ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಹಲಸಿನ ಹಣ್ಣಿನ ಘಮ ಘಮ ಪರಿಮಳ.

ಕುಮಾರ್ ಪೆರ್ನಾಜೆ ಪುತ್ತೂರು
9480240643
1

ಹಲಸಿನ ಬೆಳೆಯಲ್ಲಿ ಭಾರತವು ಜಗತ್ತಿನಲ್ಲಿ ದ್ವಿತೀಯ ಸ್ಥಾನ ಮತ್ತು ಭಾರತದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನವಿದೆ. ಅದರಲ್ಲೂ ದ.ಕದಲ್ಲಿ ಹೇರಳವಾಗಿ ಬೆಳೆಯಲಾಗುತ್ತಿದೆ. ಇದು ಅಪ್ಪಟ ಭಾರತೀಯ ಸಸ್ಯ. ಕನ್ನಡದಲ್ಲಿ ಹಲಸು, ತುಳುವಿನಲ್ಲಿ ಗುಜ್ಜೆ (ಪೆಲಕ್ಕಾಯ್), ಸಂಸ್ಕೃತದಲ್ಲಿ ಪನಸ್, ಇಂಗ್ಲಿಷ್ನಲ್ಲಿ ಜಾಕ್ ಫ್ರೂಟ್ ಹೀಗೆ ವಿವಿಧ ರೀತಿಯ ಹೆಸರುಗಳಿಂದ ಗುರುತಿಸಿಕೊಂಡಿದೆ. ಹಲಸಿನ ಹಣ್ಣು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಥೇಚ್ಛವಾಗಿದ್ದು, ಹೈವೇ ರಸ್ತೆಗಳ ಬದಿಗಳಲ್ಲಿ ರಾಶಿ ರಾಶಿ ಹಣ್ಣುಗಳನ್ನು ವಾಹನಗಳಲ್ಲಿ ದೂರ ದೂರ ಊರುಗಳಿಂದ ಬರುವವರು ಖರೀದಿಸಲು ಆಕರ್ಷಿತರಾಗುತ್ತಾರೆ. ಹಲಸಿನ ಹಣ್ಣಿನ ರುಚಿಯನ್ನು ಯಾರೂ ಬೇಗ ಮರೆಯಲಿಕ್ಕಿಲ್ಲ. ಹಾಗೇ ಕೈಯ ಸುವಾಸನೆಯ ಜೊತೆ ಅಂಟು, ನಂಟು ತುಂಬಿ ಬಂದು ಹಾಲೂ ಜೇನಿನ ಹಾಗೆ ಇರುತ್ತದೆ. ಹಸಿದವನಿಗೆ ಹಲಸು, ಉಂಡವನಿಗೆ ಮಾವು ಎಂಬಂತೆ ಬೆಳೆದವನ ಕೈಗೆ ಹಣ್ಣುಗಳ ಧಾರಣೆಯಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡು ಕೃಷಿಕನ ಬದುಕು ಹಸನಾಗುತ್ತದೆ. ಹಲಸಿನಲ್ಲೂ ೨ ವಿಧ. ಬಕ್ಕೆ ಮತ್ತು ತುಳುವ ಹಲಸುಗಳು ಇವೆ. ಈ ಬಕ್ಕೆ ಹಲಸಿನ ಹಣ್ಣು ಗಟ್ಟಿಯಾದ ಸಿಪ್ಪೆಯನ್ನು ಹೊಂದಿದ್ದು, ತುಳುವ ಹಣ್ಣು ಮೆತ್ತಗಿರುತ್ತದೆ. ಈ ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಇರುತ್ತದೆ. ಪೊಟ್ಯಾಸಿಯಂ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಸೇರಿದಂತೆ ಹಲಸಿನಲ್ಲಿ ಆರೋಗ್ಯವರ್ಧಕ ಅಂಶಗಳು ಸಹ ಇವೆ. ಹಲಸಿನ ಎಲೆಯಿಂದ ಕೊಟ್ಟೆ ಮಾಡಿ ತಯಾರಿಸುವ ಕಡುಬು ರುಚಿಯಾಗಿರುತ್ತದೆ. ಹಲಸಿನ ವಿವಿಧ ಖಾದ್ಯ, ಪಾಯಸ, ಜ್ಯೂಸ್, ಜಾಮ್, ಐಸ್ಕ್ರೀಮ್, ಚಾಕೊಲೇಟ್, ದೋಸೆ, ಇಡ್ಲಿ, ಪೋಡಿ, ಚಿಪ್ಸ್, ಹಪ್ಪಳ, ಬೆರಟಿ, ಹೀಗೆ ಅದೆಷ್ಟೋ ತಿಂಡಿಗಳನ್ನು ತಯಾರಿಸುತ್ತಾರೆ. ಮುಳ್ಳುಂಕುನ (ಸುಟ್ಟವು) ಗೆಣಸಲೆ, ಹಲ್ವಾ, ಹಲಸಿನ ಹಣ್ಣಿನ ಹನಿ, ಹೀಗೆ ಬಗೆ ಬಗೆಯ ಖಾದ್ಯವನ್ನು ಹಲಸಿನಿಂದ ಮಾಡಬಹುದು. ಹೀಗೆ ಅಡುಗೆ, ತಿಂಡಿ ತಯಾರಿಕೆಯಲ್ಲಿ ಹಲಸಿಗೆ ಗೌರವದ ಸ್ಥಾನಮಾನವಿದೆ

ಹಲಸಿನ ಹಣ್ಣಿನ ಸೇವನೆಯಿಂದ ಅಲ್ಸರ್, ಮೂಳೆ ಸವೆತ, ಜೀರ್ಣಕ್ರಿಯೆ, ಖನಿಜಾಂಶದ ಕೊರತೆಯನ್ನು ಸರಿದೂಗಿಸುತ್ತದೆ. ಮೇಣ ರಹಿತ ಹಲಸು, ಉಂಡೆ ಹಲಸು, ರುದ್ರಾಕ್ಷಿ ಹಲಸು, ಚಂದ್ರ ಹಲಸು, ಹೀಗೆ ಹಲವು ವಿಧಗಳಿವೆ. ಇತ್ತೀಚೆಗೆ ಕಸಿ ಗಿಡಗಳು ಎಲ್ಲಾ ಭಾಗದಲ್ಲೂ ಸಿಗುತ್ತವೆ. ಹಣ್ಣುಗಳಲ್ಲಿ ಈ ದೊಡ್ಡ ಗಾತ್ರ ಹೊಂದಿದ್ದು, ಇದಕ್ಕೆ ಯಾವುದೇ ರೀತಿಯ ರಾಸಾಯನಿಕ ಕೀಟನಾಶಕ ಬಳಕೆ ಇಲ್ಲದೆ ನೈಜವಾಗಿ ಬೆಳೆಯಬಹುದಾಗಿದೆ. ಅತ್ಯಂತ ಬೆಲೆ ಬಾಳುವ ಮರಗಳಲ್ಲಿ ಹಲಸಿನ ಮರವು ಒಂದಾಗಿದೆ. ಇದರ ಕೆತ್ತನೆಯಿಂದ ಫರ್ನೀಚರ್ಗಳ ಬಳಕೆಗೆ ಮರ ಮುಟ್ಟಾಗಿ ದೀರ್ಘಕಾಲ ಬಳಕೆಗೆ ಉಪಯೋಗಿಸುತ್ತಾರೆ. ಹೀಗೆ ಬಹು ಉಪಯೋಗಿ ಹಲಸು, ಹಲಸಿನ ಮರಗಳು ರೈತರಿಗೆ ವರದಾನವಾಗಬಲ್ಲದು