ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ನೀವೇ ಪತ್ತೆ ಮಾಡಿ

ಹರೀಶ್, ಬಿ.ಎಸ್
೯೪೮೦೫೫೭೬೩೪
1

ಮಾರುಕಟ್ಟೆಯಲ್ಲಿ ತರುವ ಅನೇಕ ದಿನಬಳಕೆ ವಸ್ತುಗಳಲ್ಲಿ ಕಲಬೆರಕೆ ತೀರಾ ಸಾಮಾನ್ಯ ಎನ್ನುವಂತಾಗಿದೆ. ಆಹಾರ ಪದಾರ್ಥಗಳ ತಪಾಸಣೆ ಮಾಡುವ ಅಧಿಕಾರಿಗಳು ಇದ್ದಾರೊ ಇಲ್ಲವೋ ಗೊತ್ತಿಲ್ಲ? ಹಾಲು, ತುಪ್ಪ, ಕಾಫಿ ಪೌಡರ್, ಟೀ ಪೌಡರ್, ಅಡುಗೆ ಎಣ್ಣೆ......ಮುಗಿಯದ ಪಟ್ಟಿ. ಕಲಬೆರಕೆ ಮಾಡಿರೋದು ಗೊತ್ತೇ ಆಗೋಲ್ಲ. ಯಾರಾದರೂ ಸುಲಭವಾಗಿ ಪತ್ತೆ ಹಚ್ಚಬಹುದು. ಸ್ವಲ್ಪ ಆಸಕ್ತಿ, ತಾಳ್ಮೆ ಬೇಕಷ್ಟೆ. ನೈಸರ್ಗಿಕ ಪದಾರ್ಥಗಳನ್ನು ಕಲಬೆರಕೆಯಲ್ಲಿ ಬೆರಸಿದ್ದರೆ ಪರವಾಗಿಲ್ಲ; ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ರಾಸಾಯನಿಕ ಗಳಾಗಿದ್ದರೆ? ನಮ್ಮಲ್ಲಿನ ಗ್ರಾಹಕ ಸದಾ ಎಚ್ಚರ ವಿರುವುದೊಂದೇ ಇದಕ್ಕೆ ಪರಿಹಾರ. ಕಲಬೆರಕೆ ಕಂಡುಹಿಡಿಯುವ ಸುಲಭದ ವಿಧಾನಗಳ ವಿವರವೇ ಈ ಲೇಖನ. ಆ ಮೂಲಕ ಅಗತ್ಯ ಆಹಾರ ಪದಾರ್ಥಗಳನ್ನು ಕೊಳ್ಳುವಾಗ ನೀವು ಎಚ್ಚರವಹಿಸಲಿ ಹಾಗೂ ಸುರಕ್ಷಿತ ಆಹಾರ ನಿಮ್ಮದಾಗಲಿ ಎಂಬ ಆಶಯ. ನೀರು ಬೆರೆಸಿದ ಹಾಲು: ನೀರು ಬೆರೆಸಿದ ಹಾಲಾಗಿದ್ದರೆ ಊಟದ ತಟ್ಟೆ ಓರೆಯಾಗಿಡಿದು ಒಂದೆರಡು ಹನಿ ಹಾಕಿದಾಗ ಅದರ ಯಾವ ಗುರುತೂ ಇಲ್ಲದೆ ವೇಗವಾಗಿ ಚಲಿಸುವುದು; ಶುದ್ಧ ಹಾಲಿನ ಚಲನೆ ನಿಧಾನವಾಗಿದ್ದು ಚಲನೆಯ ನಂತರವೂ ಅದರ ಗುರುತು ಕಾಣಿಸುವುದು

ಡಿಟರ್ಜಂಟ್ ಬೆರೆಸಿದ ಹಾಲು: ಹತ್ತು ಮಿಲಿ ಹಾಲಿಗೆ ಹತ್ತು ಮಿಲಿ ನೀರು ಸೇರಿಸಿ ಅಲ್ಲಾಡಿಸಿದಾಗ ಹೆಚ್ಚಿನ ನೊರೆ ಬಂದಲ್ಲಿ ಅದರಲ್ಲಿ ಡಿಟರ್ಜಂಟ್ ಬೆರೆಸಿದ್ದಾರೆಂದೇ ಅರ್ಥ

ಶರ್ಕರಪಿಷ್ಠ (ಸ್ಟಾರ್ಚ್ ಪೌಡರ್) ಬೆರೆಸಿದ ಹಾಲು: ಹಾಲಿನ ಮಾದರಿಗೆ ಎರಡು ಹನಿ ಟಿಂಕ್ಚರ್ ಅಯೊಡಿನ್ ಹಾಕಿ ಅಲ್ಲಾಡಿಸಿದಾಗ ನೀಲಿ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಶರ್ಕರಪಿಷ್ಠ ಬೆರೆಸಿದ್ದಾರೆಂದು ತಿಳಿಯಬೇಕು. ಶುದ್ಧ ಹಾಲಾಗಿದ್ದಲ್ಲಿ ಬಣ್ಣದಲ್ಲಿ ಯಾವುದೇ ಬದಲಾವಣೆಯಾಗದು

ಸ್ಟಾರ್ಚ್ ಬೆರೆಸಿದ ತುಪ್ಪ/ಬೆಣ್ಣೆ: ಪಾರದರ್ಶಕ ಗಾಜಿನ ಬೌಲ್ನಲ್ಲಿ ಅರ್ಧ ಚಮಚೆ ತುಪ್ಪ ತೆಗೆದುಕೊಂಡು ಅದಕ್ಕೆ ಎರಡು ಹನಿ ಟಿಂಕ್ಚರ್ ಅಯೊಡಿನ್ ಹಾಕಿ ಅಲ್ಲಾಡಿಸಿದಾಗ ನೀಲಿ ಬಣ್ಣಕ್ಕೆ ತಿರುಗಿದರೆ ಸ್ಟಾರ್ಚ್ ಬೆರೆಸಿರುವುದು ಖಾತ್ರಿ. ಸಾಮಾನ್ಯವಾಗಿ ಆಲೂಗೆಡ್ಡೆ/ಗೆಣಸಿನ ಪುಡಿಯನ್ನು ಕಲಬೆರಕೆಯಾಗಿ ತುಪ್ಪದಲ್ಲಿ ಹಾಕಿರುತ್ತಾರೆ

ಇತರೇ ಎಣ್ಣೆ ಬೆರೆಸಿದ ತೆಂಗಿನೆಣ್ಣೆ: ಮಾದರಿ ತೆಂಗಿನೆಣ್ಣೆಯನ್ನು ಗಾಜಿನ ಲೋಟಕ್ಕೆ ಹಾಕಿ ಅರ್ಧ ಗಂಟೆ ರೆಫ್ರಿಜರೇಟರಿನಲ್ಲಿಡಬೇಕು. ಶುದ್ಧ ತೆಂಗಿನೆಣ್ಣೆಯಾಗಿದ್ದಲ್ಲಿ ಅದು ಘನೀಕೃತಗೊಂಡು ಒಂದೇ ತೆರನಾಗಿ ಕಾಣುವುದು. ಬೇರೆ ಎಣ್ಣೆ ಬೆರೆಸಿದ್ದಲ್ಲಿ ಎರಡು ಪದರುಗಳು ಕಾಣಿಸುತ್ತವೆ

ಸಕ್ಕರೆ/ಬೆಲ್ಲ ಬೆರೆಸಿದ ಜೇನುತುಪ್ಪ: ಪಾರದರ್ಶಕ ಗಾಜಿನ ಲೋಟದಲ್ಲಿ ನೀರು ತೆಗೆದುಕೊಂಡು ಮಾದರಿ ಜೇನುತುಪ್ಪದ ಒಂದೆರಡು ಹನಿ ಅದರಲ್ಲಿ ಹಾಕಿ. ಸಕ್ಕರೆ ಮಿಶ್ರಿತ ಜೇನುತುಪ್ಪವಾಗಿದ್ದಲ್ಲಿ ಅದು ನೀರಿನಲ್ಲಿ ಕರಗಿ ಹೋಗುತ್ತದೆ. ಅಥವಾ ಬೆಂಕಿಕಡ್ಡಿಯನ್ನು ಮಾದರಿ ಜೇನುತುಪ್ಪದಲ್ಲಿ ಅದ್ದಿ ಬೆಂಕಿಪೊಟ್ಟಣದಿಂದ ಹಚ್ಚಿದಾಗ, ಶುದ್ಧ ಜೇನುತುಪ್ಪವಾಗಿದ್ದಲ್ಲಿ ಶಬ್ಧರಹಿತವಾಗಿ ಹತ್ತಿ ಉರಿಯುವುದು; ಸಕ್ಕರೆ ಬೆರೆಸಿದ್ದಲ್ಲಿ ಉರಿಯುವಾಗ ಶಬ್ಧ ಬಂದೇ ಬರುವುದು

ಸೀಮೆಸುಣ್ಣದ ಪುಡಿ ಬೆರೆಸಿದ ಸಕ್ಕರೆ: ಪಾರದರ್ಶಕ ಗಾಜಿನ ಲೋಟದಲ್ಲಿ ನೀರು ತೆಗೆದುಕೊಂಡು ಹತ್ತು ಗ್ರಾಂ ಸಕ್ಕರೆ ಮಾದರಿಯನ್ನು ಹಾಕಿ ಕರಗಿಸಿ. ಕರಗಿದ ನಂತರ ತಳದಲ್ಲಿ ಏನೂ ಉಳಿಯದಿದ್ದಲ್ಲಿ ಅದು ಶುದ್ಧ. ಒಂದು ವೇಳೆ ಸೀಮೆಸುಣ್ಣದ ಪುಡಿ ಬೆರೆಸಿದ್ದಲ್ಲಿ ಅದು ನೀರಿನಲ್ಲಿ ಕರಗದೆ ತಳದಲ್ಲಿ ಹಾಗೆಯೇ ಉಳಿಯುವುದು