ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಜೇನುಹನಿಯ ಔಷಧೀಯ ಗುಣಗಳು

ಗಜಾನನ ಗುಂಡೆವಾಡಿ,
೭೦೬೫೧೫೭೬೯೩
1

ಸಿಹಿಯಾದ ಜೇನಿನ ರುಚಿಯನ್ನು ಪ್ರಾಯಶ: ಆಶ್ವಾದಿಸದ ಮಾನವರಿಲ್ಲ ಆರ್ಯುರ್ವೇದ ಗ್ರಂಥಗಳಲ್ಲಿ ಮಗುವಿನ ಜನನವಾದ ಸ್ವಲ್ಪ ಸಮಯದ ನಂತರ ಶುದ್ಧವಾದ ಬಂಗಾರವನ್ನು ಜೇನುತುಪ್ಪ ಹಾಗೂ ತುಪ್ಪದ ಮಿಶ್ರಣದಲ್ಲಿ ತೇಯ್ದು ನೆಕ್ಕಿಸುವ ಪದ್ದತಿಯನ್ನು ನಾವು ಕಾಣಬಹುದು. ವೃದ್ದರೂ ಕೂಡ ಸರಿಯಾದ ಪ್ರಮಾಣದಲ್ಲಿ ಜೇನಿನ ಸೇವನ ಮಾಡುವುದರಿಂದ ನರ ದೌರ್ಬಲ್ಯ ಹಾಗೂ ದೈಹಿಕ ಶೀಲತೆಗಳು ದೂರವಾಗುತ್ತವೆ. ಹೀಗೆ ಜನನದಿಂದ ಮರಣದವರೆಗೆ ಪ್ರತಿಯೊಂದು ಹಂತದಲ್ಲೂ ಜೇನು ಪ್ರಾಮುಖ್ಯತೆಯನ್ನು ಹೊಂದಿದೆ.ವೈವಿಧ್ಯತೆ: ಎಂಟು ರೀತಿಯ ಜೇನು ತುಪ್ಪದ ವಿವರಣೆಯನ್ನು ಆಯುರ್ವೇದ ಗ್ರಂಥವಾದ ಸುಶ್ರತ ಸಂಹಿತದಲ್ಲಿ ವಿವರಿಸಲಾಗಿದೆ. ಪೌತ್ತಿಕ, ಬ್ರಾಮರ, ಕ್ಷಾದ್ರ, ಮಾಕ್ಷಿಕ, ಧಾತ್ರ, ಆರ್ಷ್ಯ, ಔದ್ಧಾಲಕ, ದಾಲ ಈ ಎಂಟು ವಿಧದ ಜೇನುತುಪ್ಪ ಗಳೂ ೮ ವಿಧದ ಜೇನು ನೊಣಗಳಿಂದ ಸಂಗ್ರಹಿಸಲ್ಪಟ್ಟದಾಗಿದೆ

ಜೇನುತುಪ್ಪವನ್ನು ಯಾವ ಔಷಧದೊಡನೆ ಅಥವಾ ಯಾವ ಪದಾರ್ಥದೊಡನೆ ಸೇರಿಸಿದರೂ ಕೂಡ ಆ ಔಷದ ಮತ್ತು ಆ ಪದಾರ್ಥದ ಗುಣಗಳನ್ನು ವಿಕಾಸ ಗೊಳಿಸುತ್ತದೆ. ದೇಹದ ಸೂಕ್ಷ್ಮ ಆವಯವಗಳನ್ನು, ಮಾರ್ಗಗಳನ್ನು ಹಾಗೂ ಸಂಪೂರ್ಣ ಶರೀರವನ್ನು ಅತ್ಯಂತ ಶೀಘ್ರವಾಗಿ ವ್ಯಾಪಿಸುತ್ತದೆ

ವಿವಿಧ ರೋಗಗಳಲ್ಲಿ ಜೇನುತುಪ್ಪದ ಬಳಕೆ

ಕ್ಷಯ ರೋಗದಿಂದ ಬಳಲುತ್ತಿರುವವರು ಒಂದು ಲೋಟ ಕಾಯಿಸಿ ಆರಿಸಿದ ಹಸುವಿನ ಹಾಲಿಗೆ ಅಥವಾ ಒಂದು ಲೋಟ ಆಡಿನ ಹಾಲಿಗೆ ೨ರಿಂದ ೫ ಚಮಚ ಜೇನುತುಪ್ಪವನ್ನು ಸೇರಿಸಿ ಕುಡಿಯುವುದು ಉತ್ತಮ

ಮಧುಮೇಹ ರೋಗದಿಂದ ಬಳಲುತ್ತಾ ಇರುವವರು ಜೇನುತುಪ್ಪವನ್ನು ಇತರ ಆಹಾರ ಪದಾರ್ಥಗಳೊಡನೆ ಸೇರಿಸಿ ಸೇವಿಸುವುದು ಹಿತಕರ

ಏಟು ತಗುಲಿರುವುದರಿಂದ ಆಗಿರುವ ಹೊಸ ಗಾಯಗಳಿಗೆ ಜೇನುತುಪ್ಪವನ್ನು ತುಪ್ಪದೊಡನೆ ಮಿಶ್ರಣ ಮಾಡಿ ಲೇಪಿಸುವುದು ಉತ್ತಮ

ಬಹಳ ಉಷ್ಣದಿಂದ ಅಥವಾ ಸುಣ್ಣ ಮತ್ತು ಇತರೇ ಬಿಸಿ ಪದಾರ್ಥಗಳ ಸಂಪರ್ಕದಿಂದ ಸುಟ್ಟಂತಾಗಿ ಬಾಯಿಯೊಳಗೆ ಬೊಬ್ಬೆಗಳು, ಗುಳ್ಳೆಗಳೂ ಆಗಿರುವಾಗ ಜೇನುತುಪ್ಪವನ್ನು ಲೇಪಿಸಿದರೆ ಅವು ಬೇಗನೆ ಗುಣವಾಗುವವು

ಬೇವಿನ ಹಣ್ಣು ಅಥವಾ ಚಕ್ಕರೆಯ ರಸದಲ್ಲಿ ಜೇನುತುಪ್ಪವನ್ನು ಕೂಡಿಸಿ ಕಿವಿಗಳಿಗೆ ಹಾಕುವುದರಿಂದ ಕಿವಿ ಸೋರುವುದು ನಿಲ್ಲುತ್ತದೆ

ರಕ್ತ ವಾಂತಿಯಾಗುತ್ತಿದ್ದರೆ ಜೇನುತುಪ್ಪ ದೊಡನೆ ತುಪ್ಪ ಮತ್ತು ಭತ್ತದ ಅರಳಿನ ಚೂರ್ಣವನ್ನು ಮಿಶ್ರಣ ಮಾಡಿ ಸೇವಿಸಬೇಕು

ವಿವಿಧ ರೀತಿಯ ಚರ್ಮ ರೋಗಗಳಲ್ಲಿ ಜೇನುತುಪ್ಪವನ್ನು ವಾಯುವಿಡಂಗ, ತ್ರಿಫಲಾ, ಹಿಪ್ಪಲಿ ಇವುಗಳ ಮಿಶ್ರಣ ಚೂರ್ಣದೊಡನೆ ಮಾಡಿ ಸೇವಿಸಬೇಕು

ಪಿತ್ತ ಜ್ವರದಿಂದ ನೀರಿನಂತಹ ಭೇದಿಯಾಗುತ್ತಿದ್ದರೆ ದಾಳಿಂಬೆಯ ರಸದಲ್ಲಿ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಿದರೆ ಗುಣವಾಗುತ್ತದೆ

ಚೇಳು ಕಚ್ಚಿದಾಗ ಜೇನುತುಪ್ಪ ಲೇಪನ ಹಾಗೂ ಸೇವನೆ ಮಾಡಿದರೆ ವಿಷವು ಶಮನವಾಗುವುದು

ಶರೀದರದಲ್ಲಿ ಕೊಬ್ಬು (ಮೇದಸ್ಸು) ಹೆಚ್ಚು ಸಂಗ್ರಹವಾಗಿದ್ದರೆ ಅರ್ಧ ಲೊಟದಷ್ಟು ಕಾಯಿಸಿ ಆರಿಸಿದ ನೀರಿಗೆ ಒಂದರಿಂದ ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಕೆಲವು ದಿನಗಳವರೆಗೆ ನಿತ್ಯವು ಸೇವಿಸಬೇಕು

ಒಸಡುಗಳು ಊದಿಕೊಂಡು ನೋಯುತ್ತೀದ್ದರೆ ಅಥವಾ ಕೀವು ಸೊರುತ್ತಿದ್ದರೆ ಜೇನುತುಪ್ಪದಲ್ಲಿ ಹತ್ತಿಯನ್ನು ಅದ್ದಿ ಹಚ್ಚಬೇಕು. ಇದರಿಂದ ಒಸಡಿಗೆ ಸಂಬಂಧವಾದ ಎಲ್ಲ ರೋಗಗಳು ನಿವಾರಣೆಯಾಗುತ್ತವೆ

ದೃಷ್ಟಿ ದೋಷವಿದ್ದಲ್ಲಿ ನಿತ್ಯ ಘಾತ-ಕಾಲ ಶುದ್ದವಾದ ಜೇನುತುಪ್ಪವನ್ನು ಅಜನದಂತೆ ಹಚ್ಚುತ್ತಿರಬೇಕು

ಕಫದಿಂದ ಕೂಡಿದ ಕೆಮ್ಮು ಇದ್ದಾಗ ಸಿತೋಫಲಾದಿ ಚೂರ್ಣ ಅಥವಾ ತಾಳಿಸಾದ ಚೂರ್ಣದೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಬೇಕು

ವರ್ಷಾ ಋತು (ಮಳೆಗಾಲ)ವಿನಲ್ಲಿ ಬಾಹ್ಯ ಪರಿಸರದಲ್ಲಿ ಕ್ಲೇದಾಂಶವಿದ್ದು, ದೇಹದಲ್ಲೂ ಕ್ಲೇದತೆ ಅಧಿಕವಾಗಿರುವುದರಿಂದ ಈ ಋತುವಿನಲ್ಲಿ ಜೇನಿನ ಬಳಕೆ ಉತ್ತಮ. ಇದು ದೇಹದಲ್ಲಿನ ಕ್ಲೇದಾಂಶವನ್ನು ಒಣಗಿಸಿ ದೇಹವನ್ನು ರಕ್ಷಣೆ ಮಾಡುತ್ತದೆ

ಜೇನುತುಪ್ಪವನ್ನು ಅತಿಯಾಗಿ ಸೇವನೆ ಮಾಡುವುದು ನಿಷಿದ್ದ, ಇದರ ಅತಿ ಸೇವನೆಯಿಂದ ಅಜೀರ್ಣ ಉಂಟಾಗಿ ಮರಣವೂ ಸಂಭವಿಸಬಹದು

  • ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬಾರದು
  • ಜೇನುತುಪ್ಪವನ್ನು ಬಿಸಿಯಾದ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ ಸೇವಿಸಬಾರದು
  • ಉಷ್ಣ ಪೃಕೃತಿಯವರು ಬಿಸಿಲಿನಿಂದ ಬಸವಳಿದು ಬಂದವರು ಜೇನುತುಪ್ಪವನ್ನು ಸೇವಿಸಬಾರದು
  • ಅತಿ ಸರ್ವತ್ರ ವರ್ಜಿಯೇತ್ ಎನ್ನುವ ಚಾಣಕ್ಯನ ನೀತಿಯಂತೆ ದೇಹ ಪೃಕೃತಿ, ರೋಗ, ದೇಶ, ಋತು, ಪ್ರಮಾಣ ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಸವಿಯಾದ ಅಮೃತ ಮಾಲ್ಯ ಜೇನಿನ ಬಳಕೆ ಮಾಡುವುದು ಉತ್ತಮ