ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ನೀವೇ ಪತ್ತೆ ಮಾಡಿ

ಹರೀಶ್, ಬಿ.ಎಸ್
೯೪೮೦೫೫೭೬೩೪

ಕಲಬೆರಸಿರುವ ಹಿಂಗು: ಮಾದರಿ ಹಿಂಗನ್ನು ಚಮಚೆಯ ಮೇಲೆ ತೆಗೆದುಕೊಂಡು ಬೆಂಕಿಗೆ ಹಿಡಿದಾಗ ಅದು ಕರ್ಪೂರದಂತೆ ಉರಿದರೆ ಶುದ್ಧ. ಕಲಬೆರೆಸಿದ ಹಿಂಗಾದಲ್ಲಿ ಉರಿಯ ತೀಕ್ಷ್ಣತೆ ಮತ್ತು ಉರಿಯುವ ವೇಗ ಕಡಿಮೆ. ನೀರಿನಲ್ಲಿ ಕರಗಿಸಿದಾಗ ಹಿಂಗು ಸಂಪೂರ್ಣವಾಗಿ ಕರಗುವುದು. ಶೇಷ ಉಳಿದರೆ ಅದು ಕಲಬೆರಕೆ

ಪರಂಗಿ ಬೀಜ ಬೆರೆಸಿದ ಕಾಳುಮೆಣಸು: ನೀರು ತುಂಬಿದ ಗಾಜಿನ ಲೋಟಕ್ಕೆ ಮಾದರಿ ಕಾಳುಮೆಣಸು ಹಾಕಿ. ಶುದ್ಧ ಕಾಳುಮೆಣಸಾಗಿದ್ದಲ್ಲಿ ಅದು ತೇಲದೆ ಲೋಟದ ತಳಭಾಗಕ್ಕೆ ಹೋಗುವುದು. ಪಪಾಯ ಬೀಜ ಬೆರೆಸಿದ್ದಲ್ಲಿ ಅವು ಮುಳಗದೆ ತೇಲುವುವು

ತೈಲ ಲೇಪಿತ ಕಾಳುಮೆಣಸು: ಸ್ವಲ್ಪ ಉಜ್ಜಿದಾಗ ಸೀಮೆ ಎಣ್ಣೆಯ ವಾಸನೆ ಬರುವುದು

ಕೃತಕ ಬಣ್ಣ ಹಾಕಿರುವ ಖಾರದ ಪುಡಿ: ನೀರು ತುಂಬಿದ ಗಾಜಿನ ಲೋಟಕ್ಕೆ ಮಾದರಿ ಖಾರದ ಪುಡಿಯನ್ನು ಹಾಕಿದಾಗ, ಕೃತಕವಾಗಿದ್ದಲ್ಲಿ ಬಣ್ಣದ ಎಳೆಗಳು ಕೂಡಲೆ ತಳಮುಖವಾಗಿ ಚಲಿಸುವುದು ಗೋಚರಿಸುತ್ತದೆ

ಇಟ್ಟಿಗೆ ಪುಡಿ/ಮರಳು ಬೆರೆಸಿದ ಖಾರದಪುಡಿ: ಮಾದರಿ ಖಾರದ ಪುಡಿಯನ್ನು ನೀರಿಗೆ ಹಾಕಿದಾಗ ಇಟ್ಟಿಗೆ ಪುಡಿ/ಮರಳು ಬೆರೆಸಿದ್ದಿಲ್ಲ್ಲಿ ಅವು ನೀರಿನಲ್ಲಿ ಕರಗದೆ ತಳದಲ್ಲಿ ಸೇರುವುದು ಗೋಚರಿಸುವುದು

ಕ್ಯಾಸಿಯಾ ಚಕ್ಕೆ ಬೆರೆಸಿರುವ ಚಕ್ಕೆ: ನೈಜ ಚಕ್ಕೆಯ ಪದರು ತೆಳುವಾಗಿದ್ದು ಪೆನ್/ಪೆನ್ಸಿಲ್ ಸುತ್ತ ಸುಲಭವಾಗಿ ಸುತ್ತಬಹುದು. ಹಾಗೂ ನೈಜ ಚಕ್ಕೆಯ ವಾಸನೆ ತೀವ್ರವಾಗಿರುವುದಿಲ್ಲ. ಚಕ್ಕೆಯ ಗಾತ್ರ ತೆಳುವಾಗಿರದೆ ದಪ್ಪವಿದ್ದಲ್ಲಿ ಅದು ಖಂಡಿತ ನೈಜ ಚಕ್ಕೆಯಲ್ಲ

ಜೀರಿಗೆಯಲ್ಲಿ ಇದ್ದಿಲು ಪುಡಿ ಲೇಪಿಸಿದ ಹುಲ್ಲಿನ ಬೀಜ: ಮಾದರಿ ಜೀರಿಗೆಯನ್ನು ಅಂಗೈನಲ್ಲಿ ಹಾಕಿ ಉಜ್ಜಿದಾಗ ಕೈ ಕಪ್ಪಾದರೆ ಅದು ಕಲಬೆರಕೆಯಲ್ಲದೆ ಮತ್ತೇನು?, ಆರ್ಜಿಮೋನ್ ಬೆರೆಸಿದ ಸಾಸಿವೆ: ಗಾಜಿನ ತಟ್ಟೆಯೊಂದರಲ್ಲಿ ಮಾದರಿ ಸಾಸಿವೆ ತೆಗೆದುಕೊಂಡು ಸೂಕ್ಷ್ಮವಾಗಿ ಗಮನಿಸಿ. ಸಾಸಿವೆಯ ಮೇಲ್ಮೈ ಮೃದುವಾಗಿದ್ದು ಅದರ ಒಳ ಬಣ್ಣ ಹಳದಿಯಾಗಿರುತ್ತದೆ. ಆರ್ಜಿಮೋನ್ ಬೀಜದ ಹೊರಮೈ ಒರಟಾಗಿದ್ದು ಒಳಬಣ್ಣ ಬಿಳಿ ಇರುತ್ತದೆ. ಲೆಡ್ ಕ್ರೋಮೇಟ್ ಲೇಪಿತ ಅರಿಶಿಣ ಕೊನೆ: ಅರಿಶಿಣ ಕೊನೆಯೊಂದನ್ನು ನೀರು ತುಂಬಿದ ಪಾರದರ್ಶಕ ಗಾಜಿನ ಲೋಟಕ್ಕೆ ಹಾಕಿ. ಶುದ್ಧ ಅರಿಶಿಣ ಕೊನೆಯಾಗಿದ್ದಲ್ಲಿ ಯಾವುದೇ ಬಣ್ಣ ಬಿಡದು. ಲೆಡ್ ಕ್ರೋಮೇಟ್ ಲೇಪಿತ ಅರಿಶಿಣ ಗಾಢ ಬಣ್ಣವನ್ನು ಕೂಡಲೇ ಬಿಡುವುದು. ಕೃತಕ ಬಣ್ಣ ಬೆರೆಸಿದ ಅರಿಶಿಣ ಪುಡಿ: ನೀರು ತುಂಬಿದ ಪಾರದರ್ಶಕ ಗಾಜಿನ ಲೋಟಕ್ಕೆ ಒಂದು ಚಮಚೆ ಅರಿಶಿನ ಪುಡಿ ಹಾಕಿ. ಶುದ್ಧ ಅರಿಶಿಣ ಪುಡಿ ತಳ ಸೇರುವಾಗ ತಿಳಿ ಹಳದಿ ಬಣ್ಣ ಗೋಚರಿಸುವುದು. ಕೃತಕ ಬಣ್ಣ ಲೇಪಿಸಿದ್ದಲ್ಲಿ ತಳ ಸೇರುವಾಗ ಗಾಢ ಬಣ್ಣ ಗೋಚರಿಸುವುದು. ಮರದೊಟ್ಟು ಬೆರೆಸಿರುವ ಕೊತ್ತಂಬರಿ/ಮಸಾಲೆ ಪುಡಿ: ನೀರು ತುಂಬಿದ ಗಾಜಿನ ಲೋಟಕ್ಕೆ ಮಾದರಿ ಮಸಾಲ ಪುಡಿ ಹಾಕಿದಾಗ ಅದು ಶುದ್ಧವಾಗಿದ್ದಲ್ಲಿ ಯಾವುದೇ ಒಟ್ಟು ನೀರಿನ ಮೇಲೆ ಕಾಣಿಸದು. ಕಲಬೆರಕೆಯಾಗಿದ್ದಲ್ಲಿ ಒಟ್ಟು ನೀರಿನ ಮೇಲೆ ತೇಲುವುದು ಗೋಚರಿಸುತ್ತದೆ