಂದ ಉತ್ತಮ ಕಾಳು ಮತ್ತು ಮೇವಿನ ಇಳುವರಿಯನ್ನು ಪಡೆಯಬಹುದು.