ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಸಂರಕ್ಷಿತ ವಾತಾವರಣದಲ್ಲಿ ಆಂಥೂರಿಯಂ ಬೇಸಾಯ

ಸಿಮಂತಿನಿ ಎನ್ ಎಸ್
08263228022
1

ವೈವಿಧ್ಯಮಯ ಬಣ್ಣದ ಆಂಥೂರಿಯಂ ಹೂ ಜೋಡಿಸುವವರಿಗೆ, ನೋಡುಗರಿಗೆ ಮುದ ನೀಡುವ ಹೂ.

ತಳಿಗಳು: ಆಂಥೂರಿಯಂ ಆಂಡ್ರಿಯಾನಂ ಮತ್ತು ಆಂಥೂರಿಯಂ ಸೆರೆಜರಿಯಾನಂ ಈ ಎರಡು ಪ್ರಭೇದಗಳನ್ನು ವಾಣಿಜ್ಯವಾಗಿ ಬೆಳೆಯಲಾಗುತ್ತಿದೆ. ಆಂಥೂರಿಯಂ ತಳಿಗಳನ್ನು ಸ್ಪೇಥ್ ಬಣ್ಣದ ಮೇಲೆ ವಿಂಗಡಿಸುತ್ತಾರೆ.

ಕೆಂಪು ಸ್ಪೇತ್ : ಟ್ರೋಪಿಕಲ್, ಫೈರ್, ಕ್ರೀಂಕಲ್ ರೆಡ್, ಸನ್ ಗ್ಲೌ, ಲೇಡಿ ಜೇನ್, ಫ್ಲೇಮ್, ಅಗ್ನಿಹೋತ್ರಿ.

ಆರೇಂಜ್ ಸ್ಪೇತ್ : ಆರೇಂಜ್ ಗ್ಲೋರಿ, ನಿಟ್ಟಾ, ಸನ್ ಬರ್ಸ್ಟ್, ಸನ್ ಸೆಟ್, ಕಾಸಿನೋ, ಆವೊಗಿನೋ.

ಬಿಳಿ ಸ್ಪೇತ್: ಆಕ್ರೋಪೋಲಿಸ್, ಏಂಜೆಲ್, ಟ್ರಿನಿಡಾಡ್.

ಪಿಂಕ್ ಸ್ಪೇತ್: ಪಿಂಕ್, ಜಾನ್ಸನ್ ಪಿಂಕ್, ಚೀರ್ಸ್.

ಗ್ರೀನ್ ಸ್ಪೇತ್: ಮಿಡೋರಿ, ಪಿಸ್ತಾಚೆ, ರೈನ್ಬೋವ್.

ಓಬೇಕ್ (ಎರಡು ಬಣ್ಣಗಳಿಂದ ಕೂಡಿದ): ಮಡೊನ್ನ, ಪ್ರೆಸಿಡೆಂಟ್, ಕಾರ್ನಿವಲ್, ಅಮಿಗೊ.

ಹವಾಗುಣ: ದಿನದ ಉಷ್ಣಾಂಶ ೨೫೦-೨೮೦ ಸೆ. ಮತ್ತು ವಾತಾವರಣದ ಆರ್ದ್ರತೆ ಶೇ. ೭೫-೮೦ % ಸೂಕ್ತ. ಆರ್ದ್ರತೆ ಹೆಚ್ಚಿಸಲು ಫಾಗರ್ಸ್ ಮತ್ತು ಸ್ಪ್ರಿಂಕ್ಲರ್ಸ್ ಹಾಕಬೇಕು. ಬೆಳಕು ೨೦೦೦-೬೦೦೦ ಲಕ್ಸ್ ಒಳ್ಳೆಯದು. ಅದರಿಂದ ಈ ಬೆಳೆಯನ್ನು ಹಸಿರು ಮನೆಗಳಲ್ಲಿ ಬೆಳೆಸುವುದು ತುಂಬಾ ಸೂಕ್ತ. ಅದರಲ್ಲಿ ಶೇ. ೭೫ ರಷ್ಟು ನೆರಳು ನೀಡುವ ಪರದೆ ಬಳಸಬೇಕು. ಆಂಥೂರಿಯಂ ಹೂವುಗಳನ್ನು ಸಮುದ್ರ ಮಟ್ಟದಿಂದ ಹಿಡಿದು ೩೦೦೦ ಮೀ. ಎತ್ತರದವರೆಗೆ ಬೆಳಯಬಹುದು.

ಮಾದ್ಯಮ: ಚೆನ್ನಾಗಿ ನೀರು ಬಸಿದು ಹೋಗುವ, ಸಸಿಗಳ ಬೇರುಗಳಿಗೆ ಆಧಾರ ಒದಗಿಸುವ, ತೇವಾಂಶ ಮತ್ತು ಪೋಷಕಾಂಶ ಹಿಡಿದಿಟ್ಟುಕೊಳ್ಳುವ ಹಾಗೂ ಹಾನಿಕಾರಕ ಅಂಶಗಳನ್ನು ಹೊಂದಿ ರಬಾರದು. ತೆಂಗಿನನಾರು: ಮಣ್ಣು: ಸಾವಯುವ ಗೊಬ್ಬರ: ಮರಳು (೩:೧:೧:೧) ಈ ಮಾದ್ಯಮದಲ್ಲಿ ಬೆಳೆಯನ್ನು ಬೆಳೆಯಬಹುದು. ಮಾದ್ಯಮದ ರಸಸಾರ ೫ ರಿಂದ ೬.೫ ಉತ್ತಮ.

ಸಸ್ಯಾಭಿವೃದ್ದಿ: ಆಂಥೂರಿಯಂನ್ನು ಬೀಜ ಪದ್ಧತಿ, ಕಾಂಡದ ತುಂಡುಗಳು, ಕಂದು ಮೋಸುಗಳು, ಅಂಗಾಂಶ ಕೃಷಿ ಮತ್ತು ಸೂಕ್ಷ್ಮ ಸಸ್ಯಭಿವೃದ್ಧಿ ಪದ್ದತಿಗಳಿಂದ ಅಭಿವೃದ್ಧಿ ಪಡಿಸಬಹುದು.

ತಯಾರಿಕೆ: ಮಡಿಗಳು ೯೦-೧೧೦ ಸೆ. ಮೀ. ಅಗಲ , ೩೦ ಸೆ. ಮೀ ಎತ್ತರ ಇರಬೇಕು. ಎರಡು ಮಡಿಗಳ ಮಧ್ಯೆ ೪೫-೫೫ ಸೆ. ಮೀ. ಅಂತರ ಇಡಬೇಕು ಮಡಿಗಳಿಂದ ಚೆನ್ನಾಗಿ ನೀರು ಬಸಿದು ಹೋಗುವಂತಿರಬೇಕು. ಅದಕ್ಕಾಗಿ ಮಡಿಯ ಮದ್ಯದಲ್ಲಿ ಸಣ್ಣ ಸಣ್ಣ ರಂಧ್ರವಿರುವ ಪ್ಲಾಸ್ಟಿಕ್ ಪೈಪನ್ನು ಕೆಳಮಟ್ಟದಲ್ಲಿ ಹಾಕಬೇಕು ಅಥವಾ ಕೆಳಗಡೆ ಬಸಿಗಾಲುವೆ ಮಾಡಬೇಕು. ಮಡಿಯ ಮಧ್ಯದಲ್ಲಿ ಎರಡು ದಂಡೆಗಳಿಂದ ಸ್ವಲ್ಪ ಇಳಿಜಾರು ಮಾಡುವುದರಿಂದ ಹೆಚ್ಚಾದ ನೀರು ಮಧ್ಯದಲ್ಲಿಯ ಪೈಪಿನ ಬಸಿಗಾಲುವೆ ಮುಖಾಂತರ ಹೊರ ಹೋಗಲು ಅನುಕೂಲವಾಗುವುದು.

ಕುಂಡಗಳಲ್ಲಿ ಬೆಳೆಯುವುದು: ಈ ಉದ್ದೇಶಕ್ಕೆ ಒಳ್ಳೆಯ ಮಾದ್ಯಮ ಅಗತ್ಯವಿರುತ್ತದೆ. ಅದರಲ್ಲಿ ಗಾಳಿ ಹರಿದಾಡಬೇಕು. ಅದೇ ರೀತಿ ತೇವಾಂಶವನ್ನು ಹಿಡಿದಿರಬೇಕು. ಅದು ಬೇರುಗಳಿಗೆ ಒಳ್ಳೆಯ ಬಿಗುವನ್ನು ಒದಗಿಸಬೇಕು ಹಾಗೂ ಲವಣಗಳು ಇರಬಾರದು. ಕಬ್ಬಿಣ ಸಿಪ್ಪೆ, ಮರದ ಚಕ್ಕೆ, ಎಲೆಗೊಬ್ಬರ, ದಪ್ಪಮರಳು, ಇಟ್ಟಿಗೆಯ ಸಣ್ಣ ಚೂರುಗಳು. ತೆಂಗಿನ ನಾರಿನ ಕೊಂಪೋಸ್ಟ್ ಮುಂತಾದವುಗಳನ್ನು ಬೆರೆಸಿ ಈ ಮಾದ್ಯಮವನ್ನು ಸಿದ್ದಗೊಳಿಸಬಹುದು.

15

ಮಾದ್ಯಮದ ನಿರ್ವಹಣೆ: ಪ್ರಾರಂಭಕ್ಕೆ ಕುಂಡದಲ್ಲಿ ಮಾದ್ಯಮವನ್ನು ಕಾಲುಭಾಗದಿಂದ ೩ ನೇ ಒಂದರಷ್ಟು ತುಂಬಿ ಆನಂತರ ಗಿಡ ಬೆಳೆಯಲು ಪ್ರಾರಂಭಿಸಿದಾಗ ಪ್ರತೀ ತಿಂಗಳಿಗೊಮ್ಮೆ ಹೊಸ ಮಾದ್ಯಮವನ್ನು ಸೇರಿಸಬೇಕು. ಇದರಿಂದ ಗಿಡಗಳಿಗೆ ಏರು ಹಾಕಿದಂತಾಗಿ ಹೆಚ್ಚಿನ ಆಸರೆಯನ್ನು ಒದಗಿಸಿದಂತಾಗುತ್ತದೆ.

ಕುಂಡದಲ್ಲಿ ನಾಟಿ ಮಾಡುವ ತಳಿಗಳು: ಮಿಯಾ, ಡ್ಯೆಯಾಬ್ಲಾಡಾ, ಕೊಂಡೊರ್, ಬೋನಿನ, ಟಿಟಿಕಾಕ, ಕಾನಸಸ್, ಫ್ಲೊರಿಡ, ಫೇಲಿಸೀಟ ಇತ್ಯಾದಿ.

ನಾಟಿ : ಸಾಲಿನಿಂದ ಸಾಲಿಗೆ ೪೫ ಸೆ. ಮೀ. ಮತ್ತು ಸಸಿಯಿಂದ ಸಸಿಗೆ ೩೦ ಸೆ. ಮೀ. ಅಂತರದಲ್ಲಿ ಪ್ರತಿ ಚ.ಮೀ. ಗೆ ೪-೫ ಸಸಿ ಅಥವಾ ೩೦ x ೩೦ ಸೆ. ಮೀ. ಅಂತರದಲ್ಲೂ ಪ್ರತಿ ಚ.ಮೀ. ಗೆ ೬-೭ ಸಸಿ ನಾಟಿ ಮಾಡಬಹುದು.

ನೆರಳುಗಳನ್ನು ಕ್ರಮಬದ್ಧಗೊಳಿಸುವುದು: ಆಂಥೂರಿಯಂ ಹೂಗಳ ಗುಣಮಟ್ಟ ಮತ್ತು ಇಳುವರಿ ಚೆನ್ನಾಗಿರಲು ಬೆಳಕು-ಬಿಸಿಲುಗಳ ಪ್ರಮಾಣ ಸೂಕ್ತ ಮಟ್ಟದಲ್ಲಿ ಇರುವುದು ಅಗತ್ಯ. ಪಾಲಿಥೀನ್ ಛಾವಣಿ ತಳಗಡೆ ನೆರಳು ಬಲೆ ಹರಡಿ ಬಿಸಿಲು ಬೆಳಕುಗಳ ತೀಕ್ಷ್ಣತೆಯನ್ನು ಕಡಿಮೆ ಮಾಡಬಹುದು. ಕೆಲವೊಂದು ಪ್ರದೇಶದಲ್ಲಿ ಶೇ. ೫೦ ರಷ್ಟು ನೆರಳನ್ನು ಒದಗಿಸುವ ಬಲೆ ಸೂಕ್ತವಿರುತ್ತದೆ. ಗಾಳಿ ಹರಿದಾಡಲು ನೆರಳು ಬಲೆ ನೆಲ ಮಟ್ಟದಿಂದ ಕಡೇ ಪಕ್ಷ ೩ ಮೀ. ಎತ್ತರದಲ್ಲಿ ಇರಬೇಕು.

ನೀರಾವರಿ: ಬೇಸಿಗೆಯಲ್ಲಿ ದಿನಕ್ಕೆರೆಡು ಬಾರಿ ಹನಿ ನೀರಾವರಿ ಅಥವಾ ಸ್ಪ್ರಿಂಕ್ಲರ್/ಮಿಸ್ಟೆರ್ಸ್ ವಿಧಾನದಿಂದ ನೀರು ಹಾಯಿಸಬೇಕು. ಸರಿಸುಮಾರು ದಿನವೊಂದಕ್ಕೆ ಪ್ರತಿ ಚ.ಮೀ.ಗೆ ೩-೫ ಲೀ. ನೀರನ್ನು ಒದಗಿಸಬೇಕು.

ಪೋಷಕಾಂಶಗಳು: ಈ ಹೂವಿನ ಬೆಳೆಗೆ ಹೆಚ್ಚಿನ ಸತ್ವ ಅಗತ್ಯ. ಕೊಟ್ಟಿಗೆ ಗೊಬ್ಬರದ ಜೊತೆಗೆ ಸೂಕ್ತ ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನು ಒದಗಿಸಬೇಕು. ಹೆಕ್ಟೇರಿಗೆ ೩೦ ಟನ್ ಕೊಟ್ಟಿಗೆ ಗೊಬ್ಬರ, ೩೫೦ ಕಿ. ಗ್ರಾಂ. ಸಾರಜನಕ. ೧೫೦ ಕಿ. ಗ್ರಾಂ ರಂಜಕ ಮತ್ತು ೧೦೦ ಕಿ. ಗ್ರಾಂ. ಪೊಟ್ಯಾಶ್ ಸತ್ವಗಳನ್ನು ಶಿಫಾರಸ್ಸು ಮಾಡಿದೆ. ಪೋಷಕಾಂಶಗಳನ್ನು ಹನಿ ನೀರಾವರಿ ಮುಖಾಂತರ ರಸನೀರಾವರಿ ಪದ್ದತಿಯಲ್ಲಿ ಒದಗಿಸಬೇಕು. ನೀರಿನಲ್ಲಿ ಕರಗುವ ಸಾರಜನಕ: ರಂಜಕ: ಪೊಟ್ಯಾಶ್ (೧೭:೧೭:೧೭) ಗೊಬ್ಬರ ಬಳಸಬೇಕು. ಇದಲ್ಲದೆ ಮ್ಯಾಗ್ನೇಶಿಯಂ ೨ ಗ್ರಾಂ/ಗಿಡಕ್ಕೆ. ತಿಂಗಳಿಗೆ ೨ ಬಾರಿ ಕೊಡಬೇಕು. ಕಾಂಪ್ಲೆಕ್ಸ್ ರಸಗೂಬ್ಬರ ಶೇ. ೦.೨ % ರಷ್ಟು ವಾರಕ್ಕೆ ೨ ಬಾರಿ ಎಲೆಗಳಿಗೆ ಸಿಂಪಡಿಸಬೇಕು. ಪ್ರತಿ ಗಿಡಕ್ಕೆ , ಪ್ರತಿ ತಿಂಗಳಿಗೆ ೫ ಗ್ರಾಂ. ಕ್ಯಾಲ್ಸಿಯಂ ಒದಗಿಸಬೇಕು. ಕ್ಯಾಲ್ಸಿಯಂ ಕೊರತೆ ಇದ್ದಲ್ಲಿ ಹೂವಿನ ಬಣ್ಣ ವೃದ್ಧಿಯಾಗುವುದಿಲ್ಲ.

ಎಲೆ ತೆಗೆಯುವುದು: ಎಲೆಯ ಬುಡ ಭಾಗದಿಂದ ಬಂದಂತಹ ಹೂವನ್ನು ಕೂಯ್ಲು ಮಾಡಿದ ನಂತರ ಹಳೆಯ ಎಲೆಗಳನ್ನು ತೆಗೆದು ಹಾಕಬೇಕು.

ಕಂದುಗಳನ್ನು ತೆಗೆಯುವುದು: ಸಸಿಗಳಿಂದ ನೈಸರ್ಗಿಕವಾಗಿ ಆಗಾಗ ಬರುವ ಸಣ್ಣ ಸಣ್ಣ ಕಂದುಗಳನ್ನು ತೆಗೆಯು ವುದರಿಂದ ಗುಣಮಟ್ಟ ಹೂ ಪಡೆಯಲು ಸಾಧ್ಯ.

ಸಸ್ಯ ಸಂರಕ್ಷಣೆ: ಕೀಟಗಳು: ಹಿಟ್ಟು ತಿಗಣೆ. ಶಲ್ಕ ಕೀಟ, ಜೇಡ ನುಶಿ

ನಿರ್ವಹಣೆ: ಹಿಟ್ಟು ತಿಗಣೆ ಮತ್ತು ಶಲ್ಕ ಕೀಟಗಳ ನಿರ್ವಹಣೆಗೆ ಮೇಲಾಥಿಯಾನ್ (೨.ಮಿ.ಲೀ.) ಅಥವಾ ಆಕ್ಸಿಡೆಮೆಟಾನ್ ಮೀಥ್ಯೆಲ್(೧.ಮಿ.ಲೀ.) ಅಥವಾ ಮೀಥ್ಯೆಲ್ ಪ್ಯಾರಾಥಿಯಾನ್ (೧.ಮಿ.ಲೀ.)ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಜೇಡ ನುಶಿ ನಿಯಂತ್ರಣಕ್ಕಾಗಿ ಎಲೆಯ ತಳಭಾಗಕ್ಕೆ ಡ್ಯೆಕೋಫಾಲ್(೨.೫.ಮಿ.ಲೀ./ಲೀ) ಸಿಂಪಡಿಸಬೇಕು.

ರೋಗಗಳು: ದುಂಡಾಣು ಅಂಗಮಾರಿ ರೋಗ, ಅಂಥ್ರ್ಯಾಕ್ನೋಸ್ (ಚಿಬ್ಬು ರೋಗ), ಬೇರು ಕೊಳೆರೋಗ ಪ್ರಮುಖವಾದವುಗಳು. ದುಂಡಾಣು ಅಂಗಮಾರಿ ರೋಗ ನಿಯಂತ್ರಿಸಲು ರೋಗ ರಹಿತ ಸಸಿ ನಾಟಿ ಮಾಡಬೇಕು. ತೋಟವನ್ನು ಸ್ವಚ್ಛವಾಗಿಡಬೇಕು, ರೋಗಕ್ಕೆ ತುತ್ತಾಗಿರುವ ಭಾಗವನ್ನು ಬೇರ್ಪಡಿಸಿ ಸ್ಟ್ರೆಪ್ಟೋಸ್ಯೆಕ್ಲೀನ್ (೦.೨. ಗ್ರಾಂ./ಲೀ.) ವಾರಕ್ಕೊಮ್ಮೆ ೬ ವಾರ ಸಿಂಪಡಿಸಬೇಕು. ಚಿಬ್ಬು ರೋಗದ ನಿಯಂತ್ರಣಕ್ಕಾಗಿ ಕ್ಯಾಪ್ಟನ್ (೨.೫ ಗ್ರಾಂ/ಲೀ.) ಅಥವಾ ಕಾರ್ಬಂಡೈಜಿಮ್ (೧ ಗ್ರಾಂ/ಲೀ.) ಸಿಂಪಡಿಸಬೇಕು. ಬೇರು ಕೊಳೆ ರೋಗ ನಿಯಂತ್ರಣಕ್ಕಾಗಿ ತೋಟವನ್ನು ಸ್ವಚ್ಛವಾಗಿಡುವುದರ ಜೂತೆಗೆ ಬೇರಿನ ಭಾಗವನ್ನು ಮ್ಯಾಂಕೋಜೆಬ್ (೨.೫ ಗ್ರಾಂ/ಲೀ.) ಮತ್ತು ಥ್ಯೆರಾಮ್ (೨.೫ ಗ್ರಾಂ/ಲೀ.) ದಿಂದ ನೆನಸಬೇಕು.

ಕೊಯ್ಲಿನ ಹಂತ: ಪುಷ್ಪಗುತ್ತಿಯಲ್ಲಿ ಕೆಳಗಿನ ಱ ಭಾಗದಷ್ಟು ಪುಷ್ಪಗಳು ಅರಳಿರುವಾಗ ಕಟಾವು ಮಾಡಬೇಕು ( ಪೂರ್ತಿ ಅರಳಿದ ಹೂ) ಇದಕ್ಕಿಂತ ಮೊದಲು ಹೂ ಕಟಾವು ಮಾಡಿದಲ್ಲಿ ಬಾಳಿಕೆಯ ಕಾಲ ಕಡಿಮೆಯಾಗುವುದು. ಸರಿಯಾದ ನಿರ್ವಹಣೆ ಮಾಡಿದಲ್ಲಿ ಹೂಗಳು ೧೪ ರಿಂದ ೨೮ ದಿನಗಳವರೆಗೂ ಬಾಳುತ್ತವೆ.

ಕೊಯ್ಲು ಮತ್ತು ಇಳುವರಿ: ನಾಟಿ ಮಾಡಿದ ೬-೮ ತಿಂಗಳ ನಂತರ ಹೂವುಗಳು ಕಟಾವಿಗೆ ಬರುತ್ತವೆ. ಪ್ರತಿ ಗಿಡದಿಂದ ವರುಷಕ್ಕೆ ೮-೧೦ ಹೂಗಳನ್ನು ಪಡೆಯಬಹುದು ಅ೦ದರೆ ೧ ಹೆಕ್ಟೇರ್ ಪ್ರದೇಶದಲ್ಲಿ ೨೦,೦೦೦ ಗಿಡಗಳನ್ನು (೪೫ ಸೆ.ಮೀ. x ೩೦ ಸೆ. ಮೀ.) ನಾಟಿ ಮಾಡಿದಲ್ಲಿ ಕನಿಷ್ಟ ೧.೪೦,೦೦೦ ರಿಂದ ೨,೪೦,೦೦೦ ಉತ್ತಮ ಗುಣಮಟ್ಟದ ಹೂಗಳನ್ನು ೮ ರಿಂದ ೧೦ ವರ್ಷಗಳವರೆಗೂ ಪಡೆಯಬಹುದು.

ಬೇಸಾಯದ ಆರ್ಥಿಕತೆ ಮತ್ತು ಲಾಭ:

  • ೫೬೦.ಚ.ಮೀ. ಗೆ / ೧ ವರುಷಕ್ಕೆ (ಹಸಿರುಮನೆಯಲ್ಲಿ)
  • ವಿವರಗಳು- ಖರ್ಚು(ರೂ.ಗಳು)
  • ಬೇಸಾಯದ ಖರ್ಚು-೧,೬೦,೬೭೦.೭
  • ಹೂಗಳ ಇಳುವರಿ- ೭೫,೬೦೦ (೧೩೫ ಹೂಗಳು/೧ ಚ.ಮೀ./೧ ವರುಷಕ್ಕೆ)
  • ಒಟ್ಟು ಹೂಗಳ ಆದಾಯ- ೭,೫೬,೦೦೦ (೧೦ ರೂ/ಹೂವಿಗೆ)
  • ಲಾಭ (ರೂ.)- ೫,೯೫,೩೩೦
  • ಖರ್ಚು:ಲಾಭ ಅನುಪಾತ-೧:೩.೭
  •