ನೇಗಿಲ ಮಿಡಿತ ಸಂಪುಟ ೨ ಸಂಚಿಕೆ ೧೨
ಜೈವಿಕ ಗೊಬ್ಬರದ ಮಹತ್ವ ಇದನ್ನರಿತರೆ ನಮಗಿರುವುದು ಲಾಭ
ಕಾಂಪೋಸ್ಟ್: ಸಸ್ಯಮೂಲದ ಸಾವಯವ ಪದಾರ್ಥಗಳನ್ನು ಕಳಿಯುವಿಕೆಗೆ ಒಳಪಡಿಸಿ ತಯಾರಿಸುವ ಗೊಬ್ಬರಕ್ಕೆ ಕಾಂಪೋಸ್ಟ್ ಎನ್ನುತ್ತಾರೆ. ಬೆಳೆಗಳ ಅವಶೇಷಗಳಾದ ದಂಟು, ಕಟ್ಟಿಗೆ, ಹುಲ್ಲು ಅಲ್ಲದೇ ಕಳೆಗಳು, ಶಹರದ ಕಸಕಡ್ಡಿ ಉಪಯೋಗಿಸಬಹುದು. ಕಾಂಪೋಸ್ಟ್ ತಯಾರಿಕೆಯ ಉದ್ದೇಶ ಸಾವಯವ ಪದಾರ್ಥಗಳ ಮೂಲ ಪ್ರಮಾಣವನ್ನು ಕಡಿಮೆ ಮಾಡಿ ಅವುಗಳಲ್ಲಿಯ ಪೋಷಕಾಂಶಗಳ ಪೂರೈಕೆಯನ್ನು ಹೆಚ್ಚಿಸುವುದೇ ಆಗಿದೆ. ಕಾಂಪೋಸ್ಟ್ ತಯಾರಿಕೆಯಲ್ಲಿ ಹಲವು ವಿಧಾನಗಳಿದ್ದು ಬೆಂಗಳೂರು ಪದ್ಧತಿ ಯೋಗ್ಯವಾದುದು. ಸುಮಾರು ೩೦ ಅಡಿ ಉದ್ದ ಘಿ ೧೦ ಅಡಿ ಅಗಲ ಘಿ ೩-೩.೫ ಅಡಿ ಆಳ ತಗ್ಗು ತೆಗೆಯಬೇಕು.
ಕಾಂಪೋಸ್ಟ್ಗೆ ಉಪಯೋಗಿಸುವ ವಸ್ತುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ನಂತರ ಸುಮಾರು ೮-೧೦ ಇಂಚು ದಪ್ಪನಾದ ಪದರ ಹಾಕಬೇಕು. ಈ ಪದರದ ಮೇಲೆ ಸಗಣಿ-ಮೂತ್ರ-ಮಣ್ಣು ಮಿಶ್ರಿತ ರಾಡಿಯನ್ನು ತೆಳುವಾಗಿ ಹರಡಬೇಕು. ನಂತರ ಸಾವಯವ ವಸ್ತುಗಳ ಪದರ, ಹೀಗೆ ಒಂದಾದ ನಂತರ ಒಂದನ್ನು ಹಾಕುತ್ತಾ ಹೋಗಬೇಕು. ಸಾವಯವ ಅವಶೇಷಗಳನ್ನು ತೇವವಾಗಿಸಲು ಪ್ರತಿ ಪದರದ ಮೇಲೆ ನೀರು ಸಿಂಪರಣೆ ಮಾಡುತ್ತಾ ಹೋಗಬೇಕು. ಹೀಗೆ ತುಂಬಿದ ವಸ್ತುಗಳು ಭೂಮಿಯ ಮೇಲೆ ೨ ಅಡಿಯಷ್ಟು ಎತ್ತರಕ್ಕೆ ಬಂದಾಗ ಗೋಲಾಕಾರದಲ್ಲಿ ಹಸಿ ಮಣ್ಣಿನಿಂದ ಮುಚ್ಚಬೇಕು. ೪-೫ ತಿಂಗಳುಗಳ ನಂತರ ಗೊಬ್ಬರ ಚೆನ್ನಾಗಿ ಕಳಿತು ಹೊಲಕ್ಕೆ ಹಾಕಲು ಯೋಗ್ಯವಾಗಿರುತ್ತದೆ. ಹಸಿರು ಗೊಬ್ಬರದ ಬೆಳೆ:
ಹಸಿರು ಗೊಬ್ಬರದ ಬೆಳೆಗಳನ್ನು ಅದೇ ಜಮೀನಿನಲ್ಲಿ ಬೆಳೆದು ಭೂಮಿಗೆ ಸೇರಿಸುವುದು. ಉದಾ: ಸೆಣಬು, ಡೈಂಚಾ. ಹುರುಳಿ ಚೊಗಚಿ, ಅಲಸಂದಿ ಹವಾಮಾನ ಪರಿಸ್ಥಿತಿ ಅನುಸರಿಸಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರುವಾಗ ಸೇರಿಸುವುದು ಉತ್ತಮ. ಈ ಸಮಯದಲ್ಲಿ ಇಂಗಾಲ ಮತ್ತು ಸಾರಜನಕದ ಪ್ರಮಾಣ ಕಡಿಮೆ ಇರುತ್ತದೆ. ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ನೇಗಿಲಿನಿಂದ ಅಥವಾ ಎತ್ತಿನ ರೆಂಬೆಯಿಂದ ೭-೮ ಅಂಗುಲ ಆಳಕ್ಕೆ ಮಣ್ಣಿನಲ್ಲಿ ಪೂರ್ತಿ ಮುಚ್ಚುವ ಹಾಗೆ ಸೇರಿಸಬೇಕು. ಮುಂದಿನ ಬೆಳೆ ಬೆಳೆಯುವುದಕ್ಕಿಂತ ಒಂದು ತಿಂಗಳು ಮೊದಲು ಹಸಿರು ಗೊಬ್ಬರ ಬೆಳೆಯನ್ನು ಮಣ್ಣಿನಲ್ಲಿ ಸೇರಿಸುವುದು ಸೂಕ್ತ. ಹೆಕ್ಟೇರಿಗೆ ೧೫-೩೦ ಟನ್ ಹಸಿರುಗೊಬ್ಬರ ಸೇರಿಸುವುದರಿಂದ ಬೆಳೆಗೆ ಸುಮಾರು ೫೦-೭೫ ಕಿ.ಗ್ರಾಂ.ನಷ್ಟು ಸಾರಜನಕ ದೊರಕಿದಂತಾಗುತ್ತದೆ ಹಸಿರೆಲೆ ಗಿಡಗಳು
ಜಮೀನಿನ ಸುತ್ತ ಅಥವಾ ಬದುಗಳ ಮೇಲೆ ಬೆಳೆದು ಅವುಗಳ ಎಲೆ ಹಾಗೂ ಟೊಂಗೆಗಳನ್ನು ತಂದು ಮತ್ತೊಂದು ಜಮೀನಿಗೆ ಸೇರಿಸುವುದು. ಉದಾ: ಹೊಂಗೆ, ಗ್ಲಿರಿಸಿಡಿಯಾ, ಸುಬಾಬುಲ್ ಇತ್ಯಾದಿ. ಹೊಂಗೆ, ಗ್ಲಿರಿಸಿಡಿಯಾ, ಸುಬಾಬುಲ್ ಇವುಗಳನ್ನು ೩ರಿಂದ ೪ ತಿಂಗಳಿಗೊಮ್ಮೆ ಪ್ರತಿ ಗಿಡದಿಂದ ೧೦ರಿಂದ ೧೫ ಕಿ.ಗ್ರಾಂನಷ್ಟು ತಪ್ಪಲುಗಳನ್ನು ಭೂಮಿಗೆ ಸೇರಿಸುವುದರಿಂದ ಪ್ರತಿ ಹೆಕ್ಟೇರ್ಗೆ ೬೦-೨೦೦ ಕಿ.ಗ್ರಾಂನಷ್ಟು ಸಾರಜನಕ ದೊರಕಿದಂತಾಗುತ್ತದೆ