ನೇಗಿಲ ಮಿಡಿತ  ಸಂಪುಟ 6 ಸಂಚಿಕೆ 3

ಹೆಚ್ಚಾಗಿ ಪ್ರಚಲಿತವಾಗುತ್ತಿರುವ ಅವರೆ ಬೆಳೆಹೆಚ್ಚಾಗಿ ಪ್ರಚಲಿತವಾಗುತ್ತಿರುವ ಅವರೆ ಬೆಳೆ

ಕೆ. ಮುರಳಿ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು
೯೯೮೦೫೨೦೪೯೮,
1

ಅವರೆ ನಮ್ಮ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಬೆಳೆಯುವ ಮುಖ್ಯವಾದ ದ್ವಿದಳ ಧಾನ್ಯದ ಬೆಳೆಗಳಲ್ಲಿ ಒಂದು. ಸರ್ವೇ ಸಾಮಾನ್ಯವಾಗಿ ಅವರೆ ಎಂದರೆ ನಮ್ಮ ಮನಸ್ಸಿಗೆ ಬರುವುದು ಹಸಿ ಅವರೆಕಾಯಿ ಮತ್ತು ಅದರ ಸೊಗಡು. ರೈತರು ಹಸಿಕಾಯಿಯ ಜೊತೆಗೆ ಬೇಳೆ ಮಾಡಲು ಸಹ ಅವರೆಯನ್ನು ಬೆಳೆಯುವುದುಂಟು. ಪೂರ್ತಿ ಕಾಳನ್ನು ಸಹ ಸಾಂಬಾರ್ ಮಾಡಲು ಬಳಸುತ್ತಾರೆ. ಅದರಲ್ಲಿಯೂ ರಾಗಿ ಮುದ್ದೆಯ ಜೊತೆಗೆ ಈ ಕಾಳಿನ ಸಾರು ಬಹಳ ರುಚಿಯಾಗಿರುತ್ತದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಅವರೆಯನ್ನು ಒಣಕಾಳಿಗಿಂತ ಹಸಿ ಅವರೆಕಾಯಿಯ ತರಕಾರಿಯಾಗಿ ಹೆಚ್ಚಿಗೆ ಬಳಸಲಾಗುತ್ತಿದೆ. ಹಸಿ ಅವರೆಕಾಳನ್ನು ವಿವಿಧ ರೀತಿಯಾಗಿ ಅಡುಗೆಯಲ್ಲಿ ಬಳಸಲಾಗುತ್ತಿದೆ. ಹಸಿಕಾಳನ್ನು ಹಿಸುಕಿದ ಬೇಳೆ ಸಾರು, ಉಪ್ಪಿಟ್ಟು, ರವೆಇಡ್ಲಿ, ಕಾಳುಸಾರು, ಸಿಹಿ ತಿಂಡಿಗಳು ಹಾಗೂ ಬೇಕರಿ ಪದಾರ್ಥಗಳಲ್ಲಿ ಬಳಸಲಾಗುತ್ತಿದೆ. ಅವರೆ ಕಾಳಿನಲ್ಲಿ ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ಸಾಕಷ್ಟಿವೆ. ಅದರಲ್ಲೂ ಮುಖ್ಯವಾದುವೆಂದರೆ ಪ್ರೋಟೀನ್, ಖನಿಜಾಂಶ, ಶರ್ಕರ ಪಿಷ್ಟ, ರಂಜಕ, ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಅಂಶಗಳಿವೆ.

ಇತರೆ ಬೇಳೆಕಾಳುಗಳಿಗೆ ಹೋಲಿಸಿದರೆ ಅವರೆಯನ್ನು ನಮ್ಮ ರಾಜ್ಯದಲ್ಲಿ ಕಡಿಮೆ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತಿದೆ. ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಗಳಾದ ಮೈಸೂರು, ತುಮಕೂರು, ಹಾಸನ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದು, ಕಡಿಮೆ ವಿಸ್ತೀರ್ಣದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದ ಉತ್ತರ ಭಾಗದಲ್ಲಿ ಇದರ ಕ್ಷೇತ್ರ ಹಾಗೂ ಬಳಕೆಯೂ ಸಹ ಕಡಿಮೆ. ನಮ್ಮ ರಾಜ್ಯದಲ್ಲಿ ಸುಮಾರು ೧.೮೦ ಲಕ್ಷ ಎಕರೆ ಪ್ರದೇಶದಲ್ಲಿ ಅವರೆಯನ್ನು ಬೆಳೆಯಲಾಗುತ್ತಿದ್ದು, ಇದರ ಉತ್ಪನ್ನ ಸುಮಾರು ೮೦ ಸಾವಿರ ಟನ್ನುಗಳು. ಪ್ರತಿ ಎಕರೆಗೆ ಸರಾಸರಿ ಒಣಕಾಳು ಇಳುವರಿ ಸುಮಾರು ೪೦೦ ಕೆ.ಜಿ.ಯಷ್ಟಾಗಿದೆ.

ರೈತರು ತಮ್ಮಲ್ಲಿ ಬಳಕೆಯಲ್ಲಿದ್ದ ದೇಸಿಯ ತಳಿಯನ್ನು ರಾಗಿಯಲ್ಲಿ ಅಂತರ ಬೆಳೆಯಾಗಿ ಅಥವಾ ಮಿಶ್ರ ಬೆಳೆಯಾಗಿ ಬೆಳೆಯುವುದು ವಾಡಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಬಿಡುಗಡೆ ಮಾಡಿರುವಂತಹ ಕಡಿಮೆ ಅವಧಿಯ ಹಾಗೂ ವರ್ಷವಿಡೀ ಬೆಳೆಯಬಹುದಾದ ತಳಿಗಳಾದ ಹೆಬ್ಬಾಳ ಅವರೆಯು ಪ್ರಮುಖವಾಗಿವೆ. ಈ ಹೆಬ್ಬಾಳ ಅವರೆ ತಳಿಗಳನ್ನು ಹೆಚ್ಚಾಗಿ ಮುಖ್ಯ ಬೆಳೆಯಾಗಿಯೂ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಮಿಶ್ರ ಬೆಳೆ/ಅಂತರ ಬೆಳೆಯಾಗಿ ಇತರ ಬೆಳೆಗಳೊಂದಿಗೆ ಬೆಳೆಯಲಾಗುತ್ತಿದೆ. ಇದರಿಂದ ರೈತರು ಹೆಚ್ಚಿನ ಉತ್ಪಾದನೆಯ ಜೊತೆಗೆ ಉತ್ತಮ ಲಾಭವನ್ನು ಪಡೆಯಲು ಸಾಧ್ಯವಾಗಿದೆ.

ಸುಧಾರಿತ ತಳಿಗಳು

೧. ಹೆಬ್ಬಾಳ ಅವರೆ-೩ (ಹೆಚ್.ಎ-೩): ಇದು ಅಲ್ಪಾವಧಿ ತಳಿಯಾಗಿದ್ದು, ಸುಮಾರು ೯೦ ರಿಂದ ೧೦೦ ದಿನಗಳಲ್ಲಿ ಕಟಾವಿಗೆ ಬರುತ್ತದೆ. ಹಸಿರು ಕಾಯಿ(ಹಸಿಕಾಯಿ)ಗಳನ್ನು ಸುಮಾರು ೭೦ ರಿಂದ ೭೫ ದಿನಗಳಲ್ಲಿ ಕಟಾವು ಮಾಡಬಹುದು. ಇದು ಸ್ವಲ್ಪ ಚಪ್ಪಟೆಯಾದ ದಬ್ಬೆಕಾಯಿಗಳನ್ನು ಬಿಡುತ್ತದೆ. ಎಕರೆಗೆ ಸುಮಾರು ೧೨ ರಿಂದ ೧೫ ಕ್ವಿಂಟಾಲ್‌ಗಳಷ್ಟು ಹಸಿಕಾಯಿಯನ್ನು ಕಟಾವು ಮಾಡಬಹುದು. ಬೀಜಕ್ಕೆ ಬಿಟ್ಟರೆ ಸುಮಾರು ೩ ರಿಂದ ೪ ಕ್ವಿಂಟಾಲ್ ಪ್ರತಿ ಎಕರೆಗೆ ಒಣಕಾಳನ್ನು ಪಡೆಯಬಹುದು.

೨. ಹೆಬ್ಬಾಳ ಅವರೆ-೪ (ಹೆಚ್.ಎ-೪): ಈ ತಳಿಯೂ ಸಹ ಅಲ್ಪಾವಧಿ ತಳಿಯಾಗಿದ್ದು, ಸುಮಾರು ೧೦೦ ರಿಂದ ೧೦೫ ದಿನಕ್ಕೆ ಕಟಾವಿಗೆ ಬರುತ್ತದೆ. ಹಸಿರು ಕಾಯಿಗಳನ್ನು ಸುಮಾರು ೭೫ ರಿಂದ ೮೦ ದಿನಗಳಲ್ಲಿ ಕಟಾವು ಮಾಡಬಹುದು. ಕಾಯಿಗಳು ಮಣಿ ಅವರೆಯ ರೀತಿಯಲ್ಲಿ ಕಂಡುಬಂದು ಬೇಸಿಗೆಯಲ್ಲೂ ಸಹ ಒಳ್ಳೆಯ ಸೊಗಡನ್ನು ಹೊಂದಿರುತ್ತದೆ. ಇದನ್ನು ಸಹ ವರ್ಷವಿಡೀ ಬೆಳೆಯಬಹುದಾಗಿದೆ. ಅಂದರೆ, ಮುಂಗಾರು, ಹಿಂಗಾರು ಹಾಗೂ ನೀರಾವರಿ ಆಶ್ರಯಗಳಲ್ಲಿ ಬೇಸಿಗೆಯಲ್ಲೂ ಸಹ ಬೆಳೆಯಲಾಗುತ್ತಿದೆ. ಈ ತಳಿಯೂ ಸಹ ಎಕರೆಗೆ ೧೨ ರಿಂದ ೧೫ ಕ್ವಿಂಟಾಲ್‌ಗಳಷ್ಟು ಹಸಿ ಕಾಯಿಯನ್ನು ಹಾಗೂ ೩ ರಿಂದ ೪ ಕ್ವಿಂಟಾಲ್‌ಗಳಷ್ಟು ಒಣಕಾಳನ್ನು ಕೊಡುತ್ತದೆ. ಹಸಿಕಾಯಿಗಳನ್ನು ಸುಮಾರು ೩ ರಿಂದ ೪ ಬಾರಿ ಕಟಾವು ಮಾಡಬಹುದಾಗಿದ್ದು, ಮಣಿ ಅವರೆಯು ಮಾರುಕಟ್ಟೆಯಲ್ಲಿ ಹೆಚ್ಚಿನ ಗಮನ ಸೆಳೆದಿದ್ದು ಉತ್ತಮ ಧಾರಣೆ ಸಿಗುತ್ತಿದೆ.

ಬೇಸಾಯಕ್ಕೆ ಬೇಕಾಗುವ ಸಾಮಗ್ರಿಗಳು (ಎಕರೆಗೆ)

ಒಂದು ಎಕರೆಗೆ ಸುಮಾರು ೧೦ ರಿಂದ ೧೨ ಕೆ.ಜಿ.ಯಷ್ಟು ಬಿತ್ತನೆ ಬೀಜ ಬೇಕಾಗುತ್ತದೆ. ಅಂತರ ಬೆಳೆ ಬೆಳೆಯಲು ಸುಮಾರು ೫ ರಿಂದ ೬ ಕೆ.ಜಿ. ಬೀಜ ಎಕರೆಗೆ ಬೇಕಾಗುತ್ತದೆ. ಎಕರೆಗೆ ಸುಮಾರು ೩ ರಿಂದ ೪ ಟನ್ನುಗಳಷ್ಟು ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರವನ್ನು ಬಿತ್ತನೆಗೆ ಮುಂಚೆ ಅಂದರೆ ೧೫ ರಿಂದ ೨೦ ದಿನಗಳ ಮುಂಚೆಯೇ ಭೂಮಿಯಲ್ಲಿ ಸೇರಿಸಬೇಕು. ಬಿತ್ತನೆ ಸಮಯದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕು. ಎಕರೆಗೆ ೧೦ ಕೆ.ಜಿ. ಸಾರಜನಕ, ೨೦ ಕೆ.ಜಿ. ರಂಜಕ ಹಾಗೂ ೧೦ ಕೆ.ಜಿ. ಪೊಟ್ಯಾಷ್‌ಗಳನ್ನು ಬಿತ್ತನೆ ಸಮಯದಲ್ಲಿ ಕೊಡಬೇಕು. ರೈತರು ಈ ಪೋಷಕಾಂಶಗಳನ್ನು ಒದಗಿಸಲು ಡಿ.ಎ.ಪಿ ಯಾದರೆ ೫೦ ಕೆ.ಜಿ. ಹಾಗೂ ಸುಮಾರು ೧೮ ಕೆ.ಜಿ. ಯಷ್ಟು ಮ್ಯೂರಿಯೇಟ್ ಆಫ್ ಪೊಟ್ಯಾಷ್ ಹಾಗೂ ಸುಮಾರು ೫ ಕೆ.ಜಿ.ಯಷ್ಟು ಯೂರಿಯಾವನ್ನು ಬಿತ್ತನೆ ಸಮಯದಲ್ಲಿ ಭೂಮಿಗೆ ಸೇರಿಸಿ ತದನಂತರ ಬಿತ್ತನೆಯನ್ನು ಮಾಡಬೇಕು. ಬಿತ್ತನೆ ಬೀಜವನ್ನು ಸುಮಾರು ೨೦೦ ಗ್ರಾಂ ರೈಜೋಬಿಯಂ ಜೀವಾಣುವಿನಿಂದ ಲೇಪನ ಮಾಡಿ ಬಿತ್ತನೆ ಮಾಡಿದರೆ, ಸಾರಜನಕದ ಸ್ಥಿರೀಕರಣಗೊಂಡು ಉತ್ತಮ ಬೆಳೆಯನ್ನು ನಿರೀಕ್ಷಿಸಬಹುದು.

10

ಭೂಮಿಯ ಆಯ್ಕೆ, ಬಿತ್ತನೆ ಕಾಲ ಹಾಗೂ ಬಿತ್ತನೆ ವಿಧಾನ

ಅವರೆಯನ್ನು ಎಲ್ಲಾ ತರಹದ ಮಣ್ಣಿನಲ್ಲಿ ಬೆಳೆಯಬಹುದಾದರೂ, ನೀರು ಸರಾಗವಾಗಿ ಬಸಿದು ಹೋಗುವಂತಹ ಮಣ್ಣಿನಲ್ಲಿ ಹುಲುಸಾಗಿ ಬೆಳೆಯುತ್ತದೆ. ರೈತರು ಹಿಂದಿನ ಕಾಲದಲ್ಲಿ ಧೀರ್ಘಾವಧಿ ದೇಸಿ ತಳಿಗಳನ್ನು ರಾಗಿ, ನೆಲಗಡಲೆ, ಮತ್ತು ಜೋಳದ ಬೆಳೆಗಳಲ್ಲಿ ಮಿಶ್ರ ಬೆಳೆಯಾಗಿ ಮುಂಗಾರಿನ ಹಂಗಾಮಿನ ಜೂನ್‌ನಿಂದ ಆಗಸ್ಟ್ ತಿಂಗಳಿನವರೆಗೂ ಬಿತ್ತುವುದು ವಾಡಿಕೆ ಹಾಗೆಯೇ ಅಲ್ಪಾವಧಿ ತಳಿಗಳಾದ ಹೆಬ್ಬಾಳ ಅವರೆ-೩ (ಹೆಚ್.ಎ-೩) ಹಾಗೂ ಹೆಬ್ಬಾಳ ಅವರೆ-೪ (ಹೆಚ್.ಎ-೪) ತಳಿಗಳನ್ನು ವರ್ಷದ ಎಲ್ಲಾ ಹಂಗಾಮುಗಳಲ್ಲಿ ಬೆಳೆಯಬಹುದು. ಅಂದರೆ ಮುಂಗಾರು ಬೆಳೆಯನ್ನು ಆಗಸ್ಟ್ ತಿಂಗಳವರೆಗೂ, ಹಿಂಗಾರು ಬೆಳೆಯನ್ನು ಅಕ್ಟೋಬರ್ ತಿಂಗಳಲ್ಲಿ ಹಾಗೂ ಬೇಸಿಗೆ ಬೆಳೆಯನ್ನು ಫೆಬ್ರವರಿ ತಿಂಗಳಲ್ಲಿ ಬಿತ್ತನೆ ಮಾಡಬಹುದು. ಹಿಂಗಾರು ಹಂಗಾಮಿನಲ್ಲಿ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ಚಳಿ ಇರುವುದರಿಂದ ಬಿತ್ತನೆಯಲ್ಲಿ ಮೊಳಕೆಯ ಪ್ರಮಾಣ ಕಡಿಮೆಯಾಗುತ್ತದೆ.

ಬಿತ್ತನೆ ಮಾಡುವ ಮೊದಲು ಭೂಮಿಯನ್ನು ೨-೩ ಬಾರಿ ಚೆನ್ನಾಗಿ ಉಳುಮೆ ಮಾಡಬೇಕು. ಶಿಫಾರಸ್ಸು ಮಾಡಿದ ಕೊಟ್ಟಿಗೆ ಗೊಬ್ಬರವನ್ನು ಬಿತ್ತನೆಗೆ ೨-೩ ವಾರಗಳ ಮುಂಚೆ ಭೂಮಿಗೆ ಸೇರಿಸಬೇಕು. ಬಿತ್ತನೆ ಸಮಯದಲ್ಲಿ ರಾಸಾಯನಿಕ ಗೊಬ್ಬರಗಳೆಲ್ಲವನ್ನು ಸಾಲಿನಲ್ಲಿ ಸೇರಿಸಿ ಮಣ್ಣಿನಲ್ಲಿ ಬೆರಸಬೇಕು. ಬಿತ್ತನೆಗೆ ಮುಂಚೆ ಎಕರೆಗೆ ಬೇಕಾದ ೧೦ ರಿಂದ ೧೨ ಕೆ.ಜಿ. ಬೀಜಕ್ಕೆ ಶಿಫಾರಸ್ಸು ಮಾಡಿದ ೨೦೦ ಗ್ರಾಂ ರೈಜೋಬಿಯಂ ಜೀವಾಣು ಗೊಬ್ಬರದಿಂದ ಲೇಪನ ಮಾಡಿ ಅರ್ಧ ಗಂಟೆಯ ನಂತರ ನೆರಳಿನಲ್ಲಿ ಒಣಗಿಸಿದ ಬೀಜವನ್ನು ಬಿತ್ತನೆಗೆ ಬಳಸಬೇಕು.

ಅಂತರ ಬೇಸಾಯ ಮತ್ತು ನೀರಿನ ನಿರ್ವಹಣೆ

ಭೂಮಿಯ ಫಲವತ್ತತೆಯನ್ನು ಆಧರಿಸಿ ೧½ ರಿಂದ ೨ ಅಡಿ ಅಂತರದ ಸಾಲುಗಳನ್ನು ಮಾಡಿ ಬೀಜದಿಂದ ಬೀಜಕ್ಕೆ ಅರ್ಧ ಅಡಿ ಅಂತರ ಇರುವಂತೆ ಬಿತ್ತನೆ ಮಾಡಬೇಕು. ಬೀಜವನ್ನು ೧ ರಿಂದ ೨ ಅಂಗುಲದ ಆಳಕ್ಕೆ ಬಿತ್ತನೆ ಮಾಡಬೇಕು.

ನೀರಿನ ಲಭ್ಯತೆಯಿದ್ದಲ್ಲಿ ಹವಾಗುಣ ಹಾಗೂ ಭೂಮಿಯ ತೇವಾಂಶದ ಆಧಾರದ ಮೇಲೆ ಚಳಿಗಾಲದ ಹಾಗೂ ಬೇಸಿಗೆ ಬೆಳೆಗೆ ವಾರಕ್ಕೊಮ್ಮೆ ನೀರು ಕೊಡುವುದು ಸೂಕ್ತ. ಮುಂಗಾರಿನಲ್ಲಿ ಒಳ್ಳೆಯ ಮಳೆಯಾಗುವುದರಿಂದ ಮಳೆಯಲ್ಲಿ ಬೆಳೆಯಬಹುದು.

ಅವರೆಯಲ್ಲಿ ಕೀಟ ಮತ್ತು ರೋಗದ ಹತೋಟಿ

ಅವರೆಗೆ ಕಾಡುವ ಮುಖ್ಯವಾದ ಕೀಟಗಳೆಂದರೆ ಸಸ್ಯಹೇನು ಮತ್ತು ಕಾಯಿಕೊರಕ. ವಾತಾವರಣದ ಏರಿಳಿತಗಳಿಂದ ಭೂಮಿಯಲ್ಲಿನ ತೇವಾಂಶ ಕಮ್ಮಿಯಾದಲ್ಲಿ ರಸ ಹೀರುವ ಸಸ್ಯಹೇನಿನ ಬಾಧೆ ಹೆಚ್ಚಾಗುತ್ತದೆ. ಇದರಿಂದ ಸಸ್ಯಗಳ ಬೆಳವಣಿಗೆ ಕುಂಠಿತಗೊಂಡು ಹೂಗಳು ತುಂಬಾ ಉದುರಿ, ಕಾಯಿ ಕಚ್ಚುವುದು ಕಡಿಮೆಯಾಗುತ್ತದೆ. ಈ ಸಸ್ಯಹೇನುಗಳು ಚಿಗುರು, ಎಲೆ, ಹೂ ಹಾಗೂ ಮೊಗ್ಗುಗಳಿಂದ ರಸ ಹೀರುತ್ತವೆ. ಇದನ್ನು ಹತೋಟಿ ಮಾಡಲು ಪರಿಣಾಮಕಾರಿ ಕೀಟನಾಶಕವಾದ ಡೈಮಿಥೋಯೇಟ್ ೩೦ ಇ.ಸಿ. ೧.೭೫ ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಎಕರೆಗೆ ೨೫೦ ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ.

ಹಾಗೆಯೇ ಕಾಯಿಕೊರಕವೂ ಸಹ ಅವರೆಯಲ್ಲಿ ಕಂಡುಬರುವ ಇನ್ನೊಂದು ಕೀಟ. ಇದು ಸಹ ಮೊಗ್ಗು ಮತ್ತು ಹೂಗಳನ್ನು ತಿನ್ನುವುದರಿಂದ ಅವು ಉದುರಿ ಹೋಗುತ್ತವೆ ಮತ್ತು ಕಾಯಿ ಕಟ್ಟುವುದು ಕಡಿಮೆಯಾಗುತ್ತದೆ. ಕಾಯಿ ಬಂದ ನಂತರ ಅವುಗಳನ್ನು ಕೊರೆದು ತನ್ನ ದೇಹದ ಅರ್ಧ ಭಾಗ ಒಳಗೆ ಬಿಟ್ಟು ಬೀಜವನ್ನು ತಿನ್ನುತ್ತದೆ. ಹಾನಿಗೊಳಗಾದ ಕಾಯಿಯ ಮೇಲೆ ದುಂಡಾದ ರಂಧ್ರವಿರುತ್ತದೆ. ಇದನ್ನು ಹತೋಟಿ ಮಾಡಲು ಫೆನ್‌ವೆಲರೇಟ್ ಶೇ.೦.೪ ಡಿ ಅಥವಾ ಮಾಲಾಥಿಯಾನ್ ಶೇ.೫ ಡಿ (ಎಕರೆಗೆ ೧೦ ಕೆ.ಜಿ.ಪುಡಿ) ಬೆಳಗಿನ ಹೊತ್ತಿನಲ್ಲಿ ಗಿಡಗಳ ಮೇಲೆ ಮಸ್ಲಿನ್ ಬಟ್ಟೆಯಿಂದ ಧೂಳೀಕರಣ ಮಾಡಬೇಕು.

ನಂಜುರೋಗ: ಈ ರೋಗಪೀಡಿತ ಎಲೆಗಳು ಕಾಂತಿಹೀನಗೊಂಡು ತಿಳಿ ಹಸಿರು ಬಣ್ಣಕ್ಕೆ ತಿರುಗಿ, ಹೂ ಸರಿಯಾಗಿ ಕಟ್ಟುವುದಿಲ್ಲ. ಅಂತಹ ಹೊಲಗಳಲ್ಲಿ ರೋಗಪೀಡಿತ ಗಿಡಗಳನ್ನು ಕಿತ್ತು ನಾಶಪಡಿಸುವುದರಿಂದ ರೋಗ ಬೇರೆ ಗಿಡಗಳಿಗೆ ಹರಡುವುದನ್ನು ತಪ್ಪಿಸಬಹುದು. ಈ ರೋಗವು ನಂಜಾಣುವಿನಿಂದ ಬರುತ್ತದೆ ಹಾಗೂ ಸಸ್ಯಹೇನುಗಳಿಂದ ಗಿಡದಿಂದ ಗಿಡಕ್ಕೆ ಹರಡುತ್ತದೆ. ಈ ರೋಗವನ್ನು ತಡೆಗಟ್ಟಲು ಅಂತರ್‌ವ್ಯಾಪಿ ಕೀಟನಾಶಕವಾದ ಡೈಮಿಥೋಯೇಟ್ ೩೦ ಇ.ಸಿ. ಅನ್ನು ಪ್ರತಿ ಲೀಟರ್ ನೀರಿಗೆ ೧.೭೫ ಮಿ.ಲೀ.ನಂತೆ ಬೆರೆಸಿ ಸಿಂಪರಣೆ ಮಾಡುವುದರಿಂದ ಸಸ್ಯಹೇನುಗಳನ್ನು ನಿಯಂತ್ರಿಸಿ ಈ ರೋಗ ಹರಡುವುದನ್ನು ತಡೆಗಟ್ಟಬಹುದು.